ಸ್ವಾಮೀಜಿಗಳಿಗೆ ಸಮಾಜಮುಖಿ ಚಿಂತನೆ ಬೇಕು

ಚಿತ್ರದುರ್ಗ:

       ಮಠ ಕಟ್ಟುವುದು ಎಷ್ಟು ಮುಖ್ಯವೋ ಘಟ ಕಟ್ಟುವುದು ಅಷ್ಟೆ ಮುಖ್ಯ. ಘಟ ದೊಡ್ಡದಾದರೆ ಮಠ ಬೆಳೆಯುತ್ತದೆ ಎಂದು ಮುರುಘಾಮಠದ ಡಾ.ಶಿವಮೂರ್ತಿ ಶರಣರು ಮೇದಾರ ಜನಾಂಗಕ್ಕೆ ಕರೆ ನೀಡಿದರು.

        ಸೀಬಾರ ಸಮೀಪವಿರುವ ಮೇದಾರ ಗುರುಪೀಠ ಕೇತೇಶ್ವರ ಮಹಾಮಠದಲ್ಲಿ ಶನಿವಾರ ನಡೆದ ಲಿಂಗ್ಯಕ್ಯ ಬಸವಪ್ರಭು ಕೇತೇಶ್ವರ ಮಹಾಸ್ವಾಮೀಜಿಯವರ ಐದನೆ ವರ್ಷದ ಪುಣ್ಯಸ್ಮರಣೆ ಹಾಗೂ ಮೇದಾರ ಜನಾಂಗದ ವಧು-ವರರ ಸಮಾವೇಶದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

       ಬಸವಪ್ರಭು ಕೇತೇಶ್ವರ ಮಹಾಸ್ವಾಮೀಜಿಯವರಲ್ಲಿ ಜಾಗೃತಿಯಿದ್ದ ಕಾರಣ ಸಂಚಾರ ಮಾಡಿ ಜನಾಂಗವನ್ನು ಸಂಘಟನೆಗೊಳಿಸಿದರು. ಅಂರ್ತಮುಖಿ, ಸಮಾಜಮುಖಿ ಸಾಧನೆ ಸ್ವಾಮೀಜಿಗಳಿಗೆ ಬೇಕು. ಈ ಎರಡು ಸವಾಲುಗಳು ಸ್ವಾಮೀಜಿಗಳ ಮುಂದಿದೆ. ನಿಮ್ಮ ಹೊಟ್ಟೆಯಲ್ಲಿ ಹುಟ್ಟುವ ಮಕ್ಕಳನ್ನು ಹೇಗೆ ಜೋಪಾನ ಮಾಡುತ್ತೀರೋ ಅದೇ ರೀತಿ ಇಮ್ಮಡಿ ಬಸವ ಮೇದಾರ ಕೇತೇಶ್ವರಸ್ವಾಮಿಗಳನ್ನು ಜೋಪಾನ ಮಾಡಿ ಎಂದು ಮೇದಾರ ಜನಾಂಗಕ್ಕೆ ಸೂಚಿಸಿದರು.

        ಹನ್ನೆರಡನೇ ಶತಮಾನದಲ್ಲಿಯೇ ಬಸವಣ್ಣನವರ ಸಂಸತ್ತು ವಿಪತ್ತುಗಳ ನಿವಾರಣೆಗೆ ಹೋರಾಟ ನಡೆಸಿತು. ಶರಣರು ಇರುವ ಕಡೆ ಸಾಮಾಜಿಕ ವಿಪತ್ತು, ನೂನ್ಯತೆ ಇರುತ್ತದೆ. ಶರಣರು ನಿಷ್ಟುರತೆ, ಪ್ರಾಮಾಣಿಕತೆಯಿಂದ ಎಲ್ಲವನ್ನು ನಿಭಾಯಿಸುತ್ತಿದ್ದರು. ಸಂಸತ್ತಿನ ಶರಣರು ಸಂಪತ್ತಾಗಿದ್ದರು. ಆದರೆ 21 ನೇ ಶತಮಾನದಲ್ಲಿ ಪ್ರತಿಯೊಬ್ಬರಿಗೂ ಸಂಪತ್ತಿನ ಚಿಂತೆ ಜಾಸ್ತಿಯಾಗಿ ನಾವೇ ಸಂಪತ್ತುಗಳಾಗಬೇಕು ಎನ್ನುವುದನ್ನು ಮರೆಯುತ್ತಿದ್ದಾರೆ ಎಂದು ವಿಷಾಧಿಸಿದರು.

        900 ವರ್ಷಗಳ ಹಿಂದೆ ಶರಣರು ಸಾರ್ವತ್ರಿಕ ಜವಾಬ್ದಾರಿಗಳ ಜೊತೆ ಸಾಗಿದರು. ಬಸವಾದಿ ಶರಣರ ಹೆಜ್ಜೆಗಳನ್ನು ಇಂದು ಎಲ್ಲರೂ ಅನುಸರಿಸಬೇಕಾಗಿದೆ. ಅಲಕ್ಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ, ಸ್ಥಾನಮಾನ ತಂದುಕೊಡುವಲ್ಲಿ ಶೂನ್ಯಪೀಠ ಮುರುಘಾಮಠ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದೆ. ಕುಲಕ್ಕೊಬ್ಬ ಖಾವಿಧಾರಿಗಳು ಶರಣ ಪಥದಲ್ಲಿ ಸಾಗಬೇಕಿದೆ. ಯಾರು ಚಟಾಧೀನರಾಗ ಬಾರದು. ಚಟಕ್ಕೆ ಒಳಗಾದರೆ ಚಟ್ಟ ಹತ್ತಿಸುತ್ತದೆ. ಅಂತಿಮ ಗಳಿಗೆಯವರೆಗೂ ಘಟ ಕಟ್ಟುವ ಕೆಲಸ ನಿರಂತರಾಗಿ ನಡೆಯುತ್ತಿರಬೇಕು ಎಂದು ಹೇಳಿದರು.

         ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಡಾ.ಶಾಂತವೀರಮಹಾಸ್ವಾಮೀಜಿ ಆಶೀರ್ವಚನ ನೀಡಿ ಮೇದಾರ ಗುರುಪೀಠ ಕೇತೇಶ್ವರ ಮಹಾಮಠ ಇಂದು ಈ ಹಂತಕ್ಕೆ ಬೆಳೆದಿರುವುದಕ್ಕೆ ದಲಿತ ಹಿಂದುಳಿದ ಮಠಾಧೀಶರ ಒಕ್ಕೂಟವೇ ಕಾರಣ. ಸರ್ಕಾರದ ಮೇಲೆ ಒತ್ತಡ ಹೇರಿ 2.50 ಕೋಟಿ ರೂ.ಗಳನ್ನು ಮೇದಾರ ಗುರುಪೀಠ ಕೇತೇಶ್ವರ ಮಹಾಮಠಕ್ಕೆ ಕೊಡಿಸಿದ್ದೇವೆ. ಹಿಂದುಳಿದ ಕಡಿಮೆ ಜನಸಂಖ್ಯೆಯುಳ್ಳ ಈ ಮಠದ ಅಭಿವೃದ್ದಿಗೆ ಸರ್ಕಾರದ ಮೇಲೆ ಒತ್ತಡ ತಂದು ಇನ್ನು ಹೆಚ್ಚಿನ ಅನುದಾನ ಕೊಡುಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವುದರ ಜೊತೆಗೆ ನೈತಿಕ ಬೆಂಬಲವನ್ನು ಸಹ ಕೊಡುವುದಾಗಿ ಭರವಸೆ ನೀಡಿದರು.ಮೇದಾರ ಜನಾಂಗ ಸಂಘಟನೆ ಮೂಲಕ ಸ್ವಾವಲಂಭಿಗಳಾಗಿ ಬದುಕಿ ಮಠ ಮಠಗಳ ಮಧ್ಯೆ ಸೌಹಾರ್ಧ ವಾತಾವರಣ ನಿರ್ಮಿಸುವಲ್ಲಿ ಕಂಕಣಬದ್ದರಾಗಿ ಎಂದರು.

          ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಪುರಿ ಮಹಾಸ್ವಾಮಿ ಆಶೀರ್ವಚನ ನೀಡುತ್ತ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ದಲಿತ ಹಿಂದುಳಿದ ಮಠಗಳ ಒಕ್ಕೂಟದಿಂದ ಒತ್ತಡ ತಂದು ಮೇದಾರ ಗುರುಪೀಠ ಕೇತೇಶ್ವರ ಮಹಾಮಠಕ್ಕೆ ಅನುದಾನ ಕೊಡಿಸಿದ್ದೆವು. ಮುಂದಿನ ದಿನಗಳಲ್ಲಿಯೂ ಸಿದ್ದರಾಮಯ್ಯನವರ ಬಳಿ ಹೋಗಿ ಇನ್ನು ಹೆಚ್ಚಿನ ಅನುದಾನ ಕೊಡಿಸುವುದಾಗಿ ವಾಗ್ದಾನ ಮಾಡಿ ಮೇದಾರ ಜನಾಂಗ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಂಘಟಿತರಾಗುವ ಮೂಲಕ ಸ್ವಾವಲಂಭಿಗಳಾಗಿ ಎಂದು ತಿಳಿಸಿದರು.

            ಕೂಡಲಸಂಗಮ ಪಂಚಮಸಾಲಿ ಗುರುಪೀಠದ ಜಯಮೃತ್ಯುಂಜಯಸ್ವಾಮಿ, ಮೇದಾರ ಗುರುಪೀಠ ಕೇತೇಶ್ವರ ಮಹಾಮಠದ ಇಮ್ಮಡಿ ಬಸವ ಮೇದಾರ ಕೇತೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.ಅಖಿಲ ಕರ್ನಾಟಕ ಮೇದಾರ ಗುರುಪೀಠ ಕೇತೇಶ್ವರ ಟ್ರಸ್ಟ್‍ನ ಅಧ್ಯಕ್ಷ ಸಿ.ಪಿ.ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಕುಂಬಯ್ಯ, ಎಂ.ಬಿ.ತಿಮ್ಮಣ್ಣ ಇನ್ನು ಮೊದಲಾದವರು ವೇದಿಕೆಯಲ್ಲಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link