ಕೂಡ್ಲಿಗಿ:
ತಾಲ್ಲೂಕು ತೀವ್ರ ಹಿಂದುಳಿದಿದ್ದು, ಇಲ್ಲಿ ಅನೇಕ ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸಲು ಜನ ಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಎನ್.ವೈ. ಗೊಪಾಲಕೃಷ್ಣ ಹೇಳಿದರು. ಪಟ್ಟಣದಲ್ಲಿ ಶುಕ್ರವಾರ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದಿಂದ ಏರ್ಪಡಿಸಿದ್ದ ಜನ ಸ್ಪಂದನ ಕಾರ್ಯಕ್ರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೂಡ್ಲಿಗಿ ತಾಲ್ಲೂಕಿಗೆ ಭದ್ರ ಮೇಲ್ದಂಡೆ ಯೋಜನೆ ಜಾರಿಯಾಗುವುದು ಅಸಾಧ್ಯ. ಒಂದಮ್ಮೆ ಜಾರಿಯಾದರೂ ಕೂಡ್ಲಿಗಿ ಭಾಗಕ್ಕೆ ನೀರು ಬರುವುದಿಲ್ಲ. ಅದ್ದರಿಂದ ಈ ಯೋಜನೆಯ ಬದಲಾಗಿ ತುಂಗಭದ್ರ ನದಿಯ ಹಿನ್ನೀರಿನಿಂದ ತಾಲ್ಲೂಕಿನ ಕೆರಗಳಿಗೆ ನೀರು ತುಂಬಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಈಗಾಗಲೇ ಸಮೀಕ್ಷೆ ಕಾರ್ಯ ನಡೆದಿದ್ದು, 1 ಕೋಟಿ ರೂಪಾಯಿ ಅನುದಾನ ಸಹ ಬಿಡುಗಡೆಯಾಗಿದೆ. ಕೆರೆಗಳಿಗೆ ನೀರು ತುಂಬಿಸಿದರೆ ಕುಡಿಯುವ ನೀರಿಗೆ ಹಾಗೂ ಕೊಳವೆ ಬಾವಿಗಳು ಭರ್ತಿಯಾಗಿ ರೈತರಿಗೆ ಅನುಕೂಲವಾಗಲಿದೆ ಎಂದರು.
ಜಿಲ್ಲಾಧಿಕಾರಿ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ಸಾರ್ವಜನಿಕರು ನೀಡಿದ ಎಲ್ಲಾ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗಳ ಮೂಲಕ ಸಮಗ್ರ ಮಾಹಿತಿ ಪಡೆದು ವಿಲೇವಾರಿ ಮಾಡಲಾಗುವುದು. ಒಂದು ವೇಳೆ ನಿಮ್ಮ ಅರ್ಜಿ ತಿರಸ್ಕೃತವಾದರೆ ಅದಕ್ಕೆ ಸಕಾರಣದೊಂದಿಗೆ ಹಿಂಬರಹ ನೀಡಲಾಗುವುದು ಎಂದರು.
ಇದೇ ಸಮಯದಲ್ಲಿ ತಾಲ್ಲೂಕಿನ ದೂಪದಹಳ್ಳಿ ಗ್ರಾಮದಲ್ಲಿ ದೇವದಾಸಿಯರಿಗೆ ನಿವೇಶನ ನೀಡಲು ಜಮೀನು ಖರೀಸಿದಿ ಒಂದು ವರ್ಷ ಕಳೆದಿದ್ದರೂ ಹಕ್ಕು ಪತ್ರ ನೀಡಿಲ್ಲ ಎಂದು ಅನೇಕ ಫಲಾನುಭವಿಗಳು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಒಂದು ತಿಂಗಳಲ್ಲಿ ಜಮೀನನ್ನು ವಶಕ್ಕೆ ಪಡೆದು, ನಿವೇಶನಗಳಾಗಿ ಪರಿವರ್ತಿಸಿ ಹಕ್ಕು ಪತ್ರ ನೀಡುವಂತೆ ಹೊಸಪೇಟೆ ಎಸಿ ಲೋಕೇಶ್ ನಾಯಕ ಅವರಿಗೆ ಸೂಚನೆ ನೀಡಿದರು.
ರಾಮದುರ್ಗ ಕೆರೆಯಲ್ಲಿ ಉದ್ಯೋಗ ಖಾತ್ರಿ ಕೆಲಸ ಮಾಡುವಾಗ ತನ್ನ ಗಂಡ ಮೃತಪಟ್ಟಿದ್ದು, ಇದುವರಿಗು ಪರಿಹಾರ ಬಂದಿಲ್ಲ ಎಂದು ಚಂದ್ರಶೇಖರಪುರದ ಗೌರಮ್ಮ ಜಿಲ್ಲಾಧಿಕಾರಿಗಳಿಗೆ ಮೊರೆ ಇಟ್ಟರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ತಾಂತ್ರಿಕ ತೊಂದರೆಯಿಂದ ಹಣ ಪಾವತಿಯಾಗಿಲ್ಲ. ಒಂದು ವಾರದೊಳಗೆ ಹಣ ಪಾವತಿ ಮಾಡುವುದಾಗಿ ಭರವಸೆ ನೀಡಿದರು.
ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮಾತನಾಡಿ, ಕೆಲವೊಂದು ಕಾರಣಗಳಿಂದ ಮನೆ ನಿರ್ಮಾಣ ಮಾಡಿಕೊಂಡವರಿಗೆ ಹಣ ಪಾವತಿಯಾಗಿಲ್ಲ. ಮನೆ ನೀಡುವುದು ಗ್ರಾಮ ಸಭೆಯ ಅಂತಿಮ ನಿರ್ಧಾರವಾಗಿರುತ್ತದೆ. ಆದರೆ ನೀಡಿದ ಮನೆಯನ್ನು ತಡೆಯುವ ಅಧಿಕಾರ ನಮಗಿದೆ. ಒಂದು ವೇಳೆ ಯಾರಿಗಾದರೂ ಉಳ್ಳವರಿಗೆ ಮನೆ ನೀಡಿದ್ದು ಕಂಡು ಬಂದರೆ, ಸಂಬಂಧಿಸಿದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಪಿ. ದೀನಾ, ಸದಸ್ಯರಾದ ಎಚ್. ರೇವಣ್ಣ, ಎಸ್.ಪಿ. ರತ್ನಮ್ಮ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಬಿ. ವಂಕಟೇಶ್ ನಾಯ್ಕ್, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಪಿ. ರಜನಿಕಾಂತ್. ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿ ಚಂದ್ರಶೇಖರ ಗುಡಿ, ಅಪರ ಜಿಲ್ಲಾಧಿಕಾರಿ ಸೋಮಶೇಖರ, ಡಿಡಿಪಿಐ ಶ್ರೀಧರ್, ಡಿವೈಎಸ್ಪಿ ಬಸವೇಶ್ವರ, ತಹಶೀಲ್ದಾರ್ ಎಲ್. ಕೃಷ್ಣಮೂರ್ತಿ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಜಿ.ಎಂ. ಬಸಣ್ಣ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ