ಬೆಂಗಳೂರು
ಜೈಲಿನಿಂದ ಮೂರು ತಿಂಗಳ ಹಿಂದಷ್ಟೇ ಜಾಮೀನಿನ ಮೇಲೆ ಹೊರಬಂದು ಇಬ್ಬರು ಪತ್ನಿಯರ ಮೂಲಕ ಕಳವು ಮಾಡಿದ ಚಿನ್ನಾಭರಣಗಳನ್ನು ವಿಲೇವಾರಿ ಮಾಡಿ ಮೋಜಿನ ಜೀವನ ನಡೆಸುತ್ತಿದ್ದ ಕುಖ್ಯಾತ ಕನ್ನಗಳ್ಳ ಜಪಾನ್ ರಾಜ ಸೇರಿ, 14 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪಶ್ಚಿಮ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳಿಂದ 3ಲಕ್ಷ 65 ಸಾವಿರ ನಗದು 1ಕೆಜಿ 622 ಗ್ರಾಂ ಚಿನ್ನ 17ಕೆಜಿ 700 ಗ್ರಾಂ ಬೆಳ್ಳಿ 1 ಬೈಕ್ ಸೇರಿ 60 ಲಕ್ಷ 95 ಸಾವಿರ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಳೆದ ಫೆಬ್ರವರಿ 16 ರಂದು ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ ಚಿಕ್ಕಬಿದರುಕಲ್ಲಿನ ರಾಜ ಅಲಿಯಾಸ್ ಜಪಾನ್ ರಾಜ, ಬೀಗ ಹಾಕಿದ ಮನೆಗಳನ್ನು ಗುರುತಿಸಿ, ಹಗಲು – ರಾತ್ರಿ ಕನ್ನಗಳವು ಮಾಡಿದ್ದ 13 ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ.
ಆರೋಪಿಯು ಕೊಯಮತ್ತೂರು ಮೂಲದ ಮಹಿಳೆಯೊಬ್ಬಳನ್ನು ಹಾಗೂ ಚಿಕ್ಕಬಿದರಕಲ್ಲುವಿನ ಮಹಿಳೆ ಸೇರಿ ಇಬ್ಬರನ್ನು ವಿವಾಹವಾಗಿ ಕಳವು ಮಾಡಿದ ಚಿನ್ನ, ಬೆಳ್ಳಿ ಆಭರಣಗಳನ್ನು ಅವರ ಮೂಲಕ ಗಿರವಿ ಇಡುವುದು ಇಲ್ಲವೆ, ಮಾರಾಟ ಮಾಡಿಸುವ ಮೂಲಕ ಮೋಜಿನ ಜೀವನ ನಡೆಸುತ್ತಿದ್ದನು.
ರಾಜನ ಸಹಚರರ ಸೆರೆ
ರಾಜ ಕುಳ್ಳಗಿದ್ದರಿಂದ ಆತನಿಗೆ ಜಪಾನ್ ರಾಜ ಎನ್ನುವ ಅಡ್ಡಹೆಸರಿದ್ದು, ಬೀಗ ಹಾಕಿದ ಮನೆಗಳನ್ನು ಶಬ್ಧ ಬರದಂತೆ ಸುಲಭವಾಗಿ ಮುರಿದು ಒಳನುಗ್ಗಿ ಕಳವು ಮಾಡಲು ಕಬ್ಬಿಣದ ಚೂಪಾದ ರಾಡೊಂದನ್ನು ಮಾಡಿಸಿಕೊಂಡಿದ್ದ. ಇಬ್ಬರು ಸಹಚರರ ಜೊತೆ ಸೇರಿ ಕೃತ್ಯ ಎಸಗುತ್ತಿದ್ದ. ಆತನಿಗೆ ಕಬ್ಬಿಣದ ರಾಡ್ ಮಾಡಿಕೊಟ್ಟ ವ್ಯಕ್ತಿಗಾಗಿ ಶೋಧ ನಡೆಸಲಾಗಿದೆ ಎಂದರು.
ಕೆಪಿ ಅಗ್ರಹಾರ ಈ ಹಿಂದೆ ಜಪಾನ್ ರಾಜನನ್ನು ಕಳೆದ ಡಿಸೆಂಬರ್ 12 ರಂದು ಬಂಧಿಸಿ, ಜೈಲಿಗೆ ಕಳುಹಿಸಿದ್ದರು. ಆಗ ಈತ ಕನ್ನಗಳವು ಮಾಡಿದ್ದ 42 ಪ್ರಕರಣಗಳನ್ನು ಪತ್ತೆಹಚ್ಚಿ 1 ಕೋಟಿ 2 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಅವರು ತಿಳಿಸಿದರು.
ಐಷಾರಾಮಿ ಜೀವನ ನಡೆಸಲು ಕನ್ನಗಳ್ಳ ಜಪಾನ್‍ರಾಜನ ಜೊತೆ ಸೇರಿ ಹಗಲು ವೇಳೆ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಬ್ಬಿಣದ ರಾಡ್‍ನಿಂದ ಬೀಗ ಮುರಿದು ಕನ್ನಗಳವು ಮಾಡುತ್ತಿದ್ದ ಜಪಾನ್ ರಾಜನ ಸಹಚರರಾದ ಭುವನೇಶ್ವರಿ ನಗರದ ಗೋಪಿ (43), ಡೇವಿಡ್ (34) ನನ್ನು ಬಂಧಿಸಲಾಗಿದೆ.
ಆರೋಪಿಗಳು ಮರಿಯಪ್ಪನಪಾಳ್ಯದ 10ನೇ ಮುಖ್ಯರಸ್ತೆಯ ವೆಂಕಟೇಶ್ ಎನ್ನುವವರ ಮನೆಗೆ ಹಾಡುಹಗಲೇ ಬೀಗ ಮುರಿದು ನುಗ್ಗಿ ಚಿನ್ನ, ಬೆಳ್ಳಿ ಆಭರಣಗಳನ್ನು ದೋಚಿ ಪರಾರಿಯಾಗಿದ್ದರು ಈ ಮೂವರಿಂದ 35 ಲಕ್ಷ ಮೌಲ್ಯದ 1ಕೆಜಿ 119 ಗ್ರಾಂ ಚಿನ್ನ ಹಾಗೂ ಬೈಕ್‍ನ್ನು ವಶಪಡಿಸಿಕೊಳ್ಳಲಾಗಿದ್ದು ರಾಜ ಪತ್ನಿಯರ ವಿಚಾರಣೆ ನಡೆಸಲಾಗುತ್ತಿದೆ ಎಂದರು.