ಬೆಂಗಳೂರು
ಬರುವ ತಿಂಗಳಲ್ಲಿ ನಡೆಯಲಿರುವ ದಸರಾ ಉತ್ಸವ ಸೇರಿದಂತೆ, ವಿವಿಧ ಹಬ್ಬ ಹರಿದಿನಗಳು ಎದುರಾಗಲಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಬೆಂಗಳೂರು ಸೇರಿದಂತೆ, ದೇಶದ ವಿವಿಧ ರಾಜ್ಯಗಳಲ್ಲಿರುವ ಪ್ರಮುಖ ರೈಲ್ವೆ ನಿಲ್ದಾಣಗಳು ಮತ್ತು ದೇವಸ್ಥಾನಗಳನ್ನು ಸ್ಫೋಟಿಸುವುದಾಗಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಷ್ ಎ ಮೊಹಮದ್ (ಜೆಇಎಂ) ಹೊಸದೊಂದು ಬೆದರಿಕೆ ಹಾಕಿದ್ದು, ಇಡೀ ದೇಶ ಈ ಬೆದರಿಕೆಯಿಂದ ತಲ್ಲಣಗೊಳ್ಳುವಂತೆ ಆಗಿದೆ.
ಯಾವ ಗಳಿಗೆಯಲ್ಲಿ, ಯಾವ ರೈಲ್ವೆ ನಿಲ್ದಾಣ, ಯಾವ ದೇವಸ್ಥಾನ ಸ್ಫೋಟಗೊಳ್ಳುವುದೋ ಎಂಬ ಭಯದ ವಾತಾವರಣ ಜನರಲ್ಲಿ ಮನದಲ್ಲಿ ಮನೆಮಾಡಿದೆ. ಕರ್ನಾಟಕದ ಬೆಂಗಳೂರು ಸೇರಿದಂತೆ, ಮಹಾರಾಷ್ಟ್ರದ ಮುಂಬೈ ನಗರ, ಇತರೆ ಪ್ರಮುಖ ನಗರಗಳಲ್ಲಿನ ರೈಲ್ವೆ ನಿಲ್ದಾಣಗಳು, ದೇವಸ್ಥಾನಗಳನ್ನು ಸ್ಫೋಟಿಸುವುದಾಗಿ ಜೆಇಎಂ ಬರೆದಿರುವ ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ.
ಈ ಬೆದರಿಕೆ ಪತ್ರ ನಿನ್ನೆ ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ ರೋಹ್ಟಕ್ ರೈಲ್ವೆ ಜಂಕ್ಷನ್ ಸ್ಟೇಷನ್ ಸೂಪರಿಂಡೆಂಡೆಂಟ್ ಕಚೇರಿಗೆ ಆರ್ಡಿನರಿ ಪೋಸ್ಟ್ ಮೂಲಕ ತಲುಪಿದೆ. ಆ ಕ್ಷಣದಿಂದಲೇ ರಾಜಸ್ತಾನ, ಗುಜರಾತ್, ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಹರಿಯಾಣ ಸೇರಿದಂತೆ, ಹಲವು ರಾಜ್ಯಗಳಲ್ಲಿ ಆಯಾಕಟ್ಟಿನ ಜಾಗಗಳಲ್ಲಿ ಪೊಲೀಸ್ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ರೋಹ್ಟಕ್ ರೈಲ್ವೆ ನಿಲ್ದಾಣವಲ್ಲದೆ, ರೆವಾರಿ, ಹಿಸಾರ್, ಕುರುಕ್ಷೇತ್ರ, ಮುಂಬೈನಗರ, ಬೆಂಗಳೂರು, ಚೆನ್ನೈ, ಜೈಪುರ, ಭೂಪಾಲ್, ಕೋಟಾ, ಇಟಾರ್ಸಿ, ರೈಲ್ವೆ ನಿಲ್ದಾಣಗಳು ಮತ್ತು ರಾಜಸ್ತಾನ, ಗುಜರಾತ್, ತಮಿಳುನಾಡು, ಉತ್ತರ ಪ್ರದೇಶ ಮತ್ತು ಹರಿಯಾಣ ರಾಜ್ಯಗಳಲ್ಲಿನ ದೇವಸ್ಥಾನಗಳಿಗೆ ಬಿಗಿಭದ್ರತೆ ಒದಗಿಸಲಾಗಿದೆ.
ರೈಲ್ವೆ ಅಧಿಕಾರಿಗೆ ಪತ್ರ ದೊರೆತ ಕೂಡಲೇ ಅವರು, ಈ ಮಾಹಿತಿಯನ್ನು ತನಿಖಾ ಏಜೆನ್ಸಿಗಳಿಗೆ ರವಾನಿಸಿದ್ದು, ಸೇನೆಯ ಮೂರು ವಿಭಾಗಗಳು ಅಲರ್ಟ್ ಆಗಿವೆ. ಅಕ್ಟೋಬರ್ 8 ರಂದು ರೆವಾರಿ ರೈಲ್ವೆ ನಿಲ್ದಾಣವನ್ನು ಸ್ಫೋಟಿಸುವುದಾಗಿ ಬೆದರಿಕೆ ಪತ್ರದಲ್ಲಿ ಭಯೋತ್ಪಾದಕ ಸಂಘಟನೆ ಬೆದರಿಕೆ ಹಾಕಿದೆ. ಪಾಕಿಸ್ತಾನದ ಕರಾಚಿಯ ಭಯೋತ್ಪಾದಕನೆಂದು ಹೇಳಲಾದ ಮಸೂದ್ ಅಹ್ಮದ್ ಹೆಸರಿನಲ್ಲಿ ಈ ಪತ್ರ ಬಂದಿದ್ದು, ಈ ಪತ್ರದ ಜಾಡು ಹಿಡಿದು ಹರಿಯಾಣ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಜೆಇಎಂ ಸಂಘಟನೆಯೇ ಈ ಬೆದರಿಕೆ ಪತ್ರವನ್ನು ಬರೆದಿದೆ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ತನಿಖೆಯನ್ನು ತೀವ್ರಗೊಳಿಸಲಾಗಿದೆ. ಇತ್ತೀಚೆಗೆ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂವೀರ್ ಸಿಂಗ್, ಪಾಕಿಸ್ತಾನ ಮೂಲದ ಜೆಇಎಂನ ಸಂಘಟನೆಯೊಂದು ಭಾರತದಲ್ಲಿ ತನ್ನ ಅಕೃತ್ಯಗಳನ್ನು ನಡೆಸಲು ಮುಂದಾಗಿದೆ. ಇದಕ್ಕಾಗಿಯೇ ನೀರಿನ ಆಳದಲ್ಲಿ ನುಸುಳುವ ಗುಂಪೊಂದಕ್ಕೆ ತೀವ್ರ ತರಬೇತಿಯನ್ನು ನೀಡಿದೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಈ ರೀತಿಯ ಬೆದರಿಕೆ ತಂತ್ರಗಳನ್ನು ವಿಫಲಗೊಳಿಸಲು ಭಾರತೀಯ ನೌಕಾಪಡೆ ಸರ್ವವಿಧದಲ್ಲೂ ಸಜ್ಜಾಗಿ ನಿಂತಿದೆ. ಈ ನಡುವೆ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ, ಪಾಕಿಸ್ತಾನ ಆಗ್ಗಿಂದ್ದಾಗ್ಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾರತದ ವಿರುದ್ಧ ಯುದ್ಧ ಸಾರುವ ಮಾತುಗಳನ್ನು ಆಡುತ್ತಿರುವುದನ್ನು ಭಾರತದ ಸೇನೆ ಗಂಭೀರವಾಗಿ ಪರಿಗಣಿಸಿದೆ.
ಗಡಿನಿಯಂತ್ರಣಾ ರೇಖೆಯುದ್ಧಕ್ಕೂ ಸೇನೆಯ ತುಕಡಿಗಳನ್ನು ನಿಯೋಜಿಸಲಾಗಿದೆ. ಸೇನೆಯ ಉತ್ತರ ಭಾಗದ ಕಮಾಂಡ್ ಕಚೇರಿಯ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್, ನಿನ್ನೆ ಗಡಿನಿಯಂತ್ರಣಾ ರೇಖೆಯುದ್ಧಕ್ಕೂ ಭದ್ರತಾ ಪಡೆಗಳು ಸಜ್ಜಾಗಿರುವ ಪರಿಸ್ಥಿತಿಯನ್ನು ಪರಾಮರ್ಶೆ ನಡೆಸಿದರು. ಇವರಿಗೂ ಮುನ್ನ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್, ಗಡಿನಿಯಂತ್ರಣಾ ರೇಖೆಯಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಮತ್ತು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸೇನೆ ಸರ್ವರೀತಿಯಲ್ಲೂ ಸಜ್ಜಾಗಿರುವ ಕುರಿತಂತೆ, ಪರಿಶೀಲಿಸಿದ್ದರು.
ಜಮ್ಮು ಮತ್ತು ಕಾಶ್ಮೀರದ ವಿಶೇಷಾಧಿಕಾರವನ್ನು ಭಾರತ ರದ್ದುಪಡಿಸಿದ ನಂತರ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಭಾರತದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ. ಕಾಶ್ಮೀರ ವಿವಾದ ಕುರಿತು, ಅಂತಾರಾಷ್ಟ್ರೀಯ ಸಮುದಾಯದ ಬೆಂಬಲ ಪಡೆಯಲು ಪ್ರಯತ್ನ ಮಾಡುತ್ತಲೇ ಇದ್ದಾರೆ. ಈ ನಡುವೆ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಅವರು, ಭಾರತದ ವಿರುದ್ಧ ಸಾಂಪ್ರದಾಯಿಕ ಯುದ್ಧ ಘೋಷಣೆ ಮಾಡಿದರೆ, ತನ್ನ ರಾಷ್ಟ್ರಕ್ಕೆ ಸೋಲು ಖಚಿತ. ಅಣ್ವಸ್ತ್ರ ಯುದ್ಧ ಘೋಷಣೆಯಾದರೂ, ಅದರಿಂದ ತಮ್ಮ ರಾಷ್ಟ್ರಕ್ಕೆ ಹೆಚ್ಚು ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂಬ ಇಂಗಿತವನ್ನು ವ್ಯಕ್ತಪಡಿಸಿದ್ದರು.
ಆಗಸ್ಟ್ 5 ರಂದು ನಡೆದ ಭಾರತದ ಸಂಸತ್ ಅಧಿವೇಶನದಲ್ಲಿ ಜಮ್ಮು – ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಅಧಿಕಾರವನ್ನು ರದ್ದುಪಡಿಸುವ ನಿರ್ಣಯ ಕೈಗೊಳ್ಳುತ್ತಿದ್ದಂತೆ, ಇಮ್ರಾನ್ ಖಾನ್, ಪಾಕಿಸ್ತಾನದ ನ್ಯಾಷನಲ್ ಅಂಸಬ್ಲಿಯ ಜಂಟಿ ಅಧಿವೇಶನದಲ್ಲಿ ಭಾರತದ ವಿರುದ್ಧ ಯುದ್ಧ ಮಾಡುವ ಸಾಧ್ಯತೆಗಳನ್ನು ಉಲ್ಲೇಖಿಸಿದ್ದರು. ಈ ನಡುವೆ ಪಾಕಿಸ್ತಾನದಲ್ಲಿ ತೀವ್ರ ತರಬೇತಿ ಹೊಂದಿರುವ 40 ರಿಂದ 50 ಭಯೋತ್ಪಾದಕರು, ಭಾರತದ ಗಡಿನಿಯಂತ್ರಣಾ ರೇಖೆ ದಾಟಿ ದೇಶದೊಳಕ್ಕೆ ನುಸುಳಿದ್ದಾರೆ ಎಂಬ ಮಾಹಿತಿಯನ್ನು ಭದ್ರತಾ ಮೂಲಗಳು ತಿಳಿಸಿದ್ದವು. ಇದಲ್ಲದೆ, ಜೆಇಎಂ ಮತ್ತು ಎಲ್ಇಟಿಯಂತಹ ಭಯೋತ್ಪಾದಕ ಸಂಘಟನೆಗಳ 200 ರಿಂದ 250 ತರಬೇತಿ ಹೊಂದಿದ ಭಯೋತ್ಪಾದಕರು ಭಾರತದೊಳಕ್ಕೆ ನುಸುಳಿದ್ದಾರೆಂದೂ ಭದ್ರತಾ ಪಡೆಗಳು ಅಂದಾಜಿಸಿವೆ.








