ಬಳ್ಳಾರಿ
ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ತಂಡವು ತುಂಗಭದ್ರಾ ಯೋಜನೆಯ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಕಾಡಾ) ಕರ್ನಾಟಕ ನೀರಾವರಿ ನಿಗಮದ ಸಂಯುಕ್ತ ಆಶ್ರಯದಲ್ಲಿ ತುಂಗಭದ್ರಾ ಬಲದಂಡೆ ಕಾಲುವೆಯ ಎಮ್ಮಿಗನೂರು ನೀರು ಬಳದೆದಾರರ ಸಹಕಾರಿ ಸಂಘಗಳಿಗೆ ಇತ್ತೀಚೆಗೆ ಭೇಟಿ ನೀಡಿ ತುಂಗಭದ್ರಾ ಯೋಜನೆಯ ಅಚ್ಚುಕಟ್ಟು ಪ್ರದೇಶದ ನೀರು ಬಳಕೆದಾರರ ಸಹಕಾರಿ ಸಂಘಗಳ ಪುನಶ್ಚೇತನಕ್ಕೆ ಸಂಬಂಧಿಸಿದ ಸಭೆಗಳನ್ನು ನಡೆಸಿತು.
ನೀರು ಬಳಕೆದಾರರ ಸಹಕಾರಿ ಸಂಘಗಳ ಪುನಶ್ಚೇತನಕ್ಕೆ ಸಂಬಂಧಿಸಿದ ಪ್ರತಿನಿಧಿಗಳನ್ನು ಉದ್ದೇಶಿಸಿ ವಾಲ್ಮಿ ನಿರ್ದೆಶಕರಾದ ಡಾ. ರಾಜೇಂದ್ರ ಪೋದ್ದಾರ ಅವರು ಮಾತನಾಡಿ, ತುಂಗಭದ್ರಾ ಯೋಜನೆಯು ರಾಜ್ಯದ ಪ್ರಮುಖ ನೀರಾವರಿ ಯೋಜನೆಯಾಗಿದ್ದು, ಸುಮಾರು 5 ಲಕ್ಷ ಹೆಕ್ಟೇರ್‍ಕ್ಕೂ ಹೆಚ್ಚಿನ ಪ್ರಮಾಣದ ಭೂಮಿಗೆ ನೀರು ಹರಿಸಲಾಗುತ್ತಿದೆ. ಇದರಿಂದ ಈ ಭಾಗದ ಆರ್ಥಿಕ ಪರಿಸ್ಥಿತಿ ಹಾಗೂ ಜನರ ಬದುಕಿನಲ್ಲಿ ಸುಧಾರಣೆಗಳು ಬಂದಿವೆ. ಆದಾಗ್ಯೂ ನೀರಾವರಿ ನಿರ್ವಹಣೆಯಲ್ಲಿ ಇನ್ನೂ ಕೆಲವು ತೊಡಕುಗಳು ಇವೆ. ಇವುಗಳನ್ನು ಬಗೆಹರಿಸಲು ನೀರಾವರಿ ನಿಗಮ, ಕಾಡಾ, ವಾಲ್ಮಿ ಜೊತೆಗೆ ನೀರು ಬಳಕೆದಾರರ ಸಹಕಾರಿ ಸಂಘಗಳು ಕೈಜೋಡಿಸಬೇಕು ಎಂದರು. ಅಂದಾಗ ಮಾತ್ರ ನೀರಾವರಿ ಸಮರ್ಪಕ ನಿರ್ವಹಣೆಯಾಗಲು ಸಾಧ್ಯ ಎಂದರು.
ಈ ನಿಟ್ಟಿನಲ್ಲಿ ರಾಜ್ಯ ಸರಕಾರ 1965 ನೀರಾವರಿ ಕಾಯ್ದೆ ಅಡಿಯಲ್ಲಿ ನೀರು ಬಳಕೆದಾರರ ಸಹಕಾರಿ ಸಂಘಗಳನ್ನು ಸ್ಥಾಪಿಸಿದೆ. ತುಂಗಭದ್ರಾ ಯೋಜನೆ ಅಡಿಯಲ್ಲಿ ಸುಮಾರು 847 ಸಂಘಗಳ ಗುರಿಯನ್ನು ಹೊಂದಲಾಗಿದ್ದು. ಅವುಗಳ ಪೈಕಿ 667 ಸಂಘಗಳನ್ನು ರಚಿಸಲಾಗಿದೆ. ಸುಮಾರು 500 ಸಂಘಗಳು ಸಕ್ರೀಯವಾಗಿದೆ. ಸಂಘಗಳ ನಿರ್ವಹಣೆಯಲ್ಲಿಯೂ ಕೂಡಾ ಕೆಲವು ತೊಡಕುಗಳಿವೆ. ಇವುಗಳನ್ನು ಪರಿಹರಿಸಲು ಸರಕಾರ ಅನೇಕ ಸೌಲಭ್ಯ / ಸೌಲತ್ತುಗಳನ್ನು ಘೋಷಣೆ ಮಾಡಿದೆ. ಆದರೆ, ಸಮರ್ಪಕ ಮಾಹಿತಿ ಹಾಗೂ ತಿಳುವಳಿಕೆ ಕೊರತೆಯಿಂದ ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಮಾಡಲಾಗಿಲ್ಲ. ಈ ಕೊರತೆಯನ್ನು ತುಂಬುವುದರ ಮೂಲಕ ಸಂಘಗಳ ಪುನಶ್ಚೇತನಕ್ಕೆ ವಾಲ್ಮಿ ಹಾಗೂ ಕಾಡಾ ಪ್ರಯತ್ನಗಳನ್ನು ಮಾಡುತ್ತಿವೆ ಎಂದರು.
ಹೊಸ ಸಂಘಗಳ ರಚನೆ, ವಿತರಣಾ ಮಟ್ಟದ ಒಕ್ಕೂಟ ರಚನೆ, ಆಡಳಿತ, ಹಣಕಾಸು, ಚುನಾವಣೆಗಳು ಹಾಗೂ ಸರಕಾರ ಕೊಡ ಮಾಡುತ್ತಿರುವ ಸವಲತ್ತುಗಳ ಬಳಕೆ ಬಗ್ಗೆ ವಾಲ್ಮಿ ಸಮಾಲೋಚಕರಾದ ಸುರೇಶ ಕುಲಕರ್ಣಿ ಉಪನ್ಯಾಸ ನೀಡಿದರು.ಈ ವಿಷಯಗಳ ಕುರಿತು ನೀರು ಬಳಕೆದಾರರ ಸಹಕಾರ ಸಂಘಗಳ ಪದಾಧಿಕಾರಿಗಳು ತಜ್ಞರೊಂದಿಗೆ ಸುಧೀರ್ಘ ಚರ್ಚೆ ನಡೆಸಿದರು ಮತ್ತು ಸಂಘಗಳ ಸರ್ವಾಂಗೀಣ ಬಲವರ್ಧನೆಗಾಗಿ ಇಲಾಖೆಗಳೊಂದಿಗೆ ಕೈ ಜೋಡಿಸುವುದಾಗಿ ತಿಳಿಸಿದರು.
ಕೆ.ಎನ್.ಎನ್.ಎಲ್ ಡೆಪ್ಯೂಟಿ ಚೀಫ್ ಎಂಜನಿಯರ್ ಮಂಜುಳಾ ಕುಮಾರಿ, ಕಾಡಾದ ಹಿರಿಯ ಅಧಿಕಾರಿಗಳಾದ ವಾಲೀಶ್, ಭೂ ಅಭಿವೃದ್ಧಿ ಅಧಿಕಾರಿ ಸತೀಶ, ಸಹಾಯಕ ಪ್ರಬಂಧಕ ದಸ್ತಗೀರ್, ಸಿಂಗಟಾಲೂರ ಏತ ನೀರಾವರಿ ಕಾರ್ಯಪಾಲಕ ಅಭಿಯಂತರಾದ ಮಲ್ಲಿಗವಾಡ, ಕೃಷ್ಣಾ ಕಾಡಾದ ಅಧಿಕಾರಿ ತಾಹೀರ್ ಹುಸೇನ್ ಮತ್ತು ಇತರ ಅಧಿಕಾರಿಗಳು ಚರ್ಚೆಯಲ್ಲಿ ಭಾಗವಹಿಸಿದ್ದರು.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತ ಮುಖಂಡರಾದ ಪಾಲಾಕ್ಷಪ್ಪ, ವೀರಭದ್ರಪ್ಪ, ಕಾಳಪ್ಪ, ಶಾಂತನಗೌಡ, ಈರಣ್ಣ, ಶಿವಾನಂದಪ್ಪ, ಮಲ್ಲಪ್ಪ, ದಶರಥ ರೆಡ್ಡಿ ಸೇರಿದಂತೆ ಇನ್ನೂ ಅನೇಕ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ