ಚಿತ್ರದುರ್ಗ:
ಬರೀ ಕನಸು ಕಂಡರೆ ಆಗುವುದಿಲ್ಲ. ಕನಸು ನನಸಾಗಬೇಕಾದರೆ ಪರಿಶ್ರಮ ಮುಖ್ಯ. ಜಿಲ್ಲೆಯ ಆರು ತಾಲೂಕು ಮಟ್ಟದಲ್ಲಿ ಮೊದಲು ಸಭೆ ನಡೆಸಿ ಹಣಕಾಸು ಸಂಪನ್ಮೂಲವೂ ಬಹಳ ಮುಖ್ಯವಾಗಿದ್ದು, ಈಗಿನಿಂದಲೇ ಪ್ಲಾನ್ ಮಾಡಿಕೊಳ್ಳಿ. ಜವಾಬ್ದಾರಿಯಿಂದ ಯಾರು ನುಣುಚಿಕೊಳ್ಳುವುದು ಬೇಡ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕಾರ್ಯದರ್ಶಿಯೂ ಆಗಿರುವ ಎಸ್‍ಆರ್‍ಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಹೇಳಿದರು
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆಯಿಂದ ಸೀಬಾರದ ಸಮೀಪವಿರುವ ರಾಷ್ಟ್ರನಾಯಕ ಎಸ್.ನಿಜಲಿಂಗಪ್ಪನವರ ಸ್ಮಾರಕದ ಬಳಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಅಭಿವೃದ್ದಿ ಮತ್ತು ತಂತ್ರಾಂಶ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಕಾರ್ಯದರ್ಶಿ ಬಿ.ಎ.ಲಿಂಗಾರೆಡ್ಡಿ ಮಾತನಾಡಿ ಯಾವುದೇ ಒಂದು ಕಾರ್ಯಕ್ರಮ ನಡೆಸಬೇಕಾದರೆ ಮೊದಲು ಯೋಜನೆ ಇರಬೇಕು. ಆಗ ಎಲ್ಲಿ ಲೋಪದೋಷವಾಗಿದೆ ಎನ್ನುವುದನ್ನು ತಿಳಿದುಕೊಂಡು ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಮಕ್ಕಳನ್ನು ಹುರಿದುಂಬಿಸುವ ಹೊಣೆಗಾರಿಕೆ ನಿಮ್ಮಗಳ ಮೇಲಿದೆ. ಭಾಗವಹಿಸುವಿಕೆ ಬಹಳ ಮುಖ್ಯ. ಏನೇ ಕಾರ್ಯಕ್ರಮ ಮಾಡಿದರೂ ಡಿಸೆಂಬರ್ ಒಳಗೆ ಎಲ್ಲವನ್ನು ಪೂರ್ಣಗೊಳಿಸಿ. ಯಾವ ಶಾಲೆಯಲ್ಲಿ ಶಿಕ್ಷಕರುಗಳನ್ನು ಬಿಟ್ಟಿದ್ದೀರೋ ಅಂತಹವರನ್ನು ಗುರುತಿಸಿ ಸಂಸ್ಥೆಗೆ ಸೇರಿಸಿಕೊಂಡು ತರಬೇತಿ ನೀಡಿ ಇದರಿಂದ ಮಕ್ಕಳಿಗೆ ಪ್ರಯೋಜನವಾಗಲಿದೆ ಎಂದು ಹೇಳಿದರು.
ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿಯೂ ಕಡ್ಡಾಯವಾಗಿ ಸ್ಕೌಟ್ ಅಂಡ್ ಗೈಡ್ ಶಿಕ್ಷಕರುಗಳಿರಬೇಕು. ನೀವುಗಳು ಮಾಡುವ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಫೋಟೋ. ವೋಚರ್ಸ್ ಸಮೇತ ಜಿಲ್ಲಾ ಸಂಸ್ಥೆಗೆ ತಾಲೂಕುವಾರು ಪ್ರಗತಿಯನ್ನು ಸಲ್ಲಿಸಿ ರಾಜ್ಯ ಸಂಸ್ಥೆಯಿಂದ ಚಿತ್ರದುರ್ಗ ಜಿಲ್ಲೆಗೆ ಕೀರ್ತಿ ತರುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಕಿವಿಮಾತು ಹೇಳಿದರು.
ಒಳ್ಳೊಳ್ಳೆ ಕಾರ್ಯಕ್ರಮಗಳನ್ನು ಮಾಡಿ. ಎಷ್ಟು ಕೆಲಸಗಳನ್ನು ಮಾಡಿದ್ದೀರೆಂದು ಸಾಧನೆ ತೋರಿಸಿ ಗ್ರಾ.ಪಂ., ತಾ.ಪಂ., ಜಿ.ಪಂ. ಹಾಗೂ ರಾಜ್ಯ ಸಂಸ್ಥೆಯಿಂದ ಸಿಗುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಸಂಸ್ಥೆಗೆ ಒಳ್ಳೆಯ ಹೆಸರು ತರುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಪದಾಧಿಕಾರಿಗಳಿಗೆ ತಿಳಿಸಿದರು.
ಸಂಸ್ಥೆಯ ಮುಖ್ಯ ಆಯುಕ್ತರಾದ ಎಂ.ರೇವಣ್ಣ ಸಿದ್ದಪ್ಪ ಮಾತನಾಡಿ, ಸಂಸ್ಥೆಗೆ ಪದಾಧಿಕಾರಿಗಳಿಗೆ, ಮಕ್ಕಳಿಗೆ ಪ್ರಯೋಜನವಾಗುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸಂಸ್ಥೆಯ ಎಲ್ಲಾ ತಾಲೂಕು ಕಾರ್ಯದರ್ಶಿಗಳಿಗೆ, ಸಹ ಕಾರ್ಯದರ್ಶಿಗಳಿಗೆ ಹಾಗೂ ತರಬೇತಿ ಶಿಕ್ಷಕರುಗಳಿಗೆ ಕರೆ ನೀಡಿದರು.
2019-20 ನೇ ಸಾಲಿನ ಅಭಿವೃದ್ದಿ ಮತ್ತು ತಂತ್ರಾಂಶಗಳ ವಾರ್ಷಿಕ ಕಾರ್ಯಕ್ರಮಗಳ ಯೋಜನೆ ಕರಡು ಪ್ರತಿಯಲ್ಲಿ ಹದಿನೈದರಿಂದ ಇಪ್ಪತ್ತು ಕಾರ್ಯಕ್ರಮಗಳಿವೆ. ಆದ್ಯತೆ ಮೇಲೆ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಬೇಕು. ಹಣಕಾಸಿಗೆ ಸಂಬಂಧಿಸಿದಂತೆ ಸಭೆ ನಡೆಸಿ ಆಗು ಹೋಗುಗಳ ಕುರಿತು ಚರ್ಚಿಸಿ ನಡಾವಳಿ ರೂಪಿಸಬೇಕು. ಕಾರ್ಯಕಾರಿ, ಕೌನ್ಸಿಲ್ ಸಭೆ ಕೂಡ ನಡೆಯಬೇಕು. ಜೂ.21 ರಂದು ಯೋಗ ದಿನಾಚರಣೆಯಿದೆ. ನಮ್ಮ ಸಂಸ್ಥೆಯಿಂದಲೇ ಯೋಗ ದಿನಾಚರಣೆ ನಡೆಸಬೇಕೋ ಇಲ್ಲಾ ಜಿಲ್ಲಾಡಳಿತೊಂದಿಗೆ ಕೂಡಿಕೊಂಡು ಮಾಡಬೇಕು ಎನ್ನುವುದನ್ನು ತೀರ್ಮಾನಿಸಬೇಕಿದೆ ಎಂದು ಹೇಳಿದರು.
ಜಿಲ್ಲೆಯ ಎಲ್ಲಾ ತಾಲೂಕಿನ ಸಮಸ್ಯೆಗಳು ಕುರಿತು ವಿಮರ್ಶೆ ಮಾಡಿಕೊಂಡು ಅವರವರ ಹುದ್ದೆಗೆ ಅನುಸಾರವಾಗಿ ಬದ್ದತೆಯಿಂದ ಕೆಲಸ ಮಾಡಬೇಕು. ಎ.ಡಿ.ಸಿ. ಹೆಚ್.ಕ್ಯೂಗಳಿಗೂ ನಿಗಧಿತ ಜವಾಬ್ದಾರಿ ವಹಿಸಬೇಕು. ಅಂಬೇಡ್ಕರ್ ಜಯಂತಿ, ಗಾಂಧಿ ಜಯಂತಿ,.
ವನಮಹೋತ್ಸವವು ಕೂಡ ಸಂಸ್ಥೆಯಿಂದ ಆಚರಣೆಯಾಗಬೇಕು. ಪ್ರತಿ ತಿಂಗಳು ಯಾವ್ಯಾವ ಕಾರ್ಯಕ್ರಮಗಳನ್ನು ಮಾಡಬೇಕು ಎಂಬುದರ ಕುರಿತು ಮೊದಲು ಯೋಜನೆ ರೂಪಿಸಿಕೊಂಡಾಗ ಮಾತ್ರ ಕಾರ್ಯಕ್ರಮಗಳು ಯಶಸ್ವಿಯಾಗಲಿದೆ ಎಂದರು.ಹಿಂದಿನ ವರ್ಷ ಮಾಡಿದ ಕೆಲಸಗಳನ್ನು ವಿಶ್ಲೇಷಣೆ ಮಾಡಿಕೊಂಡು ಕೊರತೆ ಅನುಕೂಲ ಏನು ಎಂಬುದನ್ನು ಪರಾಮರ್ಶಿಸಿ ಪ್ರಗತಿಯನ್ನು ಆಧಾರವಾಗಿಟ್ಟುಕೊಂಡು ಕೆಲಸ ಮಾಡಿದಾಗ ರಾಜ್ಯ ಸಂಸ್ಥೆಯಿಂದ ಬಹುಮಾನಗಳನ್ನು ಪಡೆದುಕೊಳ್ಳಬಹುದು.
ಗಣತಿ ಪ್ರಗತಿಯನ್ನು ಆಧಾರವಾಗಿಟ್ಟುಕೊಳ್ಳಿ. ಬೆಸ್ಟ್ ಸ್ಕೌಟ್ ಅಂಡ್ ಗೈಡರ್ಸ್‍ಗಳನ್ನು ಸನ್ಮಾನಿಸಬೇಕು. ಪ್ರತಿ ತಿಂಗಳು ಒಂದು ಪ್ರಗತಿ ಸಭೆ ನಡೆಸಿ ನಡಾವಳಿಯನ್ನು ಜಿಲ್ಲಾ ಸಂಸ್ಥೆಗೆ ಕಳಿಸಿಕೊಡಿ ಆಡಳಿತ ವ್ಯವಸ್ಥಿತವಾಗಿದ್ದರೆ ಅಭಿವೃದ್ದಿ ತನ್ನಷ್ಟಕ್ಕೆ ತಾನೆ ಆಗುತ್ತದೆ ಎಂದು ಹೇಳಿದರು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷ ನಾರಾಯಣಸ್ವಾಮಿ ಸಂಸ್ಥೆಯಲ್ಲಿ ಎಲ್ಲರೂ ಕಷ್ಟಪಟ್ಟು ಕೆಲಸ ಮಾಡಿದಾಗ ಯಾವುದೆ ಕಾರ್ಯಕ್ರಮಗಳಾಗಲಿ ಯಶಸ್ವಿಯಾಗುತ್ತದೆ. ಕಾರ್ಯಕ್ರಮಗಳ ಯೋಜನೆ ಕರಡು ಪ್ರಕಾರ ಯಾವ್ಯಾವ ಕಾರ್ಯಕ್ರಮ ಇಟ್ಟುಕೊಂಡಿದ್ದೀರೋ ಅದರಂತೆ ನೆರವೇರಿಸಿದಾಗ ರಾಜ್ಯದಲ್ಲಿಯೇ ಚಿತ್ರದುರ್ಗ ಉತ್ತಮ ಸಂಸ್ಥೆ ಎಂಬ ಕೀರ್ತಿ ಗಳಿಸಬಹುದು ಎಂದು ತಿಳಿಸಿದರು.
ಸ್ಕೌಟ್ ಆಯುಕ್ತ ಚಳ್ಳಕೆರೆ ಯರ್ರಿಸ್ವಾಮಿ ಮಾತನಾಡಿ ಗಣತಿಯಲ್ಲಿ ನಮ್ಮ ಜಿಲ್ಲೆ ಹಿಂದುಳಿದಿದೆ. ಆತ್ಮವಿಮರ್ಶೆ ಮಾಡಿಕೊಳ್ಳಲು ಇಂತಹ ಕಾರ್ಯಾಗಾರಗಳು ಬೇಕು. ಕಳೆದ ಸಾಲಿನಲ್ಲಿ ಗಣತಿಯಲ್ಲಿ ಶೇ.84 ತಲುಪಿದ್ದೇವೆ. ಗುರಿ ತಲುಪಲು ಆಗಿಲ್ಲ. ಚಿತ್ರದುರ್ಗದಲ್ಲಿ 457 ಶಾಲೆಯಲ್ಲಿ ಸ್ಕೌಟ್ ಘಟಕ ತೆರೆಯಲು ಅರ್ಹವಾಗಿದೆ. ಪ್ರತಿ ಶಾಲೆಯಲ್ಲಿಯೂ ಕಡ್ಡಾಯವಾಗಿ ಸ್ಕೌಟ್ ಘಟಕ ತೆರೆಯಬೇಕೆಂದು ಸಂಸ್ಥೆಯ ಮುಖ್ಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. 49600 ಮಕ್ಕಳನ್ನು ಜಿಲ್ಲೆಯಲ್ಲಿ ನೊಂದಣಿ ಮಾಡಿಸುವ ಗುರಿಯಿದೆ. ಇದರಲ್ಲಿ ಕಬ್ಸ್ ಬುಲ್ ಬುಲ್ಸ್‍ಗಳು ಸೇರುತ್ತಾರೆ ಎಂದರು.
ಸ್ಕೌಟ್ ನಿಯಮಾವಳಿಗಳಲ್ಲಿ ಈ ವರ್ಷದಿಂದ ಕೆಲವು ಬದಲಾವಣೆಗಳನ್ನು ತರಲಾಗಿದೆ. ಯಾವ ಶಾಲೆಯಲ್ಲಿ ತರಬೇತಿ ಪಡೆದ ಶಿಕ್ಷಕರುಗಳಿದ್ದಾರೆ ಎಂಬುದನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಬಿ.ಆರ್.ಪಿ.ಗಳ ಮೂಲಕ ಮಾಹಿತಿ ತಿಳಿದುಕೊಳ್ಳುವ ಅಗತ್ಯವಿದೆ. ಎಲ್ಲಾ ಶಾಲೆಗಳಲ್ಲಿಯೂ ಸ್ಕೌಟ್ ಘಟಕ ನೊಂದಣಿಯಾಗಬೇಕು. ಗಣತಿಯಲ್ಲಿ ಶೇ.ನೂರಕ್ಕೆ ನೂರು ಗುರಿ ತಲುಪಿದರೆ ರಾಜ್ಯ ಮಟ್ಟದಲ್ಲಿ ಬಹುಮಾನ ಸಿಗುತ್ತದೆ. ಜಿಲ್ಲೆಯಲ್ಲಿ ರೇಂಜರ್ಸ್, ರೋವರ್ಸ್, ಕಬ್ಸ್ ಬುಲ್ ಬುಲ್ಸ್ ಕೂಡ ಸೊರಗಿದೆ. ಕಬ್ಸ್ ಬುಲ್ ಬುಲ್ಸ್‍ಗೆ ವಿಶೇಷವಾದ ತರಬೇತಿ ನೀಡುವ ನಿಟ್ಟಿನಲ್ಲಿ ಸಂಸ್ಥೆಯ ಎಲ್ಲರೂ ಸೇರಿ ಕೆಲಸ ಮಾಡೋಣ ಎಂದು ಮನವಿ ಮಾಡಿದರು.
ಗೈಡ್ಸ್ ಆಯುಕ್ತೆ ಸುನಿತಾಮಲ್ಲಿಕಾರ್ಜುನ್ ಮಾತನಾಡುತ್ತ ಯಾವ ಶಾಲೆಯಲ್ಲಿ ಗೈಡ್ಸ್ ಶಿಕ್ಷಕರುಗಳಿಲ್ಲ ಎನ್ನುವುದನ್ನು ಮೊದಲು ಪತ್ತೆಹಚ್ಚಿ ಅಂತಹ ಶಿಕ್ಷಕರುಗಳಿಗೆ ತರಬೇತಿ ನೀಡಿ ಘಟಕ ತೆರೆಯಬೇಕು. ಜಿಲ್ಲೆಯ ಎಲ್ಲಾ ತಾಲೂಕಿನ ಕಾರ್ಯದರ್ಶಿಗಳು ಇದನ್ನು ಸವಾಲಾಗಿ ಸ್ವೀಕರಿಸಿ ಜಿಲ್ಲಾ ಗೈಡ್ಸ್ ಸಮಾವೇಶ ಮಾಡೋಣ. ಇದರಿಂದ ಗಣತಿಯ ಗುರಿ ತಲುಪಲು ಸಹಕಾರಿಯಾಗಲಿದೆ ಎಂದು ಹೇಳಿದರು.
ರಾಜ್ಯ ಪರಿಷತ್ ಸದಸ್ಯ ವಿ.ಎಲ್.ಪ್ರಶಾಂತ್ ಮಾತನಾಡಿ ಅಭಿವೃದ್ದಿ ಮತ್ತು ತಂತ್ರಾಂಶದಲ್ಲಿ ಜಿಲ್ಲೆ ಹಿಂದುಳಿದಿದೆ. ಹಾಗಾಗಿ ಅಭಿವೃದ್ದಿಯಾಗಬೇಕು. ಪ್ರಶಸ್ತಿ ಸುಲಭವಾಗಿ ಸಿಗುವುದಲ್ಲ. ಅದರ ಹಿಂದೆ ಪರಿಶ್ರಮವಿದೆ ಎಂದು ಸಂಸ್ಥೆಯ ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು ಎಂದರು.ಸಂಸ್ಥೆಯ ಸಹ ಕಾರ್ಯದರ್ಶಿ ಡಾ.ರಹಮತ್‍ವುಲ್ಲಾ ವೇದಿಕೆಯಲ್ಲಿದ್ದರು.ಜಿಲ್ಲೆಯ ಆರು ತಾಲೂಕಿನ ಕಾರ್ಯದರ್ಶಿಗಳು, ಸಹ ಕಾರ್ಯದರ್ಶಿಗಳು, ಸಂಪನ್ಮೂಲ ವ್ಯಕ್ತಿ ಚಂದ್ರಪ್ರಕಾಶ್, ಡಿ.ಓ.ಟಿ.ಗಳಾದ ರವಿ. ನೂರ್‍ಫಾತಿಮ, ತರಬೇತಿ ಆಯುಕ್ತ ವಿಶ್ವನಾಥ್, ಜಿ.ಎಸ್.ಉಜ್ಜಿನಪ್ಪ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.