ಕನ್ನಡ ಸಾಹಿತ್ಯ ಪರಿಷತ್ತಿನ 105 ನೇ ಸಂಸ್ಥಾಪನಾ ದಿನಾಚರಣೆ

ಹಾವೇರಿ :

     ಇಂಗ್ಲೀಷ್ ಶಿಕ್ಷಣದಿಂದ ಬದುಕು ಸುಂದರವಾಗುತ್ತದೆ ಎನ್ನುವದು ಕೇವಲ ಭ್ರಮೆಯಾಗಿದ್ದು, ಬದುಕಿನ ಸ್ಥಿತ್ಯಂತರಗಳನ್ನು ಸಮರ್ಥವಾಗಿ ಎದುರಿಸುವ ಮನೋಭಾವ ಕೇವಲ ಮಾತೃಭಾಷೆಯ ಶಿಕ್ಷಣದಿಂದ ಸಾಧ್ಯ ಎನ್ನುವದು ಸಾಬೀತಾಗಿದ್ದು, ಸರ್ಕಾರ ಈ ನಿಟ್ಟಿಯಲ್ಲಿ ಚಿಂತಿಸಿ ಆಂಗ್ಲಭಾಷಾ ಶಾಲೆಗಳನ್ನು ಆರಂಭಿಸುವ ಯೋಜನೆ ಕೈಬಿಡಬೇಕೆಂದು ನಿವೃತ್ತ ಪ್ರೊ. ಪ್ರೇಮಾನಂದ ಲಕ್ಕಣ್ಣನವರ ಹೇಳಿದರು.

      ನಗರದ ರಾಚೋಟೇಶ್ವರ ಪ.ಪೂ. ಕಾಲೇಜಿನಲ್ಲಿ ಜಿಲ್ಲಾ ಮತ್ತು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 105 ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

      ಭಾರತೀಯರಿಗೆ ಹುಸಿ ಆಸೆಗಳನ್ನು ತೋರಿಸಿ ಮೆಕಾಲೆ ಇಂಗ್ಲೀಷ ಶಿಕ್ಷಣವನ್ನು ಆರಂಭಿಸಿ, ನಮ್ಮ ಭಾಷೆಯೊಂದಿಗೆ ನಮ್ಮ ಭವ್ಯ ಸಂಸ್ಕತಿ, ಪರಂಪರೆಯ ಅವನತಿಗೆ ಕಾರಣರಾದರೆ. ಅದೇ ಕಿಟೆಲ್‍ನಂತಹ ಮೇಧಾವಿ ಕನ್ನಡ ಭಾಷಾ ನಿಘಂಟನ್ನು ರಚಿಸಿ ಕನ್ನಡಕ್ಕೆ ಅದ್ಭುತ, ಅನನ್ಯ ಕೊಡುಗೆಯನ್ನು ನೀಡಿದ್ದಾನೆ. ಕರ್ನಾಟಕದಲ್ಲಿ ಕನ್ನಡವೇ ಶಿಕ್ಷಣ ಮಾಧ್ಯಮವಾದರೆ, ವೈಚಾರಿಕ ಚಿಂತನೆಯ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.

       ಕರ್ನಾಟಕ ಸರ್ಕಾರ ಒಂದು ಸಾವಿರ ಇಂಗ್ಲೀಷ ಮಾಧ್ಯಮದ ಶಾಲೆ ಆರಂಭಿಸುತ್ತಿದ್ದು, ಆದರೆ ವಾಸ್ತವವಾಗಿ ಉತ್ತಮ ಇಂಗ್ಲೀಷ್ ಕಲಿಸುವ ಕೌಶಲದ ಶಿಕ್ಷಕರ ಕೊರೆತೆ ಇರುವದು ಕಟು ಸತ್ಯ. ಮೊದಲು ಶಿಕ್ಷಕರಿಗೆ ಉತ್ತಮ ತರಭೇತಿ ನೀಡದೇ ಇಂಗ್ಲೀಷ್ ಮಾಧ್ಯಮದ ಶಾಲೆ ಆರಂಭಿಸುವದು ಮೂರ್ಖತನದ ಪರಮಾವಧಿ ಎಂದು ಹೇಳಿದರು.

        ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಾಹಿತಿ ಗಂಗಾಧರ ನಂದಿ ಮಾತನಾಡಿ, ಕನ್ನಡ ಭಾಷೆ, ನೆಲ, ಜಲ ಉಳಿಸುವುದಕ್ಕಾಗಿ ಹಲವಾರು ಮಹನೀಯರು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಕನ್ನಡದ ನಂದಾ ದೀಪ ಹಚ್ಚಿ ಹೋಗಿದ್ದಾರೆ. ಇಂಗ್ಲೀಷ್ ವ್ಯಾಮೋಹವನ್ನು ತೊರೆದು ನಮ್ಮತನದ ಭವ್ಯ ಪರಂಪರೆಯನ್ನು ಉಳಿಸಿ ಬೆಳೆಸಿ ಮುಂದಿನ ಜನಾಂಗಕ್ಕೆ ವರ್ಗಾಯಿಸುವ ಮಹತ್ತರ ಜವಾಬ್ದಾರಿಯನ್ನು ಪಾಲಿಸಬೇಕಾದುದ್ದು ನಮ್ಮ ಕತ್ರ್ಯವ್ಯ ಎಂದು ಹೇಳಿದರು.

        ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿಯ ಬಗ್ಗೆ ನಿವೃತ್ತ ಶಿಕ್ಷಕ ಸಿ.ಎಸ್ ಮರಳಿಹಳ್ಳಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆಯಾಗಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ ಮತ್ತು ಸರ್ ಎಂ. ವಿಶ್ವೇಶ್ವರಯ್ಯನವರ ದೂರದರ್ಶಿತ್ವದ ಫಲವಾಗಿ ಸ್ಥಾಪನೆಯಾಗಿ, ಇಂದು ವಾಮನ ಮೂರ್ತಿಯಿಂದ ತ್ರಿವಿಕ್ರಮ ಸ್ವರೂಪವಾಗಿ ಬೆಳೆದು ನಿಂತಿದೆ. ಇಂಥ ಸಂಸ್ಥೆಗೆ ಕನ್ನಡಿಗರಾದ ನಾವು ಪ್ರತಿನಿಧಿಯಾಗಿ ಕಸಾಪದ ಚಟುವಟಿಕೆಗಳಿಗೆ ಸಹಾಯ ಸಹಕಾರ ನೀಡಬೇಕಾಗಿದೆ ಎಂದು ಹೇಳಿದರು.

         ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪದ ಅಧ್ಯಕ್ಷ ಹೆಚ್.ಬಿ ಲಿಂಗಯ್ಯ ಮಾತನಾಡಿದ ಜಿಲ್ಲಾ ಕಸಾಪವು ನಿರಂತರವಾಗಿ ಹಲವಾರು ಸಾಹಿತ್ಯಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದು, ಪ್ರತಿ ತಾಲೂಕಿನಲ್ಲಿ ನಾಡಹಬ್ಬ, ತಾಲೂಕು ಸಮ್ಮ್ಮೇಳನ, ಜಿಲ್ಲಾ ಸಮ್ಮೇಳನಗಳು ನಡೆಯುತ್ತಿವೆ. ಸರ್ಕಾರವು ಆಂಗ್ಲ ಮಾಧ್ಯಮ ಶಾಲೆ ತೆರೆಯುವುದಕ್ಕೆ ಕಸಾಪವು ತೀವ್ರವಾಗಿ ಖಂಡಿಸಿದ್ದು, ಸದ್ಯದಲ್ಲೇ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವದು ಎಂದು ಹೇಳಿದರು.

         ಸಮಾರಂಭದ ಸಾನಿಧ್ಯ ವಹಿಸಿದ್ದ ಹುಕ್ಕೇರಿಮಠ ಸದಾಶಿವ ಸ್ವಾಮೀಜಿ ಮಾತನಾಡಿ, ಕಸಾಪದ ಸಂಸ್ಥಾಪನಾ ದಿನಾಚರಣೆಯು ನಮ್ಮೆಲ್ಲರ ಆತ್ಮಾವಲೋಕನದ ಸಮಯವಾಗಿದ್ದು, ಕನ್ನಡನಾಡಿನಲ್ಲಿ ಕನ್ನಡವೇ ಕಳವಳಕಾರಿ ಸ್ಥಿತಿಯಲ್ಲಿದೆ. ನಮ್ಮನ್ನು ಆಳುವ ಜನಪ್ರತಿನಿಧಿಗಳು ಮತ್ತು ಕನ್ನಡದ ಸ್ವಾಮಿಸಂತರೆ ಇಂಗ್ಲೀಷ ಮಾಧ್ಯಮದ ಶಾಲೆಗಳನ್ನು ತೆಗೆದು ಶಿಕ್ಷಣವನ್ನು ವ್ಯಾಪಾರಿಕರಣಗೊಳಿಸಿದ್ದಾರೆ.

        ವೇದಿಕೆಯ ಮೇಲೆ ಕನ್ನಡದ ಬಗ್ಗೆ ಭಾಷಣ ಮಾಡುವ ಸಾಹಿತಿಗಳು, ಕನ್ನಡ ಪರ ಸಂಘಟನೆ ಸದಸ್ಯರು, ಕನ್ನಡ ಶಾಲೆಯ ಶಿಕ್ಷಕರೆ ತಮ್ಮ ಮಕ್ಕಳನ್ನು ಇಂಗ್ಲೀಷ ಮಾಧ್ಯಮದ ಶಾಲೆಗೆ ಸೇರಿದರೆ, ಕನ್ನಡ ಹೇಗೆ ಉಳಿದಿತು ಎಂದು ಹೇಳಿದ ಅವರು ಕನ್ನಡ ಭಾಷೆ, ನೆಲ, ಜಲಕ್ಕೆ ಕುತ್ತು ಬಂದಾಗ ನಾವೆಲ್ಲದೇ ಮತ್ತ್ಯಾರು ಹೋರಾಟ ಮಾಡಬೇಕು ಎಂದು ಹೇಳಿದರು.

        ಇದೇ ಸಂದರ್ಭದಲ್ಲಿ ಸಾಹಿತ್ಯ ಶ್ರೀ ಪ್ರಶಸ್ತಿ ಪಡೆದ ಹಿರಿಯ ಬಂಡಾಯ ಸಾಹಿತಿ ಸತೀಶ ಕುಲಕರ್ಣಿ,ಇತ್ತೀಚಿಗೆ ಕನ್ನಡ ಸಾಹಿತ್ಯದಲ್ಲಿ ಡಾಕ್ಟರೇಟ ಪಡೆದ ಡಾ|| ಪುಷ್ಪಾ ಶಲವಡಿಮಠ, ನಿವೃತ್ತ ಆರೋಗ್ಯ ನಿರೀಕ್ಷಕ ಶಂಕರ ಸುತಾರ, ಸಮಾಜ ಸೇವಕ ವಿವೇಕಾನಂದ ಬೆಂಡಿಗೇರಿ ಅವರನ್ನು ಕಸಾಪದ ವತಿಯಿಂದ ಸನ್ಮಾನಿಸಲಾಯಿತು.

         ಸಮಾರಂಭದಲ್ಲಿ ಹಿರಿಯ ಸಾಹಿತಿ ವಿರುಪಾಕ್ಷಪ್ಪ ಕೋರಗಲ್ಲ, ಪಿ.ಡಿ ಶಿರೂರ, ಹನುಮಂತಗೌಡ ಗೊಲ್ಲರ, ಜಿ.ಎಂ.ಮಠದ, ಎಸ್.ವಿ ಹಿರೇಮಠ, ವಾಯ್.ಎಂ. ಬೇಲಿ, ದ್ರಾಕ್ಷಾಯಣಿ ಗಾಣಗೇರ, ಲಲಿತಾ ಹೊರಡಿ, ಅಮೃತಮ್ಮ ಶೀಲವಂತರ, ವಿ.ವಿ ಹರಪನಹಳ್ಳಿ, ಎಸ್.ಎನ್ ದೊಡ್ಡಗೌಡರ, ಬಿ.ಪಿ ಶಿಡೇನೂರ, ಪ್ರಭು ಹಿಟ್ನಳ್ಳಿ, ಮಲ್ಲಿಕಾರ್ಜುನ ಸಾತೇನಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.

        ಆರಂಭದಲ್ಲಿ ಬಸವರಾಜ ಮುದಗಲ್ಲ ಪ್ರಾರ್ಥಿಸಿದರು. ಸಮತಾ ಕಲಾ ತಂಡ ನಾಡಗೀತೆ ಪ್ರಸ್ತುತ ಪಡಿಸಿದರು. ತಾಲೂಕಾ ಕಸಾಪ ಅಧ್ಯಕ್ಷ ವಾಯ್. ಬಿ ಆಲದಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ನಡುವಿನಮಠ ಸ್ವಾಗತಿಸಿದರು. ಶಿವಬಸವ ಮರಳಿಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಪೃಥ್ವೀರಾಜ ಬೆಟಗೇರಿ ವಂದಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link