ದಾವಣಗೆರೆ:
ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿಯೊಂದು ದಾಳಿ ನಡೆಸಿರುವ ಪರಿಣಾಮ ರೈತ ತೀವ್ರವಾಗಿ ಗಾಯಗೊಂಡಿರುವ ಘಟನೆ ಜಗಳೂರು ತಾಲೂಕಿನ ಬಸಾಪುರ ಗ್ರಾಮದಲ್ಲಿ ನಡೆದಿದೆ.
ಬಸಾಪುರ ಗ್ರಾಮದ ಚಂದ್ರನಾಯ್ಕ(50 ವರ್ಷ) ಕರಡಿ ದಾಳಿಗೆ ಒಳಗಾಗಿರುವ ರೈತನಾಗಿದ್ದು, ಈತ ಎಂದಿನಂತೆ ಬೆಳಿಗ್ಗೆ ಹೊಲಕ್ಕೆ ಕೆಲಸ ಮಾಡಲೆಂದ ಹೋಗಿದ್ದ, ಚಂದ್ರನಾಯ್ಕ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕರಡಿಯು ಏಕಾಏಕಿ ದಾಳಿ ನಡೆಸಿ, ತೀವ್ರವಾಗಿ ಗಾಯಗೊಳಿಸಿದೆ.
ಕರಡಿ ದಾಳಿಯಿಂದ ಎದೆಗುಂದದ ಚಂದ್ರನಾಯ್ಕ ಪ್ರತಿರೋಧವನ್ನೊಡ್ಡಿದ್ದಾರೆ. ನೆರೆ ಹೊರೆಯ ರೈತರು ಚಂದ್ರನಾಯ್ಕ ಕೂಗಾಟ ಕೇಳಿಸಿಕೊಂಡು ಕೋಲು, ಕಲ್ಲುಗಳನ್ನು ಹಿಡಿದು, ಕೂಗುತ್ತಾ ಕರಡಿಯನ್ನು ಅಲ್ಲಿಂದ ಓಡಿಸಿದ್ದಾರೆಂದು ಮೂಲಗಳು ತಿಳಿಸಿವೆ.
ತೀವ್ರವಾಗಿ ಗಾಯಗೊಂಡ ಚಂದ್ರನಾಯ್ಕ ಸ್ಥಿತಿ ಗಂಭೀರವಾಗಿದ್ದು, ಈತನನ್ನು ಜಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.