ಇ.ಎಸ್.ಡಿ.ಎಂ ವಲಯದಲ್ಲಿ ಕರ್ನಾಟಕ ಗಮನಾರ್ಹ ಸಾಧನೆಮಾಡಿದೆ : ಶೆಟ್ಟರ್

ಬೆಂಗಳೂರು

   ಎಲೆಕ್ಟ್ರಾನಿಕ್ಸ್ ಸಿಸ್ಟಮ್ ವಿನ್ಯಾಸ ಮತ್ತು ಉತ್ಪಾದನೆ  ಇ.ಎಸ್.ಡಿ.ಎಂ ವಲಯದಲ್ಲಿ ಕರ್ನಾಟಕ ಅಂತರ್ಗವಾಗಿಯೇ ಗಮನಾರ್ಹ ಸಾಧನೆಮಾಡಿದ್ದು, ಇದೀಗ ಸರ್ಕಾರದೊಂದಿಗೆ ಭಾಗೀದಾರರಾಗಿ ಈ ಕ್ಷೇತ್ರವನ್ನು ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ಯಲು ಉದ್ಯಮಿಗಳು ಮುಂದಾಗಬೇಕು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಕರೆ ನೀಡಿದ್ದಾರೆ.

   ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸಹಯೋಗದೊಂದಿಗೆ ? ಜಾಗತಿಕವಾಗಿ ಇ.ಎಸ್.ಡಿ.ಎಂ. ಕ್ಲಸ್ಟರ್ ಗಳನ್ನು ಸ್ಪರ್ಧಾತ್ಮಕವಾಗಿ ಅಭಿವೃದ್ಧಿಪಡಿಸುವ? ಕುರಿತಂತೆ ನಗರದಲ್ಲಿ ಬುಧವಾರ ಆಯೋಜಿಸಲಾದ ಕಾರ್ಯಾಗಾರ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ? ನಿರ್ದಿಷ್ಟ ಉತ್ಪನ್ನಗಳನ್ನು ಉತ್ಪಾದಿಸುವ ಕೈಗಾರಿಕಾ ಕ್ಲಸ್ಟರ್ ಅಭಿವೃದ್ಧಿ ಯೋಜನೆಯಡಿ ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಅಂಡ್ ಮ್ಯಾನ್ಯುಫೆಕ್ಚರಿಂಗ್ ಕ್ಷೇತ್ರಕ್ಕೆ ಆದ್ಯತೆ ನೀಡಲಾಗಿದೆ. ಈ ವಲಯದಲ್ಲಿ ಕರ್ನಾಟಕ ಬಲಿಷ್ಠವಾಗಿದ್ದು, ಬಂಡವಾಳ ಹೂಡಲು ಉದ್ಯಮಿಗಳಿಗೆ ವಿಪುಲ ಅವಕಾಶಗಳಿವೆ ಎಂದರು.

      ಈಗಾಗಲೇ ಮೈಸೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಇ.ಎಸ್.ಡಿ.ಎಂ ಕ್ಲಸ್ಟರ್ ಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಹುಬ್ಬಳ್ಳಿ ಮತ್ತು ಕೋಲಾರ ಜಿಲ್ಲೆಗಳನ್ನು ಸಹ ಈ ಕ್ಷೇತ್ರಕ್ಕೆ ಸೇರ್ಪಡೆ ಮಾಡಲು ಪರಿಶೀಲನೆ ಮಾಡಲಾಗುತ್ತಿದೆ. ಇದೀಗ ಕೈಗಾರಿಕೋದ್ಯಮಿಗಳು ಕೈ ಜೋಡಿಸಿ ಈ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸಬೇಕು ಎಂದರು.

      ಇ.ಎಸ್.ಡಿ.ಎಂ ಕ್ಷೇತ್ರದಲ್ಲಿ ಹೂಡಿಕೆಗೆ ಇಡೀ ದೇಶದಲ್ಲಿ ಕರ್ನಾಟಕ ಸೂಕ್ತ ಸ್ಥಳವಾಗಿದ್ದು, ದಾವೋಸ್ ನ ವಿಶ್ವ ಆರ್ಥಿಕ ಒಕ್ಕೂಟ ಜಗತ್ತಿನ ಪ್ರಮುಖ ನಾಲ್ಕು ಹೂಡಿಕೆಗಳ ತಾಣಗಳ ಪೈಕಿ ಕರ್ನಾಟಕ ಸಹ ಬಂಡವಾಳ ತೊಡಗಿಸಲು ಪ್ರಶಸ್ತ ತಾಣ ಎಂದು ಹೇಳಿದೆ. ಇದಲ್ಲದೇ ಆಟೋಮೊಬೈಲ್ಸ್, ಏರೋಸ್ಪೇಸ್, ರಕ್ಷಣೆ, ಇಂಜಿನಿಯರಿಂಗ್, ಐಟಿ-ಬಿಟಿಯಲ್ಲೂ ಮಂಚೂಣಿಯಲ್ಲಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

      ವಾಣಿಜ್ಯ ಮತ್ತು ಕೈಗಾರಿಕಾ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ ಮಾತನಾಡಿ, ಪರಿಸರ ಸ್ನೇಹಿ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಷೇತ್ರದಲ್ಲಿ ಮೈಸೂರು ಮಂಚೂಣಿಗೆ ಬಂದಿದ್ದು, ಧಾರವಾಡದಲ್ಲಿ ನವ ಅನ್ವೇಷನೆಗೆ ಒತ್ತು ನೀಡಲಾಗಿದೆ. ಈ ವಲಯದಲ್ಲಿ ಹೂಡಿಕೆ ಮಾಡಲು ಮುಂದಾಗುವ ಹೂಡಿಕೆದಾರರಿಗೆ ಸರ್ಕಾರದಿಂದ ವಿಶೇಷ ಪ್ಯಾಕೇಜ್ ನೆರವು ಮತ್ತು ವಿಶ್ವದರ್ಜೆಯ ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ ಕ್ರಮವಹಿಸಲಿದೆ ಎಂದರು.

     ಇ.ಎಸ್.ಡಿ.ಎಂ ಕ್ಲಸ್ಟರ್ ಗಳ ಅಭಿವೃದ್ದಿಗಾಗಿ ವಿವಿಧ ಜಿಲ್ಲೆಗಳಲ್ಲಿ ಒಂದು ಸಾವಿರ ಎಕರೆ ಭೂಮಿ ಗುರುತಿಸಲಾಗಿದೆ. ಈ ವಲಯಕ್ಕೆ ಅಗತ್ಯವಾಗಿರುವ ಕೌಶಲ್ಯಯುಕ್ತ ಮಾನವ ಸಂಪನ್ಮೂಲ ಒದಗಿಸಲು ಐಟಿಐ ಮತ್ತಿತರ ವೃತ್ತಿ ಆಧರಿತ ಕೋರ್ಸ್ ಗಳನ್ನು ಮೇಲ್ದರ್ಜೆಗೇರಿ ಸಲಾಗಿದೆ. ಸರ್ಕಾರ ಮತ್ತು ಕೈಗಾರಿಕೋದ್ಯಮಿಗಳು ಒಟ್ಟಿಗೆ ಕಾರ್ಯನಿರ್ವಹಿಸಿದಾಗ ಮಾತ್ರ ಈ ಕ್ಷೇತ್ರದ ಅಭ್ಯುದಯ ಸಾಧ್ಯ ಎಂದು ಗೌರವ್ ಗುಪ್ತ ಪ್ರತಿಪಾದಿಸಿದರು.

     ಕೈಗಾರಿಕಾ ಇಲಾಖೆ ಆಯುಕ್ತ ಗುಂಜನ್ ಕೃಷ್ಣಾ ಮಾತನಾಡಿ, ಸರ್ಕಾರ ಸಮಗ್ರವಾಗಿ ಇ.ಎಸ್.ಡಿ.ಎಂ. ಕ್ಲಸ್ಟರ್ ಗಳನ್ನು ಅಭಿವೃದ್ಧಿಪಡಿಸಲು ಯೋಜಿಸುತ್ತಿದ್ದು, ಇದರಿಂದ ಭವಿಷ್ಯದಲ್ಲಿ ಹೂಡಿಕೆದಾರರಿಗೆ ಭಾರೀ ಅನುಕೂಲವಾಗಲಿದೆ ಎಂದರು.

    ಕಾರ್ಯಾಗಾರದಲ್ಲಿ ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಅಂಡ್ ಮ್ಯಾನುಫೆಕ್ಚರಿಂಗ್ ಕ್ಷೇತ್ರದ ಉದ್ಯಮಿಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ರಾಜ್ಯದಲ್ಲಿ ಪರಿಸರ ಸ್ನೇಹಿ ಮತ್ತು ವಿಶ್ವ ದರ್ಜೆಯ ಇ.ಎಸ್.ಡಿ.ಎಂ ಕ್ಲಸ್ಟರ್ ಗಳನ್ನು ಅಭಿವೃದ್ಧಿಪಡಿಸುವ ಕ್ರಮಗಳ ಬಗ್ಗೆ ಉದ್ಯಮಿಗಳು ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿದರು. ಈ ಕ್ಷೇತ್ರದಲ್ಲಿ ನಾವಿನ್ಯತೆಯನ್ನು ಅಳವಡಿಸಿಕೊಳ್ಳುವ ಕುರಿತಂತೆ ಸಕಾರಾತ್ಮಕವಾಗಿ ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

   ಪ್ರಮುಖವಾಗಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಕ್ಷಿಯೋಮಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಕ್ಸಿಯೋಮಿ ಗ್ಲೋಬಲ್ ಉಪಾಧ್ಯಕ್ಷ ಮನು ಜೈನ್, ಒನ್ ಪ್ಲಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ವಿಕಾಸ್ ಅಗರ್ ವಾಲ್, ಎಚ್.ಸಿ.ಎಲ್ ನ ಬ್ಯುಸಿನೆಸ್ ಲೀಡರ್ ಮತ್ತು ಹಿರಿಯ ಉಪಾಧ್ಯಕ್ಷ ರವಿಕುಮಾರ್ ಚಿರುಗುಡು, ಬೋಸ್ಚ್ ಅಟೋಮೋಟಿವ್ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೈಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಗುರುಪ್ರಸಾದ್, ಲಾಜಿಸ್ಟಿಕ್ ಫೋಕ್ಸೋನ್ ನ ಭಾರತದ ಮುಖ್ಯಸ್ಥ ರಾಮಚಂದ್ರ ರಾಮಮೂರ್ತಿ ಮತ್ತು ಫ್ಲೆಕ್ಸ್ ನ ಹಿರಿಯ ನಿರ್ದೇಶಕ ಅರಿಜಿತ್ ಸೇನ್, ಪಿಡಬ್ಲ್ಯೊಸಿ ನ ಪಾಲುದಾರ ಮೊಹಮದ್ ಅತಾರ್ ಸಂವಾದಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

    ಬಳಿಕ ಒಪೊ ವುರ್ಥ್ಕ ಟೆಕ್ನಾಲಜಿಸ್, ಅವಲೋನ್ ಟೆಕ್ನಾಲಜಿಸ್, ಲಾಜಿಕಲ್ ಲರ್ನಿಂಗ್ ಲಿಮಿಟೆಡ್ ಹಾಗೂ ಎಸ್.ಜಿ.ಎಸ್ ಟೆಸ್ಟಿಂಗ್ ಸಲುಷನ್ಸ್ ಲಿಮಿಟೆಡ್ ನ ಪ್ರಮುಖ ಪ್ರತಿನಿಧಿಗಳು ಒಬ್ಬರ ನಂತರ ಒಬ್ಬರು ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುವ ಕುರಿತು ಸರ್ಕಾರದ ಹಿರಿಯ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು.

      ಇಂಡಿಯಾ ಸೆಲ್ಯುಲರ್ ಅಂಡ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ [ಐಸಿಇಎ] ಕಾರ್ಯಾಗಾರದ ಸಹ ಭಾಗಿಯಾದರ ಸಂಸ್ಥೆಯಾಗಿದ್ದು, ಇಂಡಿಯಾ ಎಲೆಕ್ಟ್ರಾನಿಕ್ಸ್ ಅಂಡ್ ಸೆಮಿಕಂಡಕ್ಟರ್ ಅಸೋಸಿಯೇಷನ್ ಸಹಭಾಗಿತ್ವ ವಹಿಸಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap