ಭೂಸ್ವಾಧೀನ ಕಾಯ್ದೆ ತಿದ್ದುಪಡಿಗೆ ಒತ್ತಾಯಿಸಿ ಜೂ.10ರಂದು ಪ್ರತಿಭಟನೆ

ತುಮಕೂರು

     ಕೇಂದ್ರ ಸರ್ಕಾರದ ಭೂಸ್ವಾಧೀನ ಕಾಯ್ದೆಯನ್ನು ರಾಜ್ಯ ಸರ್ಕಾರ ತಿದ್ದುಪಡಿ ಮಾಡಿ, ರೈತ ವಿರೋಧಿ ಕಾಯ್ದೆಯನ್ನಾಗಿಸಿದ್ದುದನ್ನು ವಿರೋಧಿಸಿ ಜೂ.10ರಂದು ಕ್ಯಾತ್ಸಂದ್ರ ಟೋಲ್‍ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದ್‍ಪಟೇಲ್ ತಿಳಿಸಿದರು.

     ನಗರದ ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2013ರಲ್ಲಿ ಕೇಂದ್ರ ಸರ್ಕಾರದಲ್ಲಿ ಭೂಸ್ವಾಧೀನ ಕಾಯ್ದೆಯನ್ನು ಜಾರಿಗೊಳಿಸಿತು. ಈ ಕಾಯ್ದೆಯ ಪ್ರಕಾರ ರೈತರ ಜಮೀನು ಪಡೆಯುವಾಗ ಅವರ ಅನುಮತಿ ಪಡೆದು ನಂತರ ಭೂಸ್ವಾದೀನ ಮಾಡಿಕೊಳ್ಳಬೇಕು. ಅವರಿಗೆ ನೀಡಿದ ಪರಿಹಾರದ ಹಣ ತೃಪ್ತಿದಾಯಕವಾಗಿರಬೇಕು. ಒಂದು ವೇಳೆ ಅದರಿಂದ ರೈತರು ಅತೃಪ್ತರಾದಲ್ಲಿ ಅವರು ನ್ಯಾಯಾಲಯದಲ್ಲಿ ದಾವೆ ಹೂಡಬಹುದಾಗಿತ್ತು. ಆದರೆ ಇದೀಗ ಈ ಕಾಯ್ದೆಯನ್ನು ರಾಜ್ಯ ಸರ್ಕಾರ ತಿದ್ದುಪಡಿ ಮಾಡಿದ್ದು ಸಂಪುರ್ಣ ರೈತ ವಿರೋಧಿಯಾಗಿದೆ ಎಂದು ತಿಳಿಸಿದರು.

      ರೈತರ ಪರ ಇರಬೇಕಾದ ಸರ್ಕಾರಗಳು ಈಗ ರೈತರ ವಿರೋಧಿಯಾಗಿವೆ. ರೈತರಿಗೆ ಅನುಕೂಲವಾಗುವ ಯಾವೊಂದು ಯೋಜನೆಗಳನ್ನು ಜಾರಿ ಮಾಡಿಲ್ಲ. ರೈತರಿಗೆ ಬೇಕಾದ ನೀರಾವರಿ ಯೋಜನೆಯ ಕಾಮಗಾರಿಗಳನ್ನು ಮಾಡುವಲ್ಲಿ ವಿಳಂಭ ಧೋರಣೆ ನಡೆಯುತ್ತಿದೆ. ಎತ್ತಿನ ಹೊಳೆ ಯೋಜನೆ ಜಾರಿಯಾಗಿ ಹಲವು ವರ್ಷಗಳು ಆಗುತ್ತಿದ್ದರೂ ಕಾಮಗಾರಿ ಪೂರ್ಣಗೊಳಿಸುತ್ತಿಲ್ಲ.

      ಹೇಮಾವತಿ ನೀರಿನ ವಿಚಾರದಲ್ಲಿ ತುಮಕೂರಿಗೆ ಬರಬೇಕಾದ 24.5 ಟಿಎಂಸಿ ನೀರು ಹರಿದಿಲ್ಲ. ತುಮಕೂರು ಬಲದಂಡೆ ನಾಲೆಯ ಸಾಮಥ್ರ್ಯ ಕೇವಲ 700 ಕ್ಯುಸೆಕ್ಸ್‍ಗಿಂತ ಕಡಿಮೆ ಇದೆ. ಇದಕ್ಕಿಂತ ಹೆಚ್ಚಿನದಾಗಿ ನೀರು ಹರಿಸಿದರೆ ನಾಲೆಯು ಹೊಡೆಯುತ್ತದೆ. ಅಲ್ಲದೆ ನಾಲೆಯ ಅಗಲೀಕರಣ ಹಾಗೂ ಸಿಮೆಂಟೀಕರಣ ಮಾಡುವ ಅವಶ್ಯಕತೆ ಇದೆ ಎಂದರು.

       ರಾಷ್ಟ್ರೀಯ ಹೆದ್ದಾರಿ ರಸ್ತೆಯ ಅಭಿವೃದ್ಧಿ ಮಾಡಲು ರೈತರ ಜಮೀನುಗಳನ್ನು ಪಡೆದಿದ್ದು, ಅದಕ್ಕೆ ಸೂಕ್ತ ಪರಿಹಾರ ದೊರಕಿಸಿಲ್ಲ. ಕಳೆದ ಎರಡು ವರ್ಷಗಳಿಂದ ಕೊಟ್ಟ ನೋಟೀಸನ್ನು ಜಲನಿಗಮ ಭೂಸ್ವಾಧಿನಾಧಿಕಾರಿಗಳು ಇತ್ಯರ್ಥ ಮಾಡುವಲ್ಲಿ ವಿಫಲರಾಗಿದ್ದಾರೆ. ಅವರು ರೈತರನ್ನು ಕರೆದು ಸಮಸ್ಯೆಗಳ ಬಗ್ಗೆ ಮಾತನಾಡುವ ಸೌಜನ್ಯವನ್ನೂ ತೋರಲಿಲ್ಲ. ಇದೀಗ ರಾಜ್ಯ ಸರ್ಕಾರದ ನೀತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಹಿಡಿಗಂಟು ನೀಡಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸಕ್ಕೆ ಕೈಹಾಕಿದ್ದಾರೆ. ಈ ನೀತಿಗಳ ವಿರುದ್ಧ ಸೇರಿದಂತೆ ಕೆಲ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.

        ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಕೆಂಕೆರೆ ಸತೀಶ್, ಜಿಲ್ಲಾ ಕಾರ್ಯಾಧ್ಯಕ್ಷರಾದ ಧನಂಜಯ ಆರಾಧ್ಯ, ಕೊರಟಗೆರೆ ತಾಲ್ಲೂಕು ಅಧ್ಯಕ್ಷರಾದ ಕೋಡಿಹಳ್ಳಿ ಸಿದ್ದರಾಜು, ತುರುವೇಕೆರೆ ತಾಲ್ಲೂಕು ಅಧ್ಯಕ್ಷ ಹಳೆಸಂಪಿಗೆ ಕೀರ್ತಿ, ಪ್ರಸನ್ನ, ಲಕ್ಕಣ್ಣ, ಬೆಟ್ಟೇಗೌಡ, ವೆಂಕಟೇಶ್ ಮತ್ತಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap