ಜು.03 ಬುಡಕಟ್ಟು ಸಮುದಾಯದೊಂದಿಗೆ ರಾಷ್ಟ್ರಪತಿ ಸಂವಾದ…!

ಮೈಸೂರು:

    ಮೈಸೂರು ಪ್ರದೇಶದಲ್ಲಿರುವ ಬುಡಕಟ್ಟು ಸಮುದಾಯಗಳೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಜು.03 ರಂದು ಸಂವಾದ ನಡೆಸಲಿದ್ದಾರೆ.
  
    ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು,  ತಮ್ಮ ಹಕ್ಕು ಹಾಗೂ ಸವಲತ್ತುಗಳಿಂದ ದೀರ್ಘ ಕಾಲದಿಂದಲೂ ವಂಚಿತರಾಗಿರುವ ಸಮುದಾಯದ ಮಂದಿಗೆ ರಾಷ್ಟ್ರಪತಿಗಳೊಂದಿಗಿನ ಸಂವಾದದಲ್ಲಿ ಭಾಗಿಯಾಗುತ್ತಿರುವುದು ಉತ್ಸಾಹ ಮೂಡಿಸಿದೆ.

    ನಿರ್ದಿಷ್ಟವಾಗಿ ದುರ್ಬಲವಾದ ಬುಡಕಟ್ಟು ಗುಂಪಿನ (ಪಿವಿಟಿಜಿ) ಸದಸ್ಯರನ್ನು ಮುರ್ಮು ಭೇಟಿ ಮಾಡಲಿದ್ದು,  ಜೇನು ಕುರುಬ ಹಾಗೂ ಕೊರಗ ಸಮುದಾಯಗಳಿರುವ  ಈ ಸಮುದಾಯಕ್ಕೆ ಪಿವಿಟಿಜಿ ಮೂಲಕ ತಮ್ಮ ಸಬಲೀಕರಣದ ಕನಸು ನನಸಾಗುವ ನಿರೀಕ್ಷೆ ಇದೆ.

    ಮೈಸೂರಿನಲ್ಲಿರುವ ಕರ್ನಾಟಕ ಬುಡಕಟ್ಟು ಸಂಶೋಧನೆ ಇನ್ಸ್ಟಿಟ್ಯೂಟ್ ರಾಷ್ಟ್ರಪತಿಗಳೊಂದಿಗಿನ ಸಂವಾದ ಕಾರ್ಯಕ್ರಮಕ್ಕಾಗಿ ಕೊರಗ ಸಮುದಾಯದ 20 ಮಂದಿ ಹಾಗೂ ಜೇನು ಕುರುಬ ಸಮುದಾಯದ 20 ಮಂದಿಯನ್ನು ಆಯ್ಕೆ ಮಾಡಿದೆ. 

 

   ಬುಡಕಟ್ಟು ನಿರ್ದೇಶನಾಲಯ ಜೇನು ಕುರುಬ ಸಮುದಾಯದಲ್ಲಿ 36,000 ಜನಸಂಖ್ಯೆ ಹಾಗೂ ಕೊರಗ ಸಮುದಾಯದಲ್ಲಿ 14,500 ಮಂದಿ ಮೈಸೂರು, ಕೊಡಗು, ಚಾಮರಾಜನಗರ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇರುವುದನ್ನು ಗುರುತಿಸಿದ್ದು,  ಇದನ್ನು ಪ್ರಾಚೀನ ಬುಡಕಟ್ಟುಗಳೆಂದು ಹೇಳಿದೆ.

   ಈ ಸಮುದಾಯದ ಹಲವು ಮಹಿಳೆಯರು ಹಿಂದಿ, ಇಂಗ್ಲೀಷ್ ಮಾತನಾಡಬಲ್ಲವರಾಗಿದ್ದು, ರಾಜಭವನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಯ್ಕೆಯಾಗಿದ್ದಾರೆ. ಈ ಸಮುದಾಯದ ಸದಸ್ಯರು ತಮ್ಮ ಸಮಸ್ಯೆಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನ ಸೆಳೆಯಲು ಅವರು ರಾಷ್ಟ್ರಪತಿಗಳಿಗೆ ಜ್ಞಾಪಕ ಪತ್ರವನ್ನು ಸಲ್ಲಿಸುವ ಸಾಧ್ಯತೆ ಇದೆ.

    ಜೇನು ಕುರುಬ ಚಂದ್ರು ಮಾತನಾಡಿ, ಅಧ್ಯಕ್ಷರನ್ನು ಭೇಟಿಯಾಗಲು ಆಹ್ವಾನ ಬಂದಾಗ ಪುಳಕಿತನಾದೆ. ಕೊಡಗಿನಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ಶೇ.20ರಷ್ಟು ಆದಿವಾಸಿಗಳಿಗೆ ಮಾತ್ರ ಭೂಮಿ ನೀಡಲಾಗಿದೆ. ಆದರೆ ಅವರಿಗೆ ಸಮುದಾಯದ ಹಕ್ಕುಗಳು ಲಭ್ಯವಾಗಿಲ್ಲ. ಹೆಚ್.ಡಿ.ಕೋಟೆ, ಪಿರಿಯಾಪಟ್ಟಣ, ವಿರಾಜಪೇಟೆ, ಸೋಮವಾರಪೇಟೆ ಹಾಗೂ ಚಾಮರಾಜನಗರ ಜಿಲ್ಲೆಯ ಕೆಲವು ಭಾಗಗಳಲ್ಲಿ ಗಿರಿಜನರಿಗೆ ಸರಕಾರದ ಕಲ್ಯಾಣ ಯೋಜನೆಗಳು ಇನ್ನೂ ತಲುಪದೇ ಸಂಕಷ್ಟದಲ್ಲಿದ್ದಾರೆ ಎಂದು ವಿವರಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap