ಬಳ್ಳಾರಿ
ಬಳ್ಳಾರಿ ಜಿಲ್ಲೆಯಲ್ಲಿ ಬರ ಇದೆ ಮತ್ತು ಕೆಲಸ ನೀಡ್ತಿಲ್ಲ ಅಂತೇಳಿ ಜನರು ನೊಂದುಕೊಂಡು ಹೊಟ್ಟೆಪಾಡಿಗಾಗಿ ಗುಳೆ ಹೋದ್ರೆ ಸಂಬಂಧಿಸಿದ ಪಿಡಿಒಗಳ ಮೇಲೆ ನರೇಗಾದ ಸೆಕ್ಷನ್ 25ರ ಅಡಿ ಕ್ರಮಕೈಗೊಳ್ಳಲಾಗುವುದು ಎಂದು ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು ಎಚ್ಚರಿಕೆ ನೀಡಿದರು.
ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಜಿಪಂ ಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.
ಇಡೀ ರಾಜ್ಯದಲ್ಲಿ ನರೇಗಾದ ಮಾನವ ದಿನಗಳ ಸೃಜನೆಯಲ್ಲಿ ಮತ್ತು ನಿಗದಿಪಡಿಸಿದ ಸಮಯದೊಳಗೆ ಕೂಲಿಕಾರರಿಗೆ ಕೂಲಿಯ ಹಣ ಪಾವತಿಸುವ ವಿಷಯದಲ್ಲಿ ಇಡೀ ರಾಜ್ಯದಲ್ಲಿಯೇ ನಮ್ಮ ಜಿಲ್ಲೆ 2 ಸ್ಥಾನದಲ್ಲಿದೆ ಆದ್ರೂ ಮಾಧ್ಯಮಗಳಲ್ಲಿ ಜನ ಗುಳೆ ಹೋಗುತ್ತಿದ್ದಾರೆ ಎಂದು ಬಿತ್ತರವಾಗುತ್ತಿದೆ. ತಕ್ಷಣ ಅಂತ ಸುದ್ದಿಗಳು ಬಂದೇಡೆ ತೆರಳಿ ವಾಸ್ತವ ಸತ್ಯಾಸತ್ಯತೆ ಅರಿಯುವ ಕೆಲಸ ಮಾಡಬೇಕು ಮತ್ತು ಗುಳೆ ತಡೆಗಟ್ಟುವ ನಿಟ್ಟಿನಲ್ಲಿ ಕೆಲಸ ಕೇಳಿ ಬರುವವರಿಗೆಲ್ಲ ಉದ್ಯೋಗಖಾತರಿ ಅಡಿ ಕೆಲಸ ನೀಡಬೇಕು. ಈ ವಿಷಯದಲ್ಲಿ ಎಲ್ಲರು ಮುತುವರ್ಜಿ ವಹಿಸಬೇಕು. ನಿರ್ಲಕ್ಷ್ಯ ವಹಿಸಿದರೇ ಕ್ರಮ ನಿಶ್ಷಿತ ಎಂದರು.
ನರೇಗಾ ಕೆಲಸದಲ್ಲಿ ಪ್ರಗತಿ ಸಾಧಿಸದ 30 ಪಿಡಿಒಗಳ ಮೇಲೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದ್ದು, ಅವರ ಸುಧಾರಣಾ ವರದಿಯನ್ನು ವಾರದೊಳಗೆ ಪಡೆದುಕೊಳ್ಳಿ, ನಿರೀಕ್ಷಿತ ಮಟ್ಟದಲ್ಲಿ ಸುಧಾರಿಸದವರಿಗೆ ಇನ್‍ಕ್ರಿಮಿಂಟ್ ಕಡಿತ ಜತೆಗೆ ಅಮಾನತಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಅವರು ಹೇಳಿದರು.
44.72ಲಕ್ಷ ಮಾನವ ದಿನಗಳು ಸೃಜನೆಯ ವಾರ್ಷಿಕ ಗುರಿ ನಮಗಿದ್ದು, ಅದರಲ್ಲಿ 31.93 ಲಕ್ಷ ಸೃಜನೆಯನ್ನು ಈಗಾಗಲೇ ಅಂದರೇ ಶೇ.70ರಷ್ಟು ಸಾಧಿಸಲಾಗಿದೆ ಎಂದರು.
10 ಮೇವು ಬ್ಯಾಂಕ್‍ಗಳು ಮತ್ತು 05 ಗೋಶಾಲೆಗಳ ಸ್ಥಾಪನೆ: 10 ಮೇವು ಬ್ಯಾಂಕ್‍ಗಳು ಮತ್ತು 05 ಗೋಶಾಲೆಗಳ ಸ್ಥಾಪನೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನೂ ಹೆಚ್ಚು ಕಡೆ ಮೇವು ಬ್ಯಾಂಕ್ ಮತ್ತು ಗೋ ಶಾಲೆಗಳ ಸ್ಥಾಪನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಬರನಿರ್ವಹಣೆ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು ಹೇಳಿದರು.
ಜಿಲ್ಲೆಯ ರೂಪನಗುಡಿ,ಹಲಕುಂದಿ,ವಿಠ್ಠಲಾಪುರ, ಮೆಟ್ರಿಕಿ,ಕೊಗಳಿ, ಹಂಪಾಪಟ್ಟಣ,ಗುಡೇಕೋಟೆ ಸೇರಿದಂತೆ 10 ಕಡೆ ಮೇವು ಬ್ಯಾಂಕ್‍ಗಳು, ವಿಠ್ಠಲಾಪುರ, ಕೊಟ್ಟೂರು, ಹೊಸುರ,ಉಜ್ಜಯಿನಿ, ಗುಂಡುಮುಣಗು ಸೇರಿ 05 ಕಡೆ ಗೋ ಶಾಲೆಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಕೋರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿವರಿಸಿದ ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು, ಈಗಾಗಲೇ ಜಿಲ್ಲೆಯಲ್ಲಿ 26 ವಾರಗಳಿಗಾಗುವಷ್ಟು ಮೇವು ನಮ್ಮಲ್ಲಿ ಲಭ್ಯವಿದೆ. ಆದರೂ ಮುಂದೆ ಮೇವಿನ ಸಮಸ್ಯೆಯಾಗಬಾರದು ಎಂಬ ದೃಷ್ಟಿಯಿಂದ ಸರಕಾರಿ ಜಾಗ ಮತ್ತು ಗೋಮಾಳದಲ್ಲಿ ಮೇವು ಬೆಳೆಯುವ ನಿಟ್ಟಿನಲ್ಲಿ ಪೊಟ್ಟಣಗಳು ವಿತರಿಸುವಂತೆ ಪಶುಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಜನವಸತಿ ಇರುವ ಪ್ರದೇಶಗಳಲ್ಲಿ ಕಡ್ಡಾಯವಾಗಿ ಕನಿಷ್ಠ 2 ಜಾನುವಾರುಗಳ ತೊಟ್ಟಿ ನಿರ್ಮಾಣ ಮಾಡಲು ಕ್ರಮವಹಿಸಬೇಕು ಮತ್ತು ಮೇವು ನಮ್ಮ ಜಿಲ್ಲೆಯಿಂದ ಹೊರಗಡೆ ಹೋಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ಚೆಕ್‍ಪೋಸ್ಟ್‍ಗಳು ಸ್ಥಾಪಿಸಿ ಕ್ರಮಜರುಗಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಬರ ನಿರ್ವಹಣೆ ಸಹಾಯವಾಣಿ ಸ್ಥಾಪಿಸಿ: ಜಿಲ್ಲೆಯ ಜಿಲ್ಲಾಮಟ್ಟದಲ್ಲಿ ಮತ್ತು ತಾಲೂಕುಮಟ್ಟದಲ್ಲಿ ಕೃಷಿ,ಕುಡಿಯುವ ನೀರು, ನರೇಗಾ ಸೇರಿದಂತೆ ಬರ ಸಂಬಂಧಿತ ವಿಷಯಗಳಿಗಾಗಿ ಜನರು ಸಂಪರ್ಕಿಸಲು ಸಹಾಯವಾಣಿಗಳನ್ನು ಸ್ಥಾಪಿಸಿ ಮತ್ತು ಈ ಕುರಿತು ಹೆಚ್ಚಿನ ಪ್ರಚಾರ ಕೂಡ ನೀಡಿ ಎಂದು ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು ಸೂಚನೆ ನೀಡಿದರು.ನೀರಿನ ಸಮಸ್ಯೆ ಇದ್ದರೇ ತಕ್ಷಣ ಪರಿಹರಿಸಬೇಕು ಎಂದು ಅವರು ಸೂಚಿಸಿದರು.
ಕುಡಿಯುವ ನೀರಿನ ನಿರ್ವಹಣೆ ಯೋಜನೆ ಹಾಕಿಕೊಳ್ಳಿ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಹಣದ ಕೊರತೆ ಇಲ್ಲ ಎಂಬುದನ್ನು ಸಭೆಯ ಗಮನಕ್ಕೆ ತಂದ ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು, ಕುಡಿಯುವ ನೀರಿನ ಪರಿಸ್ಥಿತಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ವಾರಕ್ಕೊಂದರಂತೆ ಯೋಜನೆ ಎ,ಬಿ ಮತ್ತು ಸಿ ಅಂತ ಮಾಡಿ ತಾವಿಟ್ಟುಕೊಂಡು ಅದರಂತೆ ಕಾರ್ಯನಿರ್ವಹಿಸಬೇಕು ಎಂದರು.
ಬಳ್ಳಾರಿ ತಾಲೂಕಿನಲ್ಲಿ ಹರಗಿನ ಡೋಣಿ 01 ಮತ್ತು ಸಂಡೂರು ತಾಲೂಕಿನಲ್ಲಿ 05 ಗ್ರಾಮಗಳಲ್ಲಿ ಟ್ಯಾಂಕರ್‍ಗಳ ಮೂಲಕ ನೀರು ಪೂರೈಸಲಾಗುತ್ತಿದೆ. 52 ಖಾಸಗಿ ಬೋರವೆಲ್‍ಗಳನ್ನು ಬಾಡಿಗೆ ಪಡೆದುಕೊಂಡು ನೀರು ಒದಗಿಸಲಾಗುತ್ತಿದೆ ಎಂದು ಸಭೆಗೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಕಾರ್ಯನಿರ್ವಾಹಕ ಎಂಜನಿಯರ್ ದೇವನಾಳ್ ಸಭೆಗೆ ವಿವರಿಸಿದರು.
ಬಾಡಿಗೆ ಪಡೆದುಕೊಳ್ಳುತ್ತಿರುವ ಖಾಸಗಿ ಬೋರವೆಲ್‍ದಾರರಿಗೆ ತಿಂಗಳದ 10ನೆ ತಾರೀಖಿನೊಳಗೆ ಅದರ ಹಣ ಪಾವತಿಸಲು ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.
ರೂರರ್ಬನ್ ಸ್ಕೀಂ: ರೂರರ್ಬನ್ ಸ್ಕೀಂ ಅಡಿ ಕಲ್ಲಹಳ್ಳಿ ಮತ್ತು ಗಣಾಪುರ ಗ್ರಾಪಂಗಳಿಗೆ 4.50 ಕೋಟಿ ರೂ.ಬಿಡುಗಡೆಯಾಗಿದ್ದು, ಈಗಾಗಲೇ ವಿವಿಧ ಇಲಾಖೆಗಳ ಅಧಿಕಾರಿಗಳು ಸಲ್ಲಿಸಿರುವ ಕ್ರಿಯಾಯೋಜನೆಯನ್ನು ಹೇಗೆ ಖರ್ಚು ಮಾಡಬೇಕು ಎಂಬುದನ್ನು ಇದೇ ಶನಿವಾರದೊಳಗೆ ತಿಳಿಸಿ ಎಂದು ಜಿಪಂ ಸಿಇಒ ರಾಜೇಂದ್ರ ಹೇಳಿದರು.
ಜನರ ನಿರೀಕ್ಷೆ ಮತ್ತು ಜನಪ್ರತಿನಿಧಿಗಳ ಅಭಿಪ್ರಾಯವನ್ನು ಸಾರ್ವಜನಿಕ ಸಭೆಯ ಮೂಲಕ ಅರಿಯುವ ಕೆಲಸವಾಗಬೇಕು ಮತ್ತು ಈ ಮೂಲಕ ಅವರ ಆಶಯಗಳಂತೆ ಕಾರ್ಯನಿರ್ವಹಿಸಬೇಕು ಹಾಗೂ ಕಡ್ಡಾಯವಾಗಿ ಸಭೆಗೆ ಜಿಲ್ಲಾಮಟ್ಟದ ಅಧಿಕಾರಿಗಳು ಪಾಲ್ಗೊಳ್ಳಬೇಕು ಎಂದರು.
ಕೃಷಿ,ತೋಟಗಾರಿಕೆ,ಶಿಕ್ಷಣ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಯಿತು.ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷೆ ಪಿ.ದೀನಾ ಮಂಜುನಾಥ ಸೇರಿದಂತೆ ಜಿಪಂ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ