ಹಾವೇರಿ
ದುರ್ಬಲ ಜನಾಂಗ ಹೆಚ್ಚಾಗಿರುವ ಮತಗಟ್ಟೆಗಳು, ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಯಾವುದೇ ಮತದಾನದ ಅಕ್ರಮಗಳು ಜರುಗದಂತೆ ಕಟ್ಟೆಚ್ಚೆರವಹಿಸಬೇಕು. ಅರೆ ಸೇನಾಪಡೆ ಸೇರಿದಂತೆ ಸೂಕ್ತ ಪೊಲೀಸ್ ವ್ಯವಸ್ಥೆಯನ್ನು ಕೈಗೊಳ್ಳುವಂತೆ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಎಸ್.ಗಣೇಶ ಅವರು ಸೂಚಿಸಿದರು.
ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ ಅವರ ಅಧ್ಯಕ್ಷತೆಯಲ್ಲಿ ರಾಣೇಬೆನ್ನೂರು ಹಾಗೂ ಹಿರೇಕೆರೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಿನ್ನೆಲೆಯಲ್ಲಿ ಮತದಾನದ ದಿನ ಭದ್ರತಾ ವ್ಯವಸ್ಥೆ ಕುರಿತಂತೆ ಪೊಲೀಸ್ ಅಧಿಕಾರಿಗಳು ಹಾಗೂ ಮಾದರಿ ನೀತಿ ಸಂಹಿತೆ ಅನುಷ್ಠಾನಾಧಿಕಾರಿಗಳೊಂದಿಗೆ ಸಭೆ ಜರುಗಿತು.
ದುರ್ಬಲ ಮತದಾರರಿರುವ ಮತಗಟ್ಟೆ ವ್ಯಾಪ್ತಿಯಲ್ಲಿ ಯಾವುದೇ ಒತ್ತಡಕ್ಕೆ ಮತದಾರರು ಒಳಗಾಗದಂತೆ, ಯಾವುದೇ ಬಲ ಪ್ರದರ್ಶನಗಳು ನಡೆಯಬಾರದು. ಅವರಿಗೆ ಎಲ್ಲ ರೀತಿಯ ಆತ್ಮ ವಿಶ್ವಾಸ ತುಂಬುವ ಕೆಲಸವಾಗಬೇಕು. ಈ ಕ್ಷೇತ್ರಗಳಲ್ಲಿ ಪೊಲೀಸ್ ಮತ್ತು ಅರೇ ಸೇನಾಪಡೆಯಿಂದ ಮಾರ್ಚ್ ಫಾಸ್ಟ್ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಸಲಹೆ ನೀಡಿದರು.
ಮತದಾನದ ದಿನ ಯಾವುದೇ ಗಲಭೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಎಲ್ಲಿಯಾದರೂ ಸಣ್ಣಪುಟ್ಟ ಸಂಘರ್ಷ ನಡೆದರೆ ಮತ್ತೆ ಮರುಕಳಿಸದಂತೆ ಎಚ್ಚರವಹಿಸಬೇಕು. ಕ್ಲಸ್ಟರ್ ಮತಗಟ್ಟೆಗಳು, ಸೂಕ್ಷ್ಮ ಮತಗಟ್ಟೆಗಳು, ಅತೀ ಸೂಕ್ಷ್ಮ ಮತಗಟ್ಟೆಗಳು ಹಾಗೂ ದುರ್ಬಲ ಮತಗಟ್ಟೆಗಳಲ್ಲಿ ಸೂಕ್ತ ರೀತಿಯಲ್ಲಿ ಪೊಲೀಸ್ ನೇಮಕ ಹಾಗೂ ಅರೇ ಸೇನಾಪಡೆ ಪೇದೆಗಳ ನೇಮಕ, ಕೇಂದ್ರ ಮತ್ತು ರಾಜ್ಯ ಮೀಸಲು ಪಡೆ ತುಕಡಿಗಳ ನೇಮಕವನ್ನು ವ್ಯವಸ್ಥಿತವಾಗಿ ಕೈಗೊಳ್ಳಬೇಕು. ಸಮನ್ವಯದಿಂದ ಸಂದರ್ಭಗಳನ್ನು ಎದುರಿಸಲು ಸನ್ನದ್ಧರಾಗಿರಬೇಕು ಎಂದು ಹೇಳಿದರು.
ಉಪ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ತೆರೆಯಲಾದ ಚೆಕ್ ಪೋಸ್ಟ್‍ಗಳಲ್ಲಿ ತಪಾಸಣಾ ಕಾರ್ಯವನ್ನು ಬಿಗಿಗೊಳಿಸಬೇಕು. ಯಾವುದೇ ವಾಹನಗಳು ತಪಾಸಣೆಯಿಂದ ಕೈಬಿಡಬಾರದು. ವಿಐಪಿಗಳು ಯಾವುದೇ ಮುಖ್ಯ ನಾಯಕರಿರಲಿ. ಎಲ್ಲ ವಾಹನಗಳು ತಪಾಸಣೆಗೊಳ್ಳಲೇಬೇಕು. ರಾತ್ರಿ ಪಾಳೆಯದಲ್ಲಿ ಹೆಚ್ಚು ಕಟ್ಟೆಚ್ಚರದಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಚುನಾವಣೆ ಹಿಂದಿನ ದಿನಗಳಲ್ಲಿ ಅಬಕಾರಿ ಅಕ್ರಮಗಳು ನಡೆಯದಂತೆ ಕಟ್ಟೆಚ್ಚರ ವಹಿಸಬೇಕು. ಅಬಕಾರಿ ತಪಾಸಣಾ ಕೇಂದ್ರದಲ್ಲಿ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಬೇಕು. ಚುನಾವಣೆ ನಡೆಯುವ ಕ್ಷೇತ್ರಗಳ ಗಡಿಭಾಗದ ಹೊರ ಜಿಲ್ಲೆಗಳ ಐದು ಕಿ.ಮೀ.ವರೆಗೆ ಅಬಕಾರಿ ಅಕ್ರಮಗಳ ಕುರಿತಂತೆ ನಿಗಾ ವಹಿಸಬೇಕು ಎಂದು ಸೂಚಿಸಿದರು.
ಫ್ಲೈಯಿಂಗ್ ಸ್ಕ್ವಾಡ್, ವಿಡಿಯೋ ವೀಕ್ಷಕ ತಂಡ, ಎಸ್.ಎಸ್.ಟಿ. ತಂಡಗಳು ಸೇರಿದಂತೆ ಚುನಾವಣಾ ಅಕ್ರಮಗಳ ತಡೆಯಲು ನಿಯೋಜಿತವಾದ ತಂಡಗಳು ಸಕ್ರೀಯವಾಗಿ ಕಾರ್ಯನಿರ್ವಹಿಸಬೇಕು. ಹೆಚ್ಚುವರಿ ಸಿಬ್ಬಂದಿ ಹೆಚ್ಚುವರಿ ಪಾಳೆಯದಲ್ಲಿ ಕಾರ್ಯನಿರ್ವಹಿಸುವಂತೆ ಕ್ರಮವಹಿಸಬೇಕು. ಯಾವುದೇ ಸ್ಥಳದಲ್ಲಿ ಅಕ್ರಮಗಳು ನಡೆದ ಮಾಹಿತಿಗಳು ಬಂದ ತಕ್ಷಣ ಹಾಜರಾಗಬೇಕು. ಈ ಕುರಿತಂತೆ ಮಾಹಿತಿಗಳನ್ನು ರವಾನಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮತಗಟ್ಟೆವಾರು ಪೊಲೀಸ್ ಭದ್ರತೆ ವ್ಯವಸ್ಥೆ, ಸೆಕ್ಟರ್ ಅಧಿಕಾರಿಗಳ ನೇಮಕ, ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕೇಂದ್ರಗಳಿಗೆ ಸೂಕ್ತ ಭದ್ರತೆಯೊಂದಿಗೆ ಇ.ವಿ.ಎಂ. ಸಾಗಾಣಿಕೆ ಕುರಿತಂತೆ ಸುಧೀರ್ಘವಾಗಿ ಸಭೆಯಲ್ಲಿ ಚರ್ಚಿಸಿಲಾಯಿತು.
ಜಿಲ್ಲೆಯ ಚುನಾವಣೆ ನಡೆಯುವ ಕ್ಷೇತ್ರಗಳ ವಿವಿಧ ಗ್ರಾಮಗಳಲ್ಲಿ ವಿವಿಧ ಸಮಸ್ಯೆಗಳಿಂದ ಉಂಟಾಗುವ ಸಂಘರ್ಷಗಳನ್ನು ಪೂರ್ವವಾಗಿ ಬಗೆಹರಿಸಿ, ಸೌಹಾರ್ದಯುತವಾಗಿ ಮತದಾನ ನಡೆಯುವಂತೆ ಕ್ರಮವಹಿಸುವಂತೆ ಸಲಹೆ ನೀಡಿದರು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು ಭದ್ರತಾ ವ್ಯವಸ್ಥೆಗಳ ಕುರಿತಂತೆ ಸಭೆಗೆ ಮಾಹಿತಿ ನೀಡಿದರು.ಕೇಂದ್ರ ಚುನಾವಣಾ ವೆಚ್ಚ ವೀಕ್ಷಕರಾದ ಹಿರಿಯ ಇಡಿಎಎಸ್ ಅಧಿಕಾರಿ ದೀಪಕಕುಮಾರ್, ಚುನಾವಣೆಗೆ ನಿಯೋಜಿತ ಐ.ಎ.ಎಸ್. ಪರೀಕ್ಷಾರ್ಥ ಅಧಿಕಾರಿಗಳಾದ ನೇಹಾ ಜೈನ್ ಹಾಗೂ ಈಶ್ವರಕುಮಾರ ಕಾಂದೂ, ಅಪರ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಎ.ದೇವರಾಜ ಗುಜರಾತ ರಾಜ್ಯದ ಸ್ಟೇಟ್ ಆಕ್ಸನ್ ಪೋರ್ಸ್‍ನ ಮುಖ್ಯಸ್ಥರು ಹಾಗೂ ವಿವಿಧ ಪೊಲೀಸ್ ಅಧಿಕಾರಿಗಳು, ತಹಶೀಲ್ದಾರಗಳು ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ