ತುರುವೇಕೆರೆ
ಯಾವುದೇ ಪಕ್ಷ, ಜನಪ್ರತಿನಿಧಿಗಳು 2019ರ ಲೋಕಸಭಾ ಚುನಾವಣೆಯಲ್ಲಿನ ಪ್ರಣಾಳಿಕೆಯಲ್ಲಿ ನೀಡುವ ಭರವಸೆಗಳನ್ನು ಈಡೇರಿಸದಿದ್ದರೆ ಅಂತಹವರ ಮೇಲೆ 420 ಕೇಸ್ ದಾಖಲಿಸುತ್ತೇವೆ ಎಂದು ರಾಷ್ಟ್ರೀಯ ಕಿಸಾನ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೊಂಚೆಶಿವರುದ್ರಪ್ಪ ತಿಳಿಸಿದರು.
ಪಟ್ಟಣದ ಆರ್.ಕೆ. ರೆಸಿಡೆನ್ಸಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು ತಮ್ಮ ಮನೋಸೋ ಇಚ್ಛೆ ತಮ್ಮ ಪ್ರನಾಳಿಕೆಯಲ್ಲಿ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ. ಯಾವುದೆ ಚುನಾವಣೆಯ ಅಭ್ಯರ್ಥಿಗಳು ಮನೆ ಬಾಗಿಲಿಗೆ ಬಂದು ಮತ ಯಾಚನೆ ಮಾಡುವಾಗ ರೈತರು ತಮ್ಮ ಬೇಡಿಕೆಗಳನ್ನು ಚುನಾವಣಾ ಪ್ರನಾಳಿಕೆಯಂತೆ ಈಡೇರಿಸದಿದ್ದರೆ ಕೇಸ್ ದಾಖಲಿಸುತ್ತೇವೆ ಎಂದು ಎಚ್ಚರಿಸಬೇಕು ಎಂದು ರೈತರಿಗೆ ಸಲಹೆ ನೀಡಿದರು.
ಕರ್ನಾಟಕದ 6 ಕೋಟಿ ಜನರಲ್ಲಿ 3.5 ಕೋಟಿ ಜನರು ಕೃಷಿ ನಂಬಿ ಜೀವನ ನಡೆಸುತ್ತಿದ್ದಾರೆ. ಕೃಷಿ ಉತ್ಪಾದನ ವೆಚ್ಚ ಅತಿ ದುಬಾರಿಯಾಗಿದ್ದು ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೆ ಉತ್ಪಾದನ ವೆಚ್ಚವು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ ಇಲ್ಲದೆ ದಳ್ಳಾಳಿಗಳ ಕಪಿಮುಷ್ಟಿಯಲ್ಲಿ ಸಿಲುಕಿ ನಲುಗುತ್ತಿದ್ದಾನೆ. ಉತ್ತಮ ಮಾರುಕಟ್ಟೆ ಇಲ್ಲದೆ ರೈತರು ಶೋಷಣೆಗೆ ಕಾರಣರಾಗಿದ್ದಾರೆ. 70 ವರ್ಷ ಕಳೆದರೂ ಹಲವು ಸರ್ಕಾರಗಳು ಆಡಳಿತ ನಡೆಸಿದರೂ ರೈತರಿಗೆ ಶಾಶ್ವತ ಯೋಜನೆಗಳನ್ನು ನೀಡದೆ ಕೇವಲ ತಾತ್ಕಾಲಿಕ ಪರಿಹಾರ ನೀಡಿವೆ ಎಂದು ಆರೋಪಿಸಿದರು. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕು, ಬೆಳೆವಿಮೆ ಮಾರ್ಗಸೂಚಿ ಬದಲಾವಣೆ ಮಾಡಬೇಕು, ಬೆಳೆ ನಷ್ಟ ಪರಿಹಾರವನ್ನು ಪುನರ್ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕಿ ಹೆಚ್.ಕೆ.ಚಂದ್ರಕಲಾ, ತಾಲ್ಲೂಕು ಘಟಕದ ಅಧ್ಯಕ್ಷ ಹೆಚ್.ವಿ.ಪ್ರಶಾಂತ, ಮಹಿಳಾ ಘಟಕದ ಅಧ್ಯಕ್ಷೆ ಅನ್ನಪೂರ್ಣ, ಉಪಾಧ್ಯಕ್ಷೆ ಶಾರದನಾಯ್ಕ, ಜಿಲ್ಲಾ ಸಮಿತಿ ನೀಲಕಂಠಪ್ಪ, ಜಲಜಾಕ್ಷಿ, ರವಿಕುಮಾರ್, ಸಿದ್ದೇಗೌಡ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
