ಚಿತ್ರದುರ್ಗ,
ಕೋಟೆನಾಡಿನ ದೇವತೆಗಳಾದ ಏಕನಾಥೇಶ್ವರಿ, ಬರಗೇರಮ್ಮ ಶಕ್ತಿದೇವತೆಗಳ ಸಿಡಿ ಮಹೋತ್ಸವ ಭಕ್ತರ ಸಮ್ಮುಖದಲ್ಲಿ ಶನಿವಾರ ವಿಜೃಂಭಣೆಯಿಂದ ನೆರವೇರಿತು
ಕೋಟೆ ಮಾರ್ಗದ ಫೀಲ್ಟರ್ ಹೌಸ್ ರಸ್ತೆಯ ಏಕನಾಥೇಶ್ವರಿ ಪಾದದ ಗುಡಿ ಮುಂಭಾಗದಲ್ಲಿ ಏಕನಾಥೇಶ್ವರಿ ದೇವಿಯ ಸಿಡಿ ಉತ್ಸವ ಸಂಜೆ ನೆರವೇರಿತು. ಈ ದೇವತೆ ದುರ್ಗದ ನವದುರ್ಗಿಯರಲ್ಲಿ ಹಿರಿಯಳಾದ್ದರಿಂದ ಮೊದಲು ಇಲ್ಲಿ ಪ್ರಾರಂಭವಾಗಿ ಅರ್ಧ ಗಂಟೆಯಾದ ಬಳಿಕ ಬರಗೇರಮ್ಮ ದೇವಿಯ ಮೂಲ ದೇಗುಲದ ಮುಂಭಾಗದಲ್ಲಿ ಬರಗೇರಮ್ಮ ದೇವಿಯ ಸಿಡಿ ಉತ್ಸವ ನಡೆಯಿತು.
ಹರಕೆ ಹೊತ್ತವರು ಸಿಡಿ ಆಡುವುದನ್ನು ಭಕ್ತರು ಬಹು ನಿರೀಕ್ಷೆಯಿಂದ ಎದುರು ನೋಡುತ್ತಿದ್ದರು. ಸಿಡಿ ಮಹೋತ್ಸವ ಆರಂಭವಾಗುತ್ತಿದ್ದಂತೆ ಉತ್ಸವದಲ್ಲಿ ನೆರೆದಿದ್ದ ಸಾವಿರಾರು ಸಂಖ್ಯೆಯ ಭಕ್ತರು ಉದೋ ಉದೋ ಎಂದು ಹರ್ಷೋದ್ಗಾರ ಮಾಡಿದರು.
ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಿಂದ ಭಕ್ತರು ಇಲ್ಲಿಗೆ ಬಂದು ಸಿಡಿಯಾಡಿ ತಮ್ಮ ಹರಕೆಯನ್ನು ಸಮರ್ಪಿಸುತ್ತಾರೆ. ಸಿಡಿಕಂಬಕ್ಕೆ ತಮ್ಮನ್ನು ಕಟ್ಟಿಕೊಂಡು ಮೂರು ಸಲ ತಿರುಗುವ ದೃಶ್ಯವನ್ನು ಸಾವಿರಾರು ಮಂದಿ ವೀಕ್ಷಿಸಿ ಕಣ್ತುಂಬಿಕೊಂಡರು.
ಸಿಡಿ ಮಹೋತ್ಸವಕ್ಕಾಗಿ ಭೂಮಿಗೆ ನೇರವಾಗಿ ಕಂಬ ನೆಡಲಾಗುತ್ತದೆ. ಅದಕ್ಕೆ ಮಲ್ಲಕಂಬ ಎಂಬ ಹೆಸರಿದೆ. ಕಂಬದ ಮೇಲೆ ತಿರುಗಣಿ ಇಡಲಾಗುತ್ತದೆ. ಅದರ ಮೇಲೆ ಸಮಾನಾಂತರವಾಗಿ ಪ್ರತಿಷ್ಠಾಪಿಸುವ ಸಿಡಿಕಂಬ ಸುಲಭವಾಗಿ ತಿರುಗುವಂತೆ ವ್ಯವಸ್ಥೆ ಮಾಡಲಾಗುತ್ತದೆ.
ಸಿಡಿ ಹರಕೆ ಹೊತ್ತವರು ಹಿಂದಿನ ದಿನ ರಾತ್ರಿಯ ನಂತರ ಯಾವುದೇ ಊಟ, ಉಪಾಹಾರ ಸೇವಿಸದೆ ಉಪವಾಸ ವ್ರತ ನಡೆಸುತ್ತಾರೆ. ಸಿಡಿ ಉತರ್ಸವ ನಡೆಯುವ ದಿನ ಸ್ನಾನ ಮುಗಿಸಿ ಶುಚಿಭೂರ್ತರಾಗಿ ದೇವಸ್ಥಾನಕ್ಕೆ ಆಗಮಿಸುತ್ತಾರೆ. ಅವರನ್ನು ಸಿಡಿ ಕಂಬದ ಒಂದು ತುದಿಗೆ ಬಟ್ಟೆಯಿಂದ ಕಟ್ಟಲಾಗುತ್ತದೆ. ನಂತರ ಮೂರು ಬಾರಿ ತಿರುಗಿಸುವುದು ಈ ಉತ್ಸವದ ಸಂಪ್ರದಾಯ.
ಸಿಡಿ ಕಂಬಕ್ಕೆ ಕಟ್ಟಿದ್ದ ಭಕ್ತನ ಕೈಯಿಂದ ಆಶೀರ್ವಾದ ಪಡೆಯುತ್ತಾರೆ. ಹೀಗೆ ಆಶೀರ್ವಾದ ಪಡೆಯಲು ನಾ ಮುಂದು, ತಾ ಮುಂದು ಎಂದು ಜನ ಮುಗಿ ಬೀಳುತ್ತಾರೆ. ಸಿಡಿ ಕಂಬದಲ್ಲಿನ ಮನುಷ್ಯ ತನ್ನ ಕೈಗಳಿಂದ ನೆರೆದಿದ್ದ ಭಕ್ತ ಜನರ ತಲೆಗಳನ್ನು ಸ್ಪರ್ಶಿಸಿ ಆಶೀರ್ವದಿಸುತ್ತಾರೆ. ಹೀಗೆ ಆಶೀರ್ವಾದ ಪಡೆದ ಜನರು ತಮ್ಮನ್ನು ಪ್ರತ್ಯಕ್ಷ ದೈವವೇ ಆಶೀರ್ವದಿಸಿದಂತೆ ಪುಳಕಿತರಾಗುತ್ತಾರೆ.
ಹೀಗೆ ಹರಕೆ ಹೊತ್ತ ಭಕ್ತನನ್ನು ಸಿಡಿ ಕಂಬಕ್ಕೆ ಕಟ್ಟಿ ತಿರುಗಿಸುವಾಗ ಉತ್ಸವದಲ್ಲಿ ನೆರೆದಿದ್ದ ಭಕ್ತ ಸಮೂಹ ರೋಮಾಂನಚಗೊಳ್ಳುತ್ತದೆ. ದೇವರ ಹೆಸರಿನಲ್ಲಿ ಘೋಷಣೆಗಳನ್ನು ಕೂಗಲಾಗುತ್ತದೆ. ಇದಕ್ಕೂ ಮೊದಲು ಸಿಡಿ ಉತ್ಸವದ ಅಂಗವಾಗಿ ಏಕನಾಥೇಶ್ವರಿ ಹಾಗೂ ಬರಗೇರಮ್ಮ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ನಗರ ಸೇರಿದಂತೆ ವಿವಿಧೆಡೆಗಳಿಂದ ಆಗಮಿಸುವ ಭಕ್ತರು ಹೂವು, ಹಣ್ಣು, ಕಾಯಿ ನೀಡಿ ಭಕ್ತಿ ಸಮರ್ಪಿಸಿದರು.
ಇದಾದ ಬಳಿಕ ಸಿಡಿ ಉತ್ಸವದಲ್ಲಿ ಪಾಲ್ಗೊಂಡರು. ಸಿಡಿ ಉತ್ಸವ ಮುಗಿದ ನಂತರ ಉತ್ಸವಕ್ಕೆ ಆಗಮಿಸಿದ್ದ ಜನರು ತೀರ್ಥ, ಪ್ರಸಾದ ಸ್ವೀಕರಿಸಿ ತಮ್ಮ ತಮ್ಮ ಮನೆಗಳಿಗೆ ತೆರಳಿದರು. ಸಿಡಿ ಉತ್ಸವದ ಅಂಗವಾಗಿ ಭಕ್ತರ ಮನೆಗಳಲ್ಲಿ ವಿಶೇಷ ಅಡುಗೆ ತಯಾರಿಸಲಾಗುತ್ತದೆ. ದೇವರಿಗೆ ಹೋಳಿಗೆ, ಪಾಯಸ ಮತ್ತಿತರ ಸಹಿ ಭಕ್ಷ್ಯಗಳನ್ನು ಮಾಡಿ ದೇವಿಗೆ ನೈವೇದ್ಯ ನೀಡಲಾಗುತ್ತದೆ. ದೇವರಿಗೆ ಎಡೆ ಅರ್ಪಿಸಿದ ನಂತರ ಕುಟುಂಬದ ಸದಸ್ಯರು, ಬಂಧು-ಬಳಗದವರು ಸೇರಿ ಊಟ ಮಾಡಿ ಸಂಭ್ರಮಿಸುತ್ತಾರೆ.