ರಾಣಿಬೆನ್ನೂರು
ಕೆಪಿಜೆಪಿ ಪಕ್ಷದ ಎಲ್ಲ ಹುದ್ದೆಗಳಿಗೆ ರಾಜಿನಾಮೆ ನೀಡುತ್ತಿದ್ದೇನೆ. ಮುಂದಿನ ರಾಜಕೀಯ ಭವಿಷ್ಯವನ್ನು ನಿರ್ಧರಿಸಲು ನನ್ನ ಹಿರಿಯರ, ಹಿತೈಷಿಗಳ, ಅಭಿಮಾನಿಗಳೊಡನೆ ಚರ್ಚಿಸಿ ನಿರ್ಧಾರವನ್ನು ತಿಳಿಸುತ್ತೇನೆ ಎಂದು ನಗರಸಭೆ ಸದಸ್ಯ ಪ್ರಕಾಶ ಬುರಡಿಕಟ್ಟಿ ಅಭಿಪ್ರಾಯ ವ್ಯಕ್ತ ಪಡಿಸಿದರು.
ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 2013 ರಿಂದ ಹಗಲಿರುಳು ಶಾಸಕ ಆರ್.ಶಂಕರ್ ಅವರ ಗೆಲುವಿಗೆ ಶ್ರಮಿಸುತ್ತಾ ಬಂದಿದ್ದು ಯಾವುದೇ ಅಧಿಕಾರದ ಲಾಲಸೆಗೆ ಒಳಪಟ್ಟಿರುವುದಿಲ್ಲ. ಆದರೆ ಶಾಸಕ ಆರ್. ಶಂಕರ್ ಅವರು 2018 ರ ವಿಧಾನಸಭೆ ಚುನಾವಣೆ ವರೆಗೂ ತಮ್ಮ ಕೆಲಸಗಳನ್ನು ಪೂರೈಸಿಕೊಂಡು ಗೆಲುವಿನ ಬಳಿಕ ಕೆಲವು ಹಿಂಬಾಲಕರ ಮಾತನ್ನು ಕೇಳಿಕೊಂಡು ನನ್ನನ್ನ ಸಂಪೂರ್ಣವಾಗಿ ಕಡೆಗಣಿಸಿದ್ದು ಬಹಳ ನೋವು ತಂದಿದೆ ಎಂದರು.
ಈ ಹಿಂದೆ ನೀನೊಬ್ಬ ಹಿಂದೂ ಮುಖಂಡ, ವಿಶ್ವ ಹಿಂದೂ ಪರಿಷತ್‍ನ ಸದಸ್ಯ ನಿನ್ನನ್ನು ಆರ್. ಶಂಕರ್ ಅಭಿಮಾನಿ ಬಳಗದ ಅಧ್ಯಕ್ಷನಾಗಿರಿಸಿದರೆ ಮುಸ್ಲಿಂರು ವಿರೋಧಿಸುತ್ತಾರೆ. ನನಗೆ ಮತಗಳು ಸಿಗುವುದಿಲ್ಲ ಎಂಬ ಮಾತನ್ನು ಹೇಳುತ್ತಿದ್ದರು. ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ವಿಷಯದಲ್ಲಿ ಕೋಮುವಾದಿ ಎಂಬ ಹಣೆಪಟ್ಟಿ ಕಟ್ಟಿ ಇಲ್ಲ ಸಲ್ಲದ ಅನೇಕ ಆರೋಪಗಳನ್ನು ಮಾಡಿದ್ದರು.
ಆರ್. ಶಂಕರ್ ಧರ್ಮಪತ್ನಿಯವರು ಸಹ 2018 ರ ವಿಧಾನಸಭಾ ಚುನಾವಣೆ ಫಲಿತಾಂಶ ಬಂದ ನಂತರ ಪ್ರಕಾಶ ನಮಗಾಗಿ ದುಡಿದಲ್ಲ ಬದಲಾಗಿ ಬಿಜೆಪಿ ಪಕ್ಷಕ್ಕೆ ಸಂಪೂರ್ಣವಾಗಿ ತೊಡಗಿಕೊಂಡು ಬೆಂಬಲಿಸಿದ್ದಾರೆ ಅದರಿಂದಲೇ ನಮಗೆ ಕಡಿಮೆ ಅಂತರದ ಗೆಲುವಾಗಿದೆ ಎಂಬ ಮಾತನ್ನಾಡಿದರೂ ಬೇಸರಿಸಿಕೊಳ್ಳದೇ ಇಲ್ಲಿಯವರೆಗೂ ಆರ್. ಶಂಕರ್‍ರವರನ್ನು ಸಂಪೂರ್ಣವಾಗಿ ಬೆಂಬಲಿಸಿದ್ದೇನೆ ಎಂದರು.
ಚುನಾವಣೆಯಲ್ಲಿ ಗೆದ್ದ ಬಳಿಕ ನಿನ್ನನ್ನು ನಗರಸಭೆ ಅಧ್ಯಕ್ಷರನ್ನಾಗಿಸುತ್ತೇನೆ. ತಾಲೂಕಿನ ಆಡಳಿತವನ್ನು ನಿನ್ನ ಅನತಿಯಲ್ಲಿಯೇ ನಡೆಯಲಿ ಎಂದು ಹೇಳಿ ರಾಣೇಬೆನ್ನೂರು ನಗರವನ್ನು ಬೆಂಗಳೂರ ಮಾದರಿ ಮಾಡೋಣ ಎಂಬ ಪೊಳ್ಳು ಭರವಸೆ ನೀಡಿದ್ದು ಜಗಜ್ಜಾಹೀರವಾಗಿದೆ. ಕೇವಲ ನಿಮ್ಮ ಮನೆಯನ್ನು ಬೆಂಗಳೂರ ಮಾದರಿಯಲ್ಲಿ ಕಟ್ಟಿದ್ದೀರಿ ಹೊರತು ನಗರದ ಅಭಿವೃದ್ಧಿಗೆ ನಿಮ್ಮ ಕೊಡುಗೆ ಶೂನ್ಯ. ಕೆಪಿಜೆಪಿ ಪಕ್ಷದಲ್ಲಿ ಹಾರ ತುರಾಯಿ ಹಾಕಿದವರೆಗೆ ಮನ್ನಣೆ ನೀಡಿದ್ದೀರಿ ಹೊರತು ನಿಮ್ಮಲ್ಲಿ ಪ್ರಾಮಾಣಿಕತೆಯಿಂದ ದುಡಿದವರೆಗೆ ಬೆಲೆ ಇಲ್ಲದಂತಾಗಿದೆ ಎಂದು ಆರೋಪಿಸಿದರು.
ಈ ಎಲ್ಲ ಕಾರಣಗಳಿಂದ ಕೆಪಿಜೆಪಿ ಪಕ್ಷದಿಂದ ಹಾಗೂ ಆರ್. ಶಂಕರ್ ಅಭಿಮಾನಿಗಳ ಬಳಗದಿಂದ ನಡೆಯುವ ಕಾರ್ಯಕ್ರಮಗಳ ಚಟುವಟಿಕೆಗಳಿಗೆ ಇಂದಿನಿಂದ ನಾನು ಯಾವತ್ತೂ ಕಾರಣನಾಗಿರುವುದಿಲ್ಲ ಎಂದು ಸ್ಪಷ್ಠಪಡಿಸಿದರು. ನಗರಸಭೆ ಸದಸ್ಯರುಗಳಾದ ನಾಗರಾಜ ಅಡ್ಮನಿ, ಹನುಮಂತಪ್ಪ ಹೆದ್ದೇರಿ, ರಾಘವೇಂದ್ರ ಚಿನ್ನಿಕಟ್ಟಿ ಸೇರಿದಂತೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.