ಚಳ್ಳಕೆರೆ
ಪ್ರಸ್ತುತ ವರ್ಷದ ಮುಂಗಾರು ಹಂಗಾಮಿನಲ್ಲಿ ಮಳೆ ಪ್ರಮಾಣ ಸಂಪೂರ್ಣವಾಗಿ ಕ್ಷೀಣಿಸಿದ್ದು, ಈ ಭಾಗದ ಪ್ರಮುಖ ಆರ್ಥಿಕ ಬೆಳೆಯಾದ ಶೇಂಗಾ ಬೆಳೆ ಬೆಳೆಯಲು ಕಾಲಾವಧಿ ಕಡಿಮೆ ಇದ್ದು, ಈಗಾಗಲೇ ತಾಲ್ಲೂಕಿನ ರೈತರು 20 ಸಾವಿರ ಕ್ವಿಂಟಾಲ್ ಶೇಂಗಾ ಬಿತ್ತನೆ ಬೀಜವನ್ನು ಖರೀದಿಸಿ, 3500 ಹೆಕ್ಟರ್ ಬಿತ್ತೆನಯಾಗಿದ್ದು, ಮಳೆ ವೈಪಲ್ಯದ ಹಿನ್ನೆಲೆಯಲ್ಲಿ ಈ ಬಾರಿ ಇಳುವಳಿ ಕುಂಠಿತಗೊಳ್ಳುವ ನಿರೀಕ್ಷೆ ಇದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎನ್.ಮಾರುತಿ ಕಳವಳ ವ್ಯಕ್ತ ಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪತ್ರಿಕಾ ಹೇಳಿಕೆ ಮೂಲಕ ಕೆಲವೊಂದು ಪ್ರಮುಖ ಅಂಶಗಳನ್ನು ಪತ್ರಿಕೆ ಮೂಲಕ ರೈತರಿಗೆ ತಿಳಿಯಪಡಿಸುತ್ತಿದ್ದು, ತಾಲ್ಲೂಕಿನ 85 ಹೆಕ್ಟೇರ್ ಪೈಕಿ ಶೇ.4ರಷ್ಟು ಮಾತ್ರ ಬಿತ್ತನೆಯಾಗಿದೆ. ಇನ್ನೂ ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಗಳ ಮುಂದೆ ಶೇಂಗಾ ಬಿತ್ತನೆ ಬೀಜಕ್ಕಾಗಿ ಸರತಿ ಸಾಲಿನಲ್ಲಿ ನಿಲ್ಲುವುದು ಸಾಮಾನ್ಯವಾಗಿದೆ. ಆದರೆ, ಮುಂದಿನ ದಿನಗಳಲ್ಲಿ ಯಾವ ರೀತಿಯ ಮಳೆಯಾಗುತ್ತದೆ ಎಂಬ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲ.
ಮತ್ತೊಮ್ಮೆ ಶೇಂಗಾ ಬಿತ್ತನೆ ಮಾಡಿದಲ್ಲಿ ಬೆಳೆ ಕೈಗೆ ಸಿಗುವುದು ಅನುಮಾನವಿದ್ದು, ಪರ್ಯಾಯ ಬೆಳೆಗಳಾದ ನವಣೆ, ಹಾರಕ, ಸಾಮೆ, ಬರಗು, ಊದಲು, ಕೊರಲೆ, ರಾಗಿ, ಸೂರ್ಯಕಾಂತಿ, ಹರಳು ಸಿರಿಧಾನ್ಯ ಬೆಳೆಗಳನ್ನು ಬೆಳೆಯಬಹುದಾಗಿದೆ. ಮಳೆ ಕಡಿಮೆಯಾದರೂ ಸಹ ಇವು ಬೆಳೆಯಬಲ್ಲವಾಗಿದ್ದು, ವಿಶೇಷವಾಗಿ ಜಾನುವಾರುಗಳಿಗೆ ಮೇವು ಒದಗಿಸಿದಂತಾಗುತ್ತದೆ.
ಈ ಹಿನ್ನೆಲೆಯಲ್ಲಿ ತಾಲ್ಲೂಕಿನ ರೈತರು ಮುಂದಿನ ದಿನಗಳಲ್ಲಿ ಮಳೆಯಾದಲ್ಲಿ ತಮ್ಮ ಜಮೀನುಗಳಿಗೆ ಬಿತ್ತನೆ ಮಾಡುವ ಮುನ್ನ ನಿಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಗಳಲ್ಲಿ ಕೃಷಿ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಸಲಹೆ ಪಡೆದು ತಮ್ಮ ಕೃಷಿ ಚಟುವಟಿಕೆಗಳನ್ನು ಮುಂದುವರೆಸುವಂತೆ ಅವರು ಮನವಿ ಮಾಡಿದ್ದಾರೆ.
ಸಿರಿಧಾನ್ಯ ಬೆಳೆ ಸಂಬಂಧಪಟ್ಟಂತೆ ಇರುವ ಅನುಕೂಲತೆಯ ಬಗ್ಗೆ ಮಾಹಿತಿ ನೀಡಿದ ಕೃಷಿ ಅಧಿಕಾರಿ ಮಾರುತಿ, ರೈತರು ಬೆಳೆಯುವ ಸಿರಿಧಾನ್ಯ ಬೆಳೆಗಳಿಗೆ ಪ್ರೋತ್ಸಾಹ ಧನ ನೀಡುವುದಾಗಿ ಜಂಟಿ ಕೃಷಿ ನಿರ್ದೇಶಕ ಸದಾಶಿವರವರು ತಿಳಿಸಿದ್ದು, ರೈತರು ಸಿರಿಧಾನ್ಯ ಬೆಳೆಗಳ ಬಗ್ಗೆ ಹೆಚ್ಚು ಆಸಕ್ತಿ ತೋರಬೇಕು.
ಕೃಷಿ ವಿಜ್ಞಾನ ಕೇಂದ್ರ ಬಬ್ಬೂರು ಫಾರಂನ ಬೇಸಾಯ ತಜ್ಞ ರುದ್ರೇಗೌಡ ಮಾಹಿತಿ ನೀಡಿ, ಬರ ಸಹಿಷ್ಣತೆ ಎಂದು ಗುರುತಿಸಿಕೊಂಡಿರುವ ಸಿರಿಧಾನ್ಯಗಳಾದ ಹುರುಳಿ, ರಾಗಿ ಮುಂತಾದವುಗಳನ್ನು ಬೆಳೆಯಲು ರೈತರು ಮುಂದಾಗಬೇಕು. ಕಾರಣ ಈ ಬೆಳೆಗಳಿಗೆ ಕಡಿಮೆ ನೀರು, ರೋಗ ಬಾಧಿಸವುದಿಲ್ಲ, ಕಡಿಮೆ ಖರ್ಚಿನಲ್ಲಿ ಬೆಳೆಯಬಹುದಾಗಿದೆ. ಇವು ಬರ ಸಹಿಷ್ಣತೆ ಬೆಳೆಗಳಾಗಿವೆ ಎಂದಿದ್ಧಾರೆ.