ಕ್ಷಯರೋಗ ಮುಕ್ತ ಸಮಾಜ ನಿರ್ಮಾಣ ಅವಶ್ಯ

ಚಿತ್ರದುರ್ಗ:

      ಜಿಲ್ಲೆಯನ್ನು ಕ್ಷಯ ರೋಗ ಮುಕ್ತ ಜಿಲ್ಲೆಯಾಗಿಸುವುದು ನಮ್ಮ, ನಿಮ್ಮೆಲ್ಲರ ಮುಖ್ಯ ಗುರಿಯಾಗಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಹೇಳಿದರು.

        ನಗರದ ತ.ರಾ.ಸು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕೇಂದ್ರ ಇವರ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಕ್ಷಯ ರೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿರು.

       ಕ್ಷಯ ರೋಗ ಸೂಕ್ತ ಚಿಕಿತ್ಸೆ ಮೂಲಕ ಗುಣಪಡಿಸಬಹುದಾದ ರೋಗವಾಗಿದ್ದು, ಕ್ಷಯ ರೋಗ ಹರಡುವುದನ್ನು ತಡೆಗಟ್ಟಲು, ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸುವ ಅಗತ್ಯವಿದೆ. ರೋಗವನ್ನು ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚುವಂತಹ ಕಾರ್ಯವನ್ನು ಆರೋಗ್ಯ ಇಲಾಖೆಯವರು ಕೈಗೊಳ್ಳಬೇಕು.

       ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕರು, ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಆರೋಗ್ಯ ಜಾಗೃತಿ ನೀಡುವ ಮೂಲಕ, ಕ್ಷಯ ರೋಗವನ್ನು ನಿರ್ಮೂಲನೆ ಮಾಡಬಹುದಾಗಿದೆ ಅಲ್ಲದೆ, ಜಿಲ್ಲೆಯನ್ನು ಕ್ಷಯರೋಗ ಮುಕ್ತ ಜಿಲ್ಲೆಯಾಗಿಸಬಹುದಾಗಿದೆ. ಕ್ಷಯ ರೋಗದ ಯಾವುದೇ ಲಕ್ಷಣಗಳು ಕಂಡುಬಂದರೂ, ಸಾರ್ವಜನಿಕರು ಕೂಡಲೆ ಸಮೀಪದ ಆರೋಗ್ಯ ಕೇಂದ್ರಕ್ಕೆ ತೆರಳಿ, ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.

        ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ರಂಗನಾಥ್ ಮಾತನಾಡಿ, ಕ್ಷಯ ರೋಗ ಮುಕ್ತ ಭಾರತ ನಿರ್ಮಿಸಲು ಇದು ಸುಸಮಯ ಎಂಬ ಘೋಷ ವಾಕ್ಯದೊಂದಿಗೆ ಎಲ್ಲರೂ ಇದನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಕ್ಷಯ ರೋಗವು ಸುಮಾರು 5 ಸಾವಿರ ವರ್ಷಗಳಿಂದಲೂ ಅಸ್ತಿತ್ವದಲ್ಲಿದ್ದು, ಇದು ಸೂಕ್ಷ್ಮ ಬ್ಯಾಕ್ಟೀರಿಯಾಗಳ ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಹರಡುವಂತದಾಗಿದೆ.

          ಇದು ಆರಂಭದ ದಿನಗಳಲ್ಲಿ ತುಂಬಾ ಮಾರಕ ರೋಗವಾಗಿ ಪರಿಣಮಿಸಿತ್ತು, ಭಾರತದಲ್ಲಿ ಪ್ರತಿ ವರ್ಷ 60 ಸಾವಿರ ಜನಕ್ಕೆ ಕ್ಷಯ ರೋಗ ಸೋಂಕು ತಗಲುತ್ತದೆ, 6 ಸಾವಿರ ಜನರು ಪ್ರತಿ ದಿನ ಕ್ಷಯ ರೋಗ ಪೀಡಿತರಾಗಿ 600 ಜನರು ಪ್ರತಿ ದಿನ ಮರಣ ಹೊಂದುತ್ತಾರೆ ಎಂದು ಹೇಳಿದರು. ಕ್ಷಯ ರೋಗವನ್ನು ಪ್ರಸ್ತುತ ದಿನಗಳಲ್ಲಿ ಉತ್ತಮ ಚಿಕಿತ್ಸೆಗಳ ಮೂಲಕ ಸಂಪೂರ್ಣ ಗುಣಪಡಿಸಲಾಗುತ್ತಿದ್ದು, ಈ ರೋಗಕ್ಕೆ ತುತ್ತಾಗುವವರ ಪ್ರಮಾಣ ಕುಂಠಿತಗೊಳ್ಳುತ್ತಿದೆ.

         ಕ್ಷಯ ರೋಗಿಗಳಿಗೆ 6 ತಿಂಗಳ ಚಿಕಿತ್ಸೆ ಹಾಗೂ 8 ತಿಂಗಳ ಮರು ಚಿಕಿತ್ಸೆಯನ್ನು ಎರಡು ಹಂತಗಳಲ್ಲಿ ನೀಡುತ್ತಿರುವುದರಿಂದ ರೋಗಿಗಳನ್ನು ಸಂಪೂರ್ಣವಾಗಿ ಗುಣಮುಖರಾಗಿಸಲು ಸಾಧ್ಯವಾಗಿದೆ. ಹೆಚ್.ಐ.ವಿ ಸೋಂಕಿತರಲ್ಲಿ ಕ್ಷಯರೋಗ ಬಹು ಬೇಗ ಕಾಣಿಸಿಕೊಳ್ಳುತ್ತದೆ. ಜಿಲ್ಲೆಯಲ್ಲಿ ಚಳ್ಳಕೆರೆ, ಮೊಳಕಾಲ್ಮೂರು ಹಾಗೂ ಚಿತ್ರದುರ್ಗಗಳಲ್ಲಿ ಕ್ಷಯರೋಗ ಚಿಕಿತ್ಸಾಲಯಗಳಿದ್ದು ಈ ರೋಗ ಕಾಣಿಸಿಕೊಂಡವರು ಕೂಡಲೇ ಸಂಪರ್ಕಿಸಬೇಕು ಎಂದು ಹೇಳಿದರು.

         ಐ.ಎಂ.ಎ ಕಾರ್ಯದರ್ಶಿ ಡಾ. ತಿಮ್ಮಾರೆಡ್ಡಿ ಮಾತನಾಡಿ, ಕ್ಷಯರೋಗ ತಡೆಗಟ್ಟುವ ಪ್ರಾರಂಭದ ದಿನಗಳಲ್ಲಿ ಕೇವಲ ಶೇಕಡ 10 ರಷ್ಟು ನಿಯಂತ್ರಿಸಲಾಗಿತ್ತು, ಪ್ರಸ್ತುತ ಶೇ. 90 ರಷ್ಟು ನಿಯಂತ್ರಿಸಿರುವುದು ಹೆಮ್ಮೆಯ ಸಂಗತಿ ಎಂದು ಸಂತೋಷ ವ್ಯಕ್ತಪಡಿಸಿದರು. ಕ್ರಮೇಣ ಕ್ಷಯರೋಗ ಸಂಪೂರ್ಣ ನಶಿಸಲಿದೆ ಎಂದರು.

         ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಾಲಾಕ್ಷ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ಷಯರೋಗ ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಾಗಿದೆ. ಆದರೆ ವೈದ್ಯಕೀಯ ಕ್ಷೇತ್ರದಲ್ಲಿ ಬದಲಾವಣೆಗೊಂಡು ಈ ರೋಗವನ್ನು ನಿಯಂತ್ರಿಸುವುದರೊಂದಿಗೆ ಸಂಪೂರ್ಣ ನಿರ್ಮೂಲನೆ ಮಾಡುವ ಗುರಿ ಹೊಂದಲಾಗಿದೆ. ಜಿಲ್ಲೆಯನ್ನು ಭಾರತದಲ್ಲಿ ಮೊದಲ ಕ್ಷಯರೋಗ ಮುಕ್ತ ಜಿಲ್ಲೆಯನ್ನಾಗಿಸುವಲ್ಲಿ ಎಲ್ಲರ ಸಹಕಾರ ಬೇಕು ಎಂದು ಹೇಳಿದರು. 

         ಕಾರ್ಯಕ್ರಮದಲ್ಲಿ ಬಿ.ಎಂ.ಸಿ.ಹೆಚ್ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಬಸವರಾಜ್ ಸಂಗೊಳ್ಳಿ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಜಯಪ್ರಕಾಶ್, ಐ.ಎಂ.ಎ ಅಧ್ಯಕ್ಷ ಡಾ. ಶಿವಾನಂದಪ್ಪ ಮತ್ತು ಡಾ. ಜಯಮ್ಮ ನರ್ಸಿಂಗ್ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

         ಕ್ಷಯ ರೋಗ ಮುಕ್ತ ಜಿಲ್ಲೆಯನ್ನಾಗಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ರಂಗನಾಥ್ ಅವರು ಇದೇ ಸಂದರ್ಭದಲ್ಲಿ ಎಲ್ಲರಿಗೂ ಪ್ರತಿಜ್ಞಾ ವಿಧಿ ಬೋಧಿಸಿದರು. ಕ್ಷಯ ರೋಗ ಪತ್ತೆ ಕುರಿತು ಆರೋಗ್ಯ ಇಲಾಖೆಯೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳುವ ಖಾಸಗಿ ವೈದ್ಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅಲ್ಲದೆ ಕ್ಷಯ ರೋಗ ಕುರಿತಂತೆ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap