ಮರ್ಯಾದೆ ಇದ್ರೆ ಎಚ್‍ಡಿಕೆ ರಾಜೀನಾಮೆ ನೀಡಲಿ

ದಾವಣಗೆರೆ:

     ಮೈತ್ರಿ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್-ಜೆಡಿಎಸ್‍ನ ಶಾಸಕರು ಈಗಾಗಲೇ ರಾಜೀನಾಮೆ ನೀಡಿದ್ದು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಈಗ ಇಲ್ಲವಾಗಿದೆ. ಹೀಗಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಗೌರವ, ಮಾನ ಮರ್ಯಾದೆ ಇದ್ದರೆ ರಾಜ್ಯಪಾಲರಿಗೆ ಫ್ಯಾಕ್ಸ್ ಮೂಲಕ ರಾಜೀನಾಮೆ ಸಲ್ಲಿಸಬೇಕೆಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.

      ನಗರದಲ್ಲಿ ಶನಿವಾರ ಸಂಸದ ಜಿ.ಎಂ.ಸಿದ್ದೇಶ್ವರ ಅವರ ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೇರಿಕಾ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಗೌರವ, ಮಾನ ಮರ್ಯಾದೆ ಇದ್ದರೆ, ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

      ಹಿಂದೆಯೇ ತಾವು ವಿಧಾನಸಭೆ ಅಧಿವೇಶನ ನಡೆಯುವ ಮುನ್ನವೇ ಸರ್ಕಾರ ಪತನವಾಗಲಿದೆ. ಬೇಕಾದರೆ, ಈ ಬಗ್ಗೆ ರಕ್ತದಲ್ಲಿ ಬರೆದು ಕೊಡುವುದಾಗಿಯೂ ಹೇಳಿದ್ದೆ. ಇಂದು ಮೈತ್ರಿ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್-ಜೆಡಿಎಸ್ ಶಾಸಕರು ರಾಜೀನಾಮೆ ನೀಡಿರುವುದರಿಂದ ತಾವು ಹೇಳಿದ್ದ ಭವಿಷ್ಯ ನಿಜವಾಗಿದೆ. ಇನ್ನೆರೆಡು ದಿನಗಳಲ್ಲೇ ಈ ಸರ್ಕಾರ ಪತನವೂ ಆಗಲಿದೆ. ರಾಜ್ಯದಲ್ಲಿ ಕಳೆದ 13 ತಿಂಗಳಿನಿಂದಲೂ ಭ್ರಷ್ಟ ಸರ್ಕಾರವಿತ್ತು. ರಾಜ್ಯದ ರೈತರು, ಯಾವುದೇ ವರ್ಗದ ಜನರ ಪರವಾಗಿ ಈ ಸರ್ಕಾರವಂತೂ ಉತ್ತಮ ಆಡಳಿತವನ್ನೇ ನೀಡಲಿಲ್ಲ ಎಂದು ಆರೋಪಿಸಿದರು.

      ಶೀಘ್ರದಲ್ಲಿಯೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಲಿದ್ದಾರೆ. ರಾಜ್ಯದ ಜನರಿಗೆ ಒಳ್ಳೆಯದಾಗಲಿದೆ. ರೈತರು, ಎಲ್ಲಾ ವರ್ಗದ ಜನರಿಗೂ ಇದೊಂದು ಶುಭ ಸೂಚನೆಯಾಗಿದೆ. ಮೈತ್ರಿ ಸರ್ಕಾರದ ಆಡಳಿತ ವೈಫಲ್ಯ, ಕ್ಷೇತ್ರಗಳ ಕಡೆಗಣನೆ, ಪಕ್ಷಪಾತ ಧೋರಣೆಯಿಂದ ಬೇಸತ್ತ ಮಿತ್ರ ಪಕ್ಷಗಳ ಶಾಸಕರೇ ಬೇಸತ್ತು ರಾಜೀನಾಮೆ ನೀಡಿರುವುದಾಗಿ ಹೇಳಿ ಕೊಂಡಿದ್ದಾರೆ.

       ಕಾಂಗ್ರೆಸ್ಸಿನ ಅನೇಕ ಹಿರಿಯ ಶಾಸಕರು, ಜೆಡಿಎಸ್ ಶಾಸಕರು ವಿಧಾನಸೌಧದಲ್ಲಿ ಸಭಾಧ್ಯಕ್ಷರ ಕೊಠಡಿಗೆ ತೆರಳಿ ರಾಜೀನಾಮೆ ಸಲ್ಲಿಸಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರಿಂದ ಚುನಾಯಿತರಾದ ಶಾಸಕರು ರಾಜೀನಾಮೆ ನೀಡಿದ ಮೇಲೆ ಸಭಾಧ್ಯಕ್ಷರು ನೂರಕ್ಕೆ ನೂರು ಸ್ಪಂದಿಸುತ್ತಾರೆಂಬ ನಂಬಿಕೆ, ವಿಶ್ವಾಸವೂ ನಮಗಿದೆ ಎಂದು ಹೇಳಿದರು.

      ಹಿಂದೆ ಉಮೇಶ್ ಜಾಧವ್ ರಾಜೀನಾಮೆ ಅಂಗೀಕರಿಸಿದಂತೆಯೇ ಸಭಾಧ್ಯಕ್ಷರು ಕಾಂಗ್ರೆಸ್-ಜೆಡಿಎಸ್ ಶಾಸಕರ ರಾಜೀನಾಮೆ ಪತ್ರವನ್ನು ಅಂಗೀಕರಿಸುತ್ತಾರೆ. ಆ ನಂತರ ರಾಜ್ಯಪಾಲಕರು ಮಧ್ಯ ಪ್ರವೇಶಿಸಲಿ ಎಂಬುದಾಗಿ ಒತ್ತಾಯಿಸುತ್ತೇವೆ ಎಂದ ಅವರು, ಸಮ್ಮಿಶ್ರ ಸರ್ಕಾರದ ಧೋರಣೆಯಿಂದ ಬೇಸತ್ತು ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿದ ಮೈತ್ರಿ ಪಕ್ಷದ ಶಾಸಕರ ನಡೆಯನ್ನು ಬಿಜೆಪಿಯ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ನಾನು ಅಭಿನಂಧಿಸುತ್ತೇನೆ ಎಂದರು.

      ಸ್ವತಃ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳ ಇಷ್ಟೊಂದು ಶಾಸಕರು ರಾಜೀನಾಮೆ ನೀಡಿದ ನಂತರ ಮುಂದೇನು? ಎಂದು ಪ್ರಶ್ನಿಸಿದ ಅವರು, ಈಗಾಗಲೇ ಸಮ್ಮಿಶ್ರ ಸರ್ಕಾರ ಸತ್ತು ಹೋಗಿದೆ. ಸರ್ಕಾರ ಇಲ್ಲದ ಮೇಲೆ ಸಹಜವಾಗಿಯೇ ರಾಜ್ಯಪಾಲರು ಮಧ್ಯ ಪ್ರವೇಶಿಸುತ್ತಾರೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap