ಬೋಗಸ್ ರೇಷನ್ ಕಾರ್ಡ್ ದಾರರಿಗೆ ಸರ್ಕಾರದಿಂದ ಕಡೆಯ ಎಚ್ಚರಿಕೆ

ಬೆಂಗಳೂರು

    ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಪಡೆಯುತ್ತಿರುವ ಅನರ್ಹರಿಗೆ ಪಡಿತರ ಚೀಟಿಗಳನ್ನು ಹಿಂತಿರುಗಿಸಲು ಲಾಸ್ಟ್ ಚಾನ್ಸ್ ಕೊಟ್ಟಿರುವ ಸರ್ಕಾರ,ಇನ್ನೆರಡು ತಿಂಗಳಲ್ಲಿ ಕಾರ್ಡು ಹಿಂತಿರುಗಿಸಿ,ಇಲ್ಲವೇ ಭಾರೀ ದಂಡ ಕಟ್ಟಲು ಸಜ್ಜಾಗಿ ಎಂದು ಎಚ್ಚರಿಕೆ ನೀಡಿದೆ.ವಿಕಾಸಸೌಧದಲ್ಲಿಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಆಹಾರ ಖಾತೆ ಸಚಿವ ಕೆ.ಗೋಪಾಲಯ್ಯ ಈ ವಿಷಯ ತಿಳಿಸಿದರಲ್ಲದೆ,ಅನ್ನಭಾಗ್ಯ ಯೋಜನೆಯಡಿ ಅನರ್ಹರು ಅಕ್ಕಿ ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.ಈಗಾಗಲೇ ಅಂತವರಿಂದ ಒಂದು ಲಕ್ಷ ಕಾರ್ಡುಗಳನ್ನು ಹಿಂದಕ್ಕೆ ಪಡೆಯಲಾಗಿದೆ ಮತ್ತು ರದ್ದು ಮಾಡಲಾಗಿದೆ ಎಂದರು.

    ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಪಡೆಯುತ್ತಿರುವವರು ಹತ್ತರಿಂದ ಹನ್ನೆರಡು ರೂಪಾಯಿಗಳಿಗೆ ಕೆಜಿಯಂತೆ ಅಕ್ಕಿ ಮಾರುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.ಆದರೆ ಇದೇ ಅಕ್ಕಿಯನ್ನು ನಾವು ಕೇಂದ್ರ ಸರ್ಕಾರದಿಂದ ಕೆಜಿಗೆ ಇಪ್ಪತ್ತೆಂಟು ರೂಪಾಯಿಗಳನ್ನು ನೀಡಿ ಖರೀದಿಸುತ್ತೇವೆ.

    ಹೀಗಾಗಿ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಪಡೆಯುತ್ತಿರುವವರಿಗೆ ನಾನು ಮನವಿ ಮಾಡಿಕೊಳ್ಳುತ್ತೇನೆ.ಯಾವ ಕಾರಣಕ್ಕಾಗಿ ಅಕ್ಕಿಯನ್ನು ಮಾರಿಕೊಳ್ಳಬೇಡಿ.ಹಾಗೆಯೇ ಅನರ್ಹರು ತಮ್ಮ ಬಳಿ ಇರುವ ಪಡಿತರ ಚೀಟಿಗಳನ್ನು ಸರ್ಕಾರಕ್ಕೆ ಹಿಂತಿರುಗಿಸಿ ಎಂದರು.ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಪಡೆಯುತ್ತಿರುವ ಅನರ್ಹರಿಂದ ಈಗಾಗಲೇ ತೊಂಭತ್ತಾರು ಲಕ್ಷ ರೂಪಾಯಿಗಳಷ್ಟು ದಂಡ ವಸೂಲಿ ಮಾಡಲಾಗಿದೆ.ಆದರೆ ಈಗ ಮತ್ತೊಮ್ಮೆ ಕೊನೆ ಅವಕಾಶ ನೀಡಲು ಸರ್ಕಾರ ತೀರ್ಮಾನಿಸಿದ್ದು ಅದರನುಸಾರ ಇನ್ನೆರಡು ತಿಂಗಳಲ್ಲಿ ಅನರ್ಹರು ತಮ್ಮ ತಮ್ಮ ಪಡಿತರ ಚೀಟಿಗಳನ್ನು ಸರ್ಕಾರಕ್ಕೆ ಹಿಂತಿರುಗಿಸಬೇಕು.

    ಎರಡು ತಿಂಗಳ ನಂತರ ಆಹಾರ ಇಲಾಖೆಯ ಅಧಿಕಾರಿಗಳು ಮನೆ-ಮನೆಗೆ ಹೋಗಿ ಪರಿಶೀಲನೆ ಕಾರ್ಯ ನಡೆಸಲಿದ್ದು ಈ ಸಂದರ್ಭದಲ್ಲಿ ಅಕ್ಕಿ ಪಡೆಯುತ್ತಿರುವವರು ಅನರ್ಹರೆಂಬುದು ಗೊತ್ತಾದರೆ ಅಂತವರು ಯಾವ ದಿನದಿಂದ ಅಕ್ಕಿ ಪಡೆದಿದ್ದಾರೋ?ಅಲ್ಲಿಂದ ಇಲ್ಲಿಯ ತನಕ ಪಡೆದ ಆಹಾರ ಪದಾರ್ಥಗಳ ಇಂದಿನ ಮಾರುಕಟ್ಟೆ ದರವನ್ನು ದಂಡವಾಗಿ ಪಾವತಿಸಬೇಕಾಗುತ್ತದೆ ಎಂದು ಹೇಳಿದರು.

    ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಮಾತ್ರವಲ್ಲದೆ,ಗೋಧಿ ಪಡೆಯಲಿಚ್ಚಿಸುವವರಿಗೆ ಅಕ್ಕಿ ಕಡಿಮೆ ಮಾಡಿ ಗೋಧಿಯನ್ನೂ ನೀಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಪ್ರಶ್ನೆ ಒಂದಕ್ಕೆ ಉತ್ತರಿಸಿದ ಅವರು,ಅನ್ನಭಾಗ್ಯ ಯೋಜನೆಯಡಿ ತರುತ್ತಿರುವ ಕೆಲ ಪರಿವರ್ತನೆಗಳ ಬಗ್ಗೆ ಮುಂದಿನ ಬಜೆಟ್ ತನಕ ಕಾದು ನೋಡಿ ಎಂದು ಮಾರ್ಮಿಕವಾಗಿ ವಿವರಿಸಿದರು.

    ರಾಜ್ಯದಲ್ಲಿರುವ 19000 ಪಡಿತರ ಅಂಗಡಿಗಳಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಅನ್ನು ಮಾರಾಟಕ್ಕಿಡಲಾಗುವುದು ಎಂದು ಹೇಳಿದ ಸಚಿವ ಗೋಪಾಲಯ್ಯ,ಪಡಿತರ ಅಂಗಡಿಗಳು ಕೇವಲ ಆಹಾರ ಧಾನ್ಯಗಳ ಕಮೀಷನ್ ಆಧಾರದಲ್ಲಿ ನಡೆಯುವುದಿಲ್ಲ.ಹೀಗಾಗಿ ಅವರಿಗೆ ಪರ್ಯಾಯ ಆದಾಯ ಮೂಲ ದಕ್ಕುವಂತೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ ಎಂದು ವಿವರ ನೀಡಿದರು.

    ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ ವಿಶ್ವೇಶ್ವರಯ್ಯ ಅವರ ಕಾಲದಲ್ಲಿ ಆರಂಭವಾದ ಮೈಸೂರು ಸ್ಯಾಂಡಲ್ ಸೋಪ್‍ಗೆ ಮಾರುಕಟ್ಟೆ ಒದಗಿಸುವುದು ಹಾಗೂ ಪಡಿತರ ಅಂಗಡಿಗಳಿಗೂ ಪರ್ಯಾಯ ಮೂಲ ಕಂಡುಕೊಳ್ಳಲು ಇದು ನೆರವಾಗಲಿದೆ ಎಂದರು.ರಾಜ್ಯದಲ್ಲಿ ಐದು ಲಕ್ಷಕ್ಕೂ ಹೆಚ್ಚು ವರ್ತಕರು ನೋಂದಣಿ ಮಾಡಿಸಿದ್ದು ಕಳೆದ ವರ್ಷ ಒಟ್ಟು ನಲವತ್ತು ಕೋಟಿ ರೂಪಾಯಿ ತೆರಿಗೆಯನ್ನು ನೀಡಿದ್ದಾರೆ.ಮುಂದಿನ ವರ್ಷ ಈ ತೆರಿಗೆಯ ಪ್ರಮಾಣ ನಲವತ್ನಾಲ್ಕು ಕೋಟಿ ರೂಪಾಯಿಗಳಿಗೇರಲಿದೆ ಎಂದು ವಿವರ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link