ಬೆಂಗಳೂರು

ರಷ್ಯಾದ ವ್ಲಾಡೊವೋಸ್ಟಾಕ್ನಲ್ಲಿ ಸೆ.3ರಿಂದ 9ರವರೆಗೆ ನಡೆಯಲಿರುವ ಅಂತಾರಾಷ್ಟ್ರೀಯ 10ನೇ ಏಷ್ಯಾ ಯೂತ್ ಕ್ರೀಡಾಕೂಟದಲ್ಲಿ ಭಾರತೀಯ ತಂಡಕ್ಕೆ ಚೆಸ್ನ ಕೋಚ್ ಆಗಿ ಮಂಡ್ಯದ ಚೆಸ್ ಆಟಗಾರ್ತಿ ನಂದಿ ಪಾಟಿ ಮಾಧುರಿ ಜೈನ್ ಆಯ್ಕೆಯಾಗಿದ್ದಾರೆ.
ಸಣ್ಣ ವಯಸ್ಸಿನಿಂದಲೂ ಚೆಸ್ ಬೋರ್ಡ್, ಪಾನ್ಗಳ ಒಡನಾಟ ಬೆಳೆಸಿಕೊಂಡಿರುವ ಮಾಧುರಿ, ಮಂಡ್ಯ ನಗರದಲ್ಲಿ ಚೆಸ್ ಅಕಾಡೆಮಿ ಸ್ಥಾಪಿಸಿ ಮಕ್ಕಳ ಮನಸ್ಸಿನಲ್ಲಿ ಚೆಸ್ ಆಟದ ಬೀಜ ಬಿತ್ತುತ್ತು ನೂರಾರು ವಿದ್ಯಾರ್ಥಿಗಳನ್ನು ಚಾಂಪಿಯನ್ನಾಗಿಸಿದ್ದಾರೆ. ಇದೀಗ ಏಷ್ಯಾ ಯೂತ್ ಕ್ರೀಡಾಕೂಟಕ್ಕೆ ಆಯ್ಕೆ ಆಗುವ ಮೂಲಕ ಸಕ್ಕರೆನಾಡು ಮಂಡ್ಯ ಜಿಲ್ಲೆಯ ಕೀರ್ತಿಯೊಂದಿಗೆ ರಾಜ್ಯದ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ.
ಏಷ್ಯಾ ಯೂತ್ ಕ್ರೀಡಾಕೂಟದಲ್ಲಿ ಅರೆನಾ, ಪುಟ್ಬಾಲ್, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್, ಬಾಸ್ಕೆಟ್ ಬಾಲ್, ಈಜು, ಚೆಸ್, ಸ್ಪರ್ಧೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ಭಾಗವಹಿಸಲಿದ್ದು, ಚೆಸ್ ಸ್ಪರ್ಧೆಯಲ್ಲಿ ಇಬ್ಬರು ಯುವಕರು, ಯುವತಿಯರು ಪಾಲ್ಗೊಳ್ಳಲಿದ್ದು, ಅವರಿಗೆ ತರಬೇತುದಾರರಾಗಿ ಮಾಧುರಿ ಜೈನ್ ಭಾಗವಹಿಸಲಿದ್ದಾರೆ. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಚೆಸ್ ಪಂದ್ಯಾವಳಿಗಳಲ್ಲಿ ಭಾಗವಹಿಸಲಿದ್ದಾರೆ. 2009ರಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದ ಚೆಸ್ ಆಟಗಾರ್ತಿಯಾಗಿ ಮೊದಲ ಬಾರಿಗೆ ಆಟ ಆಡಿದ್ದ ಮಾಧುರಿ ಜೈನ್ ಅವರು ಒಂದು ಅಂಕದ ಅಂತರದಿಂದ ಬಹುಮಾನ ವಂಚಿತರಾಗಿದ್ದರು.
ಶ್ರೀಲಂಕಾದಲ್ಲಿ ನಡೆದ ಬ್ರೌನ್ಸ್ ಮೆಡಲ್ ಇಂಟರ್ನ್ಯಾಷನಲ್ ಟೂರ್ನಿ, ದುಬೈನಲ್ಲಿ ನಡೆದ ಗ್ರ್ಯಾಂಡ್ ಮಾಸ್ಟರ್ ಪಂದ್ಯ, ಹೈದರಾಬಾದ್ನಲ್ಲಿ ನಡೆದ ಒಎನ್ಜಿಸಿ ಅಂತರಾಷ್ಟ್ರೀಯ ಟೂರ್ನಮೆಂಟ್, ದೆಹಲಿಯಲ್ಲಿ ನಡೆದ ಪಾಶ್ರ್ವನಾಥ ಇಂಟರ್ ನ್ಯಾಷನಲ್ ಟೂರ್ನಮೆಂಟ್ನಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಬೆಸ್ಟ್ ವುಮನ್ ಸ್ಟೇಟ್ ಚಾಂಪಿಯನ್, ರೇಟಿಂಗ್ ಟರ್ನಮೆಂಟ್ ಸೇರಿದಂತೆ ರಾಷ್ಟ್ರೀಯ, ಅಂತರಾಷ್ಟ್ರೀಯ ಪಂದ್ಯಗಳಲ್ಲಿ 50ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಫೆಬ್ರುವರಿ ತಿಂಗಳಿನಲ್ಲಿ ಚೆನ್ನೈನಲ್ಲಿ ನಡೆದ ಪರೀಕ್ಷೆಯಲ್ಲಿ ಚೆಸ್ ತರಬೇತಿ ನೀಡಲು ಮೊದಲ ಮಹಿಳೆಯಾಗಿ ಮಾನ್ಯತೆ ಪಡೆದಿದ್ದಾರೆ. 2018ರಲ್ಲಿ ತುಮಕೂರಿನಲ್ಲಿ ನಡೆದ 32ನೇ ರಾಷ್ಟ್ರೀಯ 7ವರ್ಷದೊಳಗಿನ ಮಕ್ಕಳ ಚೆಸ್ ಪಂದ್ಯಾವಳಿಯನ್ನು ಆಯೋಜನೆ ಮಾಡಿ, ಯಶಸ್ವಿಯಾಗಿ ನಿರ್ವಹಿಸಿದ ಕೀರ್ತಿಗೆ ಮಾಧುರಿಯವರಿಗಿದೆ.
ಚಿಕ್ಕಮಗಳೂರಿನ ಆಶಾ ಕಿರಣ ಅಂಧ ಮಕ್ಕಳ ಶಾಲೆಯ 20 ಮಕ್ಕಳಿಗೆ ಉಚಿತವಾಗಿ ಚೆಸ್ ತರಬೇತಿ ನೀಡುತ್ತಿದ್ದಾರೆ. ಇವರ ಶಿಷ್ಯೆ 9 ವರ್ಷದ ಸುನಿಧಿ ರಾಷ್ಟ್ರೀಯ ಮಟ್ಟದ ಅಂಧ ಮಕ್ಕಳ ಟೂರ್ನಮೆಂಟ್ನಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ. ಅವರ ಮನೆಯನ್ನು ಚೆಸ್ ಬೋರ್ಡ್ನಂತೆಯೇ ನಿರ್ಮಿಸಲಾಗಿದ್ದು, ಹಲವು ವಿಶೇಷತೆಗಳಿಂದ ಕೂಡಿದೆ. ಅಲ್ಲದೇ 450ಕ್ಕೂ ಹೆಚ್ಚು ಚೆಸ್ ಸಂಬಂಧಿ ಪುಸ್ತಕ ಸಂಗ್ರಹಿಸಿದ್ದಾರೆ. ಅವರು ನಡೆಸುವ ಮಂಡ್ಯ ಚೆಸ್ ಅಕಾಡೆಮಿಯಲ್ಲೂ ಪ್ರೊಜೆಕ್ಟರ್ ಮೂಲಕ ತರಬೇತಿ ನೀಡುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








