ಶ್ರೀ ಮಡಿವಾಳ ಮಾಚೀದೇವ ಜಯಂತಿ

ತುಮಕೂರು

       12ನೇ ಶತಮಾನದ ಮುಂಚೂಣಿಯ ವಚನಕಾರರು ಮಡಿವಾಳ ಮಾಚೀದೇವರು ಎಂದು ಹಿರೇಮಠದ ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.

         ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಂಸ್ಕತಿ ಇಲಾಖೆ, ತುಮಕೂರು ಜಿಲ್ಲಾ ಮತ್ತು ತಾಲ್ಲೂಕು ಮಡಿವಾಳ ಸಂಘದ ವತಿಯಿಂದ ನಗರದ ಬಾಲಭವನದಲ್ಲಿ ಆಯೋಜಿಸಲಾಗಿದ್ದ ಶ್ರೀ ಮಡಿವಾಳ ಮಾಚೀದೇವ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ರಕ್ತ ಕ್ರಾಂತಿ ನಡೆದಾಗ ಮಡಿವಾಳ ಮಾಚೀದೇವರು ಎದೆಯೊಡ್ಡಿ ಮುಂದೆ ನಿಂತಿದ್ದರು. ಶರಣ ಸಮುದಾಯವನ್ನು ಸಂಘಟನೆ ಮಾಡಿದ ಮಹಾನ್‍ನಾಯಕರು. ಸುದ್ದಿ ಹಾಗೂ ಸದ್ದು ಮಾಡಿದ್ದ ವೀರ ಯೋಧರು ಎಂದು ಬಣ್ಣಿಸಿದರು.

          ನೇರ ನಿಷ್ಟುರವಾದಿಯಾಗಿದ್ದ ಮಡಿವಾಳ ಮಾಚೀದೇವರ ಪ್ರತಿಯೊಂದು ವಚನಗಳು ಪ್ರತಿಯೊಬ್ಬರ ಮನಸ್ಸಿಗೆ ಬಾಣಗಳಂತೆ ತಗುಲುತ್ತಿದ್ದವು. ಅವರ ವಚನಗಳಲ್ಲಿ ತಾವು ಹೇಳಬಯಸುವ ವಿಷಯವನ್ನು ನೇರವಾಗಿಯೇ ಹೇಳುತ್ತಿದ್ದರು. ಅವರು ಸಂಘಟನೆಗೂ ಸಿದ್ಧ ಸಮರಕ್ಕೂ ಸಿದ್ಧ ಎನ್ನುತ್ತಿದ್ದರು. ಅಂತಹ ಮಹನೀಯರ ಜಯಂತಿ ಆಚರಣೆ ಸರ್ಕಾರದಿಂದಲೇ ಮಾಡುವಂತೆ ಮಾಡಿದ ಸಮುದಾಯದ ಹೋರಾಟಕ್ಕೆ ಸಂದ ಜಯ ಎನ್ನಬಹುದು ಎಂದರು.

       ಮಡಿವಾಳರು ಎಂದರೆ ಕೆಳ ಸಮಾಜದವರು ಎಂದು ತಿಳಿಯಬಾರದು. ಮೈಲಿಗೆಯನ್ನು ತೊಳೆಯುವಂತವರು. ಅವರ ವೃತ್ತಿಯನ್ನು ಕೀಳಾಗಿ ನೋಡಬಾರದು. ಯಾವುದೇ ವೃತ್ತಿಯನ್ನಾಗಲಿ ಕೀಳಾಗಿ ನೋಡಿದರೆ ಅದು ಕೀಳು ಮಟ್ಟದಲ್ಲಿಯೇ ಕಾಣುತ್ತದೆ. ಅದರ ಬದಲಿಗೆ ಆ ವೃತ್ತಿಗೆ ಶಿಕ್ಷಣವನ್ನು ಸೇರಿಸಿಕೊಂಡಾಗ ಅದಕ್ಕೆ ಮತ್ತಷ್ಟು ಬೆಲೆ ಬರುತ್ತದೆ. ಸಮಾಜದ ಹಿರಿಯರು ಇಂದಿನ ಯುವ ಪೀಳಿಗೆಗೆ ಬದುಕಿಗೆ ಬೇಕಾದ ವೃತ್ತಿ ಕೌಶಲ್ಯವನ್ನು ಬೆಳೆಸಬೇಕು. ವಿದ್ಯಾವಂತರು ಮಾದರಿಯಾಗಬೇಕು ಎಂದು ಸಲಹೆ ನೀಡಿದರು

         ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾರವಿಕುಮಾರ್ ಮಾತನಾಡಿ, ಮಡಿವಾಳ ಸಮಾಜದವರು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ಜಿಲ್ಲಾ ಪಂಚಾಯತ್ ಕಡೆಯಿಂದ ಸಮಾಜಕ್ಕೆ ಉತ್ತಮ ಸೌಲಭ್ಯ ಒದಗಿಸುವಂತೆ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. ನಿಮ್ಮ ಸಮಸ್ಯೆಗಳಿದ್ದರೆ ಯಾವುದೇ ಸಮಯದಲ್ಲಾದರೂ ಭೇಟಿ ಮಾಡಿ, ನಮ್ಮ ಸಹಕಾರ ಎಂದೂ ಇರುತ್ತದೆ ಎಂದರು.

          ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಮಾತನಾಡಿ, ಕ್ರಾಂತಿಕಾರಿಯಾಗಿದ್ದ ಮಾಚೀದೇವರ ಇತಿಹಾಸ ಬಸವಣ್ಣನವರ ಸಮಕಾಲಿನದ್ದಾಗಿದೆ. ಅವರ ವಚನಗಳಲ್ಲಿನ ಅರ್ಥದಂತೆ ತಮ್ಮ ಕಾಯಕ ನಿಷ್ಠೆಯನ್ನು ಎಲ್ಲೂ ಬಿಡಬಾರದು. ಮಡಿವಾಳ ಸಮುದಾಯ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ, ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು. ಶಿಕ್ಷಣ ಪಡೆದುಕೊಂಡಾಗ ಆರ್ಥಿಕವಾಗಿ ಸಬಲರಾಗಬಹುದು. ಕರ್ನಾಟಕದಲ್ಲಿ ಮೀಸಲಾತಿ ದೊರಕಿಲ್ಲ, ಇದು ನೋವಿನ ಸಂಗತಿ, ಎಲ್ಲರೂ ಒಗ್ಗೂಡಿ ಅನ್ನಪೂರ್ಣಮ್ಮ ವರದಿ ಜಾರಿಯಾಗುವಂತೆ ಸರ್ಕಾರದ ಒತ್ತಾಯ ಮಾಡಬೇಕು. ರಾಜ್ಯ ಸರ್ಕಾರವು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಒತ್ತಾಯಿಸಿದರು.

          ತಮ್ಮ ಸ್ವಂತ ಕಸುಬನ್ನು ದೊಡ್ಡ ಮಟ್ಟದಲ್ಲಿ ಮಾಡುವ ಮೂಲಕ ಉದ್ಯಮದಂತೆ ಮಾಡಬೇಕು. ಇದನ್ನು ಕೀಳಿರಿಮೆಯಿಂದ ನೋಡಿದರೆ ಅಭಿವೃದ್ಧಿ ಹೊಂದಲು ಆಗುವುದಿಲ್ಲ. ಜತೆಗೆ ಪ್ರತಿಯೊಬ್ಬರು ಶಿಕ್ಷಣವಂತರಾಗಿ ಸರ್ಕಾರಿ ನೌಕರಿಗೆ ಬೇಕಾದ ಅರಿವು ಮೂಡಿಸಕೊಳ್ಳವುದು ಅತ್ಯಗತ್ಯ ಎಂದು ತಿಳಿಸಿದರು.

          ತುಮಕೂರು ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಲಕ್ಷ್ಮಣ್ ಮಾತನಾಡಿ, ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡಿಸಲು ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ. ಸರ್ಕಾರಕ್ಕೆ ಮಾರ್ಚ್ ತಿಂಗಳವರೆಗೆ ಕಾಲಾವಕಾಶ ನೀಡಿದ್ದು, ಅಷ್ಟರೊಳಗೆ ನಮ್ಮ ಬೇಡಿಕೆ ಈಡೇರದಿದ್ದರೆ ಎಲ್ಲಾ ಜಿಲ್ಲಾಗಳಲ್ಲಿ ವಿನೂತನವಾಗಿ ಹೋರಾಟಗಳನ್ನು ಮಾಡಲಾಗುತ್ತದೆ ಅದಕ್ಕೆ ನಾವೆಲ್ಲರೂ ಒಗ್ಗಟ್ಟಾಗಬೇಕು. ಸಮಾಜದ ಹಿತದೃಷ್ಠಿಯಿಂದ ಎಲ್ಲರೂ ಸೇರಬೇಕು. ಹೋರಾಟದ ಕಿಚ್ಚು ನಮ್ಮಲ್ಲಿ ಬೆಳೆದರೆ ಮಾತ್ರ ನಮ್ಮ ಬೇಡಿಕೆಗಳು ಈಡೇರುತ್ತವೆ ಎಂದು ತಿಳಿಸಿದರು.

          ಮಡಿವಾಳ ಮಾಚೀದೇವರ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಹಾಗೂ ವಿಮರ್ಶಕರಾದ ಡಾ.ನೀ.ಹ.ರವಿಕುಮಾರ್ ಮಾಚೀದೇಚರ ಕಾಯಕ ನಿಷ್ಠೆ, ಅವರ ಹೋರಾಟ ಕಿಚ್ಚು, ಅವರ ನೇರ ನಿಷ್ಠುರತೆಯ ಬಗ್ಗೆ ಜನಪದ ಕತೆಗಳು ಸೇರಿದಂತೆ ಇತಿಹಾಸವನ್ನು ವಿವರಿಸಿದರು.

        ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪ್ರಚಾರಕ ಬಿ.ವೆಂಕಟರಾಮಯ್ಯ, ವೈದ್ಯೆ ವಿನುತ, ಹಿರಿಯ ಕುಲಕುಸುಬುದಾರರಾದ ಬಾಲಮ್ಮ, ಸಮಾಜದ ಹಿರಿಯರಾದ ಲಕ್ಷ್ಮೀನರಸಿಂಹಯ್ಯ, ಚಿಕ್ಕಣ್ಣ, ವೆಂಕಟರಾಮ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಬಿ.ಎಸ್.ಮಲ್ಲಿಕಾರ್ಜುನ್ ಮತ್ತು ತಂಡದವರಿಂದ ಭಕ್ತಿ ಗೀತೆಗಳ ಗಾಯನ ನಡೆಯಿತು.

         ಸಮಾರಂಭದಲ್ಲಿ ಬಿ.ಕೆಂಪನರಸಯ್ಯ, ಎಚ್.ದೇವೆಂದ್ರ, ಆರ್.ಕೃಷ್ಣಮೂರ್ತಿ, ಧರ್ಮ ಕುಮಾರ್, ಶಾಂತಕುಮಾರ್, ಎಂ.ಎ.ಆನಂದಮೂರ್ತಿ, ಬಿ.ಚಿಕ್ಕಣ್ಣ, ಪಾಲಿಕೆ ಸದಸ್ಯ ವಿಷ್ಣುವರ್ಧನ್, ಗೋವಿಂದರಾಜು, ಎಚ್.ಎಂ.ಶ್ರೀನಿವಾಸ್, ಪಾಲಿಕೆ ಆರೋಗ್ಯಾಧಿಕಾರಿ ನಾಗೇಶ್‍ಕುಮಾರ್ ಉಪಸ್ಥಿತರಿದ್ದರು.

          ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಆಪಿನಕಟ್ಟೆ ಸ್ವಾಗತಿಸಿದರೆ, ಲಕ್ಷ್ಮೀ ರಂಗಯ್ಯ ನಿರೂಪಿಸಿ ವಂದಿಸಿದರು.ಕಾರ್ಯಕ್ರಮಕ್ಕೂ ಮುನ್ನ ಮಡಿವಾಳ ಮಾಚಿದೇವರ ಭಾವಚಿತ್ರ ಹಾಗೂ ಬಸವಣ್ಣ, ಅಕ್ಕಮಹಾದೇವಿ, ಮಡಿವಾಳ ಮಾಚೀದೇವರ ವೇಷ ಧರಿಸಿದ ಮಕ್ಕಳನ್ನು ಸಾರೋಟಿನಲ್ಲಿ ಕೂರಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆರಂಭವಾದ ಮೆರವಣಿಗೆಯಲ್ಲಿ ಡೊಳ್ಳು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಭಾಗಿಯಾಗಿದ್ದವು. ಈ ಮೆರವಣಿಗೆ ಟೌನ್‍ಹಾಲ್, ಎಂ ಜಿ ರಸ್ತೆ ಮೂಲಕ ಬಾಲಭವನಕ್ಕೆ ತಲುಪಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link