ತುಮಕೂರು
ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರಿನ ಕನಕ ವೃತ್ತದ ನಾಮಕರಣ ಫಲಕ ಸಂಬಂಧ ಉಂಟಾಗಿರುವ ವಿವಾದ ಸಂಬಂಧ ಸೇರಿದ್ಧ ಸಭೆಯಲ್ಲಿ ಜಿಲ್ಲಾ ಸಚಿವ ಜೆ.ಸಿ. ಮಾಧುಸ್ವಾಮಿಯವರು, ಅಲ್ಲಿ ಹಾಜರಿದ್ದ ಕಾಗಿನೆಲೆ ಕನಕ ಗುರು ಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿಗಳೊಂದಿಗೆ ಉದ್ದಟತನದಿಂದ ವರ್ತಿಸಿದ್ದು, ಸಚಿವರು ಸ್ವಾಮೀಜಿಗಳ ಕ್ಷಮೆಯಾಚಿಸಬೇಕು ಎಂದು ಪ್ರದೇಶ ಕುರುಬರ ಸಂಘದ ಮುಖಂಡರು ಒತ್ತಾಯ ಮಾಡಿದ್ದಾರೆ.
ನಗರದ ಕಾಳಿದಾಸ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕನಾಟಕ ಪ್ರದೇಶ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ. ರಾಮಚಂದ್ರಪ್ಪ, ಸಚಿವರು ಸ್ವಾಮಿಜಿಗಳ ಕ್ಷಮೆ ಕೇಳದಿದ್ದರೆ ಈ ತಿಂಗಳ 25ರಂದು ಹೋರಾಟ ನಡೆಸುವುದಾಗಿ ಹೇಳಿದರು.
ಹುಳಿಯಾರು ಪಟ್ಟಣದ ಹುಳಿಯಾರು-ಚಿನಾಹಳ್ಳಿ ರಸ್ತೆಯ ವೃತ್ತಕ್ಕೆ 15 ವರ್ಷಗಳ ಹಿಂದೆ ಆಗಿನ ಗ್ರಾಮ ಪಂಚಾಯ್ತಿ ಕನಕ ವೃತ್ತವೆಂದು ಠರಾವು ಮಂಡಿಸಿ ನಿರ್ಣಯ ಮಾಡಿತ್ತು. ಆಗಿನಿಂದ ಅಲ್ಲಿ ಕನಕ ವೃತ್ತದ ನಾಮ ಫಲಕ ಹಾಕಲಾಗಿತ್ತು. ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭವಾಗಿ, ವೃತ್ತದಲ್ಲಿದ್ದ ನಾಮಫಲಕವನ್ನು ತಾತ್ಕಾಲಿಕವಾಗಿ ತೆರವು ಮಾಡಲಾಗಿತ್ತು. ಇದೇ ಸಂದರ್ಭ ಬಳಸಿಕೊಂಡ ಗುಂಪು ಆ ಜಾಗದಲ್ಲಿ ಶಿವಕುಮಾರ ಸ್ವಾಮಿಜಿ ವೃತ್ತ ಎಂಬ ಬ್ಯಾನರ್ ಹಾಕಿ ವಿವಾದ ಸೃಷ್ಠಿ ಮಾಡಿತ್ತು ಎಂದು ಹೇಳಿದರು.
ಪ್ರತಿ ವರ್ಷದಂತೆ ಈ ವರ್ಷವೂ ಕನಕ ಜಯಂತಿ ಆಚರಿಸುವ ವೇಳೆ ಈ ವೃತ್ತದಿಂದ ಮೆರವಣಿಗೆ ಆರಂಭಿಸಲು ಅದೇ ಸ್ಥಳದಲ್ಲಿ ಕನಕ ವೃತ್ತ ನಾಮ ಫಲಕ ಹಾಕಿ ಕನಕ ಜಯಂತಿ ಆಚರಿಸಲು ಮುಂದಾದಾಗ ಮತ್ತೊಂದು ಗುಂಪು ಅಡ್ಡಿಪಡಿಸಿದ ಕಾರಣ ಗೊಂದಲ ಶುರುವಾಯಿತು. ಈ ವಿವಾದ ಬಗೆಹರಿಸಲು ಅಧಿಕಾರಿಗಳು ಮಧ್ಯ ಪ್ರವೇಶಸಿ ಮಾತುಕತೆ ನಡೆಸಿ ಬಗೆಹರಿಸಲು ಈ ತಿಂಗಳ 16ರಂದು ಸಂಧಾನ ಸಭೆ ಏರ್ಪಡಿಸಿದ್ದರು.
ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಸಚಿವ ಜೆ.ಸಿ. ಮಾಧುಸ್ವಾಮಿ, ಮಾಜಿ ಶಾಸಕ ಸುರೇಶ್ ಬಾಬು ಮೊದಲಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಸಚಿವರು ಸ್ವಾಮೀಜಿಗಳ ಮನಸ್ಸಿಗೆ ನೋವಾಗುವಂತೆ ಮಾತನಾಡುವ ಜೊತೆಗೆ ಉದ್ದಟದಿಂದ ನಡೆದುಕೊಂಡರು. ಒಂದು ಸಮುದಾಯದ ಹಿತ ರಕ್ಷಣೆ ಮಾಡುವುದೇ ನನ್ನ ನನ್ನ ಕರ್ತವ್ಯ ಎಂದು ಸಚಿವರು ಹೇಳಿದರಲ್ಲದೆ, ನಿಮ್ಮ ಕೈಯಲ್ಲಿ ಏನಾಗುತ್ತದೆ ಮಾಡಿ, ನಾನು ಈ ಜಿಲ್ಲೆಯ ಉಸ್ತುವಾರಿ ಸಚಿವ, ನಿಮಗೆ ಯಾವ ರೀತಿ ಬುದ್ದಿ ಕಲಿಸಬೇಕು ಎಂದು ಗೊತ್ತಿದೆ ಎಂದು ದಮಕಿ ಹಾಕಿದರು ಎಂದು ರಾಮಚಂದ್ರಪ್ಪ ಹೇಳಿದರು.
ಕುರುಬ ಸಮುದಾಯವನ್ನು ಅಪಮಾನ ಮಾಡಿ, ಶ್ರೀಮಠದ ಸ್ವಾಮೀಜಿಗಳ ಮನಸಿಗೆ ನೋವು ಉಂಟು ಮಾಡಿದ ಮಾಧುಸ್ವಾಮಿ ಯವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಸ್ವಾಮೀಜಿಗಳಲ್ಲಿ ಕೂಡಲೇ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.ತಪ್ಪಿದ್ದಲ್ಲಿ ಸಚಿವರ ವಿರುದ್ಧ ಇದೇ 25ರಂದು ಸಾಂಕೇತಿಕವಾಗಿ ಪ್ರತಿಭಟನೆ ಮಾಡಲಾಗುವುದು, ನಂತರ ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರಾಮಚಂದ್ರಪ್ಪ ಹೇಳಿದರು.
ಕನಾಟಕ ಪ್ರದೇಶ ಕುರುಬರ ಸಂಘದ ಕಾರ್ಯಾಧ್ಯಕ್ಷ ಎಂ.ವಿ. ಸೋಮಶೇಖರ್, ಉಪಾಧ್ಯಕ್ಷ ಆರ್. ರಾಮಕೃಷ್ಣ, ಹುಳಿಯಾರು ಕ್ಷೇತ್ರದ ಜಿಪಂ ಸದಸ್ಯ ಸಿದ್ದರಾಮಯ್ಯ, ಮುಖಂಡರಾದ ಕೆ.ಕೃಷ್ಣಮೂರ್ತಿ, ಸಿ.ಶಿವಮೂರ್ತಿ, ತುಮಕೂರಿನ ಕಾಳಿದಾಸ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಚಿಕ್ಕವೆಂಕಟಯ್ಯ, ಶಿವಕುಮಾರ್, ಕೆಂಪರಾಜು ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ