ಹೂವಿನಹಡಗಲಿ
ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ನಿಮಿತ್ತ ಅವರ ಸಂದೇಶಗಳನ್ನು ಇಡೀ ರಾಜ್ಯಾದ್ಯಂತ ಪಸರಿಸುವ ನಿಟ್ಟಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಏರ್ಪಡಿಸಿರುವ ಗಾಂಧಿ ಅಭಿಯಾನದ ಸ್ತಬ್ಧಚಿತ್ರ ರಥಯಾತ್ರೆ ಬಳ್ಳಾರಿ ಜಿಲ್ಲೆಗೆ ಹೂವಿನಹಡಗಲಿ ಮೂಲಕ ಜಿಲ್ಲೆಗೆ ಶುಕ್ರವಾರ ಪ್ರವೇಶಿಸಿತು.
ಗಾಂಧಿ ಅಭಿಯಾನದ ಸ್ತಬ್ಧಚಿತ್ರ ರಥಯಾತ್ರೆಗೆ ಹೂವಿನಹಡಗಲಿ ಪಟ್ಟಣದಲ್ಲಿ ಅಧಿಕಾರಿಗಳು,ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಅತ್ಯಂತ ಅದ್ಧೂರಿಯಾದ ಸ್ವಾಗತವನ್ನು ಕೋರಿದರು.
ತಹಸೀಲ್ದಾರ್ ರಾಘವೇಂದ್ರರಾವ್ ಅವರು ಈ ಸ್ತಬ್ಧಚಿತ್ರಕ್ಕೆ ಸ್ವಾಗತಿಸಿ ವಿಶೇಷ ಪೂಜೆ ಸಲ್ಲಿಸಿ ಮಹಾತ್ಮರ ಪ್ರತಿಮೆಗೆ ಹೂಮಾಲೆ ಹಾಕುವುದರ ಮೂಲಕ ನಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ್ ರಾಘವೇಂದ್ರರಾವ್ ಅವರು ರಾಷ್ಟ್ರಪೀತ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮವರ್ಷಾಚರಣೆ ಹೊತ್ತಿನಲ್ಲಿ ಅವರ ವಿಚಾರಧಾರೆಗಳು ಮತ್ತು ಸಂದೇಶಗಳನ್ನು ಇಡೀ ನಾಡಿನ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಎರಡು ಮಾರ್ಗಗಳಲ್ಲಿ ಈ ರಥಯಾತ್ರೆಗಳು ರಾಜ್ಯದಾದ್ಯಂತ ಸಂಚರಿಸುತ್ತಿವೆ.
ಶಾಂತಿ ಮಾರ್ಗ ಎನ್ನುವ ಸ್ತಬ್ಧಚಿತ್ರ ರಥಯಾತ್ರೆಯು ಬಳ್ಳಾರಿ ಜಿಲ್ಲೆಗೆ ನಮ್ಮ ತಾಲೂಕಿನ ಮುಖಾಂತರ ಪ್ರವೇಶವಾಗಿರುವುದು ಅತ್ಯಂತ ಖುಷಿಯ ಸಂಗತಿ ಎಂದರು.
ಶಾಲಾ-ಕಾಲೇಜು ವಿದ್ಯಾರ್ಥಿಗಳು ಮಹಾತ್ಮರ ವಿಚಾರಧಾರೆಗಳು ಮತ್ತು ಅವರ ಸಂದೇಶಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಂಡು ಯಶಸ್ವಿಯಾಗಬೇಕು ಎಂದು ಸಲಹೆ ಮಾಡಿದ ತಹಸೀಲ್ದಾರ್ ರಾಘವೇಂದ್ರರಾವ್ ಅವರು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಈ ರಥಯಾತ್ರೆಯನ್ನು ವೀಕ್ಷಿಸಬೇಕು ಮತ್ತು ಅದರಲ್ಲಿ ಸಂದೇಶಗಳನ್ನು ಅರಿತುಕೊಳ್ಳಬೇಕು ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಅವರು ಮಾತನಾಡಿ, ಗಾಂಧೀಜಿ ಅವರ ವಿಚಾರಧಾರೆಗಳು ನಾಡಿನಾದ್ಯಂತ ಪಸರಿಸಬೇಕು ಎಂಬ ಮಹಾನ್ ಉದ್ದೇಶದಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಗಾಂಧೀಜಿ ಅವರ ವಿಚಾರಧಾರೆ ಹೊಂದಿದ ಸ್ತಬ್ದಚಿತ್ರ ರಥಯಾತ್ರೆಯು ಎರಡು ಮಾರ್ಗಗಳಲ್ಲಿ ರಾಜ್ಯದಲ್ಲಿ ಸಂಚರಿಸುತ್ತಿದೆ. ಅದರಲ್ಲಿ ಒಂದು ಸ್ತಬ್ಧಚಿತ್ರರಥಯಾತ್ರೆಯು ನಮ್ಮ ಜಿಲ್ಲೆಗೆ ಬಂದಿದೆ. ಹೂವಿನಹಡಗಲಿ,ಹಗರಿಬೊಮ್ಮನಳ್ಳಿ,ಹೊಸಪೇಟೆ ಮತ್ತು ಬಳ್ಳಾರಿ ತಾಲೂಕುಗಳಲ್ಲಿ ಸಂಚರಿಸಲಿದೆ. ನಂತರ ಕೊಪ್ಪಳ ಜಿಲ್ಲೆಗೆ ತೆರಳಲಿದೆ ಎಂದರು.
ಈ ಗಾಂಧಿ ಅಭಿಯಾನದ ಸ್ತಬ್ಧಚಿತ್ರ ರಥಯಾತ್ರೆಯ ಮೆರವಣಿಗೆಯು ಹೂವಿನಹಡಗಲಿಯ ಮುಖ್ಯ ಬೀದಿಗಳಲ್ಲಿ ಸಂಚರಿಸಿತು. ಪಟ್ಟಣದಲ್ಲಿ ಮೂರುಗಂಟೆಗಳ ಕಾಲ ತಂಗಿದ್ದ ಈ ಸ್ತಬ್ಧಚಿತ್ರ ರಥಯಾತ್ರೆಯನ್ನು ಶಾಲಾ-ಕಾಲೇಜು ವಿದ್ಯಾರ್ಥಿಗಳು, ಗಾಂಧಿ ಅನುಯಾಯಿಗಳು,ಸಾರ್ವಜನಿಕರು ವೀಕ್ಷಿಸಿ ಖುಷಿ ವ್ಯಕ್ತಪಡಿಸಿದರು ಮತ್ತು ಸ್ತಬ್ಧಚಿತ್ರ ರಥದೊಂದಿಗೆ ಸೆಲ್ಪಿಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಬಸವರಾಜ ಶಿವಪುರ, ಸಿಡಿಪಿಒ ರಾಮಕೃಷ್ಣ, ಜಿಬಿಆರ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀನಿವಾಸ, ಎಎಸ್‍ಐ ಶಿವಾನಂದಪ್ಪ ಸೇರಿದಂತೆ ಸಾರ್ವಜನಿಕರು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ