ಬಳ್ಳಾರಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬಳ್ಳಾರಿಯ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಶನಿವಾರ ನಡೆದ ಜಿಲ್ಲಾಮಟ್ಟದ ಮಹಿಳಾ ಸಂಸ್ಕೃತಿ ಉತ್ಸವದಲ್ಲಿ ಮಹಿಳೆಯರ ಪ್ರತಿಭೆ ಅನಾವರಣಗೊಂಡಿತು.
ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಕಲಾತಂಡಗಳು ತಮ್ಮ ಕಲಾಪ್ರತಿಭೆಯನ್ನು ವೇದಿಕೆ ಮೇಲೆ ಅನಾವರಣ ಮಾಡುವ ಮೂಲಕ ನೆರೆದಿದ್ದ ಪ್ರೇಕ್ಷಕರಿಂದ ಶಹಬ್ಬಾಷ್‍ಗಿರಿ ಗಿಟ್ಟಿಸಿಕೊಂಡರು.
ಮಂಡ್ಯ ಜಿಲ್ಲೆಯ ಸವಿತಾ ಚಿರಕುನ್ನಯ್ಯ ಮತ್ತು ಸಂಗಡಿಗರ ತಂಡದ ಪ್ರದರ್ಶಿಸಿದ ಮಹಿಳಾ ಪೂಜಾ ಕುಣಿತವಂತು ಅಮೋಘವಾಗಿತ್ತು. ಸವಿತಾ ಚಿರಕುನ್ನಯ್ಯ ಅವರು ತಮ್ಮ ತಂಡದ ಹುಡುಗರ ತಮಟೆ ಸದ್ದಿಗೆ ತಕ್ಕಂತೆ ವಿವಿಧ ರೀತಿಯ ಆವಭಾವ ಪ್ರದರ್ಶಿಸುವ ಹಾಗೂ ಅದಕ್ಕೆ ತಕ್ಕಂತೆ ಕುಣಿಯುವ ಮೂಲಕ ನೆರೆದಿದ್ದವರ ಚಪ್ಪಾಳೆ ಗಿಟ್ಟಿಸಿಕೊಂಡರು. ಇದರ ಜೊತೆಗೆ ಗಮನಸೆಳೆದಿದ್ದಂದರೇ ಚಿಕ್ಕಮಗಳೂರಿನ ಶೃತಿ ವಿಜಯ ಮತ್ತು ಸಂಗಡಿಗರ ಮಹಿಳಾ ವೀರಗಾಸೆ. ತಮಟೆಯ ಸದ್ದಿಗೆ ತಕ್ಕಂತೆ ಅವರು ಪ್ರದರ್ಶಿಸಿದ ವೀರಗಾಸೆಗೆ ಎಲ್ಲರಿಂದ ಬೇಷ್ ಎನ್ನುವ ಉದ್ಘಾರಗಿಟ್ಟಿಸಿಕೊಂಡರು.
ಕೊಟ್ಟೂರಿನ ಕೆ.ಸಿ.ಶೀಲಾವತಿ ಮತ್ತು ಸಂಗಡಿಗರಿಂದ ಸಮೂಹ ನೃತ್ಯ ನಡೆಯಿತು. ಗಜವದನ, ವಿಷ್ಣುವಿನ ದಶಾವತಾರ ನೃತ್ಯ ಮನಸೂರೆಗೊಂಡಿತು. ಕೆ.ಸುನಿತ ಅವರು ವೀಣೆ ವಾದನವು ಗಮನಸೆಳೆಯಿತು. ಕವಿತಾ ಗಂಗೂರ್ ಅವರು ಸುಗಮ ಸಂಗೀತ ಪ್ರಸ್ತುತಪಡಿಸಿದರು. ಹಂಪಿ ಸ್ತ್ರೀ ಸೇವಾ ಶಿಕ್ಷಣ ಸಮಿತಿ ಸದಸ್ಯರು ಜಾನಪದ ಗೀತೆಗಳು ಮತ್ತು ಸವಿತಾ ಅಮರೇಶ ನುಗಡೋಣಿ ಅವರು ವಚನಗಾಯನ ಪ್ರಸ್ತುತಪಡಿಸಿದರು.
ನಂತರ ನಡೆದ ವಿಚಾರ ಸಂಕಿರಣದಲ್ಲಿ ಜಿ.ನಾಗವೇಣಿ ಅವರು ಆಡಳಿತದಲ್ಲಿ ಮಹಿಳೆ, ಎ.ಎಂ.ಜಯಶ್ರೀ ಅವರು ಸಂಸ್ಕøತಿಯಲ್ಲಿ ಮಹಿಳೆ, ಡಾ.ಸಿದ್ದೇಶ್ವರಿ ಅವರು ಮಹಿಳಾ ಸಬಲೀಕರಣ, ವಸುದಾ ದಾರವಾರ ಅವರು ಮಹಿಳಾ ಮತ್ತು ಮಾಧ್ಯಮ ಕುರಿತು ವಿಷಯಗಳನ್ನು ಮಂಡಿಸಿದರು. ಹಿರಿಯ ಸಾಹಿತಿ ಎನ್.ಡಿ.ವೆಂಕಮ್ಮ ಅವರು ಅಧ್ಯಕ್ಷತೆ ವಹಿಸಿದ್ದರು.
ಇದಾದ ನಂತರ ನಡೆದ ಕವಿಗೋಷ್ಠಿಯಲ್ಲಿ ಸರೋಜ ಬ್ಯಾತನಾಳ್, ಎಂ.ಎಸ್.ನಳಿನಾ, ನೂರ್ ಜಹಾನ್, ಎಚ್.ಎಂ.ಜ್ಯೋತಿ, ಬಿ.ಶಶಿಕಲಾ, ಎನ್.ಶಿವಲೀಲಾ, ಬಿ.ಎಂ.ನೇತ್ರಾ ಅವರು ತಮ್ಮ ಕವನಗಳನ್ನು ವಾಚಿಸಿದರು.
ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕೆ.ಶಾಂತಶಾಸ್ತ್ರಿ ಮತ್ತು ಸಂಗಡಿಗರು ಕರ್ನಾಟಕ ಸಂಗೀತ ಗಾಯನ, ನಾಗರತ್ನಮ್ಮ ರಂಗಗೀತೆಗಳ ಗಾಯನ, ಸುಭದ್ರಮ್ಮ ಮನ್ಸೂರು ಮತ್ತು ಸಂಗಡಿಗರಿಂದ ಹೇಮರೆಡ್ಡಿ ಮಲ್ಲಮ್ಮ ನಾಟಕ ಪ್ರದರ್ಶನ, ಎಸ್.ಅಂಜಿನಮ್ಮ ಮತ್ತು ಕಲಾತಂಡದಿಂದ ದೇವಿ ಕಥೆ ಮಹಿಳಾ ಬಯಲಾಟ ಸನ್ನಿವೇಶಗಳ ಪ್ರದರ್ಶನ ನಡೆಯಿತು.
ರಂಗಮಂದಿರದ ಹೊರಗಡೆ ನಡೆದ ಮಹಿಳಾ ಚಿತ್ರಕಲಾ ಶಿಬಿರದಲ್ಲಿ ವಿವಿಧ ಮಹಿಳಾ ಸಂವೇದನೆಯ ವಿಷಯಗಳನ್ನು ಶಿಬಿರದಲ್ಲಿ ಭಾಗವಹಿಸಿದ್ದ ಚಿತ್ರಕಲಾವಿದರು ತಮ್ಮ ಕುಂಚದಲ್ಲಿ ಅನಾವರಣಗೊಳಿಸಿರುವುದು ಗಮನಸೆಳೆಯಿತು. ಉತ್ಸವಕ್ಕೆ ಆಗಮಿಸಿದ್ದ ಜನರು ಅತ್ಯಂತ ಕುತೂಹಲದಿಂದ ಚಿತ್ರಕಲಾ ಶಿಬಿರ ಮತ್ತು ರಂಗೋಲಿ ಸ್ಪರ್ಧೆಯನ್ನು ವೀಕ್ಷಿಸಿದರು.
ಇದಕ್ಕೂ ಮುಂಚೆ ನಡೆದ ವೇದಿಕೆ ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆ ಮೇಯರ್ ಸುಶೀಲಾಬಾಯಿ ಅವರು ಚಾಲನೆ ನೀಡಿ ಉತ್ಸವಕ್ಕೆ ಶುಭಕೋರಿದರು.
ಈ ಸಂದರ್ಭದಲ್ಲಿ ಉಪಮೇಯರ್ ದಿವ್ಯಕುಮಾರಿ, ಕಲಾವಿದರಾದ ಡಾ.ಕೆ.ನಾಗರತ್ನಮ್ಮ, ಪಿ.ಪದ್ಮಾ, ಸುಜಾತಮ್ಮ, ಡಾ.ಸುಭದ್ರಮ್ಮ ಮನ್ಸೂರ್, ಕಪಗಲ್ಲು ಪದ್ಮಮ್ಮ,ಬಿ.ವೀಣಾಕುಮಾರಿ, ಎ.ವರಲಕ್ಷ್ಮೀ,ಕರ್ನಾಟಕ ನಾಟಕ ಅಕಾಡೆಮಿ ಸದಸ್ಯೆ ಬಿ.ಶಿವಕುಮಾರಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಪಿ.ಶುಭಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಮತ್ತಿತರರು ಇದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆ ಕಾರ್ಯಕ್ರಮದಲ್ಲಿ ಬಿಸುವ ಕಲ್ಲಿಗೆ ಧಾನ್ಯಗಳನ್ನು ಹಾಕಿ ಬಿಸುವುದರ ಮೂಲಕ ಮತ್ತು ಹೊಳಕಲ್ಲುವಿನಲ್ಲಿ ಧಾನ್ಯಗಳನ್ನು ಹಾಕಿ ಒನಕೆಯಿಂದ ಕುಟ್ಟುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.