ಸುರೇಶ್‍ಬಾಬು ಕಾಂಗ್ರೆಸ್ ಸೇರ್ಪಡೆ ಮಾಧ್ಯಮಗಳ ಸೃಷ್ಠಿ : ಎಸ್.ಪಿ.ಎಂ

ಹುಳಿಯಾರು

     ಚಿಕ್ಕನಾಯಕನಹಳ್ಳಿಯ ಮಾಜಿ ಶಾಸಕರು ಹಾಗೂ ಜೆಡಿಎಸ್ ರಾಜ್ಯ ಬೂತ್ ಕಮಿಟಿ ಅಧ್ಯಕ್ಷರಾದ ಸಿ.ಬಿ.ಸುರೇಶ್ ಬಾಬು ಅವರು ಕಾಂಗ್ರೆಸ್ ಸೇರುವ ಸುದ್ದಿ ಮಾಧ್ಯಮಗಳ ಸೃಷ್ಠಿಯಾಗಿದ್ದು ಪಕ್ಷದಲ್ಲಿ ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಮಾಜಿ ಸಂಸದರಾದ ಎಸ್.ಪಿ.ಮುದ್ಧಹನುಮೇಗೌಡ ಅವರು ತಿಳಿಸಿದರು.

    ಹುಳಿಯಾರಿನ ಕಾಂಗ್ರೆಸ್ ಮುಖಂಡ ಎಚ್.ಅಶೋಕ್ ಅವರ ಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸುರೇಶ್‍ಬಾಬು ಕಾಂಗ್ರೆಸ್ ಸೇರುವ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದು, ಓದಿದ್ದು ಬಿಟ್ಟರೆ ಪಕ್ಷದಲ್ಲಾಗಲೀ, ಪಕ್ಷದ ನಾಯಕರಾಗಲೀ ಈ ವಿಚಾರದ ಬಗ್ಗೆ ಮಾತುಕತೆಯೇ ನಡೆಸಿಲ್ಲ ಎಂದರು.

      ಸರ್ಕಾರ ಇಷ್ಟೊತ್ತಿಗೆ ನೆರೆ ಸಂತ್ರಸ್ತರ ಪುನರ್ವಸತಿಗೆ ಸಮರೋಪಾದಿಯಲ್ಲಿ ಕೆಲಸ ಕೈಗೆತ್ತಿಕೊಳ್ಳಬೇಕಿತ್ತು. ಆದರೆ ಇನ್ನೂ ಕೆಲಸಗಲೇ ಆರಂಭವಾಗಿಲ್ಲ, ಕೇಂದ್ರ ಸರ್ಕಾರದಿಂದ ಹಣ ತಂದಿಲ್ಲ. ಇನ್ನಾದರೂ ಮುಖ್ಯಮಂತ್ರಿಗಳು ಕೇಂದ್ರದ ಮೇಲೆ ಒತ್ತಡ ಏರಿ ಪರಿಹಾರ ಹಣ ಬಿಡುಗಡೆ ಮಾಡಿಸಿ ಸಂತ್ರಸ್ತರ ನೆರವಿಗೆ ಧಾವಿಸಬೇಕಿದೆ. ರಾಜ್ಯದ ಸಂಸದರೂ ಸಹ ಮುಖ್ಯಮಂತ್ರಿಗಳಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಪ್ರಧಾನಿಗಳ ಬಳಿ ಒಗ್ಗಟ್ಟಿನ ಒತ್ತಡ ಏರಬೇಕಿದೆ ಎಂದರು.

      ಈ ಬಾರಿ ಸಂಸತ್ ಚುನಾವಣೆಗೆ ಕಾಂಗ್ರೆಸ್ ನನಗೆ ಟಿಕೆಟ್ ನೀಡಿದ್ದರೆ ಅತೀ ಹೆಚ್ಚು ಅಂತರದಲ್ಲಿ ಗೆಲ್ಲುತ್ತಿದೆ. ಗೆದ್ದು ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಾಲಿಗೆ ಚಕ್ರ ಕಟ್ಟಿಕೊಂಡವನಂತೆ ಓಡಾಡುತ್ತಿದೆ. ಆದರೆ ಈಗಿನ ಸಂಸದರು ಗೆದ್ದು ಮೂರ್ನಲ್ಕು ತಿಂಗಳುಗಳೇ ಆಗಿದ್ದರೂ ಇನ್ನೂ ತಾಲೂಕು ಕೇಂದ್ರಗಳಿಗೇ ಭೇಟಿ ನೀಡಿಲ್ಲ. ಸಂಸದರಾದವರು ಕ್ಷೇತ್ರದಲ್ಲಿ ಸಂಚರಿಸದಿದ್ದರೆ ಜನರ ಸಮಸ್ಯೆ ತಿಳಿಯುವುದಾದರೂ ಹೇಗೆ, ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

      ಜಿಪಂ ಮಾಜಿ ಅಧ್ಯಕ್ಷ ಹಂದನಕೆರೆ ರಘುನಾಥ್, ತಾಪಂ ಮಾಜಿ ಸದಸ್ಯ ವೈ.ಆರ್.ಮಲ್ಲಿಕಾರ್ಜುನಯ್ಯ, ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಚ್.ಅಶೋಕ್, ತಾಪಂ ಮಾಜಿ ಸದಸ್ಯ ಸ್ವಾಮಿನಾಥ್, ಗ್ರಾಪಂ ಉಪಾಧ್ಯಕ್ಷ ಮೋಹನ್, ಕಾಂಗ್ರೆಸ್ ಓಬಿಸಿ ಘಟಕದ ಅಧ್ಯಕ್ಷ ಕೆ.ಎನ್.ಉಮೇಶ್, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಇಮ್ರಾಜ್, ಮುಖಂಡ ಪ್ರಸನ್ನಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link