ಮಧುಗಿರಿ
ತಾಲ್ಲೂಕಿನ ಮಿಡಿಗೇಶಿ ಹೋಬಳಿಗೆ ಸೇರಿದ ಹೊಸಕೆರೆ ಗ್ರಾಮದ ಹೊರವಲಯದಲ್ಲಿ ರಾಶಿ ಕಂಪನಿಯ ಹತ್ತಿಯಿಂದ ಹತ್ತಿಬೀಜ ಬೇರ್ಪಡಿಸುವ ಗಿರಣಿಯನ್ನು (ಮಿಲ್) ಶಾಸಕ ಎಂ.ವಿ. ವೀರಭದ್ರಯ್ಯ ನ. 11 ರಂದು ಲೋಕಾರ್ಪಣೆ ಮಾಡಿದರು.
ನಂತರ ಮಾತನಾಡಿದ ಅವರು, ಹತ್ತಿಗಿರಣಿಯಂತೆಯೆ ಕೈಗಾರಿಕೆಗಳನ್ನು ಮಧುಗಿರಿ ಕೇತ್ರದಲ್ಲಿ ನಿರ್ಮಿಸುವುದರಿಂದ ವ್ಯಾಪಾರೋದ್ಯಮ ಅಭಿವೃದ್ಧಿಯ ಜೊತೆಗೆ ನೂರಾರು ಯುವಕ, ಯುವತಿಯರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ. ನಮ್ಮ ರೈತರು ಬೇರೆ ಬೇರೆ ತಾಲ್ಲೂಕು, ಜಿಲ್ಲೆಗಳಿಗೆ ಅಲೆದಾಡುವುದನ್ನು ತಪ್ಪಿಸಿದಂತಾಗುತ್ತದೆ.
ನಮ್ಮ ಜಿಲ್ಲೆಯಲ್ಲಿ ರಾಶಿ ಕಂಪನಿ ಹತ್ತಿಯನ್ನು ರೈತರು ಸುಮಾರು ಎರಡೂವರೆ ಸಾವಿರ ಎಕರೆ ಭೂಮಿಯಲ್ಲಿ ಬೆಳೆಯುತ್ತಿದ್ದಾರೆ. ರೈತರೆಲ್ಲರೂ ಹತ್ತಿಯಿಂದ ಬೀಜವನ್ನು ಬೇರ್ಪಡಿಸಿ ಮಾರಾಟ ಮಾಡಲು, ಈ ಹಿಂದೆ ಶಿರಾ ತಾಲ್ಲೂಕಿನ ತಾವರೆಕೆರೆ ಹಾಗೂ ದಾವಣಗೆರೆ ಜಿಲ್ಲೆಗೆ ಕೊಂಡೊಯ್ಯಬೇಕಾಗಿತ್ತು. ಈಗ ಇಲ್ಲಿಯೆ ಗಿರಣಿಯನ್ನು ತಾಲ್ಲೂಕಿನ ಕಿತ್ತಗಳಿ ಗ್ರಾಮದ ಕೈಗಾರಿಕೋದ್ಯಮಿ ಸ್ಥಾಪಿಸಿದ್ದಾರೆ. ಇದನ್ನು ಈ ಭಾಗದ ರೈತರು ಸದುಪಯೋಗ ಪಡಿಸಿಕೊಳ್ಳ ಬೇಕು ಎಂದು ತಿಳಿಸಿದರು.
ಎಂ.ಎಸ್.ಸುರೇಶ್, ಸತ್ತಿಗೇನಹಳ್ಳಿ ಜಯರಾಮ್, ಹೊಸಕೆರೆ ಡಾ.ಶಿವಕುಮಾರ್, ರಾಮಕೃಷ್ಣ, ರಾಜ ಗೋಪಾಲ್, ಹನುಮಂತರಾಯಪ್ಪ, ನರಸಿಂಹಮೂರ್ತಿ, ಕೈಗಾರಿಕೋದ್ಯಮಿ ಪಿ.ಎನ್. ರಾಜಶೇಖರ್, ರೈತಾಪಿ ವರ್ಗ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ