ವಿಪಕ್ಷ ಸದಸ್ಯ ಹೊರಕ್ಕೆ, ಸಭಾತ್ಯಾಗ ಮಾಡಿದ ಶಾಸಕ

ದಾವಣಗೆರೆ

      ಪಾಲಿಕೆಯ ಆಡಳಿತರೂಢ ಪಕ್ಷದ ಸದಸ್ಯರು ಮತ್ತು ವಿಪಕ್ಷ ಸದಸ್ಯನ ಮಧ್ಯೆ ತೀವ್ರ ವಾಗ್ವಾದ ನಡೆದು, ಕೈ-ಕೈ ಮೀಲಾಯಿಸುವ ಹಂತ ತಲುಪಿ ಕೊನೆಗೂ ಪಾಲಿಕೆ ಬಿಜೆಪಿ ಸದಸ್ಯ ಡಿ.ಕೆ.ಕುಮಾರ್ ಅವರನ್ನು ಸಭೆಯಿಂದ ಹೊರ ಹಾಕಿದ ಕಾರಣಕ್ಕೆ, ಶಾಸಕ ಎಸ್.ಎ.ರವೀಂದ್ರನಾಥ್‍ರವರು ಸಭಾತ್ಯಾಗ ಮಾಡಿ, ಪಾಲಿಕೆ ಸಮಾನ್ಯ ಸಭೆಯಿಂದ ಹೊರ ನಡೆದ ಘಟನೆ ಶನಿವಾರ ನಡೆದಿದೆ.

        ಇಲ್ಲಿನ ಪಾಲಿಕೆ ಸಭಾಂಗಣದಲ್ಲಿ ಮೇಯರ್ ಶೋಭಾ ಪಲ್ಲಾಗಟ್ಟೆ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಆಡಳಿತಾವಧಿಯ ಕೊನೆಯ ಸಾಮಾನ್ಯ ಸಭೆಯಲ್ಲಿ ಬಡಾವಣೆಗಳ ಅಭಿವೃದ್ಧಿಯಾಗದೇ ಇದ್ದರೂ ಸ್ಥಳ ಪರಿಶೀಲನೆ ನಡೆಸದೇ, ಡೋರ್ ನಂಬರ್ ನೀಡಿರುವ ಬಗ್ಗೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ಹಾಗೂ ಬಿಜೆಪಿಯ ಏಕೈಕ ಸದಸ್ಯ ಕುಮಾರ್ ಮಧ್ಯೆ ಮಾತಿನ ಚಕಮಕಿ ನಡೆದು, ಕೈ-ಕೈ ಮೀಲಾಯಿಸುವ ಹಂತ ತಲುಪಿದ್ದಲ್ಲದೇ, ಬಿಜೆಪಿ ಸದಸ್ಯನನ್ನು ಸಭೆಯಿಂದ ಹೊರ ಹಾಕಿದ ಕಾರಣ ಶಾಸಕ ಎಸ್.ಎ.ರವೀಂದ್ರನಾಥ್, ಎಲ್ಲವನ್ನೂ ನಿಮಗೆ ಹೇಗೆ ಬೇಕೋ ಹಾಗೇ ಬರೆದುಕೊಳ್ಳಿ, ಮುಂದೆ ನೋಡೋಣ ನಾ ಸಭೆಯಿಂದ ಹೊರ ಹೋಗುತ್ತೇನೆ ಎಂದು ಸಭಾತ್ಯಾಗ ಮಾಡಿದರು.

       ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ ಕುಮಾರ್ ಆಡಳಿತರೂಢ ಪಕ್ಷದ ಸದಸ್ಯರೇ ಆರೋಪಿಸುವಂತೆ ಯಾವುದೇ ಅಭಿವೃದ್ಧಿ ಯಾಗದೆಯೇ ಡೋರ್ ನಂಬರ್ ನೀಡಿದ್ದೀರಿ. ಈ ಬಗ್ಗೆ ಒಬ್ಬ ಸದಸ್ಯರು ಮಾಹಿತಿ ಕೇಳಿ ತಿಂಗಳಾದರೂ ಕೊಟ್ಟಿಲ್ಲ ಎಂದರೆ, ಏನು ಅರ್ಥ ಎಂದು ಪ್ರಶ್ನಿಸುತ್ತಿದ್ದಂತೆ, ಪಾಲಿಕೆ ಸದಸ್ಯ ಎಂ.ಹಾಲೇಶ್, ನಾವು ಪರಿಶೀಲನೆ ನಡೆಸದಯೇ ಯಾವುದೇ ಡೋರ್ ನಂಬರ್ ನೀಡಿಲ್ಲ. ಸಾಬೀತು ಪಡಿಸುವುದಾದರೆ ಆಪಾದನೆ ಮಾಡಲಿ, ಪ್ರಚಾರಕ್ಕಾಗಿ ಹೀಎಲ್ಲಾ ಮಾತನಾಡುವುದು ಸರಿಯಲ್ಲ ಎಂದರು.

        ಇದರಿಂದ ಕೂಪಿತರಾದ ಸದಸ್ಯ ಕುಮಾರ್, ದಮ್ ಇದ್ದರೇ, ದುಗ್ಗಮ್ಮನ ದೇವಸ್ಥಾನಕ್ಕೆ ಬಂದು ಗಂಟೆ ಹೊಡೆಯಿರಿ ಎಂದು ಸವಾಲೆಸೆದರು.ಈ ವೇಳೆ ಮಾತನಾಡಿದ ಪಾಲಿಕೆ ಸದಸ್ಯ ಶಿವನಹಳ್ಳಿ ರಮೇಶ್, ಬಿಜೆಪಿ ಸದಸ್ಯ ಕುಮಾರ್ ಅಧಿಕಾರಿಗಳೊಂದಿಗೆ ಮಿಲಾಪಿ ಕುಸ್ತಿ ಮಾಡಿಕೊಂಡು, ಚರ್ಚೆ ನಡೆಸಲು ಬಿಡದೇ ಗೊಂದಲ ಸೃಷ್ಟಿಸುತ್ತಿದ್ದಾರೆಂದು ಆರೋಪಿಸಿದರು.

         ಇದರಿಂದ ಮತ್ತಷ್ಟು ಆಕ್ರೋಶಕ್ಕೆ ಒಳಗಾದ ಕುಮಾರ್, ರೀ ರಮೇಶಣ್ಣ ನೀವು ಏನೇನು ಮಾಡಿದ್ದೀರಿ ಎಂಬುದರ ಬಗ್ಗೆ ನನ್ನ ಬಳಿ ರೆಕಾರ್ಡ್ ಇದೆ. ಮಿಲಾಪಿ ಕುಸ್ತಿ ಮಾಡೋದು ನೀವೇ ಹೊರತು, ನಾನಲ್ಲ. ಸಿಮೆಂಟ್ ಕಬ್ಬಿಣ ಏನಾಗುತ್ತಿದೆ ಎಂಬುದು ನನಗೂ ಗೊತ್ತಿದೆ ಎಂದರು.

        ಈ ಸಂದರ್ಭದಲ್ಲಿ ಶಿವನಹಳ್ಳಿ ರಮೇಶ್ ಮಾತನಾಡಿ, ಕುಮಾರ್ ಇಷ್ಟು ಕೀಳುಮಟ್ಟಕ್ಕೆ ಇಳಿದಿರುವುದು ನಿಜಕ್ಕೂ ನಾಚಿಕೆಗೇಡು ಎನ್ನುತ್ತಿದ್ದಂತೆ, ಬಿಜೆಪಿ ಸದಸ್ಯ ಕುಮಾರ್ ಅವರು ಶಿವನಹಳ್ಳಿ ರಮೇಶ್ ಅವರನ್ನು ಅವಾಚ್ಯವಾಗಿ ನಿಂದಿಸಲು ಮುಂದಾದರು. ಇದರಿಂದ ರೊಚ್ಚಿಗೆದ್ದ ಶಿವನಹಳ್ಳಿ ರಮೇಶ್, ಮೈಕ್ ಬಿಟ್ಟು ಏಯ್ ಬಾರೋ ಹೊರಗಡೆ ಕೈ ಹಿಡಿದು ಎಳೆದರು. ಈ ವೇಳೆ ಸಿಪಿಐ ಸದಸ್ಯ ಆವರಗೆರೆ ಉಮೇಶ್, ಸೇರಿದಂತೆ ಇತರೆ ಕಾಂಗ್ರೆಸ್ ಸದಸ್ಯರು ಉಭಯರನ್ನು ಸಮಾಧಾನ ಪಡಿಸಿದರು.

         ಈ ವೇಳೆ ಪಾಲಿಕೆ ಸದಸ್ಯರಾದ ದಿನೇಶ್ ಕೆ. ಶೆಟ್ಟಿ, ಹಾಲೇಶ್, ಶಿವನಹಳ್ಳಿ ರಮೇಶ್, ಅಬ್ದುಲ್ ಲತೀಫ್, ಶಿವಗಂಗಾ ಬಸವರಾಜ್, ಆರ್.ಶ್ರೀನಿವಾಸ್, ಗಣೇಶ್ ಹುಲ್ಮನೆ, ಬಸಪ್ಪ, ಹಂಚಿನಮನೆ ತಿಪ್ಪಣ್ಣ ಮತ್ತಿತರರು ಮೇಯರ್ ಅವರ ಬಳಿಗೆ ಬಿಜೆಪಿ ಸದಸ್ಯನನ್ನು ಹೊರಗಡೆ ಕಳುಹಿಸಿಯೇ ಸಭೆ ಮುಂದುವರೆಸಬೇಕೆಂದು ಪಟ್ಟು ಹಿಡಿದರು.

        ಈ ವೇಳೆ ಮೇಯರ್ ಶೋಭಾ ಪಲ್ಲಾಗಟ್ಟೆ, ಎಲ್ಲಾ ಅವರವರ ಜಾಗದಲ್ಲಿ ಹೋಗಿ ಮಾತನಾಡಿ ಎಂದರೂ, ಕುಮಾರ್ ಟೇಬಲ್ ಕುಟ್ಟಿ ಮಾತನಾಡುತ್ತಿದ್ದದನ್ನು ಗಮನಿಸಿದ ಮೇಯರ್, ಇಲ್ಲಿ ಮೇಯರ್ ನಾನೋ, ನೀವೋ ಎಂಬುದು ಗೋತ್ತಾಗುತ್ತಿಲ್ಲ. ಚರ್ಚೆಗೂ ಮುನ್ನಾ ಗಲಾಟೆ ಮಾಡಿದರೆ ಹೇಗೆ?, ಚರ್ಚೆಯ ಮೇಲೆ ಮಾತನಾಡಿ. ಇಲ್ಲದಿದ್ದರೆ ಹೊರಹೋಗಿ ಎಂದು ಸೂಚನೆ ನೀಡದರು.

        ಇದಕ್ಕೂ ಕುಮಾರ್ ಕಿವಿಗೊಡದಿದ್ದಾಗ, ಆಯುಕ್ತ ವೀರೇಂದ್ರ ಕುಂದುಗೋಳ, ನೀವು ಸಭೆಗೆ ಅಡಚಣೆ ಮಾಡುತ್ತಿರುವುದರಿಂದ ನೀವು ಗೌರವಯುತವಾಗಿ ಹೊರಹೋಗಬೇಕು. ಇಲ್ಲದಿದ್ದರೆ, ಒತ್ತಾಯ ಪೂರ್ವಕವಾಗಿ ಹೊರ ಕಳುಹಿಸಬೇಕಾಗುತ್ತದೆ ಎಂದರು.ಇದನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಉತ್ತರ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್, ಎಲ್ಲವನ್ನೂ ನಿಮಗೆ ಹೇಗೆ ಬೇಕೋ ಹಾಗೇ ಬರೆದುಕೊಳ್ಳಿ, ಮುಂದೆ ನೋಡೋಣ ನಾ ಸಭೆಯಿಂದ ಹೊರ ಹೋಗುತ್ತೇನೆ ಎಂದು ಸಭಾತ್ಯಾಗ ಮಾಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap