ತುಮಕೂರು
ರೈತರು ತಾವು ಬೆಳೆದ ಹಣ್ಣು, ತರಕಾರಿಯನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ವ್ಯವಸ್ಥೆಯನ್ನು ಜಿಲ್ಲಾ ತೋಟಗಾರಿಕಾ ಇಲಾಖೆ ಆರಂಭಿಸುತ್ತಿದೆ. ತುಮಕೂರು ತಾಲ್ಲೂಕು ಹೆಬ್ಬೂರಿನ ರೈತ ಉತ್ಪಾದಕ ಸಹಕಾರ ಸಂಸ್ಥೆ ತೋಟಗಾರಿಕೆ ಇಲಾಖೆ ಸಹಕಾರದಲ್ಲಿ ತುಮಕೂರಿನಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲಿದ್ದಾರೆ.
ಇದಕ್ಕಾಗಿ ಹಣ್ಣು, ತರಕಾರಿಯ ತಾಜಾತನ ಉಳಿಸಲು ವಿಶೇಷವಾದ ಮೊಬೈಲ್ ವೆಂಡಿಂಗ್ ವ್ಯಾನ್ ಅನ್ನು ಬೆಂಗಳೂರು ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರ ಸಿದ್ಧಪಡಿಸಿ ಸಂಸ್ಥೆಗೆ ನೀಡಿದೆ. ಮಾರಾಟ ಕಾರ್ಯಕ್ರಮ ಮುಂದಿನ ವಾರದಿಂದ ಆರಂಭವಾಗಲಿದ್ದು ನಗರದ ಗ್ರಾಹಕರು ರೈತರಿಂದಲೇ ಯೋಗ್ಯ ಬೆಲೆಗೆ ಹಣ್ಣು, ತರಕಾರಿ ಕೊಳ್ಳಬಹುದಾಗಿದೆ.
ಈ ವ್ಯಾನ್ ಅನ್ನು ಸಣ್ಣ ಮಾರಾಟ ಮಳಿಗೆ ರೂಪದಲ್ಲಿ ವಿನ್ಯಾಸಗೊಳಿಸಿ ಸಿದ್ದಪಡಿಸಲಾಗಿದೆ. ಹಣ್ಣು ತರಕಾರಿಗಳ ತಾಜಾತನ ಉಳಿಸಲು ವ್ಯಾನ್‍ನಲ್ಲಿ ಕೂಲಿಂಗ್ ಚೇಂಬರ್ ಇದೆ. ಗ್ರಾಹಕರ ಗಮನ ಸೆಳೆಯಲು ಮೈಕ್ ವ್ಯವಸ್ಥೆ ಅಳವಡಿಸಲಾಗಿದೆ. ತಮ್ಮ ಸೇವೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ವೀಡಿಯೋ ಚಿತ್ರ ಪ್ರದರ್ಶನಕ್ಕೆ ಅನುಕೂಲವಾಗುವ ಟಿವಿ ಪರದೆ, ಧ್ವನಿವರ್ಧಕದ ವ್ಯವಸ್ಥೆ ಮಾಡಲಾಗಿದೆ. ಈ ವಾಹನವನ್ನು ಇತ್ತೀಚೆಗೆ ನಡೆದ ಮಾವು ಮೇಳದ ವೇಳ ಚಾಲನೆ ಮಾಡಲಾಯಿತು. ಇದರ ಮಾರಾಟ ಸೇವೆ ಮುಂದಿನ ವಾರದಲ್ಲಿ ನಗರದ ವಿವಿಧ ಬಡಾವಣೆಗಳಲ್ಲಿ ಆರಂಭವಾಗಲಿದೆ ಎಂದು ಉಪನಿರ್ದೇಶಕ ರಘು ಹೇಳಿದರು.
ಮಾರಾಟದ ಖರ್ಚು ವೆಚ್ಚ ಹಾಗೂ ನಿರ್ವಹಣೆಯನ್ನು ರೈತ ಉತ್ಪಾದನಾ ಸಂಸ್ಥೆಯೇ ಮಾಡಲಿದೆ, ಇದಕ್ಕೆ ಇಲಾಖೆಯ ಸಲಹೆ, ಸಹಕಾರವಿರುತ್ತದೆ. ಮಧ್ಯವರ್ತಿಗಳ ಹಾವಳಿ ತಡೆಯುವುದು, ರೈತರಿಗೆ ಹಾಗೂ ಗ್ರಾಹಕರಿಗೆ ಸರಿಯಾದ ಬೆಲೆ ಸಿಗುವಂತೆ ಮಾಡುವುದು, ಜೊತೆಗೆ ಹಣ್ಣು, ತರಕಾರಿ ಬೆಳೆಯುವ ರೈತರಿಗೆ ಮಾರುಕಟ್ಟೆ ವ್ಯವಸ್ಥೆ ಒದಗಿಸುವುದು ಇದರ ಉದ್ದೇಶ ಎಂದರು.
ಮೊಬೈಲ್ ವೆಂಡಿಂಗ್ ವ್ಯಾನ್ ಪ್ರತಿ ದಿನ ಬೆಳಿಗ್ಗೆ, ಸಂಜೆಯಂತೆ ಎರಡು ಪಾಳಿಯಲ್ಲಿ ನಗರದ ವಿವಿಧ ಬಡಾವಣೆಗಳಲ್ಲಿ ಸಂಚಾರ ಮಾಡಲಿದ್ದು ನಿಗಧಿತ ಸ್ಥಳಗಳಲ್ಲಿ ನಿಲುಗಡೆ ಮಾಡಲಿದೆ. ಈ ವೇಳೆ ಗ್ರಾಹಕರು ಹಣ್ಣು, ತರಕಾರಿ ಕೊಳ್ಳಬಹುದು. ಯಾವ ಬಡಾವಣೆಯಲ್ಲಿ ಯಾವ ವೇಳೆಗೆ ಯಾವ ಸ್ಥಳದಲ್ಲಿ ಈ ವಾಹನ ಬಂದು ನಿಲ್ಲುತ್ತದೆ ಎಂಬ ವೇಳಾಪಟ್ಟಿಯನ್ನು ಇಲಾಖೆ ಶೀಘ್ರ ಪ್ರಕಟಿಸಲಿದೆ. ಗ್ರಾಹಕರು ಆ ವೇಳೆ ಅಲ್ಲಿ ಹಾಜರಿದ್ದು ರೈತರಿಂದ ಹಣ್ಣು, ತರಕಾರಿ ಖರೀದಿಸಬಹುದು ಎಂದರು.
ತುಮಕೂರಿನಲ್ಲಿ ಹಾಪ್ ಕಾಮ್ಸ್ ಮಳಿಗೆಗಳಲ್ಲೂ ಹಣ್ಣು, ತರಕಾರಿ ಮಾರಾಟ ಮಾಡಲಾಗುತ್ತಿದೆಯಾದರೂ ಗ್ರಾಹಕರ ಬೇಡಿಕೆ ಪೂರೈಸಲು ಸಾದ್ಯವಾಗುತ್ತಿಲ್ಲ. ನಗರದಲ್ಲಿ ಈಗ ಕೇವಲ ಐದು ಹಾಪ್ ಕಾಮ್ಸ್ ಮಳಿಗೆಗಳಿವೆ. ಹೆಚ್ಚಿನ ಕಡೆ ಕೇವಲ ಹಣ್ಣು ಮಾತ್ರ ಮಾರಾಟ ಮಾಡಲಾಗುತ್ತಿದೆ. ಇನ್ನಷ್ಟು ಮಳಿಗೆ ಸ್ಥಾಪನೆ ಮಾಡುವ ಇಂಗಿತ ಹಾಪ್ ಕಾಮ್ಸ್‍ಗೆ ಇದ್ದರೂ ಪ್ರಮುಖ ಬಡಾವಣೆಗಳಲ್ಲಿ ಜಾಗ ದೊರೆಯುತ್ತಿಲ್ಲ. ನಗರ ಪಾಲಿಕೆ ಜಾಗ ನೀಡಿದರೆ ಮಳಿಗೆ ತೆರೆಯಲು ಸಿದ್ಧ ಎಂದು ಇಲಾಖೆ ಉಪನಿರ್ದೇಶಕ ಬಿ. ರಘು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
