ಬಳ್ಳಾರಿ:
ಮಾತಿನಲ್ಲೇ ಮೋಡಿ ಮಾಡುವ ಈ ದೇಶ ಕಂಡ ಶೋಕಿಲಾಲ್ ಪ್ರಧಾನಿ ಯಾರಾದರೂ ಇದ್ದರೆ ಅದು ಪ್ರಧಾನಿ ನರೇಂದ್ರ ಮೋದಿಯವರು ಎಂದು ಸಂಸದ ವಿ.ಎಸ್.ಉಗ್ರಪ್ಪ ಲೇವಡಿ ಮಾಡಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಆರ್ಥಿಕ ಪರಿಸ್ಥಿತಿ ತುಂಬಾ ಕಳವಳಕಾರಿಯಲ್ಲಿದೆ. ದೇಶದಲ್ಲಿನ ಕೈಗಾರಿಕೆಗಳು ಮುಚ್ಚುತ್ತಿವೆ. ಜಿಂದಾಲ್ ಕಂಪನಿಯಲ್ಲೂ ಶೇ.20 ರಷ್ಟು ಉತ್ಪಾದನೆ ಕಡಿಮೆಯಾಗಿದೆ. ಒಂದು ಕಡೆ ಇರುವ ಉದ್ಯೋಗಗಳನ್ನು ಕಡಿಮೆ ಮಾಡುತ್ತಿದ್ದರೆ ಮತ್ತೊಂದು ಕಡೆ ಯುವಕರಿಗೆ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಇಂಥಹ ದುಃಸ್ಥಿತಿಗೆ ಕೇಂದ್ರದ ಬಿಜೆಪಿ ಸರ್ಕಾರದ ಕೆಟ್ಟ ಆಡಳಿತ ನೀತಿಯೇ ಕಾರಣ ಎಂದು ಆರೋಪಿಸಿದರು.
ರಾಷ್ಟ್ರೀಕೃತ ಬ್ಯಾಂಕ್‍ಗಳನ್ನು ವಿಲೀನ ಮಾಡಿದರೆ, ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುವುದಿಲ್ಲ ಎಂದ ಉಗ್ರಪ್ಪ, ಈ ಹಿಂದೆ ಸತತ ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದ್ದ ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವಧಿಯಲ್ಲಿ ಈ ರೀತಿಯಾಗುತ್ತಿರಲಿಲ್ಲ. ಈ ದೇಶಕಂಡ ಶೋಕಿಲಾಲ್ ಪ್ರಧಾನಿ ಎಂದರೆ ಅದು ನರೇಂದ್ರ ಮೋದಿಯವರು. ಕೇವಲ ಮಾತಿನಲ್ಲೇ ಮೋಡಿ ಮಾಡುವ ನರೇಂದ್ರ ಮೋದಿಯವರು ಕೇವಲ ವಿದೇಶಗಳ ಪ್ರಯಾಣ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ರಾಜ್ಯದ ನಾನಾ ಕಡೆ ಭೀಕರ ಪ್ರವಾಹ ಉಂಟಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಲಕ್ಷಾಂತರ ಜನರು ನೆಲೆ ಕಳೆದುಕೊಂಡಿದ್ದಾರೆ. ಕೊಟ್ಯಾಂತರ ರೂ.ಹಾನಿ ಸಂಭವಿಸಿದೆ. ಪ್ರವಾಹದಿಂದ 88 ಜನರು ಮೃತಪಟ್ಟಿದ್ದಾರೆ. 8ಕ್ಕೂ ಹೆಚ್ಚುಜನರು ನಾಪತ್ತೆಯಾಗಿದ್ದಾರೆ. ಲಕ್ಷಾಂತರ ಜಾನುವಾರು, ಕುರಿ, ಕೋಳಿ ನೀರು ಪಾಲಾಗಿವೆ. ಅಂದಾಜು ಒಂದು ಲಕ್ಷಕೋಟಿ ರೂ.ಗಳಷ್ಟು ನಷ್ಟವಾಗಿದೆ. ಮೇಲಾಗಿ ಬರಗಾಲವೂ ಇದೆ. ಇಷ್ಟೆಲ್ಲ ಹಾನಿ ಸಂಭವಿಸಿದರೂ, ಕೇಂದ್ರ ಸರ್ಕಾರದಿಂದ ಪರಿಹಾರ ಬಿಡುಗಡೆಯಾಗಿಲ್ಲ. ರಾಜ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ತಲೆಕೆಡಿಸಿಕೊಳ್ಳುತ್ತಿಲ್ಲ. ಹಾಗಾಗಿ ಬರ ನಿರ್ವಹಣೆ, ನೆರೆಹಾವಳಿ ಹಾನಿ ಬಗ್ಗೆ ಸರ್ಕಾರ ಕೈಗೊಂಡಿರು ಕ್ರಮಗಳ ಕುರಿತು ಚರ್ಚಿಸಲು ಕೂಡಲೇ ಸಿಎಂ ಯಡಿಯೂರಪ್ಪ ಅವರು ಅಧಿವೇಶನ ಕರೆಯಬೇಕು ಎಂದು ಒತ್ತಾಯಿಸಿದರು.
ಆಂತರಿಕ ಕಚ್ಚಾಟ, ನಾಯಕತ್ವದ ಸಂಘರ್ಷದಿಂದ ನೆರೆ ಹಾನಿ, ಬರ ನಿರ್ವಹಣೆ ಬಗ್ಗೆ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ, ಗಂಡ ಹೆಂಡಿರ ಮಧ್ಯೆ ಕೂಸು ಬಡವಾಯಿತು ಎನ್ನುವ ಹಾಗೆ ನೆರೆಯಿಂದ ಹಾನಿಗೊಳಗಾದ ಸಂತ್ರಸ್ಥರಿಗೆ ಪರಿಹಾರ ಮರೀಚಿಕೆಯಾಗಿದೆ. ರಾಜ್ಯದಲ್ಲಿ ಉಂಟಾದ ನೆರೆ ಹಾವಳಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಕೂಡಲೇ ಸರ್ಕಾರ 5 ಸಾವಿರ ಕೋಟಿ ರೂ. ಬಿಡುಗಡೆ ಗೊಳಿಸಬೇಕು.
ರಾಜ್ಯದಲ್ಲಿ ಉಂಟಾದ ನೆರೆ ಹಾವಳಿ ಪ್ರದೇಶಕ್ಕೆ ಕೇಂದ್ರದ ಗೃಹ ಸಚಿವರು ಹಾಗೂ ಹಣಕಾಸು ಸಚಿವರು ಭೇಟಿ ನೀಡಿದ್ದು, ಮತ್ತೆ ಅವರು ಅಲ್ಲಿಂದ ಬರ ವೀಕ್ಷಣೆಗೆ ಪ್ರತ್ಯೇಕ ತಂಡವನ್ನು ಕಳಿಸಿದ್ದಾರೆ. ಆದರೇ, ಇಲ್ಲಿವರೆಗೆ ಪರಿಹಾರ ವಿತರಿಸಿಲ್ಲ. ನೆರೆ ಹಾವಳಿಯಿಂದ ಒಟ್ಟು ಇಷ್ಟು ಹಾನಿಯಾಗಿದೆ ಎಂಬುದು ಸರ್ಕಾರಕ್ಕೆ ಸ್ಪಷ್ಟ ಮಾಹಿತಿ ಇಲ್ಲದಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಸರ್ವಪಕ್ಷದ ನಿಯೋಗವನ್ನು ದೇಹಲಿಗೆ ಕರೆದೋಯ್ಯಲು ಬಿಜೆಪಿ ಅವರು ಮುಂದಾಗಬೇಕು ಎಂದು ಒತ್ತಾಯಿಸಿದರು.
ನೆರೆ ಹಾವಳಿಯಿಂದ ರಾಜ್ಯದ 103 ತಾಲೂಕುಗಳಲ್ಲಿ 88ಜನರು ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. 7.90ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ನಾನಾ ಬೆಳೆಗಳು ನಾಶವಾಗಿವೆ. ಇದಕ್ಕೆ ಇಲ್ಲಿವರೆಗೆ ಕೇಂದ್ರದಿಂದ 203ಕೋಟಿ ಹಾಗೂ ರಾಜ್ಯ ಸರ್ಕಾಋದಿಂದ 374ಕೋಟಿ ರೂ.ಮಾತ್ರ ಬಿಡುಗಡೆಯಾಗಿದೆ ಎಂದರು. ಕಾಂಗ್ರೆಸ್ ಯುವ ಘಟಕದ ಜಿಲ್ಲಾಧ್ಯಕ್ಷ ಹನುಮಕಿಶೋರ್, ಕೆಪಿಸಿಸಿ ಸದಸ್ಯ ಕಲ್ಲುಕಂಬ ಪಂಪಾಪತಿ, ಮುಖಂಡರಾದ ಹೊನ್ನೂರಪ್ಪ, ಬಿ.ಎಂ.ಪಾಟೀಲ್, ಅಸುಂಡಿ ನಾಗರಾಜ್ ಗೌಡ, ಲೋಕೇಶ್, ಮಂಜುನಾಥ್, ಅಲುವೇಲು ಸುರೇಶ್ ಸೇರಿದಂತೆ ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ