ಚಿತ್ರದುರ್ಗ:
ಮೋದಿ ದೇಶದ ಜನರಲ್ಲಿ ಭ್ರಮೆ ಹುಟ್ಟಿಸಿ ಕನಸು ಬಿತ್ತಿ ಸುಳ್ಳು ಭರವಸೆಗಳನ್ನು ಕೊಟ್ಟಿರುವುದನ್ನು ಬಿಟ್ಟರೆ ಸಾಧನೆ ಮಾತ್ರ ಶೂನ್ಯ. ಮೋದಿಯಷ್ಟು ಸುಳ್ಳು ಹೇಳುವ ಪ್ರಧಾನಿಯನ್ನು ದೇಶದಲ್ಲಿ ಇದುವರೆವಿಗೂ ನಾನು ನೋಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು
ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರು ನಾಮಪತ್ರ ಸಲ್ಲಿಸಿದ ನಂತರ ಇಲ್ಲಿ ಆಯೋಜಿಸಲಾಗಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರುನರೇಂದ್ರ ಮೋದಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದವರು. ಜನದ್ರೋಹಿ, ವಚನ ಭ್ರಷ್ಟ, ಯಾವ ಪುರುಷಾರ್ಥಕ್ಕಾಗಿ ಮೋದಿಗೆ ಮತ ಹಾಕುತ್ತೀರ ಎಂದು ನೆರೆದಿದ್ದ ಸಹಸ್ರಾರು ಕಾರ್ಯಕರ್ತರನ್ನು ಸಿದ್ದರಾಮಯ್ಯ ಪ್ರಶ್ನಿಸಿದರು.
ಬಿಜೆಪಿ.ಗೆ ಲಗತ್ತಾದ ಅಭ್ಯರ್ಥಿ ಸಿಕ್ಕಿಲ್ಲ. ಅನೇಕಲ್‍ನಲ್ಲಿ ಎರಡು ಬಾರಿ ವಿಧಾನಸಭೆಯಲ್ಲಿ ಸ್ಪರ್ಧಿಸಿ ಸೋತಿರುವ ನಾರಾಯಣಸ್ವಾಮಿಯನ್ನು ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗಿಳಿಸಿದ್ದಾರೆ. ಕಳೆದ ಬಾರಿ ರಾಜ್ಯದಲ್ಲಿ ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆವು.
ಆಗ ಬಿ.ಎನ್.ಚಂದ್ರಪ್ಪ ಒಂದು ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಈಗ ಕಾಂಗ್ರೆಸ್ ಮತ್ತು ಜೆಡಿಎಸ್.ಮೈತ್ರಿ ಮಾಡಿಕೊಂಡಿರುವುದರಿಂದ ಈ ಚುನಾವಣೆಯಲ್ಲಿ ಮೂರು ಲಕ್ಷಕ್ಕೂ ಅಧಿಕ ಮತಗಳಿಂದ ಚಂದ್ರಪ್ಪನವರನ್ನು ಗೆಲ್ಲಿಸುವ ಜವಾಬ್ದಾರಿ ಎರಡು ಪಕ್ಷಗಳ ನಾಯಕರು ಹಾಗೂ ಕಾರ್ಯಕರ್ತರುಗಳ ಮೇಲಿದೆ ಎಂದು ಮನವಿ ಮಾಡಿದರು.
ಸರಳ, ಸಜ್ಜನಿಕೆ, ಸಂಭಾವಿತ, ಜನಪರ ಕಾಳಜಿಯುಳ್ಳ ಚಂದ್ರಪ್ಪನನ್ನು ಎರಡು ಪಕ್ಷಗಳ ಹುರಿಯಾಳಾಗಿ ಚಿತ್ರದುರ್ಗ ಲೋಕಸಭಾ ಚುನಾವಣೆಗೆ ಕಣಕ್ಕಿಳಿಸಿದ್ದೇವೆ. ದೇಶದ ಪ್ರಧಾನಿ ನರೇಂದ್ರಮೋದಿ ಎಷ್ಟೆ ಸುಳ್ಳು ಅಪಪ್ರಚಾರ ಮಾಡಿಕೊಂಡು ತಿರುಗಲಿ ಈ ಚುನಾವಣೆಯಲ್ಲಿ ಯು.ಪಿ.ಎ.ಸರ್ಕಾರ ಅಧಿಕಾರಕ್ಕೆ ಬರಲಿದೆ. ರಾಹುಲ್‍ಗಾಂಧಿ ಪ್ರಧಾನಿಯಾಗುವುದರಲ್ಲಿ ಅನುಮಾನವಿಲ್ಲ. ರಾಜ್ಯದ 28 ಕ್ಷೇತ್ರಗಳಲ್ಲಿ 21 ಕಡೆ ಕಾಂಗ್ರೆಸ್ ಸ್ಪರ್ಧಿಸಿದೆ.
ಏಳು ಕಡೆ ಜೆಡಿಎಸ್.ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಹಾಗಾಗಿ ಈ ಚುನಾವಣೆಯಲ್ಲಿ ನಮಗೆ ಬಿಜೆಪಿ.ನೇರ ಪ್ರತಿಸ್ಪರ್ಧಿಯಾಗಿ ರುವುದರಿಂದ 28 ಕ್ಕೆ 28 ಕ್ಷೇತ್ರಗಳಲ್ಲಿಯೂ ಗೆಲುವು ನಮ್ಮದೆ ಎನ್ನುವುದರಲ್ಲಿ ಅನುಮಾನ ಬೇಡ ಎಂದರು ರೈತರು, ಬಡವರು, ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು, ಕಾರ್ಮಿಕರ ಪರವಾಗಿ ಮೋದಿ ಯಾವ ಕಾರ್ಯಕ್ರಮಗಳನ್ನು ಜಾರಿಗೆ ತಂದಿಲ್ಲ.
ರೈತರು ಪರಿ ಪರಿಯಾಗಿ ಸಾಲ ಮನ್ನ ಮಾಡಿ ಎಂದು ಗೋಗರೆದರು ಮೋದಿ ಮನಸ್ಸು ಕರಗಲಿಲ್ಲ. ನಾನು ರಾಜ್ಯದ ಮುಖ್ಯಮಂತ್ರಿ ಯಾಗಿದ್ದಾಗ ನರೇಂದ್ರಮೋದಿಯನ್ನು ಎರಡು ಬಾರಿ ಭೇಟಿಯಾಗಿ ರಾಜ್ಯದ ರೈತರ ಸಾಲ ಮನ್ನ ಮಾಡಿ ಎಂದು ಕೇಳಿಕೊಂಡೆ ಜಪ್ಪಯ್ಯ ಎನ್ನಲಿಲ್ಲ. ಅನ್ನಭಾಗ್ಯ, ಇಂದಿರಾ ಕ್ಯಾಂಟಿನ್, ಮಾತೃಪೂರ್ಣ ಯೋಜನೆ ಇವೆಲ್ಲಾ ನೀಡಿದ್ದು, ನಮ್ಮ ಸರ್ಕಾರ ಎಂದು ಸಿದ್ದರಾಮಯ್ಯ ನುಡಿದರು
ಹಚ್ಚೇದಿನ್ ಆಯೇಗಾ ಎಂದು ಪ್ರಧಾನಿಯಾದಾಗಿನಿಂದಲೂ ಹೇಳಿಕೊಂಡು ದೇಶದ ಜನರಿಗೆ ಮೋಸ ಮಾಡುತ್ತಿರುವ ನರೇಂದ್ರಮೋದಿ ಅಂಬಾನಿ, ನೀರವ್‍ಮೋದಿ, ಮಲ್ಯಾ ಇವರ ಪರವಾಗಿ ನಿಂತಿದ್ದಾರೆ. ಹಚ್ಚೆದಿನ್ ಶ್ರೀಮಂತರಿಗೆ ಬಂದಿದೆಯೇ ಹೊರತು ಬಡವರಿಗಲ್ಲ. ಮನ್‍ಕೀ ಬಾತ್ ಬಿಟ್ಟರೆ ಬೇರೆ ಇನ್ನೇನು ಸಾಧನೆಯೂ ಇಲ್ಲ. ಅದಕ್ಕಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ.ಯನ್ನು ಸೋಲಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಪಾರ್ಲಿಮೆಂಟ್‍ಗೆ ಕಳಿಸಿ ಎಂದು ಉಭಯ ಪಕ್ಷಗಳ ಕಾರ್ಯಕರ್ತರಲ್ಲಿ ವಿನಂತಿಸಿದರು.
ಸ್ವಿಸ್ ಬ್ಯಾಂಕ್‍ನಲ್ಲಿರುವ ಕಪ್ಪು ಹಣವನ್ನು ತಂದು ದೇಶದ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ಹದಿನೈದು ಲಕ್ಷ ರೂ.ಗಳನ್ನು ಜಮ ಮಾಡುತ್ತೇನೆ. ವರ್ಷಕ್ಕೆ ಎರಡು ಕೋಟಿ ಯುವಕರಿಗೆ ಉದ್ಯೋಗ ಕೊಡುತ್ತೇನೆ ಎಂದು ಆಸೆ ತೋರಿಸಿ ಪ್ರಧಾನಿ ನರೇಂದ್ರ ಮೋದಿ ಜನತೆಗೆ ಮೋಸ ಮಾಡಿದ್ದಾರೆ ಎಂದು ದೂರಿದರು
ತುಂಗಭದ್ರಾ ಯೋಜನೆಯಿಂದ ಹಿನ್ನೀರಿಗೆ 2300 ಕೋಟಿ ರೂ.ಮಂಜೂರು ಮಾಡಿದ್ದು ನಾನು. ಸಹಕಾರಿ ಬ್ಯಾಂಕ್‍ಗಳಲ್ಲಿ ರೈತರ ಸಾಲ ಮನ್ನ, ಭದ್ರಾಮೇಲ್ದಂಡೆ ಯೋಜನೆಯಿಂದ ಚಿತ್ರದುರ್ಗಕ್ಕೆ ನೀರು ಕೊಡಲು ಕಾಮಗಾರಿ ಆರಂಭಿಸಿದ್ದು, ನಮ್ಮ ಸರ್ಕಾರ. ನಾಯಕ, ವಾಲ್ಮೀಕಿ, ತಳವಾರ ಇವುಗಳನ್ನು ಸಮಾನ ಪದವಾಗಿ ಮಾಡಿದ್ದು, ಕಾಂಗ್ರೆಸ್ ಸರ್ಕಾರ. ಕಾಡುಗೊಲ್ಲರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದೇನೆ. ಎಸ್.ಸಿ.ಪಿ./ಟಿ.ಎಸ್.ಪಿ.ಹಣ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ಜನಸಂಖ್ಯೆಗನುಗುಣವಾಗಿ ಖರ್ಚು ಮಾಡಬೇಕೆಂಬ ಕಾಯ್ದೆ ಜಾರಿಗೆ ತಂದಿದ್ದು, ನಾನು. ಈ ವರ್ಷ ಮೂವತ್ತು ಸಾವಿರ ಕೋಟಿ ರೂ.ಖರ್ಚಾಗಲಿದೆ. ಎಸ್.ಸಿ./ಎಸ್.ಟಿ.ಗೆ ಗುತ್ತಿಗೆಯಲ್ಲಿ ಒಂದು ಕೋಟಿ ರೂ.ವರಗೆ ಮೀಸಲಾತಿ ತಂದಿದ್ದು, ನಮ್ಮ ಸರ್ಕಾರ ಎಂದು ಹೇಳಿದರು
ಏನು ಸಾಧನೆ ಮಾಡದೆ ಸುಳ್ಳು ಹೇಳಿಕೊಂಡು ದೇಶದ ಜನರಿಗೆ ಮೋಸ ಮಾಡುತ್ತಿರುವ ಕೋಮುವಾದಿ ಬಿಜೆಪಿ.ಯನ್ನು ಅಧಿಕಾರದಿಂದ ಕಿತ್ತೊಗೆಯಲು ಕಾಂಗ್ರೆಸ್ ಮತ್ತು ಜೆಡಿಎಸ್.ಒಂದಾಗಿ ಸಂಕಲ್ಪ ಮಾಡಿದ್ದೇವೆ. ಅದಕ್ಕಾಗಿ ಡೋಂಗಿಗಳಿಗೆ ಓಟು ಹಾಕಬೇಡಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಪಾರ್ಲಿಮೆಂಟ್‍ಗೆ ಕಳಿಸುವುದನ್ನು ಮರೆಯಬೇಡಿ ಎಂದು ಸುಡುಬಿಸಿಲಿನಲ್ಲಿ ನಿಂತು ಭಾಷಣಗಳನ್ನು ಕೇಳುತ್ತಿದ್ದ ಕಾರ್ಯಕರ್ತರಲ್ಲಿ ಕಳಕಳಿಯಿಂದ ಪ್ರಾರ್ಥಿಸಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷ ದಿನೇಶ್‍ಗುಂಡೂರಾವ್ ಮಾತನಾಡುತ್ತ ರೈತ ವಿರೋಧಿ, ಜನ ವಿರೋಧಿ ಬಿಜೆಪಿ.ಯನ್ನು ಈ ಬಾರಿಯ ಚುನಾವಣೆಯಲ್ಲಿ ಸೋಲಿಸಬೇಕಾದರೆ ಕಾಂಗ್ರೆಸ್ ಜೆಡಿಎಸ್.ಮೈತ್ರಿ ಪಕ್ಷದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರನ್ನು ಗೆಲ್ಲಿಸಿ ಲೋಕಸಭೆ ಕಳಿಸಿಕೊಡಿ. ಒಗ್ಗಟ್ಟಿನಿಂದ ಹೋರಾಡಿ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರನ್ನು ಗೆಲ್ಲಿಸಿಕೊಳ್ಳೋಣ ಎಂದು ಕಾರ್ಯಕರ್ತರನ್ನು ಕೋರಿದರು.
ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಮಾತನಾಡಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುತ್ತೇವೆಂದು ಹೇಳಿ ಪ್ರಧಾನಿ ಮೋದಿ ನೀಡಿದ್ದು, ಕೇವಲ 27 ಲಕ್ಷ ಮಂದಿಗೆ ಉದ್ಯೋಗ. ವಚನ ಭ್ರಷ್ಟ ಬಿಜೆಪಿ.ಗೆ ಚುನಾವಣೆಗೆ ನಿಲ್ಲಲು ನೈತಿಕ ಹಕ್ಕಿಲ್ಲ. ಬಿಜೆಪಿ.ಗೆ ಈ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡಬೇಕಾದರೆ ಈ ಬಾರಿಯ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರನ್ನು ಗೆಲ್ಲಿಸಿ ಮತ್ತೊಮ್ಮೆ ಡಿಲ್ಲಿಗೆ ಕಳಿಸಿಕೊಡಿ ಎಂದು ಕಾರ್ಯಕರ್ತರು ಹಾಗೂ ಮುಖಂಡರುಗಳಲ್ಲಿ ವಿನಂತಿಸಿದರು.
ಜಿಲ್ಲಾ ಉಸ್ತುವಾರಿ ಮಂತ್ರಿ ವೆಂಕಟರಮಣಪ್ಪ, ಮಾಜಿ ಸಚಿವರುಗಳಾದ ಹೆಚ್.ಆಂಜನೇಯ, ಟಿ.ಬಿ.ಜಯಚಂದ್ರ, ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ, ಶಾಸಕ ರಘುಮೂರ್ತಿ, ಮಾಜಿ ಶಾಸಕರುಗಳಾದ ಬಿ.ಜಿ.ಗೋವಿಂದಪ್ಪ, ತಿಪ್ಪೇಸ್ವಾಮಿ, ಡಿ.ಸುಧಾಕರ್, ಸೋಮ್ಲಾನಾಯಕ್, ಎ.ವಿ.ಉಮಾಪತಿ, ವಿಧಾನಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ, ಕೆ.ಪಿ.ಸಿ.ಸಿ.ಕಾರ್ಯದರ್ಶಿಗಳಾದ ಎಂ.ಜಯಣ್ಣ, ಹನುಮಲಿ ಷಣ್ಮುಖಪ್ಪ, ಜಿ.ಪಂ.ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್, ಪೌರ ನೌಕರರ ಸಂಘದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್, ಜೆಡಿಎಸ್.ಜಿಲ್ಲಾಧ್ಯಕ್ಷ ಡಿ.ಯಶೋಧರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಫಾತ್ಯರಾಜನ್, ಆರ್.ಮಂಜುನಾಥ್, ಜೆಡಿಎಸ್.ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜು, ಜಿಲ್ಲಾ ವಕ್ತಾರ ಡಿ.ಗೋಪಾಲಸ್ವಾಮಿ ನಾಯಕ ಎರಡು ಪಕ್ಷಗಳ ಮುಖಂಡರುಗಳು ವೇದಿಕೆಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ