ಬೆಂಗಳೂರು
ಮೋಜಿನ ಜೀವನ ನಡೆಸಲು ಹಗಲು ವೇಳೆ ಬೀಗ ಹಾಕಿದ ಮನೆಗಳನ್ನು ಗುರುತಿಸಿ ರಾತ್ರಿ ವೇಳೆ ಬೀಗ ಮುರಿದು ಕಳವು ಮಾಡಿ ಮೋಜು ಮಾಡುತ್ತಿದ್ದ ಇಬ್ಬರು ಕುಖ್ಯಾತ ಮನೆಗಳ್ಳರನ್ನು ಬಂಧಿಸಿ ನಗದು ಚಿನ್ನ,ಬೆಳ್ಳಿ ಸೇರಿ 52 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ವೈಯಾಳಿಕಾವಲ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಮನೆಗಳ್ಳರಾದ ಸೂರ್ಯಸಿಟಿಯ ಶ್ರೀನಿವಾಸ್‍ಅಲಿಯಾಸ್ ಸೈಲೆಂಟ್ ಸೀನ(32)ಹಾಗೂ ಇಟ್ಟಮಡುವಿನ ಮಂಜುನಾಥ್ ಅಲಿಯಾಸ್ ಕೋಳಿ ಫಾಯಾಸ್(31)ನನ್ನು ಬಂಧಿಸಿ 9 ಲಕ್ಷ ನಗದು,1,319 ಗ್ರಾಂ ಚಿನ್ನಾಭರಣ,ಎರಡು ಕೆಜಿ ಬೆಳ್ಳಿ ಎರಡು ದ್ವಿಚಕ್ರ ವಾಹನಗಳು 1 ಕಾರು ಸೇರಿ 52 ಲಕ್ಷ ಮೌಲ್ಯದ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈಯಾಳಿಕಾವಲ್‍ನಲ್ಲಿ ನಡೆದಿದ್ದ ಎರಡು ಮನೆಕಳವು ಪ್ರಕರಣಗಳನ್ನು ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಪೊಲೀಸರು ಖಚಿತ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಆರೋಪಿಗಳಲ್ಲಿ ಮಂಜುನಾಥ್ ಮೊದಲಿನಿಂದಲೂ ಮನೆಗಳ್ಳತನ ಹಾಗೂ ದ್ವಿಚಕ್ರ ವಾಹನಗಳ ಕಳ್ಳತನಕ್ಕಿಳಿದಿದ್ದ.
ಈತನಿಗೆ ಮತ್ತೊಬ್ಬ ಆರೋಪಿ ಶ್ರೀನಿವಾಸ್ ಪರಿಚಯವಾಗಿ ಇಬ್ಬರು ಸೇರಿ ಒಟ್ಟಿಗೆ ಕಳ್ಳತನ ಮಾಡುತ್ತಿದ್ದರು ಜೈಲಿಗೆ ಹೋಗಿ ಬಿಡುಗಡೆಯಾಗಿ ಬಂದಿದ್ದರೂ ಹಳೆ ಚಾಳಿ ಬಿಡದ ಆರೋಪಿಗಳು ಮನೆಗಳವು ಮಾಡಿ ಮೋಜು ಮಾಡುತ್ತಿದ್ದರು.
ಆರೋಪಿಗಳನ್ನ ತೀವ್ರವಾಗಿ ವಿಚಾರಣೆಗೊಳಪಡಿಸಿದಾಗ ತಾವರೆಕೆರೆ, ಮಾದನಾಯಕನಹಳ್ಳಿ, ಬ್ಯಾಡರಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 6 ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ ಎಂದು ತಿಳಿಸಿದರು.