ಹಾವೇರಿ
ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾರರ ಜಾಗೃತಿಗಾಗಿ ಹಾವೇರಿ ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿಯಿಂದ ನಗರದಲ್ಲಿ ಮೊಂಬತ್ತಿ ಬೆಳಕಿನ ನಡಿಗೆ (ಕ್ಯಾಂಡಲ್ ಮಾರ್ಚ್) ಕಾರ್ಯಕ್ರಮ ಆಯೋಜಿಸಿ ಮತದಾರರ ಜಾಗೃತಿ ಮೂಡಿಸಲಾಯಿತು.
ತಾಲೂಕು ಪಂಚಾಯತ್ ಆವರಣದಲ್ಲಿ ಕ್ಯಾಂಡಲ್ ಮಾರ್ಚ್ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ, ಕೇಂದ್ರ ಚುನಾವಣಾ ವೆಚ್ಚ ವೀಕ್ಷಕರಾದ ಹಸನ್ ಅಹ್ಮದ್, ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಶ್ರೀಮತಿ ಕೆ.ಲೀಲಾವತಿ ಅವರು ಚಾಲನೆ ನೀಡಿದರು.
ಸೂರ್ಯ ಮುಳುಗುತ್ತಿದ್ದಂತೆ ಕ್ಯಾಂಡಲ್‍ಗಳನ್ನು ಬೆಳಗಿಸಿದ ವಿವಿಧ ಅಧಿಕಾರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ವಿವಿಧ ಮಹಿಳಾ ಸಂಘಟನೆಗಳು, ಸಮಾಜ ಕಲ್ಯಾಣ ಇಲಾಖೆ ಹಾಸ್ಟೇಲ್ ವಿದ್ಯಾರ್ಥಿಗಳು ತಾಲೂಕು ಪಂಚಾಯತ್ ಆವರಣದಿಂದ ಪಿ.ಬಿ.ರಸ್ತೆ ಮಾರ್ಗವಾಗಿ ಹೊಸಮನಿ ಸಿದ್ದಪ್ಪ ಸರ್ಕಲ್‍ವರೆಗೆ ಬೀದಿಗಳಲ್ಲಿ ಕ್ಯಾಂಡಲ್ ಬೆಳಕು ಚೆಲ್ಲುತ್ತ ಮತದಾನದ ಮಹತ್ವ ಸಾರುವ ಜಾಗೃತಿ ಸಂದೇಶಗಳ ಮೂಲಕ ಮತದಾನದ ಜಾಗೃತಿ ಸಂದೇಶಗಳನ್ನು ತಲುಪಿಸಿದರು.
ಐದನೂರಕ್ಕೂ ಅಧಿಕ ಸಂಖ್ಯೆಯ ಕ್ಯಾಂಡಲ್‍ಗಳು ಬೀದಿಗಳಲ್ಲಿ ದೀಪಾವಳಿಯ ಸಂಭ್ರಮವನ್ನು ಮರುಕಳಹಿಸಿದವು. ಕತ್ತೆಲೆಯಿಂದ ಬೆಳಕಿನೆಡೆಗೆ ಸಾಗಲು ತಪ್ಪದೇ ಮತದಾನಮಾಡಿ ಎಂಬ ಸಂದೇಶಗಳನ್ನು ಹೊತ್ತ ಜ್ಯೋತಿಗಳು ಬೆಳಗಿದವು. ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಕ್ಯಾಂಡಲ್‍ಗಳನ್ನು ಉರಿಸಿ ಮತದಾನ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಲಾಯಿತು. ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಪ್ರತಿಜ್ಞಾವಿಧಿ ಬೋಧಿಸಿದರು.
ವಾರ್ತಾಧಿಕಾರಿ ಬಿ.ಆರ್.ರಂಗನಾಥ್, ತಾ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಅನ್ನಪೂರ್ಣ ಮುದಕಮ್ಮನವರ, ಚುನಾವಣಾ ತಹಶೀಲ್ದಾರ ಚಂದ್ರಶೇಖರ, ಸಮಾಜ ಕಲ್ಯಾಣಾಧಿಕಾರಿ ಶ್ರೀಮತಿ ಚೈತ್ರಾ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಮಖಾನೆ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಣ್ಣ, ಅಕ್ಷರ ದಾಸೋಹ ಅಧಿಕಾರಿ ಅಡಿಗ, ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಶಾಖೀರ್ ಅಹ್ಮದ್, ವಿಕಲಚೇತರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ, ವಯಸ್ಕರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.