ಬ್ಯಾಡಗಿ:
ತಾಲೂಕಿನ ಕೆಡಿಪಿ ಸಭೆಗೆ ಕೆಲವೊಂದು ಅಧಿಕಾರಿಗಳು ತಮ್ಮ ಇಲಾಖೆಯ ಮಾಹಿತಿಯನ್ನು ಸರಿಯಾಗಿ ಕೊಡದೇ ಬೇಜವಾಬ್ದಾರಿ ಉತ್ತರ ಕೊಡುವ ಮೂಲಕ ನುಣಿಚಿಕೊಳ್ಳುವ ಕಾರ್ಯದಲ್ಲಿ ತೊಡಗಿಕೊಂಡಿದ್ದು ಅಂತಹ ಅಧಿಕಾರಿಗಳ ಮೇಲೆ ಕ್ರಮ ಕೈಕೊಳ್ಳುವಂತೆ ಅವರ ಮೇಲಾಧಿಕಾರಿಗಳಿಗೆ ಪತ್ರ ಬರೆಯುವುದರ ಜೊತೆಗೆ ತಾಲೂಕಿನ ಅಧಿಕಾರಿಗಳಿಗೂ ನೋಟಿಸ್ ಕೊಡುವಂತೆ ತಾ.ಪಂ.ಅಧ್ಯಕ್ಷೆ ಸವಿತಾ ಸುತ್ತಕೋಟಿ ಒತ್ತಾಯಿಸಿದ ಘಟನೆ ಬುಧವಾರ ನಡೆದ ತಾಲೂಕಾ ಮಾಸಿಕ ಕೆಡಿಪಿ ಸಭೆಯಲ್ಲಿ ಜರುಗಿತು.
ಅವರು ಸ್ಥಳೀಯ ತಾ.ಪಂ.ಸುವರ್ಣ ಸೌದಧ ಸಭಾಭವನದಲ್ಲಿ ಜರುಗಿದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಕಾಮಗಾರಿಗಳನ್ನು ಪರಿಶೀಲಿಸಿ ಮಾತನಾಡಿದರು. ಈಗಾಗಲೇ ಹಲಾವಾರು ಕೆಡಿಪಿ ಸಭೆಗಳಲ್ಲಿ ಈ ವಿಷಯದ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಅವರು ತಮ್ಮ ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳದ ಬಗ್ಗೆ ತಮ್ಮ ಬೇಸರ ವ್ಯಕ್ತ ಪಡಿಸಿದರು. ಸದರಿ ವಿಷಯಕ್ಕೆ ತಾ.ಪಂ.ಉಪಾಧ್ಯಕ್ಷೆ ಶಾಂತವ್ವ ದೇಸಾಯಿ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲನಗೌಡ್ರ ಕರೆಗೌಡ್ರ ಕೂಡಾ ಧ್ವನಿಗೂಡಿಸಿ ಇಂದೇ ಅವರ ಮೇಲಾಧಿಕಾರಿಗಳಿಗೆ ಪತ್ರ ಬರೆಯುವಂತೆ ತಾ.ಪಂ.ವ್ಯವಸ್ಥಾಪಕ ಪ್ರಕಾಶ ಹಿರೇಮಠ ಅವರಿಗೆ ತಿಳಿಸಿದರು.
ಪ್ರಸಕ್ತ ವರ್ಷವನ್ನು ಜಲಧಾರೆಯ ವರ್ಷವೆಂದು ಸರಕಾರ ಘೋಷಣೆ ಮಾಡಿದ್ದು, ಜಲಾಮೃತ ಯೋಜನೆಯಲ್ಲಿ ಎಲ್ಲಾ ತಾಲೂಕಿನ ಅಧಿಕಾರಿಗಳು ಭಾಗವಹಿಸಿ ನೀರನ ಸಂರಕ್ಷಣೆಯ ಬಗ್ಗೆ ಕ್ರಮ ಕೈಕೊಳ್ಳುವಂತೆ ತಾ.ಪಂ.ಅಧ್ಯಕ್ಷೆ ಸವಿತಾ ಸುತ್ತಕೋಟಿ ಹೇಳಿದರು. ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಪೂಜಾರ ಮಾತನಾಡಿ ತಾಲೂಕಿನಲ್ಲಿ ಹೆಚ್ಚು ಗಿಡಮರಗಳನ್ನು ಬೆಳೆಸುವ ಜೊತೆಗೆ ನೀರನ್ನು ಹಿಡಿದಿಡುವ ಕೆಲಸವನ್ನು ತಾಲೂಕಾ ಅಧಿಕಾರಿಗಳು ಮಾಡಬೇಕು. ನೀರನ ಬಳಕೆಯ ಬಗ್ಗೆ ಜಾಗೃತಿ ವಹಿಸಬೇಕು. ಜಲವು ನನ್ನದು ಎನ್ನುವ ಅರಿವನ್ನು ಪ್ರತಿಯೊಬ್ಬರೂ ತಿಳಿದುಕೊಂಡು ಜಲಾಮೃತ ಯೋಜನೆಯನ್ನು ಯಶಸ್ವಿಗೊಳಿಸಲು ತಾಲೂಕಿನ ಅಧಿಕಾರಿಗಳು ಈ ಯೋಜನೆಯಲ್ಲಿ ಸಕ್ರಿಯವಾಗಬೇಕೆಂದರು.
ಲೋಕೋಪಯೋಗಿ ಇಲಾಖೆಯ ಇಂಜನೀಯರ ಹರಮಗಟ್ಟಿ ಅವರು ತಮ್ಮ ಇಲಾಖೆಯ ಮಾಹಿತಿಯನ್ನು ಸಭೆಗೆ ನೀಡಿ ಈ ಹಿಂದಿನ ಎಲ್ಲಾ ಕಾಮಗಾರಿಗಳು ಮುಕ್ತಾಯಗೊಳ್ಳುತ್ತಲಿವೆ. ಕೆಲವೊಂದು ಕಾಮಗಾರಿಗಳು ಪ್ರಗತಿಯಲ್ಲಿವೆಂದು ಸಭೆಗೆ ತಿಳಿಸಿದರು. ಪಂಚಾಯತ ರಾಜ್ ಇಂಜನೀಯರ ನಟರಾಜ್ ತಮ್ಮ ಇಲಾಖೆಯ ಪ್ರಗತಿಯನ್ನು ವಿವರಿಸಿ ಇಲಾಖೆಯು ಕಳೆದ ಸಾಲಿನಲ್ಲಿ ನೀಡಿದ ಎಲ್ಲಾ ಕಾಮಗಾರಿಗಳನ್ನು ಸಮರ್ಪಕವಾಗಿ ಮಾಡಲಾಗಿದ್ದು, ಹೊಸ ಕಾಮಗಾರಿಗಳಿಗಾಗಿ ಕ್ರಿಯಾಯೋಜನೆಯನ್ನು ಸಿದ್ದ ಪಡಿಸಿ ಸರಕಾರಕ್ಕೆ ಕಳಿಸಿಕೊಡಲಾಗಿದೆ ಎಂದರು.
ತಾ.ಪಂ.ಅಧ್ಯಕ್ಷೆ ಸವಿತಾ ಸುತ್ತಕೋಟಿ ಮಾತನಾಡಿ ಪಂಚಾಯತ ರಾಜ್ ಇಲಾಖೆಯ ವತಿಯಿಂದ ಚೆಕ್‍ಡ್ಯಾಂ ಕಾಮಗಾರಿಗಳನ್ನು ಎನ್‍ಆರ್‍ಇಜಿ ಯೋಜನೆಯಲ್ಲಿ ಕೈಕೊಳ್ಳುವಂತೆ ತಿಳಿಸಿದರು. ಇದಕ್ಕೆ ಉತ್ತರ ನೀಡಿದ ಇಲಾಖೆಯ ಅಧಿಕಾರಿಗಳು ಪ್ರಸಕ್ತ ವರ್ಷದಲ್ಲಿ ನಮ್ಮ ಇಲಾಖೆಯ ಮೂಲಕ ಚೆಕ್‍ಡ್ಯಾಮ ಕಾಮಗಾರಿಗಳನ್ನು ನಿರ್ವಹಿಸುವುದಾಗಿ ಅಧ್ಯಕ್ಷರಿಗೆ ಹೇಳಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜನೀಯರರು ಮಾಸಣಗಿ ಗ್ರಾಮದಲ್ಲಿ ಪೈಪಲೈನ್ ಕಾಮಗಾರಿಯನ್ನು ಸರಿಯಾಗಿ ಪರಿಶೀಲಿಸದೇ ಗುತ್ತಿಗೆದಾರರಿಗೆ ಬಿಲ್ ಪಾಸ್ ಮಾಡಿ ಕೊಟ್ಟಿದ್ದಾರೆಂದು ತಾ.ಪಂ.ಉಪಾಧ್ಯಕ್ಷೆ ಶಾಂತವ್ವ ದೇಸಾಯಿ ಆರೋಪಿಸಿದರು.
ಇದಕ್ಕೆ ಉತ್ತರಿಸಿದ ಇಂಜನೀಯರ ಚೌವ್ಹಾಣ ಅವರು ಸಮರ್ಪವಾಗಿ ಗುತ್ತಿಗೆದಾರು ಕಾಮಗಾರಿ ನಿರ್ವಹಿಸಿದ್ದಾರೆ. ಮತ್ತು ಸ್ಥಳೀಯ ಪಿಡಿಓ ಅವರು ಕೂಡಾ ಈ ಪೈಪ್‍ಲೈನ್ ಕಾಮಗಾರಿ ಉತ್ತಮವಾಗಿದೆ ಎಂದಿದ್ದಾರೆ. ಆದ್ದರಿಂದ ಗುತ್ತಿಗೆದಾರರಿಗೆ ಹಣ ಪಾವತಿ ಮಾಡಲಾಗಿದೆ ಎಂದರು.
ಸಮಾಜ ಕಲ್ಯಾಣಾಧಿಕಾರಿಗಳು ಸಮಯಕ್ಕೆ ಸರಿಯಾಗಿ ಎಸ್‍ಸಿ\ಎಸ್‍ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತಿಲ್ಲಾ, ಸಮಾಜ ಕಲ್ಯಾಣಾಧಿಕಾರಿಗಳ ಕಾರ್ಯಾಲಯದಲ್ಲಿ ಇನ್ನೂ ನೂರಾರು ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಬಾಕಿ ಇದೇ ಸರಕಾರ ಎಲ್ಲಾ ವಿದ್ಯಾರ್ಥಿಗಳಿಗೂ ಮಾರ್ಚ ತಿಂಗಳಲ್ಲಿಯೇ ವಿದ್ಯಾರ್ಥಿ ವೇತನವನ್ನು ಬಿಡುಗಡೆ ಮಾಡಿದೆ. ಆದರೇ ಸಮಾಜ ಕಲ್ಯಾಣಾಧಿಕಾರಿಗಳು ಜೂನ ತಿಂಗಳು ಬಂದರೂ ಕೂಡಾ ವಿದ್ಯಾರ್ಥಿಗಳಿಗೆ ಏಕೆ? ವಿದ್ಯಾರ್ಥಿ ವೇತನವನ್ನು ಕೊಡುತ್ತಿಲ್ಲವೆಂದು ಸಭೆಯು ವಿವರಣೆ ಕೇಳಿತು.
ಲೋಕಸಭಾ ಹಾಗೂ ಪುರಸಭೆ ಚುನಾವಣೆಗಳಲ್ಲಿ ನನ್ನನ್ನು ನೇಮಿಸಿದ್ದರಿಂದಾಗಿ ವಿದ್ಯಾರ್ಥಿ ವೇತನವನ್ನು ನೀಡುವಲ್ಲಿ ತಡವಾಗಿದೆ. ಅತೀ ಶೀಘ್ರದಲ್ಲಿಯೇ ಎಲ್ಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದಾಗಿ ಸಮಾಜ ಕಲ್ಯಾಣಾಧಿಕಾರಿ ಪುಂಡಲಿಕ ಅವರು ಸಭೆಗೆ ತಿಳಿಸಿದರು.
ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರುಮುನಿ, ಆರೋಗ್ಯ ಇಲಾಖೆಯ ಅಧಿಕಾರಿ ಡಾ ಲಮಾಣಿ ಸೇರಿದಂತೆ ವಿವಿಧ ಇಲಾಖೆಯ ತಾಲೂಕಾ ಅಧಿಕಾರಿಗಳು ತಮ್ಮ ಇಲಾಖೆಯ ವಿವರವನ್ನು ಸಭೆಗೆ ತಿಳಿಸಿದರು. ಸಭೆಯಲ್ಲಿ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ