ಚಿತ್ರದುರ್ಗ:
ಇಲ್ಲಿನ ವಿದ್ಯಾವಿಕಾಸ ಶಾಲೆ ಸಮೀಪ ಬಾಯ್ತೆರೆದುಕೊಂಡಿರುವ ಮೋರಿಯನ್ನು ಅನಾಹುತ ಸಂಭವಿಸುವ ಮುನ್ನವೇ ಮುಚ್ಚುವಂತೆ ಒತ್ತಾಯಿಸಿ ವಂದೇ ಮಾತರಂ ಜಾಗೃತಿ ವೇದಿಕೆಯಿಂದ ಬುಧವಾರ ಪ್ರತಿಭಟನೆ ನಡೆಸಿ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ದ ಧಿಕ್ಕಾರಗಳನ್ನು ಕೂಗಲಾಯಿತು.
ಚರಂಡಿ ಮೇಲಿರುವ ಚಪ್ಪಡಿಯನ್ನು ತೆಗೆದು ಸುಮಾರು ಒಂದುವರೆ ತಿಂಗಳಾಯಿತು. ಇಲ್ಲಿಯೇ ಸಮೀಪ ವಿದ್ಯಾವಿಕಾಸ ಶಾಲೆಯಿದೆ. ಶನಿವಾರ ಮಾರ್ನಿಂಗ್ ಶಾಲೆ ಮುಗಿದ ಮೇಲೆ ವಿದ್ಯಾರ್ಥಿಗಳು ಮನೆಗೆ ಹೋಗಬೇಕೆಂದರೆ ಇಲ್ಲಿ ಹರಸಾಹಸ ಪಡಬೇಕಾಗುತ್ತದೆ. ರಸ್ತೆಯ ನಾಲ್ಕು ಕಡೆಗಳಿಂದ ಬರುವ ವಾಹನಗಳಿಂದ ಸಂಚಾರ ದಟ್ಟಣೆಯಾಗಿ ಸ್ವಲ್ಪ ಯಾಮಾರಿದರೂ ಮಕ್ಕಳು ಚರಂಡಿಯಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುವುದರಲ್ಲಿ ಅನುಮಾನವಿಲ್ಲ.
ಚರಂಡಿಯ ಎದುರಿನಲ್ಲಿಯೇ ಬೇಕರಿ, ಹೋಟೆಲ್, ಜ್ಯೂಸ್ ಅಂಗಡಿ ದಿನನಿತ್ಯವೂ ವ್ಯಾಪಾರ ವಹಿವಾಟು ನಡೆಸುತ್ತಿದೆ. ಚರಂಡಿ ನೀರಿನಲ್ಲಿ ಸೊಳ್ಳೆಗಳ ತಾಣವಾಗಿದೆ. ಇದರಿಂದ ಸುಲಭವಾಗಿ ಜನ ಮಾರಕ ರೋಗಗಳಿಗೆ ತುತ್ತಾಗುವ ಸಾಧ್ಯತೆಯಿದೆ. ಕೂಡಲೆ ಚರಂಡಿಯನ್ನು ಮುಚ್ಚಬೇಕು ಇಲ್ಲದಿದ್ದರೆ ವಿದ್ಯಾವಿಕಾಸ ಶಾಲೆ ಮುಂಭಾಗ ರಸ್ತೆ ತಡೆ ನಡೆಸಲಾಗುವುದೆಂದು ವಂದೇ ಮಾತರಂ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಎಚ್ಚರಿಸಿದರು.
ವಂದೇಮಾತರಂ ಜಾಗೃತಿ ವೇದಿಕೆ ನಗರಾಧ್ಯಕ್ಷ ತಿಪ್ಪೇಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ವೀಣಗೌರಣ್ಣ, ಮಂಜುನಾಥ್ ಸೇರಿದಂತೆ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.