ಚಿಕ್ಕನಾಯಕನಹಳ್ಳಿ
ಸಂಸದನಾಗಿ ಆಯ್ಕೆಯಾದಾಗಿನಿಂದಲೂ ಚಿ.ನಾ.ಹಳ್ಳಿ ತಾಲ್ಲೂಕಿಗೆ ಸಾಕಷ್ಟು ಯೋಜನೆಗಳನ್ನು ನೀಡಿದ್ದೇನೆ, ಮತ್ತೊಮ್ಮೆ ಸಂಸದನಾಗಿ ಆಯ್ಕೆಯಾದರೆ ಈಗ ನೀಡಿರುವ ಜಿಮ್ ಉಪಕರಣಗಳ ಸೌಲಭ್ಯದ ಜೊತೆಗೆ ಕ್ರೀಡಾಂಗಣದಲ್ಲೇ ಮಲ್ಟಿಜಿಮ್ ಮಾಡುತ್ತೇನೆ ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ಹೇಳಿದರು.
ಪಟ್ಟಣದ ತಾಲ್ಲೂಕು ಕ್ರೀಡಾಂಗಣಕ್ಕೆ ಸಂಸದ ಎಸ್.ಪಿ.ಮುದ್ದಹನುಮೇಗೌಡರ ಅನುದಾನದಲ್ಲಿ ಒದಗಿಸಲಾದ ಜಿಮ್ ಉಪಕರಣಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ತಾಲ್ಲೂಕು ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳಿಗಾಗಿ ಜಿಮ್ ಸೌಲಭ್ಯಕ್ಕಾಗಿ ಸಂಸದರ ಅನುದಾನದಲ್ಲಿ 5ಲಕ್ಷ ಹಣವನ್ನು ನೀಡಲಾಗಿದೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಮನವಿ ಮಾಡಿರುವಂತೆ ಅಲ್ಲಿಯೂ ಮಲ್ಟಿಜಿಮ್‍ಗೆ ನೆರವಾಗುತ್ತೇನೆ ಎಂದ ಅವರು, ಸಂಸದರ ವ್ಯಾಪ್ತಿಯ ಅನುದಾನವು ಒಂದು ಗ್ರಾ.ಪಂ.ಗೆ 7ರಿಂದ 9ಲಕ್ಷ ಅನುದಾನ ಮಾತ್ರ ನೀಡಬಹುದು, ನನ್ನ ವ್ಯಾಪ್ತಿಯಲ್ಲಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಗಳು ಬರಲಿದ್ದು ಕೇಂದ್ರ ಸರ್ಕಾರ ನೀಡಿರುವ ಪರಿಮಿತಿಯೊಳಗೆ ಅನುದಾನ ನೀಡುತ್ತಿದ್ದೇನೆ ಎಂದ ಅವರು, ಸಂಸದನಾದಾಗಿನಿಂದಲೂ ತುಮಕೂರು ಜಿಲ್ಲೆಗೆ ಹೊಸ ಯೋಜನೆಗಳನ್ನು ತಂದು ಜಿಲ್ಲೆಯ ಜನತೆಗೆ ಅನುಕೂಲವಾಗುವ ರೀತಿ ಸ್ಪಂದಿಸುತ್ತಿದ್ದೆನೆ, ಈಗಾಗಲೇ ಜಿಲ್ಲೆಯಲ್ಲಿ ಕೊಬ್ಬರಿ ಬೆಂಬಲ ಬೆಲೆ ಹೆಚ್ಚಿಸಲು, ಮೇಕೆದಾಟು, ಕಾವೇರಿ, ಮಹದಾಯಿ ಹಾಗೂ ರೈತರ ಆತ್ಮಹತ್ಯೆ ಬಗ್ಗೆ ಸಂಸತ್‍ನಲ್ಲಿ ರಾಜ್ಯ, ಜಿಲ್ಲೆಯ ಬಗ್ಗೆ ಧ್ವನಿ ನೀಡಿದ್ದೇನೆ, ಜಿಲ್ಲೆಯ ಹೆಚ್.ಎಂ.ಟಿ ಜಮೀನಿನ ಜಾಗವನ್ನು ಯಾವುದೇ ಖಾಸಗಿ ವ್ಯಕ್ತಿಗೆ ನೀಡದೆ ಕೇಂದ್ರ ಸರ್ಕಾರವೇ ಉಪಯೋಗಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದರಿಂದ ಇಸ್ರೋ ಕಂಪನಿಯು ತನ್ನ ಉತ್ಪಾದನಾ ಕಾರ್ಖಾನೆಯನ್ನು ತುಮಕೂರಿನಲ್ಲಿ ಸ್ಥಾಪಿಸುತ್ತಿದೆ ಎಂದರು.
ತುಮಕೂರಿನಲ್ಲಿ ಇಸ್ರೋ ಕಂಪನಿ ಆರಂಭವಾಗುತ್ತಿರುವುದರಿಂದ ಜಿಲ್ಲೆಯ ಸುಮಾರು 5ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಲಿದೆ, ಸಂಸದನಾದ ನಂತರ ಜಿಲ್ಲೆಯ ರಸ್ತೆ ಅಭಿವೃದ್ದಿಗಾಗಿ 4ಸಾವಿರ ಕೋಟಿ ರೂಪಾಯಿ ರಾಷ್ಟ್ರೀಯ ಹೆದ್ದಾರಿಗಳಿಗೆ ಅನುದಾನ ತಂದಿದ್ದೇನೆ, ತುಮಕೂರು-ಕಿಬ್ಬನಹಳ್ಳಿ-ಚಿಕ್ಕನಾಯಕನಹಳ್ಳಿ-ಹುಳಿಯಾರು ನಾಲ್ಕು ಪಥದ ರಸ್ತೆಗೆ ಚಾಲನೆ ನೀಡಲಾಗಿದೆ, ಪಾಸ್‍ಪೋರ್ಟ್ ಕೇಂದ್ರ ತುಮಕೂರಿನಲ್ಲಿ ತೆರೆಯಲಾಗಿದ್ದು ಈಗಾಗಲೇ 16ಸಾವಿರ ಜನರು ಪಾಸ್‍ಪೋರ್ಟ್ ಪಡೆದಿದ್ದಾರೆ ಎಂದು ತಿಳಿಸಿದರು.
ನಾಗಕುಮಾರ್ ಚೌಕಿಮಠ್ ಮಾತನಾಡಿ, ತಾಲ್ಲೂಕು ಕ್ರೀಡಾಂಗಣದಲ್ಲಿ ಮಹಿಳೆಯರಿಗೆ ಅನುಕೂಲವಾಗಲು ಶೌಚಾಲಯದ ಅಗತ್ಯವಿದೆ, ಕ್ರೀಡಾಪಟುಗಳಿಗೆ ತರಬೇತುದಾರರು ಹಾಗೂ ಕ್ರೀಡಾಂಗಣಕ್ಕೆ ಉತ್ತಮ ಟ್ರಾಕ್ ಅವಶ್ಯಕತೆಯಿದ್ದು ಸಂಸದರು ಈ ಬಗ್ಗೆ ಗಮನ ಹರಿಸಿ ಕ್ರೀಡಾಪಟುಗಳಿಗೆ ಅನುಕೂಲವಾಗುವ ರೀತಿ ಸೌಲಭ್ಯ ದೊರಕಿಸಿಕೊಡುವಂತೆ ಮನವಿ ಮಾಡಿದರು.
ನೂತನ ಜಿಮ್‍ನಲ್ಲಿರುವ ಸೌಲಭ್ಯಗಳು : ಸ್ಮಿತ್‍ಮೆಷಿನ್, ಬೆಂಚ್‍ಪ್ರೆಸ್, ಲೆಗ್‍ಪ್ರೆಸ್, ಕೇಬಲ್ ಕ್ರಾಸ್ ಓವರ್, ಹೈಪರ್ ಎಕ್ಸಟೆಂನ್ಷನ್, ಲೇಟ್‍ಪುಲ್‍ಡೌನ್, ಎಬಿ ಕ್ರನ್ಚ್, ಡಂಬಲ್ಸ್, ಪ್ಲೇಟ್ಸ್, ರೂಡ್ಸ್ ಸಲಕರಣೆಗಳು ಸಂಸದರ ಅನುದಾನದಲ್ಲಿ ತಾಲ್ಲೂಕು ಕ್ರೀಡಾಂಗಣಕ್ಕೆ ಬಂದಿವೆ.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ವೈ.ಸಿ.ಸಿದ್ದರಾಮಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು, ಉಪನ್ಯಾಸಕ ಶೈಲೇಂದ್ರಕುಮಾರ್, ಗೌಸ್, ಮಹಮದ್‍ಹುಸೇನ್, ಮಾಜಿ ಪುರಸಭಾಧ್ಯಕ್ಷ ಸಿ.ಡಿ.ಚಂದ್ರಶೇಖರ್, ಕಾಂಗ್ರೆಸ್ ಮುಖಂಡರಾದ ಕೆ.ಜಿ.ಕೃಷ್ಣೆಗೌಡ, ಬ್ರಹ್ಮಾನಂದ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
