ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಸಜ್ಜು

ಚಿತ್ರದುರ್ಗ

        ಚಿತ್ರದುರ್ಗ ಲೋಕಸಭಾ ಕ್ಷೇತ್ರ ಚುನಾವಣೆಗಾಗಿ ಇದೇ ಮಾ. 19 ರಂದು ಅಧಿಸೂಚನೆ ಪ್ರಕಟವಾಗಲಿದ್ದು, ಕ್ಷೇತ್ರದಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ಕೈಗೊಳ್ಳಲು ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಹೇಳಿದರು.

       ಚುನಾವಣಾ ಆಯೋಗ ಈಗಾಗಲೆ ವೇಳಾಪಟ್ಟಿ ಪ್ರಕಟಿಸಿದ್ದು, ತಕ್ಷಣದಿಂದಲೇ ನೀತಿ ಸಂಹಿತೆ ಜಿಲ್ಲೆಯಾದ್ಯಂತ ಜಾರಿಗೆ ಬಂದಿದೆ. ಆದರೆ ಬರ ಪರಿಹಾರ ಹಾಗೂ ತುರ್ತು ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಳ್ಳಲು ನೀತಿ ಸಂಹಿತೆಯ ಅಡ್ಡಿಯಿಲ್ಲ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

         ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೊಳಕಾಲ್ಮೂರು, ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ, ತುಮಕೂರು ಜಿಲ್ಲೆಯ ಸಿರಾ ಹಾಗೂ ಪಾವಗಡ ಕ್ಷೇತ್ರಗಳು ಸೇರಿದಂತೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಬರಲಿದ್ದು, ಕ್ಷೇತ್ರವು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದೆ ಎಂದರು.

ವೇಳಾಪಟ್ಟಿ 

         ಚುನಾವಣಾ ಆಯೋಗ ಪ್ರಕಟಿಸಿರುವ ವೇಳಾಪಟ್ಟಿಯನ್ವಯ ಚಿತ್ರದುರ್ಗ ಕ್ಷೇತ್ರದ ಲೋಕಸಭೆ ಚುನಾವಣೆಗೆ ಮಾ. 19 ರಂದು ಅಧಿಸೂಚನೆ ಪ್ರಕಟಿಸಲಾಗುವುದು. ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ನಾಮಪತ್ರ ಸಲ್ಲಿಕೆಗೆ ಮಾ. 26 ಕೊನೆಯ ದಿನವಾಗಿರುತ್ತದೆ. ಮಾ. 27 ರಂದು ನಾಮಪತ್ರಗಳ ಪರಿಶೀಲನೆ ನಡೆಸಲಾಗುವುದು. ಉಮೇದುವಾರಿಕೆ ಹಿಂಪಡೆಯಲು ಮಾ. 29 ಕೊನೆಯ ದಿನವಾಗಿರುತ್ತದೆ. ಮತದಾನ ಏ. 18 ರಂದು ನಡೆಯಲಿದ್ದು ಮತಗಳ ಎಣಿಕೆ ಕಾರ್ಯ ಮೇ. 23 ರಂದು ಜರುಗಲಿದೆ. ಚುನಾವಣಾ ಪ್ರಕ್ರಿಯೆಯನ್ನು ಮೇ. 27 ರ ಒಳಗಾಗಿ ಪೂರ್ಣಗೊಳಿಸಬೇಕಿದೆ ಎಂದರು.

ಮತದಾರರ ಸಂಖ್ಯೆ :

        ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಂತೆ 2166 ಮತಗಟ್ಟೆಗಳಿದ್ದು, ಪುರುಷ- 884150, ಮಹಿಳೆ-863735, ಒಟ್ಟು 1747885 ಮತದಾರರಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ 1653 ಮತಗಟ್ಟೆಗಳು, ಪುರುಷ-674513, ಮಹಿಳೆ-664735, ಒಟ್ಟು- 1339248 ಮತದಾರರು ಇದ್ದಾರೆ. ಮೊಳಕಾಲ್ಮೂರು ಕ್ಷೇತ್ರದಲ್ಲಿ 288 ಮತಗಟ್ಟೆಗಳು, ಪುರುಷ- 116709, ಮಹಿಳೆ-113851, ಒಟ್ಟು-230560 ಮತದಾರರು. ಚಳ್ಳಕೆರೆ- 259 ಮತಗಟ್ಟೆಗಳು, ಪುರುಷ- 105348, ಮಹಿಳೆ-104466, ಒಟ್ಟು-209814 ಮತದಾರರು. ಚಿತ್ರದುರ್ಗ- 283 ಮತಗಟ್ಟೆಗಳು, ಪುರುಷ- 125202, ಮಹಿಳೆ-126110, ಒಟ್ಟು-251312 ಮತದಾರರು. ಹಿರಿಯೂರು- 285 ಮತಗಟ್ಟೆಗಳು, ಪುರುಷ- 116730, ಮಹಿಳೆ-117045, ಒಟ್ಟು-233775 ಮತದಾರರು. ಹೊಸದುರ್ಗ- 240 ಮತಗಟ್ಟೆಗಳು, ಪುರುಷ- 95739, ಮಹಿಳೆ-91915, ಒಟ್ಟು-187654 ಮತದಾರರು. ಹೊಳಲ್ಕೆರೆ ಕ್ಷೇತ್ರದಲ್ಲಿ 298 ಮತಗಟ್ಟೆಗಳು, ಪುರುಷ- 114785, ಮಹಿಳೆ-111348, ಒಟ್ಟು-226133 ಮತದಾರರು. ತುಮಕೂರು ಜಿಲ್ಲೆಯ ಸಿರಾ ವಿಧಾನಸಭಾ ಕ್ಷೇತ್ರದಲ್ಲಿ ಪುರುಷ- 108727, ಮಹಿಳೆ- 103114, ಒಟ್ಟು- 211841 ಮತದಾರರು. ಪಾವಗಡ ಕ್ಷೇತ್ರದಲ್ಲಿ ಪುರುಷ-100910, ಮಹಿಳೆ-95886, ಒಟ್ಟು 196796 ಮತದಾರರಿದ್ದಾರೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನದವರೆಗೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಮಾತ್ರ ಅವಕಾಶವಿದ್ದು, ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಅರ್ಜಿ ಸ್ವೀಕರಿಸುವುದಿಲ್ಲ ಎಂದು ವಿವರ ನೀಡಿದರು.

2973 ಮತಯಂತ್ರಗಳು :

          ಲೋಕಸಭಾ ಚುನಾವಣೆಯನ್ನು ಸಮರ್ಪಕವಾಗಿ ಜರುಗಿಸಲು ಜಿಲ್ಲೆಯಲ್ಲಿ ಈಗಾಗಲೆ ವಿದ್ಯುನ್ಮಾನ ಮತಯಂತ್ರಗಳನ್ನು ಸಜ್ಜುಗೊಳಿಸಲಾಗಿದ್ದು, ಇದಕ್ಕಾಗಿ ಜಿಲ್ಲೆಯಲ್ಲಿ ಈಗಾಗಲೆ 2973 ಬ್ಯಾಲೆಟ್ ಯುನಿಟ್, 2109 ಕಂಟ್ರೋಲ್ ಯುನಿಟ್ ಹಾಗೂ ಮತದಾನವನ್ನು ಖಾತ್ರಿಪಡಿಸಿಕೊಳ್ಳಲು ನೂತನವಾಗಿ ಬಳಕೆಗೆ ತರಲಾಗಿರುವ ವಿವಿ ಪ್ಯಾಟ್‍ನ 2213 ಯಂತ್ರಗಳನ್ನು ಸಜ್ಜುಗೊಳಿಸಲಾಗಿದೆ. ಲೋಕಸಭಾ ಚುನಾವಣೆಗೆ ಒಟ್ಟು 7910 ಚುನಾವಣಾ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದೆ ಎಂದರು.

ತಂಡಗಳ ರಚನೆ :

         ಲೋಕಸಭೆ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಜರುಗಿಸಲು ಅಗತ್ಯ ತಂಡಗಳನ್ನು ರಚಿಸಲಾಗಿದ್ದು, ಅಧಿಕಾರಿಗಳನ್ನು ನೇಮಿಸಲಾಗಿದೆ. ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ, ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿಗೆ ನಿಗಾ ವಹಿಸಲು 06 ಎಂಸಿಸಿ ತಂಡಗಳನ್ನು ರಚಿಸಲಾಗಿದೆ. ಜಿಲ್ಲೆಯಲ್ಲಿ ಯಾವುದೇ ಚುನಾವಣಾ ಅಕ್ರಮ ಚಟುವಟಿಕೆ ಬಗ್ಗೆ ನಿಗಾ ವಹಿಸಲು ಹಾಗೂ ತಪಾಸಣೆಗಾಗಿ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಒಟ್ಟು 40 ಚೆಕ್‍ಪೋಸ್ಟ್ ಗಳನ್ನು ಸ್ಥಾಪಿಸಲಾಗುತ್ತಿದ್ದು, ಚೆಕ್‍ಪೋಸ್ಟ್‍ಗಳು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿದೆ.

          ಅಧಿಕಾರಿ, ಸಿಬ್ಬಂದಿಗಳಿಗೆ ಸರದಿಯನುಸಾರ ಚೆಕ್‍ಪೋಸ್ಟ್‍ಗಳಲ್ಲಿ ಕಾರ್ಯ ನಿರ್ವಹಿಸುವರು. ಅಕ್ರಮಗಳನ್ನು ತಡೆಗಟ್ಟಲು ಜಿಲ್ಲೆಯಲ್ಲಿ ಒಟ್ಟು 25 ಫ್ಲೈಯಿಂಗ್ ಸ್ಕ್ವಾಡ್‍ಗಳನ್ನು ರಚಿಸಲಾಗಿದ್ದು, ಇದರ ಜೊತೆಗೆ 06 ವಿಡಿಯೋ ಸರ್ವೆಲೆನ್ಸ್ ತಂಡ, 06- ವಿಡಿಯೋ ವೀಕ್ಷಣೆ ತಂಡ, 06- ಅಕೌಂಟಿಂಗ್ ತಂಡ, 06- ಸಹಾಯಕ ವೆಚ್ಚ ವೀಕ್ಷಕರ ತಂಡವನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಚುನಾವಣೆ ಕುರಿತು ಮಾಹಿತಿ ನೀಡಿದರು.ಜಿಲ್ಲಾ ರಕ್ಷಣಾಧಿಕಾರಿ ಡಾ. ಅರುಣ್, ಅಪರ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap