ಬ್ಯಾಡಗಿ
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡ ಮೇಲೆ ಮತದಾನ ಮಾಡುವ ಮೂಲಕ ನಮ್ಮ ಜವಾಬ್ದಾರಿಗಳನ್ನು ಪೂರೈಸಬೇಕು, ಇದರಿಂದ ವಂಚಿತರಾಗುವುದು ಆತ್ಮವಂಚನೆಗೆ ಸಮನಾದ ಕೆಲಸವೆಂದು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೋ.ಎಸ್.ಚಂದ್ರಕುಮಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಮತದಾನ ಪ್ರಜಾಪ್ರಭುತ್ವದಲ್ಲಿ ಮತದಾರನೇ ಅಂತಿಮ ತೀರ್ಪು ನೀಡಲಿದ್ದಾನೆ, ಇಂತಹ ಪ್ರಬಲವಾದ ಅಸ್ತ್ರವನ್ನು ಕೈಯಲ್ಲಿಟ್ಟುಕೊಂಡಾಗಲೂ ಬೇಜವಾಬ್ದಾರಿ ಪ್ರದರ್ಶಿಸುವ ನಮ್ಮ ಯುವಕರು ಮತಗಟ್ಟೆಗಳಿಂದ ದೂರ ಉಳಿಯುತ್ತಿರುವುದು ವಿಪರ್ಯಾಸದ ಸಂಗತಿ ಎಂದರು.
ಯುವಕರೇ ಹೆಚ್ಚು: ತಮಗೆ ಬೇಕಾದ ಅಭ್ಯರ್ಥಿಗಳನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ತಮ್ಮಲ್ಲಿ ಉಳಿದಿರುವ ಏಕೈಕ ಅಸ್ತ್ರವೆಂದರೆ ಕಡ್ಡಾಯ ಮತದಾನ, ಆದರೆ ಅದರಿಂದ ದೂರ ಉಳಿಯುತ್ತಿರುವವರಲ್ಲಿ ಯುವಕರ ಸಂಖ್ಯೆ ಹೆಚ್ಚಾಗಿರುವುದು ಇದು ಇನ್ನಷ್ಟು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು. ಚುನಾವಣಾ ಆಯೋಗವು ಮತದಾನದ ಸಂಖ್ಯೆ ಹೆಚ್ಚಿಸಲು ಹಲವು ಪ್ರಯತ್ನ ಮಾಡುತ್ತಿದ್ದರೂ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ ನಗರಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿರುವ ಮತದಾರರಿಗೆ ಮತ ಚಲಾಯಿಸಲು ಆಸಕ್ತಿ ಜಾಸ್ತಿ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿರುವ ಯುವಕರು ಯಾವುದೇ ಕಾರಣಕ್ಕೂ ಮತದಾನದಿಂದ ದೂರ ಉಳಿಯದಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮಹಾವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಂಗವಾಗಿ ಪ್ರತಿಜ್ಞಾವಿಧಿ ಭೋದಿಸಲಾಯಿತು. ಪ್ರಾಚಾರ್ಯ ಡಾ.ಎಚ್.ಎನ್.ಸುರೇಶ ಅಧ್ಯಕ್ಷತೆ ವಹಿಸಿದ್ದರು, ಡಾ.ಎನ್.ಎನ್.ಅರಬಗೊಂಡ, ಉಪನ್ಯಾಸಕರಾದ ಪ್ರೇಮ ಬಿನ್ನಾಳ, ಹೆಚ್.ಇ.ಸುನಿತಾ ಬಿ.ಎಸ್.ಚಿಕ್ಕಣ್ಣ ಜೆ.ರಕ್ಷಿತಾ ಬಿ.ಚೇತನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಬಿ.ಲಿಂಗರಾಜ ಸ್ವಾಗತಿಸಿದರು, ಆರ್.ಕೆ.ಮಾಲತೇಶ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ