ಕುಖ್ಯಾತ ರೌಡಿ ಸಂಜಯ್ ಬಂಧನ..!

ಬೆಂಗಳೂರು

    ಗಿರಿನಗರ ಹಾಗೂ ಅಮೃತಹಳ್ಳಿ ಬಳಿ ಕಾರ್ಯಾಚರಣೆ ನಡೆಸಿರುವ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ಪೊಲೀಸರು ದರೋಡೆಗೆ ಸಂಚು ರೂಪಿಸುತ್ತಿದ್ದ ಕುಖ್ಯಾತ ರೌಡಿ ಸಂಜಯ್ ಹಾಗೂ ಆತನ ನಾಲ್ವರು ಸಹಚರರು ಹಾಗೂ ರೌಡಿ ಪ್ರವೀಣ್ ಅಲಿಯಾಸ್ ವಿಕ್ಕಿ ಸೇರಿ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

     ಗಿರಿನಗರದ ವಿವೇಕಾನಂದ ಪಾರ್ಕ್ ಬಳಿಯ ಯೋಗಾ ಟ್ರೈನಿಂಗ್ ಸೆಂಟರ್ ಮುಂಭಾಗದ ರಸ್ತೆ ಬಳಿ ಬುಧವಾರ ರಾತ್ರಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ದರೋಡೆಗೆ ಸಂಚು ರೂಪಿಸಿದ್ದ ಕಾಮಾಕ್ಷಿಪಾಳ್ಯದ ರೌಡಿ ಸಂಜಯ್ ಅಲಿಯಾಸ್ ಸಂಜು (25) ಹಾಗೂ ಆತನ ಸಹಚರರಾದ ಶ್ರೀನಿವಾಸನಗರದ ಚಂದನ್ ಅಲಿಯಾಸ್ ಸಣ್ಣ (23), ಆವಲಹಳ್ಳಿಯ ನಂದೀಶ್ (21), ಹೊಸಕೆರೆಹಳ್ಳಿಯ ಸುಭಾಷ್ (21), ಎಸ್‌ಬಿಎಂ ಕಾಲೋನಿಯ ಕಿರಣ್ (28)ನನ್ನು ಬಂಧಿಸಲಾಗಿದೆ.

     ಅಮೃತಹಳ್ಳಿಯ ಲುಂಬಿನಿ ಗಾರ್ಡನ್‌ನಲ್ಲಿಯ ಸರ್ವೀಸ್ ರಸ್ತೆಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ವಾಹನ ಸವಾರರನ್ನು ಅಡ್ಡಗಟ್ಟಿ ದರೋಡೆಗೆ ಸಂಚು ರೂಪಿಸಿದ್ದ ರೌಡಿ ವಿವೇಕನಗರದ ಪ್ರವೀಣ್ ಅಲಿಯಾಸ್ ವಿಕ್ಕಿ (26), ಜಕ್ಕೂರಿನ ಮಲ್ಲಿಕಾರ್ಜುನ ಅಲಿಯಾಸ್ ಆರ್‌ಎಕ್ಸ್ (25), ಮಂಜುನಾಥ್ ಅಲಿಯಾಸ್ ಕಾರದಪುಡಿ ಮಂಜ (26), ಗಂಗಾಧರ ಅಲಿಯಾಸ್ ಬಿಳಿಗಂಗಾಧರ್ (28), ಅಮೃತಹಳ್ಳಿಯ ಮಂಜೇಶ್ ಅಲಿಯಾಸ್ ಮಂಜ (26)ನನ್ನು ಬಂಧಿಸಲಾಗಿದೆ.

      ರೌಡಿ ಸಂಜಯ್ ಅಲಿಯಾಸ್ ಸಂಜು ಸಹಚರರಿಂದ ಮಚ್ಚು, ಲಾಂಗ್, ಆಟೋ, ಕಾರದಪುಡಿ ಪೊಟ್ಟಣವನ್ನು ವಶಪಡಿಸಿಕೊಂಡು ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

       ಬಂಧಿತ ರೌಡಿ ಸಂಜಯ್, ವಿಜಯನಗರ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿದ್ದು, ರಾಜಗೋಪಾಲನಗರದಲ್ಲಿ ದಿಲೀಪ್ ಎಂಬುವವನ ಕೊಲೆಗೈದ ಬಗ್ಗೆ ಪ್ರಕರಣ ದಾಖಲಾಗಿದೆ.ಕುಣಿಗಲ್, ವಿಜಯನಗರ, ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಗಳಲ್ಲಿ ಕೊಲೆಯತ್ನ, ರಾಜರಾಜೇಶ್ವರಿನಗರದಲ್ಲಿ ದರೋಡೆ ಕೃತ್ಯಗಳು ಸಂಜಯ್ ವಿರುದ್ಧ ದಾಖಲಾಗಿದ್ದು, ಆರ್‌ಎಂಸಿಯ ಪೊಲೀಸ್ ಠಾಣೆಯಲ್ಲಿ ನಡೆದಿದ್ದ ಕೊಲೆಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ. ಮತ್ತೊಬ್ಬ ಆರೋಪಿ ಚಂದನ್, ಹನುಮಂತನಗರ ಠಾಣೆಯ ಕೊಲೆಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ.

      ಮತ್ತೊಬ್ಬ ಆರೋಪಿ ಸುಭಾಷ್, ಆರ್‌ಎಂಸಿ ಯಾರ್ಡ್‌ನಲ್ಲಿ ನಡೆದಿದ್ದ ಕೊಲೆಯತ್ನ ಕೇಸ್‌ನಲ್ಲಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಶೋಧ ನಡೆಸಲಾಗಿತ್ತು. ಸಂಜಯ್ ಜೊತೆ ನಾಲ್ವರು, ಒಂಟಿಯಾಗಿ ಓಡಾಡುವವರನ್ನು ಹಾಗೂ ವಾಹನ ಸವಾರರನ್ನು ಅಡ್ಡಗಟ್ಟಿ ಬೆದರಿಸಿ ದರೋಡೆಗೆ ಯತ್ನಿಸುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link