ತುಮಕೂರು:
ರಾಷ್ಟ್ರದ ಗಮನ ಸೆಳೆದಿರುವ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಮತ್ತು ಬಿಜೆಪಿ ಅಭ್ಯರ್ಥಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಕಣದಲ್ಲಿ 15 ಅಭ್ಯರ್ಥಿಗಳು ಇರುವರಾದರೂ ಇಬ್ಬರು ಘಟಾನುಘಟಿಗಳ ಮುಂದೆ ಅವರೆಲ್ಲರೂ ಗೌಣ ಎನ್ನುವಂತಾಗಿದೆ.
ದೇವೇಗೌಡರು ಸ್ಪರ್ಧಿಸಿರುವ ಕಾರಣ ಈ ಕ್ಷೇತ್ರ ಹೆಚ್ಚು ಮಹತ್ವ ಪಡೆದುಕೊಂಡಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ದೇವೇಗೌಡರು ಯಾವ ಮತಬುಟ್ಟಿಗಳಿಗೆ ಕೈ ಹಾಕುತ್ತಾರೆ ಎಂಬುದು ದಿನದಿನದ ಕುತೂಹಲವಾಗಿದೆ. ಜಿಲ್ಲೆಯಲ್ಲಿ ಪ್ರಬಲ ಜಾತಿಯಾಗಿರುವ ಒಕ್ಕಲಿಗ ಸಮುದಾಯ ಬಹುತೇಕ ದೇವೇಗೌಡರನ್ನು ಬೆಂಬಲಿಸುವ ಸಾಧ್ಯತೆಗಳಿದ್ದು, ನಿರ್ಣಾಯಕ ಮತಗಳತ್ತ ಹುಡುಕಾಟ ನಡೆದಿದೆ.
1991 ರಲ್ಲಿ ಸಂಸತ್ ಪ್ರವೇಶಿಸಿದ ಹರದನಹಳ್ಳಿ ದೊಡ್ಡೇಗೌಡ ದೇವೇಗೌಡರು 1996 ರಲ್ಲಿ ಭಾರತದ 11ನೇ ಪ್ರಧಾನಿಯಾದ ಹೆಗ್ಗಳಿಕೆ ಹೊಂದಿದ್ದಾರೆ. ಯಾವ ಪಕ್ಷವೂ ಸ್ಪಷ್ಟ ಬಹುಮತ ಪಡೆಯದ ಹಿನ್ನೆಲೆಯಲ್ಲಿ ದೇವೇಗೌಡರಿಗೆ ಅಂದು ಅನಿರೀಕ್ಷಿತ ಪ್ರಧಾನಿ ಪಟ್ಟ ದೊರೆಯಿತು. ತೃತೀಯ ರಂಗದ ಮುಖಂಡರಾಗಿ ಹೊರಹೊಮ್ಮಿದರು. ಮೊಮ್ಮಕ್ಕಳಿಗೆ ಸ್ವಕ್ಷೇತ್ರ ಹಾಸನ ಬಿಟ್ಟುಕೊಟ್ಟು ತುಮಕೂರನ್ನು ಆರಿಸಿಕೊಂಡ ದೇವೇಗೌಡರು ತಮ್ಮ ರಾಜಕೀಯ ಜೀವನದ ಕೊನೆಯ ಆಟವನ್ನು ಇಲ್ಲಿ ಪ್ರತಿಷ್ಠೆಗೆ ಒಡ್ಡಿದ್ದಾರೆ.
ಜಿ.ಎಸ್.ಬಸವರಾಜು ಮೂಲತಃ ಕಾಂಗ್ರೆಸ್ಸಿಗರು. 1984, 1989, 1999 ರಲ್ಲಿ ತುಮಕೂರು ಕ್ಷೇತ್ರದಿಂದ ಕಾಂಗ್ರೆಸ್ ಪ್ರತಿನಿಧಿಯಾಗಿ ಲೋಕಸಭೆ ಪ್ರವೇಶಿಸಿದ್ದಾರೆ. 2009 ರಲ್ಲಿ ಬಿಜೆಪಿ ಪ್ರತಿನಿಧಿಯಾಗಿ ಆಯ್ಕೆಯಾದರು. ನಾಲ್ಕು ಬಾರಿ ಲೋಕಸಭೆ ಪ್ರವೇಶಿಸಿದ ಹಿರಿಯ ರಾಜಕಾರಣಿ. ತುಮಕೂರು ಜಿಲ್ಲೆಯಲ್ಲಿ ತನ್ನದೇ ಆದ ಮತಬ್ಯಾಂಕ್ ಹೊಂದಿದ್ದಾರೆ. ಜಿಲ್ಲೆಯ ಮತ್ತೊಂದು ಪ್ರಮುಖ ಬಲಾಢ್ಯ ಜಾತಿಯಾಗಿರುವ ಲಿಂಗಾಯತ ಸಮುದಾಯದ ಮತಗಳ ಜೊತೆಗೆ ಇತರೆ ಮತಗಳನ್ನು ಸೆಳೆಯಲು ಸಾಹಸ ಪಡುತ್ತಿದ್ದಾರೆ. ಕ್ಷೇತ್ರದ ಈ ಹಿಂದಿನ 16 ಲೋಕಸಭಾ ಚುನಾವಣೆಗಳನ್ನು ಅವಲೋಕಿಸಿದರೆ ಲಿಂಗಾಯತರು ಮತ್ತು ಒಕ್ಕಲಿಗರೇ ಹೆಚ್ಚು ಬಾರಿ ಲೋಕಸಭೆ ಪ್ರವೇಶಿಸಿದ್ದಾರೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ಹಿನ್ನೆಲೆಯಲ್ಲಿ ತುಮಕೂರು ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಕ್ಕಲಿಗರು ಬಹುಪಾಲು ದೇವೇಗೌಡರಿಗೆ ಮಣೆಹಾಕುವ ಸಾಧ್ಯತೆಗಳೇ ಹೆಚ್ಚು. ಮಾಜಿ ಪ್ರಧಾನಿ ಎಂಬ ಹೆಗ್ಗಳಿಕೆ ಇದರ ಜೊತೆ ಸೇರ್ಪಡೆಯಾಗಲಿದೆ. ಲೋಕಸಭಾ ಕ್ಷೇತ್ರದಲ್ಲಿ ಪ್ರಥಮ ಸ್ಥಾನದಲ್ಲಿರುವ ಈ ಸಮುದಾಯದ ಬಹುಪಾಲು ಮತಗಳ ಜೊತೆಗೆ ಇತರೆ ವರ್ಗಗಳ ಮತಗಳನ್ನು ಎಷ್ಟು ಕಸಿದುಕೊಳ್ಳುವರು ಎಂಬುದು ಈಗ ಶುರುವಾಗಿರುವ ಲೆಕ್ಕಾಚಾರ.
ಜಿ.ಎಸ್.ಬಸವರಾಜು ಅವರಿಗೆ ಲಿಂಗಾಯತ ಸಮುದಾಯದ ಬಹುಪಾಲು ಬೆಂಬಲ, ಜೊತೆಗೆ ಪಕ್ಷದ ಮತಗಳು ಮತ್ತು ಪ್ರಧಾನಿ ಮೋದಿಯ ಹೆಸರು ಕೆಲಸ ಮಾಡುವ ಸಾಧ್ಯತೆಗಳಿವೆ. ಒಕ್ಕಲಿಗ ಸಮುದಾಯದ ಮತಗಳು ಕ್ರೂಢೀಕರಣವಾದರೆ ನಮ್ಮ ಮತಗಳೇಕೆ ಕ್ರೂಢೀಕರಣವಾಗಬಾರದು ಎಂಬ ಜಾಗೃತಿ ಆ ಸಮುದಾಯ ವಲಯದಲ್ಲಿ ಕೇಳಿಬರುತ್ತಿದೆ.
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 15,94,703 ಮತದಾರರಿದ್ದಾರೆ. ಇದರಲ್ಲಿ ಅರ್ಧಭಾಗ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಸೇರಿದ್ದಾರೆ. ಈ ಮತಗಳಲ್ಲಿ ಹೆಚ್ಚು ಯಾರ ಪಾಲಾಗಲಿವೆ ಎಂಬುದು ಇನ್ನೂ ನಿಗೂಢ. ಈ ಮತಗಳನ್ನು ಕಸಿಯಲು ಎರಡೂ ಪಕ್ಷಗಳ ಅಭ್ಯರ್ಥಿಗಳು ತಿಣುಕಾಡುತ್ತಿದ್ದಾರೆ. ಅದಕ್ಕೆ ತಕ್ಕಂತ ಕಾರ್ಯ ಯೋಜನೆಗಳನ್ನು ಸಿದ್ಧಪಡಿಸುತ್ತಿದ್ದಾರೆ .
ಈ ಮತಗಳ ಜೊತೆಗೆ ಸಾರ್ವತ್ರಿಕವಾಗಿ ಕಂಡುಬರುವ ಒಂದಷ್ಟು ಮತಗಳಿವೆ. 20 ರಿಂದ 30 ವರ್ಷದ ಒಳಗಿರುವ ಯುವಜನತೆ ಮತ್ತು ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳದ ತಟಸ್ಥ ಮತದಾರರು. ಈ ಎರಡೂ ವರ್ಗ ಯಾರತ್ತ ವಾಲಲಿದೆ ಎಂಬುದು ಕುತೂಹಲಕರ. ಪ್ರತಿ ಚುನಾವಣೆಯಲ್ಲಿಯೂ ಎಲ್ಲರೂ ಹೇಳುವ ಅನುಭವದ ಮಾತೆಂದರೆ ಕೊನೆಯ ಎರಡು ದಿನಗಳ ಮತ ಬದಲಾವಣೆ. ಅಂದರೆ ಹಣಕ್ಕಾಗಿ ಮತ ಮಾರಿಕೊಳ್ಳುವ ಮಂದಿ. ಇದೂ ಸಹ ಪರಿಗಣಿಸಬೇಕಾದ ಅಂಶ.
ಹೆಚ್.ಡಿ.ದೇವೇಗೌಡರು ಮಾಜಿ ಪ್ರಧಾನಿ. ಜೆಡಿಎಸ್ ವರಿಷ್ಠರು, ಅನುಭವಿ ರಾಜಕಾರಣಿ, ಇದು ಅವರಿಗೆ ಕೊನೆಯ ಚುನಾವಣೆ. ಸೋಲಿಸಿದ ಅಪಕೀರ್ತಿಗೆ ಒಳಗಾಗಬಾರದು ಎಂಬ ಪೋಸ್ಟ್‍ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಆ ಪಕ್ಷಗಳ ಕಾರ್ಯಕರ್ತರು ಹರಿಯಬಿಟ್ಟಿದ್ದಾರೆ. ಐದು ವರ್ಷಗಳ ಬಿಜೆಪಿ ಆಡಳಿತದಲ್ಲಿ ನರೇಂದ್ರ ಮೋದಿ ಕೊಡುಗೆ ಏನೂ ಇಲ್ಲ. ಕೋಮುವಾದಿ ಪಕ್ಷವನ್ನು ದೂರವಿಡಲು ಮೈತ್ರಿ ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿಯೂ ಎರಡು ಪಕ್ಷಗಳು ಒಂದು ವರ್ಷದ ಆಡಳಿತ ನಡೆಸಿದ್ದೇವೆ. ಮುಂದೆಯೂ ಸ್ಥಿರ ಸರ್ಕಾರಕ್ಕೆ ಮೈತ್ರಿ ಅಭ್ಯರ್ಥಿ ಬೆಂಬಲಿಸಿ ಎನ್ನುವ ಹೇಳಿಕೆಗಳು ಮುಖಂಡರುಗಳಿಂದ ಹೊರಬರುತ್ತಿವೆ.
ಜಿಎಸ್.ಬಸವರಾಜು ಸ್ಥಳೀಯರು, ನಾಲ್ಕು ಬಾರಿ ಸಂಸದರಾಗಿ ಅನುಭವಿ ರಾಜಕಾರಣಿಯಾಗಿದ್ದಾರೆ. ಗೆದ್ದರೆ ಸಚಿವರಾಗುತ್ತಾರೆ. ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ, ಮತ್ತೊಮ್ಮೆ ನರೇಂದ್ರ ಮೋದಿಯನ್ನು ಪ್ರಧಾನಿಯಾಗಿ ನೋಡಬೇಕು. ಅದಕ್ಕಾಗಿ ಜಿ.ಎಸ್.ಬಿ. ಬೆಂಬಲಿಸಿ ಎನ್ನುವುದರಿಂದ ಹಿಡಿದು ಜಿಲ್ಲೆಗೆ ನೀರು ಹರಿಯಲು ಅಡ್ಡಿ ಮಾಡಿರುವ ದೇವೇಗೌಡರಿಗೆ ಮತ ಹಾಕಬೇಕೆ ಎಂದು ಪ್ರಶ್ನಿಸುವ ಪೋಸ್ಟ್‍ಗಳು ಬಿಜೆಪಿ ವಲಯದಿಂದ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ತುಮಕೂರು ಲೋಕಸಭಾ ಕ್ಷೇತ್ರದಲ್ಲಿನ ರಾಜಕೀಯ ಚಿತ್ರಣ ಗಮನಿಸಿದರೆ ಇಲ್ಲಿ ನಾಲ್ಕು ಮಂದಿ ಬಿಜೆಪಿ ಶಾಸಕರಿದ್ದಾರೆ. ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಇದ್ದು, ಒಂದರಲ್ಲಿ ಮಾತ್ರ ಕಾಂಗ್ರೆಸ್ ಅಸ್ತಿತ್ವವಿದೆ. ಮೈತ್ರಿ ಅಭ್ಯರ್ಥಿ ಇರುವ ಕಾರಣ ಕಾಂಗ್ರೆಸ್ ಮತ್ತು ಜೆಡಿಎಸ್ ಸಮಬಲದ ಸಂಖ್ಯೆ ಇದೆ. ಇದರ ಜೊತೆಗೆ ಇಬ್ಬರು ವಿಧಾನ ಪರಿಷತ್ ಸದಸ್ಯರಿದ್ದಾರೆ. ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಮಹಾನಗರ ಪಾಲಿಕೆ ಮೇಯರ್ ಜೆಡಿಎಸ್ ಪಕ್ಷದವರಾಗಿದ್ದು, ಜಿಲ್ಲೆಯಲ್ಲಿ ಜೆಡಿಎಸ್ ಹಿಡಿತವೇ ಎದ್ದು ಕಾಣುತ್ತಿದೆ. ಬಿಜೆಪಿಯ ನಾಲ್ಕು ಶಾಸಕರ ಜೊತೆಗೆ ಓರ್ವ ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಿದ್ದಾರೆ.
ತುಮಕೂರು ಮಹಾನಗರ ಪಾಲಿಕೆಯಲ್ಲಿ 35 ಕಾರ್ಪೋರೇಟರ್‍ಗಳಿದ್ದು, ಒಬ್ಬರು ಕೊಲೆಯಾದ ನಂತರ ಹಾಲಿ 34 ಸದಸ್ಯರಿದ್ದಾರೆ. ಮೇಯರ್ ಮತ್ತು ಉಪ ಮೇಯರ್ ಸ್ಥಾನವನ್ನು ಕ್ರಮವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಹಂಚಿಕೊಂಡಿದೆ. ಇನ್ನುಳಿದ 33 ಸದಸ್ಯರಲ್ಲಿ ಜೆಡಿಎಸ್ 9 ಹಾಗೂ ಕಾಂಗ್ರೆಸ್‍ನ 10 ಕಾರ್ಪೋರೇಟರ್‍ಗಳಿದ್ದರೆ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ ಕಾರ್ಪೋರೇಟರ್‍ಗಳ ಸಂಖ್ಯೆ 12. ಇಲ್ಲಿ ಅಧಿಕಾರ ಹಂಚಿಕೆಯ ಮೈತ್ರಿ, ಪ್ರಸ್ತುತ ರಾಜಕಾರಣದ ಮೈತ್ರಿ ಗಮನಿಸಿದರೆ ಹೆಚ್ಚಿನ ಸಂಖ್ಯೆಯ ಕಾರ್ಪೋರೇಟರ್‍ಗಳು ಜೆಡಿಎಸ್ ಮತ್ತು ಕಾಂಗ್ರೆಸ್‍ನವರೇ ಆಗಿದ್ದಾರೆ.
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ 1996 ರಲ್ಲಿ ಒಮ್ಮೆ ಹೊರತುಪಡಿಸಿದರೆ ಉಳಿದೆಲ್ಲ ಅವಧಿಯಲ್ಲಿ ಹೆಚ್ಚು ಬಾರಿ ಕಾಂಗ್ರೆಸ್ ಅಧಿಕಾರ ಹಿಡಿದಿದೆ. ಎರಡನೇ ಸ್ಥಾನದಲ್ಲಿ ಬಿಜೆಪಿ ಇರುವುದನ್ನು ಗಮನಿಸಬಹುದು. 2014 ರ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರಾದ್ಯಂತ ಬಿಜೆಪಿ ಅಲೆ ಇತ್ತು. ತುಮಕೂರು ಜಿಲ್ಲೆಯಲ್ಲಿಯೂ ಮೋದಿ ಹವಾ ಬಗ್ಗೆ ಹೇಳಲಾಗುತ್ತಿತ್ತು. ಆದರೂ ಕಾಂಗ್ರೆಸ್‍ನ ಮುದ್ದಹನುಮೇಗೌಡ ಅವರು ಬಿಜೆಪಿಯ ಜಿ.ಎಸ್.ಬಸವರಾಜು ಅವರನ್ನು ಸುಮಾರು 74 ಸಾವಿರ ಮತಗಳ ಅಂತರದಲ್ಲಿ ಸೋಲಿಸಿದ್ದರು. ಇದನ್ನರಿತೆ ಈಗಿನ ಪ್ರಚಾರದಲ್ಲಿ ನರೇಂದ್ರ ಮೋದಿ ಹೆಸರನ್ನು ಆ ಪಕ್ಷದ ಕಾರ್ಯಕರ್ತರು ಹೆಚ್ಚಾಗಿ ಬಳಸುತ್ತಿದ್ದಾರೆ. ಮೋದಿಯನ್ನು ಮನದಲ್ಲಿಟ್ಟುಕೊಂಡು ಮತ ಹಾಕಿ ಎನ್ನುತ್ತಿದ್ದಾರೆ.
ಕ್ಷೇತ್ರದಲ್ಲಿ 15 ಮಂದಿ ಸ್ಪರ್ಧೆಯಲ್ಲಿದ್ದರೂ ಮೈತ್ರಿ ಹಾಗೂ ಬಿಜೆಪಿ ಅಭ್ಯರ್ಥಿಗಳ ಮತ ಕಸಿಯುವಂತಹ ಅಭ್ಯರ್ಥಿಗಳ ಸಂಖ್ಯೆ ಹೇಳಿಕೊಳ್ಳುವಂತಹ ಪ್ರಮಾಣದಲ್ಲಿಲ್ಲ. ಆದರೂ ಕೆಲವೊಂದು ವರ್ಗಗಳ ಮತ ಹಂಚಿಕೆಯಾಗುವ ಸಾಧ್ಯತೆಗಳೂ ಇವೆ. ಇಲ್ಲಿ ಬಿಎಸ್‍ಪಿ, ಕಮ್ಯುನಿಷ್ಟ್ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಮೈತ್ರಿ ಹಾಗೂ ಬಿಜೆಪಿ ಪಕ್ಷಕ್ಕೆ ಮತ ಹಾಕಲು ಇಷ್ಟ ಇಲ್ಲದವರು ಯಾರಿಗೆ ಮತ ಹಾಕುತ್ತಾರೆ ಎಂಬುದಿಲ್ಲಿ ಗಮನಾರ್ಹ.
ಗೊಂದಲ: ಕೆಲವೊಂದು ಗೊಂದಲಗಳು ಕ್ಷೇತ್ರದಲ್ಲಿ ಇನ್ನೂ ಪರಿಹಾರವಾದಂತೆ ಕಂಡುಬರುತ್ತಿಲ್ಲ. ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಬೇಕೋ ಬೇಡವೋ ಎಂಬ ಜಿಜ್ಞಾಸೆಯಲ್ಲಿದ್ದ ಕೆಲವರಿಗೆ ಕಳೆದ ಎರಡು ಮೂರು ದಿನಗಳಿಂದ ಕೆಲವು ಮಾರ್ಗದರ್ಶನಗಳು ಸಿಗುತ್ತಿವೆ. ಅನಿವಾರ್ಯವಾಗಿ ಆ ಪಕ್ಷಕ್ಕೆ ಮತ ಹಾಕಲೇಬೇಕು ಎನ್ನುವ ಸಿದ್ಧಾಂತಕ್ಕೆ ಕೆಲವರು ಬಂದಂತಿದೆ. ಇನ್ನು ಕೆಲವರು ಗೊಂದಲದಲ್ಲೇ ಇದ್ದು ಯಾವ ಮಾರ್ಗ ಹಿಡಿಯುತ್ತಾರೆ ಎಂಬುದನ್ನು ಚುನಾವಣೆಯ ಹತ್ತಿರದ ದಿನಗಳಲ್ಲಿ ನೋಡಬೇಕು. ಸಿದ್ದರಾಮಯ್ಯನವರು ಪ್ರಮುಖ ಮೂರು ಕ್ಷೇತ್ರಗಳಲ್ಲಿ ಸಂಚರಿಸಿ ಹೋದ ನಂತರ ವಾತಾವರಣ ಸಾಕಷ್ಟು ಬದಲಾಗಿರುವುದು ಕಂಡುಬರುತ್ತಿದೆ.
ಜಿ.ಎಸ್.ಟಿ. ಪ್ರಭಾವವೇನು?:
ಮೋದಿ ಆಡಳಿತದಲ್ಲಿ ಹೆಚ್ಚು ಪ್ರಭಾವ ಬೀರಿದ್ದು ನೋಟು ಅಮಾನ್ಯೀಕರಣ ಮತ್ತು ಜಿ.ಎಸ್.ಟಿ. ಜಾರಿ. ಜಿ.ಎಸ್.ಟಿ. ನೀತಿಯ ಪರಿಣಾಮ ವರ್ತಕ ಹಾಗೂ ಕೈಗಾರಿಕಾ ವಲಯದ ಸಮೂಹ ತತ್ತರಿಸಿ ಹೋಯಿತು. ಅತಿ ಹೆಚ್ಚು ಸಂಕಟಕ್ಕೆ ಸಿಲುಕಿದವರು ಸಣ್ಣ ಉದ್ದಿಮೆದಾರರು. ಅದಷ್ಟೋ ಉತ್ಪಾದನಾ ಘಟಕಗಳು ಸ್ಥಗಿತಗೊಂಡವು. ನಿರುದ್ಯೋಗದ ಸಮಸ್ಯೆ ಹೆಚ್ಚಾಯಿತು. ಈ ಹೊಡೆತದಿಂದ ವರ್ತಕ ಮತ್ತು ಉದ್ದಿಮೆದಾರರ ವರ್ಗ ಇನ್ನೂ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಇವರೆಲ್ಲ ಸಾಂಪ್ರದಾಯಿಕವಾಗಿ ಮತ ಚಲಾವಣೆ ಮಾಡುತ್ತಾರೋ ಅಥವಾ ತಮಗಾದ ಹೊಡೆತದ ವಿರುದ್ಧ ತಿರುಗಿ ಬೀಳುತ್ತಾರೋ ಇದಾವುದೂ ಬಹಿರಂಗವಾಗಿ ಗೋಚರಿಸುತ್ತಿಲ್ಲ.
ಪ್ರಚಾರ:
ಚುನಾವಣೆಯ ದಿನ ಹತ್ತಿರ ಬಂದಂತೆ ಪ್ರಚಾರ ಈಗಷ್ಟೇ ತೀವ್ರತೆ ಪಡೆದುಕೊಳ್ಳುತ್ತಿದೆ. ತುಮಕೂರು ನಗರದಲ್ಲಿ ಒಂದು ವಾರದಿಂದಲೂ ಪತ್ರಿಕಾ ಗೋಷ್ಠಿಗಳು, ವಿವಿಧ ಸಮುದಾಯಗಳ ಪ್ರತಿನಿಧಿಗಳ ಸಭೆಗಳು ನಡೆಯುತ್ತಲೇ ಇವೆ. ಆದರೆ ಮತದಾರನನ್ನು ಮುಟ್ಟುವ, ಮನೆ ಮನೆ ತಲುಪುವ ಕೆಲಸ ಸಾಧ್ಯವಾಗುತ್ತಿಲ್ಲ. ಇರುವ ಕಡಿಮೆ ಅವಧಿಯಲ್ಲಿ ಬಡಾವಣೆಗಳನ್ನು ಸುತ್ತುವ ಕಾರ್ಯದಲ್ಲಿ ಸ್ಥಳೀಯ ಮುಖಂಡರು ನಿರತರಾಗಿದ್ದಾರೆ. ಇದು ತಾಲ್ಲೂಕು ಕೇಂದ್ರಗಳಿಗೂ ಅನ್ವಯಿಸುತ್ತದೆ.