ಡಿಸಿ ಕಚೇರಿ ಆವರಣದಲ್ಲಿ ಸಂಸದರ ಕಚೇರಿ ಉದ್ಘಾಟನೆ

ಬಳ್ಳಾರಿ
    ಜನರ ಜೀವನಾಡಿ ತುಂಗಾಭದ್ರಾ ಜಲಾಶಯದಲ್ಲಿ 33 ಟಿಎಂಸಿ ಹೂಳು ತುಂಬಿಕೊಂಡಿದ್ದು, ಅದನ್ನು ಎತ್ತುವುದಕ್ಕೆ ಸಂಬಂಧಿಸಿದಂತೆ ಕ್ರಮಕೈಗೊಳ್ಳಲಾಗುವುದು ಎಂದು ಬಳ್ಳಾರಿ ನೂತನ ಸಂಸದ ವೈ.ದೇವಿಂದ್ರಪ್ಪ ಅವರು ಹೇಳಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಂಸದರ ಕಚೇರಿ ಉದ್ಘಾಟಿಸಿ, ಪೂಜೆ ನೆರವೇರಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
 
     ತುಂಗಭದ್ರಾ ಜಲಾಶಯದಲ್ಲಿರುವ ಹೂಳೆತ್ತುವುದಕ್ಕೆ ಸಂಬಂಧಿಸಿದಂತೆ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಸಂಸದರೊಂದಿಗೆ ಚರ್ಚಿಸಲಾಗಿದ್ದು, ನಮ್ಮ ರಾಜ್ಯದ ಸಚಿವರ ಮೂಲಕ ಮಾನ್ಯ ಪ್ರಧಾನ ಮಂತ್ರಿಗಳ ಗಮನಕ್ಕೆ ತಂದು ಕ್ರಮವಹಿಸಲಾಗುವುದು. ಸದ್ಯದ ವರದಿಗಳು ಹೂಳೆತ್ತಲು ಆಗುವುದಿಲ್ಲ ಅಂತ ವರದಿ ನೀಡಿದಾಗಿಯೂ ಪರ್ಯಾಯ ಮಾರ್ಗಗಳನ್ನು ಹುಡುಕಿ ಕ್ರಮವಹಿಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
      ನನ್ನ ಮೇಲೆ ನಿರೀಕ್ಷೆ ಇಟ್ಟುಕೊಂಡು ಜಿಲ್ಲೆಯ ಜನರು ನನ್ನನ್ನು ಆಯ್ಕೆಮಾಡಿ ಕಳುಹಿಸಿದ್ದು, ಅವರ ನಿರೀಕ್ಷೆಗೆ ತಕ್ಕಂತೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು. ಜಿಲ್ಲೆಯಲ್ಲಿ ನೆನೆಗುದಿಗೆ  ಬಿದ್ದಿರುವ ಯೋಜನೆಗಳ ಪೂರ್ಣಗೊಳಿಸುವುದಕ್ಕೆ ಕ್ರಮವಹಿಸಲಾಗುವುದು. ಜಿಲ್ಲೆಯ ಕೆರೆ-ಕಟ್ಟೆಗಳನ್ನು ಭರ್ತಿ ಮಾಡಲಾಗುವುದು ಎಂದರು.
      ಸಂಸದರ ಕಚೇರಿಯಲ್ಲಿ ಸಿಬ್ಬಂದಿ ಉಪಸ್ಥಿತರಿರಲಿದ್ದು, ಜಿಲ್ಲೆಯ ಜನರು ತಮ್ಮ ಕುಂದುಕೊರತೆಗಳನ್ನು ಸಲ್ಲಿಸಬಹುದಾಗಿದೆ.ಇವುಗಳ ಇತ್ಯರ್ಥಕ್ಕೆ ಪ್ರಯತ್ನಿಸಲಾಗುವುದು ಎಂದರು.ಕಚೇರಿ ಉದ್ಘಾಟನಾ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ವಿ.ರಾಮ್‌ಪ್ರಸಾತ್ ಮನೋಹರ್, ಮೋಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಸೇರಿದಂತೆ ಅನೇಕರು ಇದ್ದರು.
ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯ ಕಾರ್ಯಕ್ಕೆ ಶ್ರೀರಾಮುಲು ಪ್ರಶಂಸೆ:
      ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಡೆಸಲು ಉದ್ದೇಶಿಸಿರುವ ಗ್ರಾಮವಾಸ್ತವ್ಯ ಕಾರ್ಯಕ್ರಮ ತುಂಬಾ ಒಳ್ಳೆಯದು. ಇದರಿಂದ ಪ್ರಾಕ್ಟಿಕಲ್ ಸಮಸ್ಯೆಗಳ ಅರಿವಾಗಲಿದ್ದು, ಅವುಗಳ ಇತ್ಯರ್ಥಕ್ಕೆ ಕ್ರಮವಹಿಸಲು ಅನುಕೂಕವಾಗುತ್ತದೆ ಎಂದು ಮೋಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಪ್ರಶಂಸೆ‌ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ