ಶ್ರೀ ರಾಮಾನುಜಾಚಾರ್ಯರ ನೂತನ ದೇವಾಲಯ ಲೋಕಾರ್ಪಣೆ

ಹೊನ್ನಾಳಿ:

      ರಾಮಾನುಜಾಚಾರ್ಯರು ಜಾತಿ ಪದ್ಧತಿ, ಮೌಢ್ಯವನ್ನು ಒಪ್ಪದೇ ಸಮಾನ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಮಹಿಳೆಯರಿಗೆ ಸಮಾಜದಲ್ಲಿ ಸಮಾನ ಅವಕಾಶಗಳನ್ನು ನೀಡಿದರು. 12ನೇ ಶತಮಾನದ ಬಸವಣ್ಣ, ಗುರುನಾನಕ್ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದರೂ ಸಮಾಜದ ಏಳಿಗೆಗೆ ದುಡಿದರು. ಇವರಿಗೆ ರಾಮಾನುಜರೇ ಪ್ರೇರಣೆ. ಇದು ಆಚಾರ್ಯರ ಹಿರಿಮೆ ಎಂದು ದಾವಣಗೆರೆ ಜಿಲ್ಲಾ ಶ್ರೀ ವೈಷ್ಣವ ಸಮಾಜದ ಅಧ್ಯಕ್ಷ ಕೆ.ಆರ್. ವರದರಾಜು ಹೇಳಿದರು.

     ತಾಲೂಕಿನ ಹಳೇ ದೇವರಹೊನ್ನಾಳಿ ಗ್ರಾಮದಲ್ಲಿ ಶನಿವಾರ ಶ್ರೀ ರಾಮಾನುಜಾಚಾರ್ಯರ ನೂತನ ಆಲಯ ಲೋಕಾರ್ಪಣೆ ಮತ್ತು ಶ್ರೀ ರಾಮಾನುಜಾಚಾರ್ಯರ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಂಡ ಧರ್ಮಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

       ಬ್ರಾಹ್ಮಣ, ವೀರಶೈವ, ಒಕ್ಕಲಿಗ, ಶ್ರೀ ವೈಷ್ಣವ ಸೇರಿದಂತೆ ಎಲ್ಲಾ ಸಮುದಾಯಗಳಲ್ಲೂ ಬಡವರು ಇದ್ದಾರೆ. ಬೆರಳೆಣಿಕೆಯ ಶ್ರೀಮಂತರನ್ನು ನೋಡಿ ಜಾತಿಯ ಅಭಿವೃದ್ಧಿ ಆಗಿದೆ ಎಂದು ನಿರ್ಧರಿಸುವುದು ಸರಿಯಲ್ಲ. ಸರಕಾರಗಳ ಮೀಸಲಾತಿ ಮಾನದಂಡ ಸಮರ್ಪಕವಾಗಿಲ್ಲ. ಎಲ್ಲಾ ಸಮುದಾಯಗಳ ಬಡವರಿಗೂ ಮೀಸಲಾತಿ ಲಭಿಸಬೇಕು ಎಂದು ತಿಳಿಸಿದರು.

      ತುಂಗಭದ್ರಾ ನದಿ ತೀರದ ಹೊನ್ನಾಳಿ ಸಮೀಪದ ಹಳೇದೇವರಹೊನ್ನಾಳಿಯಲ್ಲಿ ತಮ್ಮ ಸ್ವಂತ ಹಣದಿಂದ ರಾಮಾನುಜಾಚಾರ್ಯರ ನೂತನ ಆಲಯವನ್ನು ಎಸ್.ಕೆ. ಗೋಪಾಲಯ್ಯ ನಿರ್ಮಿಸಿದ್ದಾರೆ. ಅವರ ಭಕ್ತಿ ನಿಜಕ್ಕೂ ಮಾದರಿಯಾದುದು ಎಂದು ಶ್ಲಾಘಿಸಿದರು. ಇಡೀ ರಾಜ್ಯದಲ್ಲಿ ನದಿ ತೀರದಲ್ಲಿರುವ ಏಕೈಕ ಪುಣ್ಯಕ್ಷೇತ್ರ ಇದಾಗಿದೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದು ಅವರು ಹಾರೈಸಿದರು.

ಶ್ರೀ ವೈಷ್ಣವ ಸಮಾಜ ಸಂಘಟನೆ ಕೊರತೆಯಿಂದ ಬಳಲುತ್ತಿದೆ. ಸಾಮಾಜಿಕ, ಶೈಕ್ಷಣಿಕವಾಗಿ ಮುಂದುವರೆಯುವ ಮೂಲಕ ಸರಕಾರದ ಸವಲತ್ತುಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.

     ಶ್ರೀ ರಾಮಾನುಜಾಚಾರ್ಯ ಮಠದ ವ್ಯವಸ್ಥಾಪಕ ಎಸ್.ಕೆ. ಗೋಪಾಲಯ್ಯ ಮಾತನಾಡಿ, ಶ್ರೀ ರಾಮಾನುಜಾಚಾರ್ಯರು ಕೀಳು ಜಾತಿಯ ಜನರಿಗೆ ದೇವಸ್ಥಾನದ ಪ್ರವೇಶಾವಕಾಶವನ್ನು ಕಲ್ಪಿಸಿದರು. ಅವರನ್ನು “ತಿರುಕುಲತ್ತಾರ್” ಅಂದರೆ ಶ್ರೇಷ್ಠ ಕುಲದವರು ಎಂದು ಕರೆಯುವ ಮೂಲಕ ಗೌರವ ನೀಡಿದರು. ಮೇಲುಕೋಟೆಯಲ್ಲಿ ಹರಿಜನರಿಗೋಸ್ಕರ ಮೀಸಲಾದ ಒಂದು ಉತ್ಸವ ಇಂದಿಗೂ ನಡೆಯುತ್ತಿದೆ. ಎಲ್ಲಾ ಜಾತಿಯ ಜನರೂ ಮುಂದುವರೆಯಲು ಶ್ರೀ ರಾಮಾನುಜಾಚಾರ್ಯರು ಪ್ರೇರಣೆ ನೀಡಿದರು ಎಂದು ವಿವರಿಸಿದರು.

     ಎಲ್ಲಾ ಭಕ್ತರಿಗೂ ಮೋಕ್ಷ ಹೊಂದುವ ಅವಕಾಶ ಇದೆ ಎಂದು ಶ್ರೀ ರಾಮಾನುಜಾಚಾರ್ಯರು ತಿಳಿಸಿದರು. 12ನೇ ಶತಮಾನದ ಕ್ರಾಂತಿಯೋಗಿ ಬಸವಣ್ಣನವರಿಗೆ ಆಚಾರ್ಯ ರಾಮಾನುಜರೇ ಪ್ರೇರಣೆಯಾಗಿದ್ದರು. ಅಂಥ ಮಹಾನ್ ಚೇತನ ರಾಮಾನುಜರನ್ನು ಇಡೀ ನಾಡಿಗೆ ಪರಿಚಯ ಮಾಡುವಲ್ಲಿ ನಾವು ಶ್ರಮಿಸುತ್ತಿದ್ದೇವೆ. ಆಚಾರ್ಯ ರಾಮಾನುಜರಲ್ಲಿ ಎಲ್ಲರೂ ಭಕ್ತಿ, ಶ್ರದ್ಧೆ ಇಟ್ಟುಕೊಳ್ಳೋಣ, ಅವರ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ ಎಂದು ಹೇಳಿದರು.

     ಶ್ರೀ ವೈಷ್ಣವ ಸಮಾಜದ ಉಳ್ಳವರು ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಿಗೆ ಧನಸಹಾಯವನ್ನು ಮಾಡುವ ಔದಾರ್ಯ ಬೆಳೆಸಿಕೊಳ್ಳಬೇಕು ಎಂದು ಸೂಚ್ಯವಾಗಿ ತಿಳಿಸಿದರು.ಶ್ರೀ ವೈಷ್ಣವ ಸಮಾಜದ ಜಿಲ್ಲಾ ಉಪಾಧ್ಯಕ್ಷ ಕೆ.ಎನ್. ಕೋದಂಡಪಾಣಿ ಮಾತನಾಡಿ, ಶ್ರೀ ರಾಮಾನುಜಾಚಾರ್ಯರ ಜಯಂತ್ಯುತ್ಸವವನ್ನು ಸರಕಾರದ ವತಿಯಿಂದ ಆಚರಿಸುವಂತಾಗಬೇಕು ಎಂದು ಒತ್ತಾಯಿಸಿದರು.

     ಇತಿಹಾಸ ಉಪನ್ಯಾಸಕ ಮಳಲಕೆರೆ ಎಸ್.ಆರ್. ನಯನಜಮೂರ್ತಿ ಶ್ರೀ ರಾಮಾನುಜಾಚಾರ್ಯರ ಕುರಿತು ಉಪನ್ಯಾಸ ನೀಡಿ, ಭಗವಂತನ ಸೇವೆ ಮಾಡುವವರನ್ನು ದಾಸರು ಎಂದು ಕರೆದಿದ್ದಾರೆ. ಅಂಥ ಶ್ರೇಷ್ಠ ದಾಸ ಪರಂಪರೆಯನ್ನು ಹುಟ್ಟುಹಾಕಿದವರು ಶ್ರೀ ರಾಮಾನುಜಾಚಾರ್ಯರು. ಅವರ ಧಾರ್ಮಿಕ, ಸಾಮಾಜಿಕ ಸೇವೆ ಅನನ್ಯವಾದುದು ಎಂದು ವಿವರಿಸಿದರು.

      ಸಮಾಜದಲ್ಲಿನ ಅಜ್ಞಾನ, ಅಸಮಾನತೆ, ಅಸ್ಪøಶ್ಯತೆ ನಿವಾರಣೆಗೆ ಸುಮಾರು 950 ವರ್ಷಗಳ ಹಿಂದೆಯೇ ಆಚಾರ್ಯ ರಾಮಾನುಜರು ಬಹುವಾಗಿ ಶ್ರಮಿಸಿದ್ದರು. ಕೀಳು ಜಾತಿಯವರಿಗೂ ಸಮಾಜದಲ್ಲಿ ಸಮಾನ ಅವಕಾಶಗಳು ಲಭಿಸಬೇಕು ಎನ್ನುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದರು. ಇಡೀ ಮನುಕುಲಕ್ಕೆ ಒಳಿತಾಗಬೇಕು ಎಂದು ರಾಮಾನುಜರು ಬಯಸಿದ್ದರು, ಅದನ್ನು ಮಾಡಿ ತೋರಿಸಿದರು. ದೀನ-ದಲಿತರ ಬಗೆಗಿನ ಅವರ ಕಾಳಜಿ ಅನುಪಮವಾದುದು ಎಂದು ತಿಳಿಸಿದರು.

      ಅಧ್ಯಾತ್ಮ ಇಂದು ವ್ಯಾಪಾರದ ಸರಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಅಧ್ಯಾತ್ಮ ಒಂದು ವರ್ಗವನ್ನು ಓಲೈಸಬಾರದು, ಉಳ್ಳವರ ಸ್ವತ್ತಾಗಬಾರದು. ಅಧ್ಯಾತ್ಮ ಜಾತಿ, ಪಂಥವನ್ನು ಮೀರಿದ್ದಾಗಿದೆ. ರಾಜಕೀಯಕ್ಕೋಸ್ಕರ ಧರ್ಮವನ್ನು ಬಳಸಿಕೊಳ್ಳಬಾರದು. ಆಶೀರ್ವಾದ ಮಾರಾಟದ ಸರಕಲ್ಲ ಎಂದು ಅಭಿಪ್ರಾಯಪಟ್ಟರು.

      ಶ್ರೀ ವೈಷ್ಣವ ಸಮಾಜದ ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಘಟಕದ ಮಾಜಿ ಉಪಾಧ್ಯಕ್ಷ ನಾರಾಯಣಯ್ಯ, ಚನ್ನಗಿರಿ ತಾಲೂಕು ಘಟಕದ ಅಧ್ಯಕ್ಷ ನರಸಿಂಹಮೂರ್ತಿ, ಹೊಳಲ್ಕೆರೆ ತಾಲೂಕು ಘಟಕದ ಅಧ್ಯಕ್ಷ ಗಂಜಿಗಟ್ಟೆ ಅಚ್ಯುತನ್, ದಾವಣಗೆರೆ ಜಿಲ್ಲಾ ಶ್ರೀ ವೈಷ್ಣವ ಸಮಾಜದ ಕಾರ್ಯದರ್ಶಿ ಯೋಗಾನರಸಿಂಹಾಚಾರ್, ಮುಖಂಡರಾದ ಕೋಟೆಹಾಳ್ ರವಿ, ಎಂ.ಎಸ್. ರಮೇಶ್ ದೇವರಹೊನ್ನಾಳಿ ಮತ್ತಿತರರು ಮಾತನಾಡಿದರು. ಮುಖಂಡರಾದ ಎಸ್. ರಾಮಯ್ಯ, ಎಸ್. ವೆಂಕಟರಾವ್ ಮತ್ತಿತರರು ಉಪಸ್ಥಿತರಿದ್ದರು.

    ಶ್ರೀ ರಾಮಾನುಜಾಚಾರ್ಯ ಮಠದ ವ್ಯವಸ್ಥಾಪಕ ಎಸ್.ಕೆ. ಗೋಪಾಲಯ್ಯ ದಂಪತಿಯನ್ನು ದಾವಣಗೆರೆ ಜಿಲ್ಲಾ ಶ್ರೀ ವೈಷ್ಣವ ಮಹಾಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ಮಲೇಕುಂಬಳೂರಿನ ಪುಟ್ಟಮ್ಮ ಮತ್ತು ಸಂಗಡಿಗರು ಶ್ರೀ ರಾಮಾನುಜಾಚಾರ್ಯರ ಬಗ್ಗೆ ಸಂಕೀರ್ತನೆಗಳನ್ನು ನಡೆಸಿಕೊಟ್ಟರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link