ದಾಖಲಾತಿ ಪಡೆಯಲು ಕಚೇರಿಗಳಲ್ಲಿ ಜನಜಂಗುಳಿ
ತುಮಕೂರು
ದಂಡಂ ದಶಗುಣಂ ಎನ್ನುವಂತೆ ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ದುಬಾರಿ ದಂಡ ನಿಗಧಿ ಮಾಡಿ ಜಾರಿ ಮಾಡಿರುವುದು ವಾಹನ ಮಾಲೀಕರು ಹಾಗೂ ಚಾಲಕರು ಗಾಬರಿಯಾಗುವಂತೆ ಮಾಡಿದೆ. ಆಗಿನಿಂದ ಸಂಬಂಧಿಸಿದ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವತ್ತ ಜಾಗೃತರಾಗಿದ್ದಾರೆ.
ಹೊಸದಾಗಿ ಡ್ರೈವಿಂಗ್ ಲೈಸೆನ್ಸ್, ಡ್ರೈವಿಂಗ್ ಲೈಸೆನ್ಸ್ ನವೀಕರಣ, ಹೆಲ್ಮೆಟ್ ಖರೀದಿ, ವಾಹನಗಳ ವಾಯು ಮಾಲಿನ್ಯ ಧೃಢೀಕರಣ ಪ್ರಮಾಣ ಪತ್ರ, ಬಾಕಿ ಇದ್ದ ವಾಹನಗಳ ಇನ್ಷೂರೆನ್ಸ್ ಪಾವತಿ ಹೀಗೆ ಈ ಮೊದಲು ನಿರ್ಲಕ್ಷ ಮಾಡಿದ್ದವುಗಳನ್ನೆಲ್ಲಾ ಮಾಡಿಸಿಕೊಂಡು ಸಜ್ಜಾಗುತ್ತಿದ್ದಾರೆ, ಇವಿಲ್ಲದೆ ವಾಹನವೇರಿ ರಸ್ತೆಗಿಳಿದರೆ ಪೊಲೀಸರು ಹಿಡಿದು ದುಬಾರಿ ದಂಡ ಹಾಕುತ್ತಾರೆ ಎಂಬ ಭೀತಿ ಕಾಡಿರುವುದೇ ಇದಕ್ಕೆ ಕಾರಣ.
ದ್ವಿಚಕ್ರದಂತಹ ವಾಹನ ಚಲಾಯಿಸುವವರಿಂದ ಪೊಲೀಸರು ಈವರೆಗೆ ಚಾಲಕರ ಹೆಲ್ಮೆಟ್, ಡಿಎಲ್ ಮತ್ತಿತರ ದಾಖಲಾತಿ ತಪಾಸಣೆಗೆ ಆದ್ಯತೆ ನೀಡುತ್ತಿದ್ದರು. ಈಗ ಒಮ್ಮೆಗೆ ವಾಹನ ತಪಾಸಣೆಗೆ ಮುಂದಾದರೆ ಪೂರಕ ದಾಖಲಾತಿಗಳನ್ನು ಪರಿಶೀಲನೆ ಮಾಡುತ್ತಾರೆ, ಯಾವುದೇ ನಿಯಮ ಉಲ್ಲಂಘನೆಯಾದರೆ ದುಬಾರಿ ದಂಡ ತೆರಬೇಕಾಗುತ್ತದೆ.
ಇದೂವರೆಗೂ ಬಹುತೇಕ ಖಾಲಿ ಹೊಡೆಯುತ್ತಿದ್ದ ನಗರದ ವಾಯು ಮಾಲಿನ್ಯ ಪರೀಕ್ಷಾ ಕೇಂದ್ರಗಳು ಕಳೆದ ಮೂರು ದಿನಗಳಿಂದ ತುಂಬಿ ತುಳುಕುತ್ತಿವೆ. ಬೆಳಗಿನಿಂದಲೂ ವಾಹನ ಮಾಲೀಕರು ಪರೀಕ್ಷಾ ಕೇಂದ್ರಗಳ ಮುಂದೆ ಸಾಲುಗಟ್ಟಿ ನಿಂತು ತಮ್ಮ ವಾಹನಗಳ ವಾಯು ಮಾಲಿನ್ಯ ಧೃಢೀಕರಣ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಆರು ತಿಂಗಳಿಗೊಮ್ಮೆಯಂತೆ ವರ್ಷಕ್ಕೆ ಎರಡು ಬಾರಿ ವಾಹನಗಳ ಪರೀಕ್ಷೆ ಮಾಡಿಸಿ ವಾಯು ಮಾಲಿನ್ಯ ಧೃಢೀಕರಣ ಪ್ರಮಾಣ ಪತ್ರ ಪಡೆಯಬೇಕಾಗಿದೆ.
ಮೋಟಾರು ವಾಹನ ಕಾಯ್ದೆ ಕಠಿಣವಾಗಿ ಜಾರಿಯಾಗುತ್ತಿರುವ ಕಾರಣ ದ್ವಿಚಕ್ರ ವಾಹನ ಚಾಲಕರು ಹೆಲ್ಮೆಟ್ ಧರಿಸಲೇಬೇಕಾಗಿ ರುವುದರಿಂದ ನಗರದಲ್ಲಿ ಹೆಲ್ಮೆಟ್ ಖರೀದಿ ಕೂಡಾ ಜೋರಾಗಿದೆ. ಹೆಲ್ಮೆಟ್ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ನಡೆದಿದೆ. ಹೆಲ್ಮೆಟ್ ಮಾರಾಟ ಮಾಡುವ ಫುಟ್‍ಪಾತ್ ಅಂಗಡಿಗಳೂ ಪ್ರಮುಖ ರಸ್ತೆಗಳ ಬದಿ ಶುರುವಾಗಿವೆ.ವಾಹನಗಳ ವಿಮೆ ಬಾಕಿ ಉಳಿಸಿಕೊಂಡವರೂ ವಿಮಾ ಕಂಪನಿ ಕಚೇರಿಗಳಿಗೆ ತೆರಳಿ ವಿಮಾ ಹಣ ಪಾವತಿಸಿ ಅಪ್‍ಡೇಟ್ ಮಾಡಿಕೊಳ್ಳುತ್ತಿದ್ದಾರೆ.
ಡ್ರೈವಿಂಗ್ ಲೈಸೆನ್ಸ್, ರಿನ್ಯೂವಲ್ ಅರ್ಜಿಗಳು ಹೆಚ್ಚು ಬಂದಿವೆ. ಜೊತೆಗೆ ಆರ್‍ಟಿಓ ಕಚೇರಿಯಲಿವಿವಿಧ ಶುಲ್ಕಗಳ ದರವನ್ನೂ ಸರ್ಕಾರ ಹೆಚ್ಚು ಮಾಡಿದೆ ಎಂದು ನಗರದ ಸಿದ್ಧಲಿಂಗೇಶ್ವರ ಡ್ರೈವಿಂಗ್ ಸ್ಕೂಲ್ ಪ್ರಾಚಾರ್ಯ ಟಿ ಆರ್ ಸದಾಶಿವಯ್ಯ ಹೇಳಿದ್ದಾರೆ.
ಈ ಮೊದಲು ಎಲ್‍ಎಲ್‍ಆರ್‍ಗೆ ರೂ. 30 ಇದ್ದ ಶುಲ್ಕವನ್ನು 200 ರೂ.ಗಳಿಗೆ ಹೆಚ್ಚಿಸಲಾಗಿದೆ. ಡಿಎಲ್‍ಗೆ ಇದ್ದ 50 ರೂ. ಗಳನ್ನು 500 ರೂ. ಗಳಿಗೆ ಏರಿಸಲಾಗಿದೆ. ಪರವಾನಗಿಯ ಅವಧಿ ಮುಗಿದರೆ ನವೀಕರಿಸುವ ಶುಲ್ಕವನ್ನು 100 ರೂ. ನಿಂದ ಒಂದು ಸಾವಿರ ರೂ.ಗೆ ಹೆಚ್ಚು ಮಾಡಲಾಗಿದೆ ಎಂದು ಹೇಳಿದರು.
ಸರ್ಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ನಿಯಮ ಉಲ್ಲಂಘನೆಗೆ ದುಬಾರಿ ದಂಡ ವಿಧಿಸಿರುವುದು ಸರಿಯಾದ ಕ್ರಮವಲ್ಲ, ಆಟೋ ಚಾಲಕರು, ಲಾರಿ ಚಾಲಕರು ಬಡವರಿರುತ್ತಾರೆ, ಅವರು ಹೆಚ್ಚು ದಂಡ ಪಾವತಿ ಮಾಡುವುದು ಕಷ್ಟವಾಗುತ್ತದೆ. ಇದೇ ನೆಪ ಮಾಡಿಕೊಂಡು ಇಲಾಖೆ ಅಧಿಕಾರಿಗಳು ತೊಂದರೆ ಕೊಡುವ ಸಾಧ್ಯತೆಗಳೂ ಇರುತ್ತವೆ ಎಂದರು.
ಸಂಚಾರ ನಿಯಮವನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು, ಎಲ್ಲಾ ವಾಹನ ಚಾಲಕರು, ಮಾಲೀಕರು ಅಗತ್ಯ ದಾಖಲಾತಿ ಹೊಂದಿ, ನಿಯಮ ಪಾಲಿಸಿದರೆ ಯಾವುದೇ ದಂಡ ಕಟ್ಟುವ ಅಗತ್ಯ ಬರುವುದಿಲ್ಲ, ಆದರೂ ದಂಡದ ಮೊತ್ತ ದುಬಾರಿಯಾಯಿತು. ಗುಜರಾತ್ ಸರ್ಕಾರ ನಿಗಧಿತ ದಂಡದ ಅರ್ಧದಷ್ಟು ವಿಧಿಸಲು ಆದೇಶ ಮಾಡಿದೆ. ನಮ್ಮ ರಾಜ್ಯದಲ್ಲೂ ದಂಡದ ಮೊತ್ತ ಕಡಿಮೆ ಮಾಡಬೇಕು ಎಂದು ಸದಾಶಿವಯ್ಯ ಒತ್ತಾಯಿಸಿದರು.
ಸಂಚಾರಿ ನಿಯಮಗಳ ಉಲ್ಲಂಘನೆಗೆ ವಿಧಿಸುವ ದಂಡದ ಮೊತ್ತದ ಕುರಿತು ಸಾರ್ವಜನಿಕರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿಯಮ ಉಲ್ಲಂಘನೆ ನೆಪ ಮಾಡಿ ಸುಲಿಗೆ ಮಾಡುವ ಪ್ರಯತ್ನವಿದು, ಅವೈಜ್ಞಾನಿಕವಾಗಿ ದಂಡ ನಿಗಧಿ ಮಾಡಿ ಶೋಷಣೆ ಮಾಡುವ ಕ್ರಮ ಇದಾಗಿದೆ ಎಂದು ತಮ್ಮ ವಾಹನದ ವಾಯು ಮಾಲಿನ್ಯ ಪರೀಕ್ಷೆಗೆ ಬಂದಿದ್ದ ಶಿವರುದ್ರಯ್ಯ ಹೇಳಿದರು.
ನಮ್ಮಲ್ಲಿ ದಂಡದಿಂದ ಮಾತ್ರ ಕಾನೂನು ಪಾಲನೆಯನ್ನುಜಾರಿಗೆ ತರಲು ಸಾಧ್ಯ ಎನ್ನುವ ಪರಿಸ್ಥಿತಿ ಇದೆ. ಇಲ್ಲವಾದರೆ ಯಾರೂ ನಿಯಮ ಪಾಲಿಸುವುದಿಲ್ಲ. ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿದರೆ ದಂಡ ಕಟ್ಟುವ ಅಗತ್ಯವಿಲ್ಲ, ಇದರಿಂದ ಅಪಘಾತಗಳು ನಿಯಂತ್ರಣವಾಗಿ, ಸುರಿಕ್ಷಿತ ಸಂಚಾರ ವ್ಯವಸ್ಥೆ ಸಾಧ್ಯವಾಗುತ್ತದೆ ಎಂದು ಶಿವಶಂಕರ್ ಹೇಳಿದರು.
ವಾಹನ ಚಾಲಕರು ದಂಡದಿಂದ ಪಾರಾಗಲು ಡಿಎಲ್ ಮತ್ತು ನೊಂದಣಿ ಪತ್ರವನ್ನು ವಾಹನದ ಜೊತೆಗೆ ಇಟ್ಟುಕೊಳ್ಳಬೇಕು, ವಾಹನದ ವಿಮೆ ಯಾವಾಗಲೂ ಅಪ್‍ಡೇಟ್ ಆಗಿರಲಿ, ಮಾಲಿನ್ಯ ಪರೀಕ್ಷೆ ಮಾಡಿಸಿರುವ ಪ್ರಮಾಣ ಪತ್ರ ಜೊತೆಗಿರಲಿ, ಇದಲ್ಲದೆ, ಇನ್ನಿತರ ಅಗತ್ಯ ದಾಖಲಾತಿಗಳನ್ನು ಹೊಂದಿದ್ದರೆ ನಿರಾತಂಕವಾಗಿ ರಸ್ತೆಯಲ್ಲಿ ವಾಹನ ಚಲಾಯಿಸಬಹುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
