ಗೌಡರ ಕುಟುಂಬದ ಇನ್ನಿಬ್ಬರು ಕುಡಿಗಳು ಲೋಕಸಭಾ ಚುನಾವಣಾ ಅಖಾಡಕ್ಕೆ

ಬೆಂಗಳೂರು:

    ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರ ಪತ್ನಿ ಅನಿತಾ ಕುಮಾರ ಸ್ವಾಮಿ ಕಣಕ್ಕಿಳಿಯುವುದು ಖಚಿತವಾಗಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ಇನ್ನಿಬ್ಬರು ಕುಡಿಗಳು ಮುಂದಿನ ಲೋಕಸಭಾ ಚುನಾವಣಾ ಅಖಾಡಕ್ಕೆ ಪ್ರವೇಶಿಸಲು ಸಜ್ಜಾಗಿದ್ದಾರೆ.

     ದೇವೇಗೌಡರು ಹಾಸನ ಕ್ಷೇತ್ರದಿಂದ ಮತ್ತೊಂದು ಅವಧಿಗೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಎಚ್.ಡಿ. ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರನ್ನು ಮೈಸೂರು ಹಾಗೂ ಕುಮಾರ ಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ ಸ್ವಾಮಿ ಅವರನ್ನು ಮಂಡ್ಯ ಇಲ್ಲವೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸಂಸತ್ತಿಗೆ ಕಳುಹಿಸಲು ರಾಜಕೀಯ ತಂತ್ರಗಾರಿಕೆ ರೂಪಿಸಿದ್ದಾರೆ.

     ಈ ಬೆಳವಣಿಗೆ ಜೆಡಿಎಸ್‍ನ ಒಳ ವಲಯಗಳಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಒಂದು ಕಡೆ ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಸಮಾಧಾನಪಡಿಸುವುದು ದೇವೇಗೌಡರಿಗೆ ಬಹುದೊಡ್ಡ ಸವಾಲಾಗಿದೆ. ಮತ್ತೊಂದೆಡೆ ತಮ್ಮ ಕುಟುಂಬದಲ್ಲಿನ ಆಂತರಿಕ ಕ್ಷೋಭೆಯನ್ನು ನಿವಾಭಾಯಿಸುವುದು ಹೇಗೆ ಎನ್ನುವ ತಲೆನೋವಿಗೆ ಸಿಲುಕಿಕೊಂಡಿದ್ದಾರೆ.

      ಈ ಹಿನ್ನೆಲೆಯಲ್ಲಿ ಗೌಡರ ಕುಟುಂಬದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಕಳೆದ ವಿಧಾನ ಸಭೆ ಚುನಾವಣೆ ವೇಳೆ ಕುಮಾರಸ್ವಾಮಿ ನಮ್ಮ ಕುಟುಂಬದಿಂದ ಇಬ್ಬರು ಮಾತ್ರ ಸ್ಪರ್ಧಿಸುತ್ತಾರೆ ಎಂದು ಪಕ್ಷದ ಮುಖಂಡರಿಗೆ ಮಾತು ಕೊಟ್ಟಿದ್ದರು. ಆದರೆ ಈಗ ಉಪಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಿದ್ದು, ಮೂರನೇ ವ್ಯಕ್ತಿ ಈಗ ಸ್ಪರ್ಧಿಸಬಹುದೇ ಎಂಬ ಪ್ರಶ್ನೆ ಕುಟುಂಬದಲ್ಲಿ ಎದ್ದಿದೆ.

     ಇನ್ನೊಂದೆಡೆ ಈ ವಿಚಾರಕ್ಕಾಗಿ ಕುಟುಂಬದಲ್ಲಿ ಗದ್ದಲ ಉಂಟಾಗದಂತೆ ತಡೆಯಲು ದೇವೇಗೌಡರು ಸೂಕ್ತ ಕಾರ್ಯತಂತ್ರದಲ್ಲಿ ನಿರತರಾಗಿದ್ದಾರೆ. ಲೋಕಸಭೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಇನ್ನೂ ಖಚಿತವಾಗಿಲ್ಲ. ಏಕೆಂದರೆ ನಿಖಿಲ್? ರಾಜಕೀಯ ಪ್ರವೇಶಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಇನ್ನೂ ಒಪ್ಪಿಲ್ಲ. ಎಲ್ಲವೂ ಅಂದುಕೊಂಡಂತೆ ಆದರೆ ನಿಖಿಲ್, ಪ್ರಜ್ವಲ್ ಇಬ್ಬರೂ ರಾಜಕಾರಣಕ್ಕೆ ಬರಲಿದ್ದಾರೆ ಎನ್ನಲಾಗುತ್ತಿದೆ.

     ಪ್ರಜ್ವಲ್ ರೇವಣ್ಣ ಕಳೆದ ವಿಧಾನಸಭಾ ಚುನಾವಣೆಯಲ್ಲಿಯೇ ಸ್ಪರ್ಧೆ ಮಾಡಲು ಪ್ರಯತ್ನಿಸಿದ್ದರು. ಕಾರಣಾಂತರಗಳಿಂದ ಸ್ಪರ್ಧೆ ಸಾಧ್ಯವಾಗಿರಲಿಲ್ಲ. ಇದೀಗ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕೈ ಜೋಡಿಸಿದರೆ ಗೆಲುವು ಸುಲಭ ಎಂಬ ಮಾತುಗಳು ಕೇಳಿ ಬರುತ್ತಿವೆ. ದೇವೇಗೌಡರ ಮೊಮ್ಮಕ್ಕಳ ರಾಜಕೀಯ ಪ್ರವೇಶದ ಆರಂಭದಲ್ಲೇ ಗೆಲುವು ಸುಲಭ. ಜೆಡಿಎಸ್ ತನ್ನ ಸ್ಥಾನಗಳ ಸಂಖ್ಯೆಯನ್ನು ಕೂಡಾ ಹೆಚ್ಚಿಸಿಕೊಳ್ಳಬಹುದು. ಹೀಗಾಗಿ ಈ ಎಲ್ಲಾ ಹಿನ್ನಲೆಯಲ್ಲಿ ದೇವೇಗೌಡರು ಕುಟುಂಬದಲ್ಲಿ ಗಂಭೀರ ಚರ್ಚೆ ನಡೆಸಿದ್ದಾರೆ.

     ಇನ್ನೂ ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಕುಮಾರಸ್ವಾಮಿ ಅಖಾಡಕ್ಕಿಳಿದಿದ್ದಾರೆ. ಯಾವಾಗಲೂ ಕೊನೆ ಕ್ಷಣದಲ್ಲಿ ಅಭ್ಯರ್ಥಿ ಆಯ್ಕೆ ಮಾಡುತ್ತಿದ್ದ ಜೆಡಿಎಸ್, ಈ ಬಾರಿ ಮುಂಚಿತವಾಗಿಯೇ ಅಭ್ಯರ್ಥಿ ಹೆಸರು ಅಂತಿಮಗೊಳಿಸುತ್ತಿದೆ. ಸ್ವಕ್ಷೇತ್ರದಲ್ಲೇ ಅಭ್ಯರ್ಥಿ ಆಯ್ಕೆ ಗೊಂದಲ ಆಗಬಾರದು ಎಂಬ ಕಾರಣಕ್ಕೆ ಅವರು ಕಾರ್ಯಕರ್ತರಿಂದ ಒಮ್ಮತದ ಅಭಿಪ್ರಾಯ ಮೂಡಿಸಲು ಕಾರ್ಯಪ್ರವೃತ್ತರಾಗಿದ್ದಾರೆ.

       ಅನಿತಾ ಕುಮಾರ ಸ್ವಾಮಿ ಸ್ಪರ್ಧೆಗೆ ರಾಮನಗರ ಜೆಡಿಎಸ್‍ನಲ್ಲಿ ಅಸಮಾಧಾನ ಇದೆ ಇದೇ ಉದ್ದೇಶದಿಂದ ಬಿಡದಿ ತೋಟದ ಮನೆಯಲ್ಲಿ ನಡೆಯುತ್ತಿರುವ ಜೆಡಿಎಸ್ ಕಾರ್ಯಕರ್ತರ ಸಭೆಗೆ ಮಾಧ್ಯಮದವರಿಗೆ ಪ್ರವೇಶ ನಿಷೇಧಿಸಲಾಗಿತ್ತು. ರಾಮನಗರದಲ್ಲಿ ಕೆಲವು ಮುಖಂಡರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪ ಇದೆ. ಹೀಗಾಗಿ ಅಸಮಾಧಾನ ಭುಗಿಲೇಳುವ ಸಾಧ್ಯತೆ ಇದೆ. ಸಭೆಯಲ್ಲಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಬಹುದು. ಮಾಧ್ಯಮದ ಎದುರು ಅಸಮಾಧಾನ ಸ್ಪೋಟಗೊಂಡರೆ ದೊಡ್ಡ ಸುದ್ದಿ ಆಗುತ್ತೆ ಎಂದು ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

      ಸಿಎಂ ತವರು ಕ್ಷೇತ್ರದಲ್ಲೇ ಪಕ್ಷದೊಳಗೆ ಒಡಕು ಎಂಬ ಸಂದೇಶ ರವಾನೆ ಆಗುತ್ತದೆ. ಇದು ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅಭ್ಯರ್ಥಿ ಆಯ್ಕೆ ವಿಚಾರದಲ್ಲೂ ಆಕ್ಷೇಪ ಬಂದರೆ ಎಂಬ ಆತಂಕ ಕುಮಾರಸ್ವಾಮಿ ಅವರನ್ನು ಕಾಡುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ   

Recent Articles

spot_img

Related Stories

Share via
Copy link
Powered by Social Snap