ನೀರಿಲ್ಲದೆ ಒಣಗಿದ ತೋಟಗಳು : ತಲೆ ಮೇಲೆ ಕೈಹೊತ್ತ ರೈತರು

ಗುಬ್ಬಿ

      ಬೇಸಿಗೆ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಕೃಷಿ ಮತ್ತು ತೋಟದ ಬೆಳೆಗಳು ನೀರಿಲ್ಲದೆ ಬಿಸಿಲಿನ ತಾಪಕ್ಕೆ ಒಣಗಲಾರಂಭಿಸಿವೆ ರೈತರು ತಮ್ಮ ಜೀವನಾಧಾರವಾಗಿರುವ ಅಡಿಕೆ ಮತ್ತು ತೆಂಗಿನ ತೋಟಗಳನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಹರ ಸಾಹಸ ಪಟ್ಟರು ನೀರು ಒದಗಿಸಲಾದೆ ಫಲಬಿಡುತ್ತಿದ್ದ ಅಡಿಕೆ ತೋಟಗಳನ್ನು ಒಣಗಲು ಬಿಟ್ಟು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.

        ಕಳೆದ ಹಲವು ವರ್ಷಗಳಿಂದ ಸಮರ್ಪಕವಾಗಿ ಮಳೆ ಬಾರದೆ ಅಂತರ್ಜಲ ಪ್ರಮಾಣ ಸಂಪೂರ್ಣವಾಗಿ ಕುಸಿದಿದ್ದು ಜೀವನಾಧಾರವಾಗಿರುವ ಮತ್ತು ಕಷ್ಟಪಟ್ಟು ಬೆಳೆಸಿದ ತೆಂಗು ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು 1500 ಅಡಿಯವರೆಗೆ ಕೊಳವೆ ಬಾವಿಗಳನ್ನು ಕೊರೆಸಿದರೂ ನೀರು ಬಾರದೆ ಫಲಭರಿತ ತೋಟಗಳು ನೀರಿಲ್ಲದೆ ಒಣಗುತ್ತಿವೆ.

        ಇತ್ತೀಚಗೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು ಕೊಳವೆ ಬಾವಿಗಳಲ್ಲಿ ಬರುವ ಅಷ್ಟಿಷ್ಟು ನೀರನ್ನು ತೆಂಗು ಮತ್ತು ಅಡಿಕೆ ತೋಟಗಳಿಗೆ ಹಾಯಿಸಿದರೂ ನೀರು ಸಾಕಾಗದೆ ತೋಟಗಳೆ ಒಣಗುತ್ತಿವೆ. ತಾಲ್ಲೂಕಿನಾಧ್ಯಂತ ಹಲವಾರು ರೈತರು ತೋಟಗಳಿಗೆ ನೀರು ಒದಗಿಸಲಾಗದೆ ಕಣ್ಣ ಮುಂದೆಯೆ ಕಷ್ಟಪಟ್ಟು ಬೆಳೆಸಿದ ಮರಗಳು ಒಣಗುತ್ತಿರುವುದನ್ನು ನೋಡಿಕೊಂಡು ತಲೆ ಮೇಲೆ ಕೈಹೊತ್ತು ಮುಂದೇನು ಮಾಡುವುದು ಎಂಬ ಚಿಂತೆಯಲ್ಲಿದ್ದಾರೆ.

         ಮಳೆ ಸಮರ್ಪಕವಾಗಿ ಬಾರದ ಕಾರಣ ನೀರಿನ ಕೊರತೆಯಿಂದ ಒಣ ಬೇಸಾಯದಲ್ಲಿ ಬೆಳೆಯುತ್ತಿದ್ದ ಮಾವು ಮತ್ತು ಹಲಸಿನ ಮರಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಬರುತ್ತಿಲ್ಲ ಬಂದಿರುವ ಬೆಳೆಯು ದಷ್ಟ ಪುಷ್ಟವಾಗಿಲ್ಲ ಗಿಡ ಮರಗಳಿಗೆ ನೀರು ಅನಿವಾರ್ಯವಾಗಿದೆ.
ಅಂತರ್ಜಲ ಮಟ್ಟ ಸಂಪೂರ್ಣವಾಗಿ ಕುಸಿದಿದ್ದು ಲಕ್ಷಾಂತರ ರೂ ಖರ್ಚುಮಾಡಿ ಕೊರೆಸಿದ ಕೊಳವೆ ಬಾವಿಗಳಲ್ಲಿ ನೀರು ಬಾರದಂತಾಗಿದ್ದು ತೆಂಗು ಮತ್ತು ಅಡಿಕೆ ಬೆಳೆಗಳನ್ನೆ ನಂಬಿ ಬದುಕು ಸಾಗಿಸುತ್ತಿದ್ದ ರೈತರು ಕಂಗಾಲಾಗಿದ್ದಾರೆ.

          ತೋಟಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್‍ಗಳ ಮೂಲಕ ಸಾವಿರಾರು ಖರ್ಚುಮಾಡಿ ನೀರು ಪೂರೈಕೆ ಮಾಡುತ್ತಿದ್ದಾರೆ ಆದರೆ ಟ್ಯಾಂಕರ್ ಮೂಲಕ ನೀರು ಹರಿಸಿದರೆ ತೆಂಗು ಮತ್ತು ಅಡಿಕೆ ಬೆಳೆಗಳಿಗೆ ಸಾಕಾಗುತ್ತಿಲ್ಲ ಸದ್ಯದಲ್ಲಿ ಮಳೆ ಬಾರದೆ ಇದೆ ಪರಿಸ್ಥಿತಿ ಮುಂದುವರೆದರೆ ರೈತರ ಜೀವನಾಧಾರವಾಗಿರುವ ತೆಂಗು, ಬಾಳೆ ಮತ್ತು ಅಡಿಕೆ ಬೆಳೆಗಳು ಸಂಪೂರ್ಣವಾಗಿ ಒಣಗಿ ಹೋಗುವುದರಲ್ಲಿ ಸಂದೇಹವೆ ಇಲ್ಲ ಎನ್ನುತ್ತಾರೆ ರೈತರು.

        ಇತ್ತೀಚಿನ ದಿನಗಳಲ್ಲಿ ಸಮರ್ಪಕವಾಗಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದಿರುವುದು ಮತ್ತು ಕೆರೆಗಳಿಗೆ ಹೇಮಾವತಿ ನೀರು ಸಮರ್ಪಕವಾಗಿ ಹರಿಯದಿರುವುದು ಅಂತರ್ಜಲ ಕುಸಿತಕ್ಕೆ ಕಾರಣವಾಗಿದೆ ಎನ್ನುತ್ತಾರೆ ರೈತರು.

         ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಿಲ್ಲದೆ ಕೃಷಿ ಮತ್ತು ತೋಟದ ಬೆಳೆಗಳು ಒಣಗುತ್ತಿರುವುದರ ಜೊತೆಗೆ ತಮ್ಮನ್ನು ಅವಲಂಭಿಸಿರುವ ಜಾನುವಾರುಗಳ ಮೇವು ಮತ್ತು ನೀರಿಗೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಮಳೆಗಾಗಿ ಮುಗಿಲತ್ತ ನೋಡುತ್ತಿದ್ದಾರೆ. ಕಳೆದ ಮಳೆಗಾಲದ ಅವಧಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದೆ ಕೃಷಿ ಬೆಳೆಗಳಾದ ರಾಗಿ. ಭತ್ತ, ಜೋಳ ಸೇರಿದಂತೆ ಇತರೆ ದ್ವಿಧಳ ಧಾನ್ಯಗಳನ್ನು ಬೆಳೆಯಲಾಗದ ಕಾರಣ ದನಕರುಗಳಿಗೆ ಮೇವಿನ ಕೊರತೆ ಉಂಟಾಗಿದೆ.

         ಗ್ರಾಮೀಣ ಭಾಗದಲ್ಲಿ ರೈತರು ಕೃಷಿ ಚಟುವಟಿಕೆಗಳಿಗೆ ಮತ್ತು ಹಾಲಿಗಾಗಿ ರಾಸುಗಳನ್ನು ಸಾಕುತ್ತಿದ್ದು ರಾಗಿ ಮತ್ತು ಭತ್ತದ ಬೆಳೆ ಇಲ್ಲದ ಕಾರಣ ಒಣಹುಲ್ಲಿಗಾಗಿ ಪರದಾಡುವಂತಹ ಸ್ಥಿತಿ ಉಂಟಾಗಿದೆ. ಈ ಹಿಂದೆ ಉತ್ತಮ ಮಳೆಯಾಗುತ್ತಿದ್ದರಿಂದ ಎಲ್ಲೆಂದರಲ್ಲಿ ರೈತರು ರಾಸುಗಳಿಗಾಗಿ ಒಣ ಹುಲ್ಲಿನ ಮೆದೆಗಳನ್ನು ಹಾಕಿ ವರ್ಷವಿಡಿ ರಾಸುಗಳಿಗೆ ಮೇವು ಒದಗಿಸುತ್ತಿದ್ದರು ಆದರೆ ಮಳೆಬಾರದೆ ಕೃಷಿ ಬೆಳೆಗಳನ್ನು ಬೆಳೆಯಲಾಗದೆ ಜಾನುವಾರುಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

       ಅಂತರ್ಜಲ ಪ್ರಮಾಣ ಸಂಪೂರ್ಣವಾಗಿ ಕುಸಿಯುತ್ತಿದ್ದು ರೈತರು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಲು ಲಕ್ಷಾಂತರ ರೂ ಖರ್ಚುಮಾಡಿ ನಿರಂತರವಾಗಿ ಕೊಳವೆ ಬಾವಿಗಳನ್ನು ಕೊರೆಸುತ್ತಿದ್ದಾರೆ ಆದರೆ 1500 ಅಡಿಯವರೆಗೆ ಕೊರೆಸಿದರೂ ನೀರು ಬರುತ್ತಿಲ್ಲ ಇದರಿಂದ ರೈತರು ನಿರಾಸೆಗೊಂಡಿದ್ದಾರೆ. ದಿನೆ ದಿನೆ ಅಂತರ್ಜಲ ಪ್ರಮಾಣ ಕುಸಿಯುತ್ತಿದೆ ಕಳೆದ ವರ್ಷ 800 ರಿಂದ 900 ಅಡಿಯವರೆಗೆ ಕೊರೆಸಿದರೆ ಉತ್ತಮವಾಗಿ ನೀರು ಬರುತ್ತಿತ್ತು ಈ ಭಾರಿ 1500 ಅಡಿಯವರೆಗೆ ಕೊರೆಸಿದರೂ ಬರೀ ಧೂಳು ಬರುತ್ತದೆ ಆದರೆ ನೀರು ಬರುತ್ತಿಲ್ಲ ಬಂದರೂ ಅರ್ಧ ಇಂಚು ಅದನ್ನು ಮೇಲೆತ್ತಲು ಆಗುತ್ತಿಲ್ಲ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೂ ಪರಿತಪಿಸುವಂತಹ ಪರಿಸ್ಥಿತಿ ಉಂಟಾಗಿದೆ.

       ನೀರಿನ ಮಹತ್ವದ ಬಗ್ಗೆ ಜನತೆ ಜಾಗೃತಿವಹಿಸದಿದ್ದರೆ ಮುಂದೊಂದು ದಿನ ರೈತರ ಬೆಳೆಗಳನ್ನು ಉಳಿಸಿಕೊಳ್ಳುವುದಿರಲಿ ಕುಡಿಯುವ ನೀರಿಗೂ ಪರದಾಡಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗುವುದರಲ್ಲಿ ಸಂದೇಹವೆ ಇಲ್ಲ ಎನ್ನುತ್ತಾರೆ ಪ್ರಜ್ಞಾವಂತರು.ಅಮೂಲ್ಯವಾದ ಅಂತರ್ಜಲ ಸಂರಕ್ಷಣೆ ಮತ್ತು ನೀರಿನ ಸಂರಕ್ಷಣೆ ಬಗ್ಗೆ ಸರ್ಕಾರ ಸೇರಿದಂತೆ ಹಲವು ಸ್ವಯಂ ಸೇವಾ ಸಂಸ್ಥೆಗಳು ಹಲವಾರು ಮಹತ್ವದ ಯೋಜನೆಗಳನ್ನು ರೂಪಿಸುತ್ತಲೆ ಬಂದಿವೆಯಾದರೂ ಈ ಬಗ್ಗೆ ಜನತೆ ತಲೆಕೆಡಿಸಿಕೊಳ್ಳುತ್ತಿಲ್ಲ.

      ನೀರಿನ ಮಹತ್ವದ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಬೇಕಿದೆ ಮಳೆ ನೀರು ಸಂಗ್ರಹಣೆ, ನೀರಿನ ಮಿತ ಬಳಕೆ ಸೇರಿದಂತೆ ಕುಸಿಯುತ್ತಿರುವ ಅಂತರ್ಜಲ ಸಂರಕ್ಷಣೆಗೆ ಜಾಗೃತಿವಹಿಸಬೇಕಿದೆ. ಇತ್ತೀಚಿನ ದಿನಗಳಲ್ಲಿ ಕೊಳವೆ ಬಾವಿಗಳಲ್ಲಿ ಮಾತ್ರವೆ ನೀರು ಕಾಣಬುಹುದೆ ಹೊರತು ಬಾವಿ, ಕೆರೆ. ಕಟ್ಟೆ, ತೊರೆಗಳಲ್ಲಿ ನೀರು ಕಾಣುವುದು ನೆನಪು ಮಾತ್ರ.

        ಇಂತಹ ಪರಿಸ್ಥಿತಿಯಲ್ಲಿ ಸಾರ್ವಜನಿಕರಲ್ಲಿ, ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಅಮೂಲ್ಯವಾದ ನೀರಿನ ಮಹತ್ವ, ನೀರಿನ ಮಿತ ಬಳಕೆ, ಅಂತರ್ಜಲ ಸಂರಕ್ಷಣೆ, ಮಳೆ ನೀರಿನ ಸಂಗ್ರಹಣೆ, ಅರಣ್ಯಗಳ ಸಂರಕ್ಷಣೆಯಂತಹ ಮಹತ್ವದ ಚಿಂತನೆಗಳ ಬಗ್ಗೆ ಅರಿವು ಮೂಢಿಸಬೇಕಾದ ಅನಿವಾರ್ಯತೆ ಅತ್ಯವಶ್ಯಕವಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap