ಹಿರಿಯೂರು :
ತಾಲ್ಲೂಕಿನ ವಿವಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ 11 ಗ್ರಾಮಗಳಿಗೆ ಶಾಶ್ವತ ಶುದ್ಧ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ವಿವಿಸಾಗರ ಜಲಾಶಯದ ಪಂಪ್ ಹೌಸ್ ಕಛೇರಿ ಎದುರು ಭ್ರಷ್ಟಾಚಾರ ವಿರೋಧಿ ವೇದಿಕೆ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರ ಸಂಘ, ಮಹಿಳಾ ಸಂಘಗಳು ಸೇರಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಗ್ರಾಮಸ್ಥರು ಅನಿರ್ಧಿಷ್ಟಾವಧಿ ಧರಣಿ ನಡೆಸಿದರು.
ವಿವಿಪುರ ಗ್ರಾಮಪಂಚಾಯಿತಿ ಕಛೇರಿಯಿಂದ ಪಾದಯಾತ್ರೆ ಮೂಲಕ ಪಂಪ್‍ಸೆಟ್ ಕಛೇರಿ ತಲುಪಿದ ಪ್ರತಿಭಟನಾಕಾರರು ವಿವಿಪುರ ಗ್ರಾ.ಪಂ. ವ್ಯಾಪ್ತಿಯ 11 ಗ್ರಾಮಗಳಿಗೆ ಶುದ್ಧ ನೀರು ಪೂರೈಸಬೇಕಿದೆ. ಈಗಾಗಲೇ ಫ್ಲೋರೈಡ್‍ಯುಕ್ತ ನೀರನ್ನು ಸೇವಿಸುತ್ತಿರುವುದರಿಂದ ಕಿಡ್ನಿ ವೈಫಲ್ಯ, ಮೂಳೆ ಸವೆತ ಸೇರಿ ಹಲವು ಖಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಕೂಡಲೇ ಶುದ್ಧ ನೀರು ಪೂರೈಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ನಪೀಜಾಬೇಗಂ ಭೇಟಿ ನೀಡಿ ಮನವಿ ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಅವರು ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ತಾತ್ಕಾಲಿಕವಾಗಿ ಕುಡಿಯುವ ನೀರನ್ನು ತ್ವರಿತಗತಿಯಲ್ಲಿ ಪೂರೈಸಲಾಗುವುದು. ವಿವಿಪುರ ಪಂಚಾಯ್ತಿ ವ್ಯಾಪ್ತಿಯ 11 ಗ್ರಾಮಗಳಿಗೆ ಶಾಶ್ವತ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗಾಗಿ ಸರ್ವೇ ನಡೆದಿದ್ದು, ಸರ್ಕಾರದಿಂದ ಯೋಜನೆಗೆ ಮಂಜೂರಾತಿಯೂ ದೊರೆತಿದೆ.
ಜೊತೆಗೆ ಗುಡ್ಡದ ಮೇಲೆ ಓವರ್ ಹೆಡ್‍ಟ್ಯಾಂಕ್ ಸಹ ನಿರ್ಮಿಸಲಾಗಿದೆ. ಇದರ ಮುಂದುವರೆದ ಕಾಮಗಾರಿಗೆ ಸರ್ಕಾರದಿಂದ ಹಣ ಬಿಡುಗಡೆ ಆಗಬೇಕಿದೆ. ಹಣ ಬಿಡುಗಡೆ ನಂತರ ಶಾಶ್ವತ ಕುಡಿಯುವ ನೀರು ಸರಬರಾಜು ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು. ತಹಶೀಲ್ದಾರರ ಭರವಸೆಯ ಬಳಿಕ ಗ್ರಾಮಸ್ಥರು ಧರಣಿ ವಾಪಸ್ ಪಡೆದರು.
ಈ ಪ್ರತಿಭಟನೆಯಲ್ಲಿ ಭ್ರಷ್ಟಾಚಾರ ವಿರೋಧಿ ವೇದಿಕೆ ಉಪಾಧ್ಯಕ್ಷ ಗುರುಪಾದಯ್ಯಮಠದ್, ಎ.ಉಮೇಶ್, ಡಾ||ಉಮೇಶ್‍ಹಿರೇಮಠ್, ಬಿ.ಎಲ್.ಕಾಂತರಾಜ್, ಪ್ರಸನ್ನಕುಂದೂರು, ಹನುಮಂತಪ್ಪ ಸೊರಟೂರು, ಸ್ಪೂರ್ತಿಸಂಸ್ಥೆಯ ಕೆ.ಬಿ.ರೂಪಾನಾಯ್ಕ್ ಮತ್ತಿತರರು ಪಾಲ್ಗೊಂಡಿದ್ದರು.