ಅಧಿಕಾರಿಗಳು ಕೇಂದ್ರ ಸ್ಥಳದಲ್ಲಿದ್ದೂ ಜನರ ಸಮಸ್ಯೆಗೆ ಸ್ಪಂದಿಸಿ: ಸಚಿವ ಡಿಕೆಶಿ

ಬಳ್ಳಾರಿ

       ಗ್ರಾಮೀಣ ಮಟ್ಟದಿಂದ ಹಿಡಿದು ಜಿಲ್ಲಾಮಟ್ಟದವರೆಗಿನ ಅಧಿಕಾರಿಗಳು ತಮಗೆ ನಿಗದಿಪಡಿಸಲಾದ ಕೇಂದ್ರ ಸ್ಥಳದಲ್ಲಿಯೇ ವಾಸ್ತವ್ಯವಿದ್ದು ಜನರ ಸಮಸ್ಯೆಗಳಿಗೆ ತತ್‍ಕ್ಷಣ ಸ್ಪಂದಿಸುವ ಕೆಲಸ ಮಾಡಬೇಕು ಎಂದು ವೈದ್ಯಕೀಯ ಶಿಕ್ಷಣ,ಜಲಸಂಪನ್ಮೂಲ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ ಅವರು ಖಡಕ್ ಸೂಚನೆ ನೀಡಿದ್ದಾರೆ. ಇದಕ್ಕೆ ಒಂದು ತಿಂಗಳ ಕಾಲವಕಾಶ ನೀಡಲಾಗಿದ್ದು,ಇದರ ಪರಿಶೀಲನೆಗೆ ವಿಶೇಷ ತಂಡ ನೇಮಕ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

       ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ನಡೆದ ಜಿಪಂ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಗ್ರಾಮೀಣ ಮಟ್ಟದಿಂದ ಹಿಡಿದು ಜಿಲ್ಲಾಮಟ್ಟದವರೆಗಿನ ಅಧಿಕಾರಿಗಳು ಕೇಂದ್ರ ಸ್ಥಳದಲ್ಲಿಯೇ ವಾಸ್ತವ್ಯ ಮಾಡಬೇಕು. ವಾಸ್ತವ್ಯ ಮಾಡುವ ಮನೆಯ ಪೋಟೊ ಹಾಗೂ ಸಂಬಂಧಿತ ವಿವರ ಮತ್ತು ದೈನಂದಿನ ಕಚೇರಿಯಲ್ಲಿ ನಿರ್ವಹಿಸಿದ ದಿನಚರಿ ಸೇರಿದಂತೆ ಸಮಗ್ರ ವಿವರನ್ನು ತಮ್ಮ ಮೇಲಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಅವರು ತಾಕೀತು ಮಾಡಿದರು. ವಿಶೇಷ ತಂಡ ನೇಮಿಸಿ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

        ಜನರು ತಮ್ಮ ಕೆಲಸಗಳಿಗೆ ಅನಗತ್ಯ ಅಲೆದಾಡಬಾರದು. ಜನರ ಬಳಿಯೇ ನಮ್ಮ ಸರಕಾರ ತೆರಳಬೇಕು ಎಂಬ ಸದುದ್ದೇಶದಿಂದ ಅನೇಕ ಕ್ರಮಗಳನ್ನು ಕೈಗೊಳ್ಳಲಿದ್ದು,ಅವುಗಳನ್ನು ಅಧಿಕಾರಿಗಳು ಚಾಚುತಪ್ಪದೇ ಪಾಲಿಸಬೇಕು ಎಂದರು.

        ಯಾವುದೇ ಇಲಾಖೆಯಾಗಿರಲು ಕಾಮಗಾರಿಗಳು ಮತ್ತು ಕೆಲಸಗಳು ಕೈಗೆತ್ತಿಕೊಳ್ಳುವ ಮುನ್ನದ ಫೋಟೊ ಹಾಗೂ ವಿಡಿಯೋದಿಂದ ಹಿಡಿದು ಕೆಲಸ ಮುಗಿದು ಬಿಲ್‍ವರೆಗಿನ ಫೋಟೊ ಮತ್ತು ವಿಡಿಯೋ ಕಡ್ಡಾಯ. ಬೋಗಸ್‍ಗೆ ಅವಕಾಶವಿಲ್ಲ ಎಂಬುದನ್ನು ತಮ್ಮ ಮಾತುಗಳಲ್ಲಿ ಸ್ಪಷ್ಟಪಡಿಸಿದ ಸಚಿವ ಡಿ.ಕೆ.ಶಿವಕುಮಾರ ಅವರು, ಜನರ,ರೈತರ ನೋವು,ಜನರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಎಷ್ಟೆಲ್ಲ ಸಹಾಯಮಾಡಲು ಸಾಧ್ಯವಿದೆಯೋ ಅದನ್ನೆಲ್ಲ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

       ಕೆಎಂಇಆರ್‍ಸಿ ಮತ್ತು ಜಿಲ್ಲಾ ಖನಿಜ ಪ್ರತಿಷ್ಠಾನದಲ್ಲಿ 13 ಸಾವಿರ ಕೋಟಿ ರೂ.ಗಳಿದ್ದು,ಅವುಗಳ ಮೂಲಕ ಆಸ್ತಿ ಸೃಜನೆಯಂತ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುವುದು;ಒಂದೇ ಒಂದು ರೂಪಾಯಿ ಕೂಡ ವ್ಯರ್ಥವಾಗಲು ಬಿಡುವುದಿಲ್ಲ ಎಂದು ವಿವರಿಸಿದ ಸಚಿವ ಡಿಕೆಶಿ ಅವರು ನರೇಗಾಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ,ಕಾರ್ಯಾಗಾರ ಆಯೋಜಿಸಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ತಿಳಿಸಲಾಗುವುದು ಎಂದರು.

      ರೈತರಿಗೆ ಮತ್ತು ಜನಸಾಮಾನ್ಯರಿಗೆ ಆಂದೋಲನದ ರೂಪದಲ್ಲಿ ತಾಲೂಕುಮಟ್ಟದಲ್ಲಿ ದ್ವಿಚಕ್ರ,ತ್ರಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳ ಲೈಸೆನ್ಸ್ ಕೊಡಿಸುವ ಕೆಲಸ ಮಾಡಿ ಎಂದು ಆರ್‍ಟಿಒ ಅವರಿಗೆ ಸೂಚನೆ ನೀಡಿದರು. ಇದನ್ನು ಇದೇ ತಿಂಗಳೊಳಗೆ ಆಂದೋಲನದ ರೂಪದಲ್ಲಿ ಕೈಗೆತ್ತಿಕೊಂಡು ಲೈಸನ್ಸ್ ಮಾಡಿಸಲಾಗುವುದು ಎಂದರು.

        ಕುಡಿಯುವ ನೀರಿಗೆ ಹಣದ ಕೊರತೆ ಇಲ್ಲ. ಪ್ರತಿ ತಾಲೂಕಿಗೆ 50 ಲಕ್ಷ ರೂ.ಬಿಡುಗಡೆ ಮಾಡಲಾಗಿದ್ದು, ಶಾಸಕರು ಈಗಿನಿಂದಲೇ ಎಚ್ಚೆತ್ತುಕೊಂಡು ಬೇಸಿಗೆ ಆರಂಭವಾಗುವ ಮುನ್ನವೇ ಯೋಜನೆ ಹಾಕಿಕೊಂಡು ತಮ್ಮ ಕ್ಷೇತ್ರಗಳಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಿ ಎಂದು ಸಚಿವರು ಸಲಹೆ ನೀಡಿದರು.

         ನೀರಾವರಿ, ಇಂಧನ, ಲೋಕೋಪಯೋಗಿ, ಜಿಪಂ ಮತ್ತು ವಸತಿ ಇಲಾಖೆಗಳಿಗೆ ಸಂಬಂಧಿಸಿದಂತೆ ಬೆಳಗಾವಿ ವಿಶೇಷ ಅಧಿವೇಶನದ ಸಂದರ್ಭದಲ್ಲಿ ಜಿಲ್ಲೆಯ ಶಾಸಕರ ಜತೆಗೂಡಿ ರಾಜ್ಯಮಟ್ಟದ ಅಧಿಕಾರಿಗಳ ಸಭೆ ಕರೆದು ಸಮಸ್ಯೆಗಳು ಮತ್ತು ಬೇಡಿಕೆಗಳ ವಿಷಯದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

        ಈ ಸಂದರ್ಭದಲ್ಲಿ ಸಂಸದ ವಿ.ಎಸ್.ಉಗ್ರಪ್ಪ, ಶಾಸಕರಾದ ಆನಂದಸಿಂಗ್,ಪಿ.ಟಿ.ಪರಮೇಶ್ವರ ನಾಯಕ್, ಈ.ತುಕಾರಾಂ, ಸೋಮಶೇಖರ ರೆಡ್ಡಿ, ಸೋಮಲಿಂಗಪ್ಪ, ಕೆ.ಸಿ.ಕೊಂಡಯ್ಯ, ಅಲ್ಲಂವೀರಭದ್ರಪ್ಪ,ಶರಣಪ್ಪ ಮಟ್ಟೂರು ಅವರು ವಿವಿಧ ವಿಷಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಸಭೆಯಲ್ಲಿ ಮಂಡಿಸಿದರು.

       ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ, ಉಪಾಧ್ಯಕ್ಷೆ ಪಿ.ದೀನಾ ಮಂಜುನಾಥ,ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್, ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ, ಎಸ್ಪಿ ಅರುಣ ರಂಗರಾಜನ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link