ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾದ ಸಭಾಧ್ಯಕ್ಷರು

ಬೆಂಗಳೂರು

  ಒಂದೆಡೆ ಬರ ಮತ್ತು ಮತ್ತೊಂದೆಡೆ ನೆರೆಯ ಸಮಸ್ಯೆಗೆ ತುತ್ತಾಗಿ ಅರ್ಧ ರಾಜ್ಯವೇ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಈ ಕುರಿತು ತಾವು ನೀಡಿರುವ ನಿಲುವಳಿ ಸೂಚನೆಗೆ ಸಂಬಂಧಿಸಿದಂತೆ ಪ್ರಾಥಮಿಕ ಚರ್ಚೆಗೆ ಅವಕಾಶ ಮಾಡಿಕೊಡುವಂತೆ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರ ನೇತೃತ್ವದ ಪ್ರತಿಪಕ್ಷದ ಒತ್ತಾಯಕ್ಕೆ ಮಣಿಯದೆ ಕಾರ್ಯಸೂಚಿಯಂತೆ ಸದನದ ಕಲಾಪಕ್ಕೆ ಅವಕಾಶ ಕಲ್ಪಿಸಿದ ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಲ್ಲಿ ಇಂದು ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾದರು.

   ಸಂತಾಪ ಸೂಚನಾ ನಿರ್ಣಯ ಪೂರ್ಣಗೊಂಡ ನಂತರ ಕಾರ್ಯದರ್ಶಿಗಳ ವರದಿ ಹಾಗೂ ವಿವಿಧ ಸಮಿತಿಗಳ ವರದಿ ಮಂಡನೆಯ ನಂತರ ಕಾಂಗ್ರೆಸ್ ಹಾಗೂ ಜಾತ್ಯಾತೀತ ಜನತಾ ದಳ ನೀಡಿರುವ ನಿಲುವಳಿ ಸೂಚನೆಯನ್ನು ಕೈಗೆತ್ತಿಕೊಳ್ಳುವುದಾಗಿ ಸಭಾಧ್ಯಕ್ಷರು ಹೇಳಿದರಾದರೂ, ಪ್ರಶ್ನೋತ್ತರ ವೇಳೆ ಹಾಗೂ ಶೂನ್ಯ ವೇಳೆಯ ನಂತರ ನಿಯಮ 60 ರಂತೆ ಸಾರ್ವಜನಿಕ ಮಹತ್ವದ ವಿಚಾರದ ಚರ್ಚೆಗೆ ನಿಯಮಾವಳಿಗಳಲ್ಲಿ ಅವಕಾಶವಿದೆ ಎಂಬುದನ್ನು ಉಲ್ಲೇಖಿಸಿದ ಸಿದ್ದರಾಮಯ್ಯ ಅವರು ದಿನದ ಕಾರ್ಯಸೂಚಿಯಲ್ಲಿ ಪ್ರಶ್ನೋತ್ತರ ವೇಳೆ ಹಾಗೂ ಶೂನ್ಯ ವೇಳೆಯ ಚರ್ಚೆ ಇಲ್ಲದಿರುವ ಹಿನ್ನೆಲೆಯಲ್ಲಿ ಸಭಾಧ್ಯಕ್ಷ ಪೀಠಕ್ಕೆ ತಾವು ಸಲ್ಲಿಸಿದ ನಿಲುವಳಿ ಸೂಚನೆ ಕುರಿತ ಪ್ರಾಥಮಿಕ ಚರ್ಚೆಗೆ ಪಟ್ಟುಹಿಡಿದರು.

     ಸಭಾನಾಯಕ ಬಿ ಎಸ್ ಯಡಿಯೂರಪ್ಪ ಅವರು ಮಧ್ಯ ಪ್ರವೇಶಿಸಿ ಚರ್ಚೆಗೆ ತಾವು ಸಿದ್ಧ ಎಂದು ಭರವಸೆ ನೀಡಿದರೂ ಪ್ರತಿಪಕ್ಷದವರು ಮುಖ್ಯಮಂತ್ರಿಯವರ ಮನವಿಯನ್ನು ಪುರಸ್ಕರಿಸಲಿಲ್ಲ.ತಮ್ಮ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತ ಸದಸ್ಯರಾದ ಕೆ ಆರ್ ರಮೇಶ್ ಕುಮಾರ್ ಕೃಷ್ಣ ಬೈರೇಗೌಡ ಹಾಗೂ ಹೆಚ್ ಕೆ ಪಾಟೀಲ್ ಅವರು ಕಲಾಪದ ಕಾರ್ಯವಿಧಾನದಲ್ಲಿನ ನಿಯಮಾವಳಿಗಳನ್ನು ಉಲ್ಲೇಖಿಸಿದರೂ ಸಭಾಧ್ಯಕ್ಷರ ಮನವೊಲಿಸಲು ಸಾಧ್ಯವಾಗಲಿಲ್ಲ.

    ಒಂದು ಹಂತದಲ್ಲಿ ಸಿದ್ದರಾಮಯ್ಯ ಅವರು ಪ್ರಜಾಪ್ರಭುತ್ವದ ಧ್ವನಿ ಅಡಗಿಸಲು ಸಾಧ್ಯವಿಲ್ಲ ಎಂದು ಏರಿದ ಧ್ವನಿಯಲ್ಲಿ ಕೂಗಿ ಸಭಾಧ್ಯಕ್ಷರ ನಡೆಯನ್ನು ಪ್ರತಿಭಟಿಸಿದರಲ್ಲದೆ, ಸಭಾಧ್ಯಕ್ಷರು ಸರ್ಕಾರದ ಜೊತೆಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು. ಇದಾವುದಕ್ಕೂ ಜಗ್ಗದ ಸಭಾಧ್ಯಕ್ಷರು ಕಾರ್ಯಸೂಚಿಯಂತೆ ಕಲಾಪವನ್ನು ಮುಂದುವರೆಸಿದರು.

    ರಾಜ್ಯ ವಿಧಾನ ಸಭೆಯ ಕಾರ್ಯದರ್ಶಿ ಎಂ ಕೆ ವಿಶಾಲಾಕ್ಷಿ ಅವರು ಕಳೆದ ಅಧಿವೇಶನದಲ್ಲಿ ವರದಿಯನ್ನು ಒಪ್ಪಿಸಿದ ನಂತರ ರಾಷ್ಟ್ರಪತಿಯವರಿಂದ – ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಪಟ್ಟಿಯನ್ನು ಸಭೆಯ ಮುಂದೆ ಮಂಡಿಸಿದರು. ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿಯ ಅಧ್ಯಕ್ಷ ಅರಗ ಜ್ಞಾನೇಂದ್ರ ಅವರು 2018-19 ನೇ ಸಾಲಿನ ಸಮಿತಿಯ 28 ನೇ ವರದಿಯನ್ನು ಒಪ್ಪಿಸಿದರು. ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷ ಎಸ್ ಅಂಗಾರ ಅವರು ಸಮಿತಿಯ ಎರಡನೇ ವರದಿಯನ್ನು ಸದನಕ್ಕೆ ಒಪ್ಪಿಸಿದರು.

    ನಂತರ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ 2017-18 ನೇ ಸಾಲಿನ ಧನ ವಿನಿಯೋಗ ಲೆಕ್ಕಗಳು ಮತ್ತು ಹಣಕಾಸು ಲೆಕ್ಕಗಳನ್ನು ಸಭೆಯ ಮುಂದಿಟ್ಟರು. ಅಲ್ಲದೆ, ಮಾರ್ಚ್ 2018 ಕ್ಕೆ ಅಂತ್ಯಗೊಂಡ ರಾಜಸ್ವ ವಲಯದ ಮೇಲಿನ ವರದಿ ಹಾಗೂ ಆರ್ಥಿಗ ವಲಯದ ಮೇಲಿನ ವರದಿಗಳನ್ನು ಸಭೆಯ ಮುಂದಿಟ್ಟರು.

     ತದನಂತರ, ಉಪ ಮುಖ್ಯಮಂತ್ರಿಗಳಾದ ಗೋವಿಂದ ಎಂ ಕಾರಜೋಳ, ಡಾ ಸಿ ಎನ್ ಅಶ್ವಥನಾರಾಯಣ ಹಾಗೂ ಲಕ್ಷ್ಮಣ ಸವದಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಅವರನ್ನು ಒಳಗೊಂಡಂತೆ ಬಿ ಎಸ್ ಯಡಿಯೂರಪ್ಪ ಅವರ ಸಚಿವ ಸಂಪುಟ ಸಹೋದ್ಯೋಗಿಗಳು ತಮ್ಮ ಇಲಾಖೆಗೆ ಸಂಬಂಧಿಸಿದಂತೆ ವಿತ್ತೀಯ ಕಾರ್ಯಕಲಾಪಗಳಲ್ಲಿನ ಪ್ರಸಕ್ತ ಸಾಲಿನ ಅನುದಾನದ ಬೇಡಿಕೆಗಳನ್ನು ಮಂಡಿಸಿದರು.

    ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರನ್ನು ಪ್ರತಿಪಕ್ಷ ನಾಯಕರಾಗಿ ಹಾಗೂ ಸರ್ಕಾರದ ಸಚೇತಕರಾಗಿ ವಿ ಸುನೀಲ್ ಕುಮಾರ್ ಅವರನ್ನು ಮಾನ್ಯ ಮಾಡಿರುವುದಾಗಿ ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಧಿಕೃತವಾಗಿ ಪ್ರಕಟಿಸಿದರು.

    ಅಂತೆಯೇ, ಸದನದ ಕಾರ್ಯಕಲಾಪಗಳನ್ನು ಸುಗಮವಾಗಿ ನಡೆಸಲು ಆಡಳಿತಾರೂಢಾ ಹಾಗೂ ಪ್ರತಿಪಕ್ಷಗಳ ಸದನ ನಾಯಕರನ್ನು ಕಲಾಪ ಸಲಹಾ ಸಮಿತಿಯ ಸಭೆಗೆ ಆಮಂತ್ರಿಸಿದ ಸಭಾಧ್ಯಕ್ಷರು ಪ್ರತಿಪಕ್ಷ ಹಾಗೂ ಆಡಳಿತ ಪಕ್ಷಗಳ ಘೋಷಣೆ ಮತ್ತು ಪ್ರತಿ-ಘೋಘಣೆಗಳ ನಡುವೆಯೇ ಸದನವನ್ನು ಕೆಲ ಕಾಲ ಮುಂದೂಡಿದರು.

    ಬೆಂಗಳೂರು,ಅಕ್ಟೋಬರ್,10-ರಾಜ್ಯದಲ್ಲಿ ಸಂಭವಿಸಿದ ಭೀಕರ ಪ್ರವಾಹ ಪರಿಸ್ಥಿತಿಯಿಂದ ಲಕ್ಷಾಂತರ ಜನ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದು ಇದರ ಬಗ್ಗೆ ಮೊದಲು ಚರ್ಚೆ ನಡೆಯಬೇಕು ಎಂದು ಆಗ್ರಹಿಸಿದ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಇದಕ್ಕೆ ಅವಕಾಶ ನೀಡದ ಸ್ಪೀಕರ್ ಕ್ರಮವನ್ನು ಫ್ಯಾಸಿಸ್ಟ್ ಧೋರಣೆ ಎಂದು ಆಕ್ರೋಶ ವ್ಯಕ್ತಪಡಿಸಿದ ಘಟನೆ ವಿಧಾನಸಭೆಯಲ್ಲಿಂದು ನಡೆಯಿತು.
ಇದೇ ಕಾಲಕ್ಕೆ ಪ್ರವಾಹದಿಂದಾದ ಅನಾಹುತದ ಬಗ್ಗೆ ಚರ್ಚಿಸಲು ಅವಕಾಶ ನೀಡದ ಸ್ಪೀಕರ್ ಧೋರಣೆಯನ್ನು ಖಂಡಿಸಿದ ಜೆಡಿಎಸ್ ಸದಸ್ಯರು ಸಭಾಧ್ಯಕ್ಷರ ಎದುರಿನ ಬಾವಿಯಲ್ಲಿ ಧರಣಿ ನಡೆಸಿದ ಬೆಳವಣಿಗೆ ಕೂಡಾ ನಡೆಯಿತು.

    ಇಂದು ಆರಂಭವಾದ ವಿಧಾನಸಭೆ ಕಲಾಪದ ಆರಂಭದಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸಲ್ಲಿಸಿದ ನಂತರ ಧನವಿನಿಯೋಗ ಮಸೂದೆ ಸೇರಿದಂತೆ ಹಲವು ವಿಷಯಗಳನ್ನು ಮಂಡಿಸಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅನುಮತಿ ನೀಡಲು ಮುಂದಾದರು.
ಆದರೆ ಇದಕ್ಕೆ ಅಡ್ಡಿ ಪಡಿಸಿದ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ:ಅರ್ಜಿಗಳನ್ನು ತರಾತುರಿಯಲ್ಲಿ ಮಂಡಿಸುವ ಅಗತ್ಯವೇನಿಲ್ಲ.ಇದರ ಬದಲು ನಿಯಮ 60 ರಡಿ ರಾಜ್ಯದಲ್ಲಿ ಸಂಭವಿಸಿದ ಪ್ರವಾಹ ಪರಿಸ್ಥಿತಿಯ ಕುರಿತು ಚರ್ಚಿಸಲು ಅವಕಾಶ ನೀಡುವಂತೆ ಒತ್ತಾಯಿಸಿದರು.

   ಪ್ರವಾಹ ಬಂದು ರಾಜ್ಯದ ಅರ್ಧಕ್ಕೂ ಹೆಚ್ಚು ಭಾಗ ತತ್ತರಿಸಿದೆ.ಏಳು ಲಕ್ಷ ಮಂದಿ ಬದುಕು ನಡೆಸಲು ಪರದಾಡುತ್ತಿದ್ದಾರೆ.ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.ಆದರೆ ಪರಿಹಾರ ಕಾರ್ಯಗಳು ನಿರೀಕ್ಷಿತ ಮಟ್ಟದಲ್ಲಿ ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಆದರೆ ಸಿದ್ಧರಾಮಯ್ಯ ಅವರ ಮಾತನ್ನು ಒಪ್ಪದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು,ನೀವು ಪ್ರಸ್ತಾಪಿಸಿದ ವಿಷಯದ ಬಗ್ಗೆ ಚರ್ಚೆ ಮಾಡಲು ಅನುವು ಮಾಡಿಕೊಡುತ್ತೇನೆ.ಅದಕ್ಕೂ ಮುನ್ನ ಅರ್ಜಿಗಳು ಮಂಡನೆಯಾಗಿ ಬಿಡಲಿ ಎಂದರು.
ಆದರೆ ಸಿದ್ಧರಾಮಯ್ಯ ಅದಕ್ಕೂ ಒಪ್ಪದಿದ್ದಾಗ,ನಿಯಮ 60 ರ ಹೆಸರಿನಲ್ಲಿ ಹಗ್ಗ ಜಗ್ಗಾಟ ನಡೆಸುತ್ತಾ ಅದನ್ನು ನಿಯಮ 60 ರಡಿಯಲ್ಲೇ ಚರ್ಚಿಸಬೇಕೋ?ಅಥವಾ ನಿಯಮ 69 ರಡಿಯಲ್ಲಿ ಚರ್ಚಿಸಬೇಕೋ?ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಕಾಲಹರಣ ಮಾಡಲಾಗುತ್ತಿದೆ.

    ಇದನ್ನು ಸರಿಪಡಿಸಿ ಎಂದು ಇತ್ತೀಚೆಗೆ ಕರೆದ ಸಭೆಯೊಂದರಲ್ಲಿ ಮಾಧ್ಯಮಗಳು ನನಗೆ ಸಲಹೆ ನೀಡಿವೆ ಎಂದರು.
ಇದು ಬಹು ಅಮೂಲ್ಯವಾದ ಸಲಹೆ.ನಾವು ಈ ವಿಷಯದಲ್ಲಿ ಒಂದು ಖಚಿತ ತೀರ್ಮಾನಕ್ಕೆ ಬರಲೇಬೇಕು.ಸುಖಾ ಸುಮ್ಮನೆ ವಾದ ಮಾಡುತ್ತಾ ಕಾಲ ಕಳೆದರೆ ಸರಿಯಲ್ಲ ಎಂದು ಅವರು ಹೇಳಿದರು.

    ಆದರೂ ಪಟ್ಟು ಬಿಡದ ಸಿದ್ಧರಾಮಯ್ಯ:ಇದು ನಾವೇ ಮಾಡಿಕೊಂಡ ನಿಯಮ.ಅದನ್ನು ಈಗ ಏಕಾಏಕಿ ಬದಲಿಸಬೇಕು ಎಂದರೆ ಹೇಗೆ?ಸದನ ಆರಂಭವಾಗುವುದಕ್ಕಿಂತ ಮುಂಚೆ ನಿಯಮ 60 ರಡಿ ಅರ್ಜಿ ಕೊಟ್ಟರೆ ಚರ್ಚೆಗೆ ಅವಕಾಶ ನೀಡಬೇಕು ಅಂತಿದೆ.ನಾನು ಒಂದು ಗಂಟೆಗೂ ಮುಂಚೆ ನೀಡಿದ್ದೇನೆ ಎಂದು ಹೇಳಿದರು.

     ಆದರೂ ಇದನ್ನು ಸ್ಪೀಕರ್ ಒಪ್ಪದೆ ಕಾರ್ಯದರ್ಶಿಗಳ ಅರ್ಜಿ ಮಂಡನೆಗೆ ಅವಕಾಶ ನೀಡಿದಾಗ ಸದನದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಕೋಲಾಹಲದ ವಾತಾವರಣ ಸೃಷ್ಟಿಸಿದರು.ರಾಜ್ಯದಲ್ಲಿ ಅತಿವೃಷ್ಟಿ ಸಂಭವಿಸಿ ಜನ ತತ್ತರಿಸುತ್ತಿದ್ದರೂ ಅದರ ಬಗ್ಗೆ ಚರ್ಚಿಸದೆ ವರದಿಗಳನ್ನು ಮಂಡಿಸುವ ಕೆಲಸವಾಗುತ್ತಿದೆ.ಅದೇನು ರಾಜ್ಯದ ಜನರಿಗಿಂತ ದೊಡ್ಡ ಸಮಸ್ಯೆಯಲ್ಲ ಎಂದು ಸಿದ್ಧರಾಮಯ್ಯ ಸೇರಿದಂತೆ ಹಲವರು ವಾಗ್ಧಾಳಿ ನಡೆಸಿದರು.

     ಒಂದು ಹಂತದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮಧ್ಯೆ ಪ್ರವೇಶಿಸಿ:ಕಾರ್ಯಕಲಾಪಗಳ ಪಟ್ಟಿಯಂತೆ ಸಾಗೋಣ.ರಾಜ್ಯದ ಅತಿವೃಷ್ಟಿ ಸಮಸ್ಯೆಯ ವಿಷಯದಲ್ಲಿ ನಾನು ಚರ್ಚಿಸಲು ಹಿಂಜರಿಯುವುದಿಲ್ಲ.ಸುಧೀರ್ಘ ಚರ್ಚೆ ನಡೆಸೋಣ.ಈಗ ಸಹಕಾರ ನೀಡಿ ಎಂದರೂ ಒಪ್ಪದೆ ಸಿದ್ಧರಾಮಯ್ಯ,ಕೃಷ್ಣ ಭೈರೇಗೌಡ,ಹೆಚ್.ಕೆ.ಪಾಟೀಲ್,ಆರ್.ವಿ.ದೇಶಪಾಂಡೆ ಸೇರಿದಂತೆ ಹಲವರು ಗದ್ದಲ ಎಬ್ಬಿಸಿದರು.

    ಆದರೂ ವರದಿ ಮಂಡನೆ ಕಾರ್ಯ ಮುಂದುವರಿಯುತ್ತಿದ್ದಂತೆಯೇ ಸಿಎಂ ಯಡಿಯೂರಪ್ಪ ಕೂಡಾ ಮೇಲೆದ್ದು ನಿಂತು ಧನವಿನಿಯೋಗ ಮಸೂದೆಯನ್ನು ಸದನದ ಮುಂದೆ ಮಂಡಿಸಿದರು.ಆಗ ಎದ್ದ ಹಾಹಾಕಾರದ ಹಿನ್ನೆಲೆಯಲ್ಲಿ ಸದನವನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಧ್ಯಾಹ್ನದವರೆಗೆ ಮುಂದೂಡಿದರು.ತದ ನಂತರ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವರು,ಸ್ಪೀಕರ್ ಕ್ರಮದ ಹಿಂದೆ ಸಂಘಪರಿವಾರದ ಅಜೆಂಡಾ ಇದೆ ಎಂದು ಆರೋಪಿಸಿದರು.

    ಇವತ್ತಿನ ಧೋರಣೆಯನ್ನು ನೋಡಿದರೆ ಸ್ಪೀಕರ್ ಅವರು ಸರ್ಕಾರದ ಜತೆ ಷಾಮೀಲಾಗಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.ಹಾಗೆಯೇ ಇದು ಫ್ಯಾಸಿಸ್ಟ್ ಧೋರಣೆ.ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ಮುಗಿಸುವ ಹುನ್ನಾರ ಎಂದು ಆರೋಪಿಸಿದರು.ಸ್ಪೀಕರ್ ಅವರ ಈ ಧೋರಣೆಯನ್ನು ನೋಡಿದರೆ ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವಕ್ಕೆ ಗಂಡಾಂತರವಿದೆ.ಇಂದಿನ ನಡೆಯೇ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದಂತಾಗಿದೆ ಎಂದ ಅವರು,ಇದರ ವಿರುದ್ದ ಜನತಾ ನ್ಯಾಯಾಲಯಕ್ಕೆ ಹೋಗುವುದಾಗಿ ತಿಳಿಸಿದರು.