ಚಳ್ಳಕೆರೆ
ರಾಷ್ಟ್ರದಲ್ಲಿ ರೂಪಿತವಾದ ಸಂವಿಧಾನ ಎಲ್ಲರಿಗೂ ಸಮಾನವಾದ ಹಕ್ಕು ಮತ್ತು ರಕ್ಷಣೆಯನ್ನು ನೀಡುತ್ತಾ ಬಂದಿದೆ. ಸಂವಿಧಾನ ಎಲ್ಲರಿಗೂ ಉತ್ತಮ ಅವಕಾಶಗಳನ್ನು ಕಲ್ಪಿಸಿಕೊಡುವ ಶಕ್ತಿ ಮತ್ತು ಸಾಮಥ್ರ್ಯ ಎರಡೂ ಇದೆ. ಇಂದು ಆಡಳಿತದಲ್ಲಿ ನಡೆಯುವ ಎಲ್ಲಾ ರೀತಿಯ ಕಾರ್ಯಗಳನ್ನು ಸಂವಿಧಾನದ ತಳಹದಿಯ ಮೇಲೆ ಇದೆ. ಸಂವಿಧಾನದಿಂದ ಮಾತ್ರ ನಾವೆಲ್ಲರೂ ಸರ್ವೋಚ್ಯ ಬದುಕನ್ನು ಕಂಡುಕೊಳ್ಳಲು ಸಾಧ್ಯಹಿರಿಯ ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್ ತಿಳಿಸಿದರು.
ಅವರು, ಸೋಮವಾರ ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂವಿಧಾನ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಎಲ್ಲಾ ಸಮುದಾಯಕ್ಕೂ ಅಗತ್ಯವಿರುವಂತೆ ಹಲವಾರು ಕಾನೂನುಗಳನ್ನು ಸಂವಿಧಾನದಲ್ಲಿ ಅಡಕಗೊಳಿಸಲಾಗಿದೆ.
ವಿಶೇಷವಾಗಿ ಇಂದಿನ ವಿದ್ಯಾರ್ಥಿಗಳು ಸಂವಿಧಾನವನ್ನು ಅರಿತು ನಡೆದರೆ ಉತ್ತಮ ಭವಿಷ್ಯವನ್ನು ಕಾಣಬಹುದಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಗುಣಾತ್ಮಕ ಶಿಕ್ಷಣ, ಉದ್ಯೋಗಾವಕಾಶ ಹಾಗೂ ಬದಕು ರೂಪಿಸಿಕೊಳ್ಳಲು ಸಂವಿಧಾನ ಅವಶ್ಯಕವಾಗಿದೆ. ಉತ್ತಮ ಜ್ಞಾನಾರ್ಜನೆಯನ್ನು ಪಡೆದುಕೊಳ್ಳಲು ಸಂವಿಧಾನ ಸಹಕಾರ ಬೇಕು. ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಸಂವಿಧಾನ ಪ್ರೇರಣಾ ಶಕ್ತಿಯಾಗಿ ಕಾರ್ಯನಿರ್ವಹಿಸಲಿದೆ ಎಂದರು.
ಅಪರ ಸಿವಿಲ್ ನ್ಯಾಯಾಧೀಶ ಕೋಟೆಪ್ಪ ಕಾಂಭ್ಳೆ ಮಾತನಾಡಿ, ಯಾರು ಕಾನೂನನ್ನು ಉಲ್ಲಂಘಿಸುತ್ತಾರೋ ಅವರು ಸುಲಭವಾಗಿ ಸಮಸ್ಯೆಯಲ್ಲಿ ಸಿಲುಕಿಗೊಳ್ಳುತ್ತಾರೆ. ಇಂದು ರೂಪಿತವಾದ ಎಲ್ಲಾ ಕಾನೂನುಗಳು ಯಾವುದೇ ರೀತಿಯ ತೊಂದರೆಯನ್ನು ಉದ್ದೇಶ ಪೂರಕವಾಗಿ ಉಂಟು ಮಾಡುವ ಪ್ರಶ್ನೆ ಇಲ್ಲ. ಬದಲಾಗಿ ಕಾನೂನು ಉಲ್ಲಂಘನೆ ಮಾತ್ರ ಅಪರಾಧವಾಗುತ್ತದೆ. ವಿದ್ಯಾರ್ಥಿಗಳು ಸಹ ಅನೇಕ ಬಾರಿ ಅನಗತ್ಯವಾಗಿ ಕಾನೂನು ಉಲ್ಲಂಘನೆ ಮಾಡುವತ್ತ ಮುನ್ನಡೆದರೆ ಮಾತ್ರ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಸಂವಿಧಾನ ಬದ್ದ ಕಾನೂನು ನಮ್ಮೆಲ್ಲರಿಗೂ ರಕ್ಷಾ ಕವಚವಾಗಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಕೆ.ಎಂ.ನಾಗರಾಜು ಮಾತನಾಡಿ, ಪ್ರೌಢಶಾಲೆಯ ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಹೆಚ್ಚಿದ್ದು, ಯಾವುದೇ ವಿಚಾರಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳುವ ಶಕ್ತಿಯನ್ನು ಹೊಂಡಿದ್ದಾರೆ. ದೇವರ ಜನರ ರಕ್ಷಣೆಗಾಗಿಯೇ ರೂಪಿತವಾಗಿರುವ ಕಾನೂನು ಎಲ್ಲರನ್ನೂ ಉತ್ತಮ ಸನ್ಮಾರ್ಗದತ್ತ ತೆಗೆದುಕೊಂಡು ಹೋಗುವ ಶಕ್ತಿಯನ್ನು ಹೊಂದಿದೆ. ದೇಶದ ಇತಿಹಾಸದಲ್ಲಿ ಕಾನೂನನ್ನು ನಿರ್ಲಕ್ಷಿಸಿದವರೇ ಸಮಸ್ಯೆಗೆ ಈಡಾಗಿದ್ಧಾರೆ. ಕಾನೂನು ನಮ್ಮೆಲ್ಲರಿಗೂ ದಾರಿದೀಪವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಜಿ.ಎಲ್.ನಾಗರಾಜು ಮಾತನಾಡಿ, ಕಾನೂನಿನ ವಾಸ್ತವ ಸ್ಥಿತಿಯನ್ನು ತಿಳಿಸಿರುವ ನ್ಯಾಯಮೂರ್ತಿಗಳು ವಿದ್ಯಾರ್ಥಿಗಳು ಸಹ ಉತ್ತಮ ಶೈಕ್ಷಣಿಕ ಪ್ರಗತಿ ಹೊಂದಲು ಅವಶ್ಯವಿರುವ ಹಲವಾರು ರೂಪುರೇಷೆಗಳ ಬಗ್ಗೆ ಮಾರ್ಗದರ್ಶನ ನೀಡಿದ್ಧಾರೆ. ಈ ಕಾರ್ಯಕ್ರಮ ಪ್ರತಿಯೊಬ್ಬ ವಿದ್ಯಾರ್ಥಿಯ ಬದುಕಿನಲ್ಲಿ ಹೊಸ ಶೈಕ್ಷಣಿಕ ಪರ್ವವನ್ನು ಪ್ರಾರಂಬಿಸುವುದರಲ್ಲಿ ಯಾವುದೇ ಅನುಮಾನವಿಲ್ಲವೆಂದರು.
ಕಾರ್ಯಕ್ರಮದಲ್ಲಿ ಕಾನೂನು ಸೇವಾ ಸಮಿತಿ ಸದಸ್ಯ ಕುರುಡಿಹಳ್ಳಿ ಶ್ರೀನಿವಾಸ್, ಶಿಕ್ಷಕಿಯರಾದ ನಾಗನಾಂಭಿಕ, ವೀಣಾ, ಶೈಲಜಾ, ಶ್ವೇತ, ರಂಗಸ್ವಾಮಿ, ಹರಿಪ್ರಸಾದ್, ಗೌಸಿಯ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕಿ ನಿರ್ಮಲ ಸ್ವಾಗತಿಸಿದರು, ಚೈತ್ರ ವಂದಿಸಿದರು, ಶುಭಾ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
