ಹೊಸಪೇಟೆ :
ವಿಜಯನಗರ ಕ್ಷೇತ್ರದ ಶಾಸಕ ಆನಂದಸಿಂಗ್ ಶೀಘ್ರ ಗುಣಮುಖರಾಗಿ ಹೊರ ಬರಲಿ ಎಂದು ಹರಕೆಹೊತ್ತು ನಗರಸಭೆ ಅಧ್ಯಕ್ಷ ಗುಜ್ಜಲ ನಿಂಗಪ್ಪ ನೇತೃತ್ವದಲ್ಲಿ ಅವರ ನೂರಾರು ಅಭಿಮಾನಿಗಳು ಗುರುವಾರ ಜಂಬುನಾಥ ದೇವಸ್ಥಾನಕ್ಕೆ ಪಾದಯಾತ್ರೆ ನಡೆಸಿ ಪೂಜೆ ಸಲ್ಲಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ಪಾದಯಾತ್ರೆಯು ಇಲ್ಲಿಂದ 2 ಕಿ.ಮಿ. ದೂರ ಕ್ರಮಿಸಿ ಜಂಬುನಾಥ ಬೆಟ್ಟದಲ್ಲಿರುವ ಶ್ರೀ ಜಂಬುನಾಥ ದೇವಸ್ಥಾನದ ಮೆಟ್ಟಿಲುಗಳಿಗೆ 251 ತೆಂಗಿನಕಾಯಿ ಒಡೆದು ಬಳಿಕ ಪ್ರಾರ್ಥಿಸಿದರು.
ದೇವಸ್ಥಾನದಲ್ಲಿ ಶಾಸಕ ಆನಂದಸಿಂಗ್, ಅವರ ಪತ್ನಿ ಲಕ್ಷ್ಮಿಸಿಂಗ್, ಪುತ್ರ ಸಿದ್ದಾರ್ಥಸಿಂಗ್ ಸೇರಿ ಇಬ್ಬರು ಪುತ್ರಿಯರ ಹೆಸರಿನಲ್ಲಿ ಅರ್ಚನೆ ಮಾಡಿಸಲಾಯಿತು.ನಗರಸಭೆ ಅಧ್ಯಕ್ಷ ಗುಜ್ಜಲ ನಿಂಗಪ್ಪ ಈ ವೇಳೆ ಮಾತನಾಡಿ, ಶಾಸಕ ಆನಂದಸಿಂಗ್ ಅವರ ಮೇಲೆ ಹಲ್ಲೆ ನಡೆಸಿದವರ ವಿರುದ್ದ ಕೂಡಲೇ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಮತ್ತು ಆನಂದಸಿಂಗ್ ಅವರು ಬೇಗ ಚೇತರಿಸಿಕೊಂಡು ಕ್ಷೇತ್ರದತ್ತ ಮರಳಲಿ ಎಂದು ಪ್ರಾರ್ಥಿಸಿದರು.
ಮುಖಂಡರಾದ ಬಿ.ಎಸ್.ಜಂಬಯ್ಯನಾಯಕ, ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿಯ ಅಧ್ಯಕ್ಷ ಪಿ.ವಿ.ವೆಂಕಟೇಶ, ಜಂಬಯ್ಯ, ವಿಜಯಕುಮಾರ್, ಗುಜ್ಜಲ ಗಣೇಶ, ವಾಟರ್ ಮಂಜು, ನೂರ್ ಜಹಾನ್ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
